ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋಡಿ’ಯಿಂದ ಬಿಡಿಸಿಕೊಳ್ಳಿ

Last Updated 12 ಏಪ್ರಿಲ್ 2015, 19:39 IST
ಅಕ್ಷರ ಗಾತ್ರ

ನಮ್ಮದೇ ಕಾಲಘಟ್ಟದ ಹಿರಿಯ ಸಾಮಾಜಿಕ ಹೋರಾಟಗಾರರೊಬ್ಬರು ನಮ್ಮ ನಡುವೆ ಬೆಳೆಯುತ್ತಿರುವ ಅಭಿವೃದ್ಧಿಯ ಮಾದರಿ, ಅದು ನಾಶಮಾಡುತ್ತಿರುವ ಮಾನವ ಸಹಜ ಸಂಬಂಧಗಳನ್ನು ನೋಡಿ ‘ಇದನ್ನೆಲ್ಲಾ ನೋಡುತ್ತಿದ್ದರೆ  ನಮ್ಮಂತಹ ಕೆಲವರಿಗೆ ಇಡೀ ಮನುಕುಲವೇ ಸಾವಿನ ರೈಲು ಹತ್ತಿ ಕುಳಿತಿದೆಯೋ ಎಂದು ಭಾಸವಾಗುತ್ತಿದೆ’ ಎಂಬ ಭಾರವಾದ ಮಾತುಗಳನ್ನು ಆಡುತ್ತಾರೆ ಎಂದಾ
ದರೆ ಆ ಮಾತಿನ ಹಿಂದಿನ ನೋವನ್ನು, ಕಳಕಳಿಯನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

‘ಶ್ರಮಸಹಿತ ಸರಳ ಬದುಕು, ಸುಂದರ ಬದುಕು’  ಎಂಬ ತತ್ವವನ್ನು ಸಾರುವ ಸಲುವಾಗಿ, ಆಧುನಿಕ ನಾಗರಿಕತೆಯ ಪ್ರಭಾವದಿಂದ ತನ್ನ ಮೂಲ ಅಸ್ಮಿತೆ ಕಳೆದುಕೊಂಡು ‘ನಜ್ಜುಗುಜ್ಜಾಗಿರುವ’ ಬದನವಾಳುವಿನಲ್ಲಿ ಸತ್ಯಾಗ್ರಹ ನಡೆಸುತ್ತಿರುವ ರಂಗಕರ್ಮಿ ಪ್ರಸನ್ನ ಮತ್ತು  ಅವರ ಸಹಚರರು   ಮುಂದಿನ ಪೀಳಿಗೆಗೆ ಸರಳ ಬದುಕಿನ ಮಹತ್ವವನ್ನು ಸತ್ಯಾಗ್ರಹದ ಹೆಸರಿನಲ್ಲಿ ಬದುಕಿ ತೋರಿಸುತ್ತಿರುವ ಹಿಂದಿನ ಕಾಳಜಿಗಳನ್ನು ಅರಿತು ಕೊಳ್ಳಬೇಕಾಗಿದೆ.

ಹಾಗೆ ನೋಡುವುದಾದರೆ ಈ ದೇಶದಲ್ಲಿ 1909ರ ಸುಮಾರಿಗೆ ಇದೇ ಅರ್ಥದ ಮಾತುಗಳನ್ನು ಅತ್ಯಂತ ಸ್ಪಷ್ಟವಾಗಿ ಮಹಾತ್ಮ ಗಾಂಧಿ ಹೇಳಿದ್ದರು. ಆಧುನಿಕ ನಾಗರಿಕತೆಯ ವಿನಾಶಗಳನ್ನು ಅತ್ಯಂತ ವ್ಯವಸ್ಥಿತವಾಗಿ ಗುರುತಿಸಿ, ವಿಶ್ಲೇಷಿಸಿ ‘ಮನುಕುಲಕ್ಕೆ ನಿಜವಾದ ಶತ್ರು ಅಂತ ಇದ್ದರೆ ಅದು ಆಧುನಿಕ ನಾಗರಿಕತೆ’ ಎಂದು ಹೇಳಿದ್ದರು.   ಆಧುನಿಕ ನಾಗರಿಕತೆಯ ಮೂಲ ಲಕ್ಷಣ ‘ದೈಹಿಕ ಸುಖ’.  ಇಲ್ಲಿ ವ್ಯಕ್ತಿಯನ್ನು ಗುರುತಿಸುವುದು  ಆತನ ಶ್ರಮಸಹಿತ ಸರಳ ಜೀವನದಿಂದಲ್ಲ.  ಬದಲಾಗಿ ಅವನು ಹೊಂದಿರುವ ವಸ್ತುಗಳಿಂದ ಮತ್ತು ಸವಲತ್ತುಗಳಿಂದ. ಆ ಅರ್ಥದಲ್ಲಿ ಆಧುನಿಕತೆ ಕೇವಲ ವಸ್ತುಗಳ ಆಧಾರದಲ್ಲಿ ವ್ಯಕ್ತಿ ಮತ್ತು ಸಮುದಾಯಗಳನ್ನು ಬೇರ್ಪಡಿಸುವ ಅನಾಗರಿಕ ವ್ಯವಸ್ಥೆಯಾಗಿದೆ. ದೈಹಿಕ ಸುಖವನ್ನೆ ಕೆಂದ್ರವಾಗಿಸಿಕೊಂಡ ಈ ಮಾದರಿ, ನಾಗರಿಕ ಪ್ರಪಂಚದ ಬಹುಮುಖ್ಯ ಮಾನ
ವೀಯ ಕಾಳಜಿಗಳಾದ ನೈತಿಕತೆ, ಸಾಮುದಾಯಿಕ ಬದುಕು ಮತ್ತು ಧರ್ಮಾಧಾರಿತ ಮೌಲ್ಯಗಳನ್ನು ಸಂಕುಚಿತಗೊಳಿಸುತ್ತದೆ ಎಂದಿದ್ದರು.

ಪ್ರಸನ್ನ ಅವರು ತಮ್ಮ ಬರಹಗಳಲ್ಲಿ ಗುರುತಿಸುವಂತೆ ತತ್‌ಕ್ಷಣದ ವಾಸ್ತವಗಳಿಗೆ ಮಾತ್ರವೇ ಸ್ಪಂದಿಸಬಲ್ಲ ಲಕ್ಷಣಗಳನ್ನು ಹೊಂದಿದ್ದ ರಾಜಕೀಯ ವ್ಯವಸ್ಥೆಯೊಂದನ್ನು ಅಪ್ಪಿಕೊಳ್ಳಹೊರಟ ಅಂದಿನ ಆಳುವ ವರ್ಗ, ದೂರಗಾಮಿ ಪರಿಣಾಮ ಉಳ್ಳ ಗಾಂಧಿಯವರ  ಈ ಮಾತನ್ನು ಗಂಭೀರವಾಗಿ ಕೇಳಿಸಿಕೊಂಡಿರಲಿಲ್ಲ. ಆ ನಂತರ ಈ ದೇಶದ ರಾಜಕಾರಣ ಎಂಬ ನದಿಯಲ್ಲಿ ಬಹಳಷ್ಟು ನೀರು ಹರಿದಿದೆ. ಕಾಲ ಬದಲಾಗಿದೆ. ಆಳುವ ಸರ್ಕಾರಗಳು ಬದಲಾಗಿವೆ. ಇಂದು ಬದಲಾದ ಕಾಲದಲ್ಲಿ ಗಾಂಧಿ ವಿರೋಧಿಸಿದ್ದ ಆಧುನಿಕ ನಾಗರಿಕತೆಯ ಭಾಗವಾದ ಅಭಿವೃದ್ಧಿಯ ಮಾದರಿಗಳಿಗೆ ಆತನನ್ನೆ ರಾಯಭಾರಿಯಾಗಿ ಬಳಸಿಕೊಳ್ಳುತ್ತಿರುವ ವಿಪರ್ಯಾಸದ ರಾಜಕಾರಣಕ್ಕೆ ನಾವು ಸಾಕ್ಷಿಗಳಾಗುತ್ತಿದ್ದೇವೆ.

ಹಾಗೆ ನೋಡುವುದಾದರೆ ಈ ಆಧುನಿಕ ನಾಗರಿಕತೆ ತನ್ನನ್ನು ಉಳಿಸಿಕೊಳ್ಳುವ ಸಾಮರ್ಥ್ಯವಿರುವ ಮೇಲ್ಮಟ್ಟದ ಒಂದು ರಾಜಕೀಯ ವ್ಯವಸ್ಥೆಯನ್ನು ‘ಬ್ರಿಟಿಷ್ ಮಾದರಿಯ ಸಂಸದೀಯ ಪ್ರಜಾಪ್ರಭುತ್ವ’ ಎಂಬ ಹೆಸರಿನಲ್ಲಿ ಸೃಷ್ಟಿಸಿಕೊಂಡಿದೆ ಎಂಬ ಸಂಗತಿಯನ್ನು ಗಾಂಧಿ ಬಹಳ ಹಿಂದೆಯೇ ಗುರುತಿಸಿದ್ದರು. ಆ ಕಾರಣಕ್ಕೆ ಅದನ್ನು ಸ್ವತಂತ್ರವಾಗಿ ಎನನ್ನೂ ಸಾಧಿಸಲಾಗದ ಬಂಜೆ, ವೇಶ್ಯೆ ಎಂಬ ಕಟು ಶಬ್ದಗಳಿಂದ ವಿಮರ್ಶಿಸಿದ್ದರು.

ಗಾಂಧೀಜಿ ಪ್ರಕಾರ ಆಧುನಿಕ ನಾಗರಿಕತೆ ಪೂರ್ವ, ಪಶ್ಚಿಮಗಳ ವ್ಯತ್ಯಾಸವಿಲ್ಲದೆ ಇಡೀ ಮನುಕುಲವನ್ನೆ ಪ್ರಭಾವಿಸುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಯುರೋಪ್. ಇಂದು ಈ ಆಧುನಿಕ ನಾಗರಿಕತೆ ಎಂಬ ವಿದ್ಯಮಾನ ಯುರೋಪಿನಲ್ಲಿನ ಜನರ ಮನಸ್ಸನ್ನು ಎಷ್ಟು ಆಕ್ರಮಿಸಿದೆ ಎಂದರೆ ಒಂದು ಅರ್ಥದಲ್ಲಿ ಅವರು ಅರೆ ಹುಚ್ಚರಂತೆ ಕಾಣಿಸುತ್ತಾರೆ. ನಿಜವಾದ ದೈಹಿಕ ಸಾಮರ್ಥ್ಯ ಮತ್ತು ಉತ್ಸಾಹವೇ ಅವರಲ್ಲಿ ಉಳಿದಿಲ್ಲ.

ಅಮಲಿನಿಂದ ತಮ್ಮ ದೈಹಿಕ ಶಕ್ತಿಯನ್ನು ಉಳಿಸಿಕೊಳ್ಳುವ ಹಂತವನ್ನು ಅವರು ತಲುಪುತ್ತಿದ್ದಾರೆ. ವಾಸ್ತವವಾಗಿ ನಿಜವಾದ ಸಂತೋಷ ಒಬ್ಬ ವ್ಯಕ್ತಿ ಏಕಾಂತದಲ್ಲಿ ಇದ್ದಾಗಲೂ ಜೀವನೋತ್ಸಾಹ ಉಳಿಸಿಕೊಳ್ಳುವುದರಲ್ಲಿ, ಏಕಾಂತವನ್ನೂ ಸಂಭ್ರಮಿಸುವ ಮನಸ್ಥಿತಿಯಲ್ಲಿ ಇದೆ. ಆದರೆ ಆಧುನಿಕ ನಾಗರಿಕತೆಯ ಸವಲತ್ತುಗಳ ಮೋಡಿಗೆ ಒಳಗಾದವರು ಏಕಾಂತದಲ್ಲಿ ಎಂದಿಗೂ ಸಂತೋಷವಾಗಿ ಇರಲಾರರು ಎಂಬ ಅಂಶವನ್ನು ಗಾಂಧೀಜಿ ತಮ್ಮ ಚಿಂತನೆಗಳಲ್ಲಿ ಗುರುತಿಸಿದ್ದಾರೆ. ಇಂದು ಪ್ರಸನ್ನ ಅವರು ಇವೇ ವಿಷಯಗಳ ಕುರಿತು ಬದನವಾಳು ಸತ್ಯಾಗ್ರಹದ ಮೂಲಕ ನಮ್ಮ ಗಮನ ಸೆಳೆಯುತ್ತಿದ್ದಾರೆ ಮತ್ತು ವಿನೂತನ ರೀತಿಯಲ್ಲಿ ಆಧುನಿಕ ನಾಗರಿಕತೆಯನ್ನು ವಿರೋಧಿಸುತ್ತಿದ್ದಾರೆ.

ಮನುಷ್ಯ ಎತ್ತರಕ್ಕೆ ಬೆಳೆಯುವುದು ಎಂದರೆ ಬದುಕಿನ ಕುರಿತು ಹೆಚ್ಚು ಹೆಚ್ಚು ಸರಳವಾಗಿ ಯೋಚಿಸುವುದು, ಅತಿ ಕಡಿಮೆ ಸಂಪನ್ಮೂಲಗಳಿಂದ ಬದುಕನ್ನು ಸಂತೋಷದಾಯಕವಾಗಿ ಇಟ್ಟುಕೊಳ್ಳುವ ಮಾದರಿಗಳನ್ನು ಕಟ್ಟಿಕೊಳ್ಳುವುದು ಮತ್ತು  ತನ್ನ ಏಕಾಂತವನ್ನೂ ಸಂಭ್ರಮಿಸುವ ಸ್ಥಿತಿಗೆ ತಲುಪುವುದೆ ಆಗಿದೆ ಎಂಬ ತಿಳಿವಳಿಕೆ ನಮಗೆ ಮೂಡಬೇಕಿದೆ. ನನ್ನ ಪ್ರಕಾರ ಪ್ರಸನ್ನ ಅವರು ಪ್ರತಿಪಾದಿಸುತ್ತಿರುವ ಸುಸ್ಥಿರ ಬದುಕು ಇದೇ ಆಗಿದೆ. ಇಲ್ಲಿ ಐಷಾರಾಮಿ ಜೀವನಕ್ಕಿಂತ ಶ್ರಮ ಮತ್ತು ಸಹ-ಜೀವನ ಮುಖ್ಯವಾಗಿದೆ, ವಸ್ತುಗಳಿಗಿಂತ ವ್ಯಕ್ತಿ ಮತ್ತು ಸಮುದಾಯ ಮುಖ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರಮವನ್ನು, ಸ್ವ-ದುಡಿಮೆಯನ್ನು ಗೌರವಿಸುವ ಸ್ಥಿತಿಯಿದೆ.


ಆದರೆ ನಾವು ಇದಕ್ಕೆ ವಿರುದ್ಧವಾಗಿ ಯೋಚಿಸುತ್ತಿದ್ದೇವೆ ಅಥವಾ ನಮ್ಮನ್ನು ಹಾಗೆ ಯೋಚಿಸುವಂತೆ ಆಧುನಿಕ ನಾಗರಿಕತೆ ಒತ್ತಡಗಳನ್ನು ಹೇರುತ್ತಿದೆ. ಈ ಹಂತದಲ್ಲಿ ಆಧುನಿಕ ನಾಗರಿಕತೆಯ ವಿಸ್ಮೃತಿಯಿಂದ ಹೊರಬರಲು ನಮಗಿರುವ ದಾರಿ ಬದುಕಿನ ಕುರಿತು ಸರಳವಾಗಿ ಯೋಚಿಸುವುದೊಂದೇ. ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಆ ಮಾದರಿಯ ಬದುಕನ್ನು ಕಟ್ಟಿಕೊಳ್ಳಲು ನಮ್ಮ ಪರಂಪರೆಯ ಭಾಗವಾಗಿ ಚಿಂತಿಸಿದ ದಾಸರು, ಶರಣರು, ಜನಪದೀಯರು ಬೇಕಾದಷ್ಟು ಯೋಚನೆಗಳನ್ನು ಒದಗಿಸಿದ್ದಾರೆ. ನಮ್ಮ ಮುಂದಿರುವ ಸವಾಲು ಆ ಯೋಚನಾ ಪರಂಪರೆಯನ್ನು ಸೈದ್ಧಾಂತೀಕರಿಸಿಕೊಂಡು ಜ್ಞಾನವಾಗಿ ಬಳಸಿಕೊಳ್ಳುವುದು ಅಷ್ಟೆ.

ಇಂದು ನಾವು ‘ಸ್ಮಾರ್ಟ್‌  ನಗರ’ಗಳನ್ನು ಕಟ್ಟುವುದು ಬೇಕಾಗಿಲ್ಲ. ಅದಕ್ಕೆ ಬದಲಾಗಿ ಸ್ವಾವಲಂಬಿ ಹಳ್ಳಿಗಳನ್ನು ಕಟ್ಟಬೇಕಿದೆ. ಹಳ್ಳಿಗಳು ಬರಿದಾಗುತ್ತಿರುವ ಈ ಹೊತ್ತಿನಲ್ಲಿ ನಗರಗಳನ್ನು ಇನ್ನಷ್ಟು ದೊಡ್ಡದಾಗಿಸಲು  ಹೊರಡುವುದು  ಪ್ರಜ್ಞಾವಂತಿಕೆಯ ನಡೆಯಾಗಲಾರದು. ನಮ್ಮ ಭವಿಷ್ಯ ಅಡಗಿರುವುದು ನಮ್ಮ ಹಳ್ಳಿಗಳನ್ನು ಸದೃಢಗೊಳಿಸುವ ಕ್ರಮದಲ್ಲಿ ಎಂಬ ಬದನವಾಳು ಸತ್ಯಾಗ್ರಹದ ಕರೆ ಕುರಿತು ಯೋಚಿಸಬೇಕಿದೆ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕಿದೆ. ಇದು ಈ ಕಾಲದ ಅನಿವಾರ್ಯವೂ ಹೌದು.

-ಲೇಖಕ ಪೋಸ್ಟ್‌ಡಾಕ್ಟೊರಲ್ ಫೆಲೊ, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT