ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಕ್ಷಗಾನ ಕ್ಷೇತ್ರದ ಸಾಧ್ಯತೆ ಅಪಾರ’

Last Updated 19 ಡಿಸೆಂಬರ್ 2013, 10:22 IST
ಅಕ್ಷರ ಗಾತ್ರ

ಮಂಗಳೂರು: ಯಕ್ಷಗಾನ ಕ್ಷೇತ್ರವು ತಿಟ್ಟುಗಳ ಹಂಗಿಗೆ ಬೀಳದೆ ತನ್ನ ವಿಸ್ತಾರವಾದ ಹರವನ್ನು ಅರಿತುಕೊಂಡು ಬೆಳೆಯುವ ಅವಕಾಶಗಳಿವೆ ಎಂದು ಹಿರಿಯ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಹೇಳಿದರು.

ಅವರು ಬುಧವಾರ ನಗರದ ಪುರಭವನದಲ್ಲಿ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರದ 40ನೇ ವರ್ಧಂತ್ಯುತ್ಸವ ಮತ್ತು ‘ಯಕ್ಷಗಂಗೋತ್ರಿ’ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಸಾಂಸ್ಕೃತಿಕ ಲೋಕದಲ್ಲಿ ಶಿವರಾಮ ಕಾರಂತರಿಂದ ಹಿಡಿ ದು ಹಿರಿಯ ವಿದ್ವಾಂಸ ಕಲಾವಿದರಾದ ಬಣ್ಣದ ಮಹಾಲಿಂಗ, ಪಡ್ರೆ ಚಂದ್ರು ಮುಂತಾದ ಹಲವಾರು ಮಂದಿ ಹಿರಿಯರು ಕಲಾಗಂಗೋತ್ರಿಯ ಹಿರಿಮೆ­ಯನ್ನು ಹೆಚ್ಚಿಸಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಹವ್ಯಾಸಿ ಯಕ್ಷಗಾನ ಸಂಸ್ಥೆಗಳಲ್ಲಿ ಇಷ್ಟು ವೈವಿಧ್ಯತೆಯನ್ನು ಕಾಪಾಡಿಕೊಂಡು ಬಂದಿರುವ ಸಂಸ್ಥೆಗಳು ವಿರಳ ಎನ್ನಬಹುದು. ಕೃತಿ ಬಿಡುಗಡೆ, ಕಲಾವಿದರನ್ನು ಗುರುತಿಸಿ ಗೌರವಿಸುವುದು, ಕಲಾ ಶಿಕ್ಷಣ ನೀಡಿಕೆ ಮುಂತಾಗಿ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬರುವ ಪ್ರಕ್ರಿಯೆ ಕಲಾಗಂಗೋತ್ರಿಗೆ  ಸಾಧ್ಯವಾಗಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ‘ಯಕ್ಷಗಂಗೋತ್ರಿ’ ಕೃತಿಯನ್ನು ಅನಾವರಣಗೊಳಿಸಿದ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಎಂ. ಎಲ್‌. ಸಾಮಗ ಹೊಸ ಕೃತಿಯಲ್ಲಿ ಸುಮಾರು 32 ಮಹತ್ವದ ಲೇಖನಗಳಿದ್ದು  ಹವ್ಯಾಸಿ ಕಲಾವಿದರಿಗೆ ಮತ್ತು ವೃತ್ತಿಪರ ಕಲಾವಿದರಿಗೆ ಇದರಿಂದ ಅನುಕೂಲವಾಗಲಿದೆ. ಅಧ್ಯಯನವೂ ಸೇರಿದ ಯಕ್ಷಗಾನ ಪ್ರದರ್ಶನ ಹೆಚ್ಚು ಮೌಲ್ಯಯುತವಾಗಿ ಮೂಡಿಬರುತ್ತದೆ ಎಂದು ಅವರು ಹೇಳಿದರು.

ಯಕ್ಷಗಾನ ಕರಾವಳಿಗೆ ಸೀಮಿತವಾಗಿಲ್ಲ ಎನ್ನುವುದು ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿದೆ. ಮೂಡಲಪಾಯ, ದೊಡ್ಡಾಟ ಮುಂತಾದ ಹೆಸರಿನಿಂದ ಗುರುತಿಸಿಕೊಂಡಿರುವ ಈ ಕಲೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಅವಕಾಶಗಳು ಸಾಕಷ್ಟಿವೆ ಎಂದು ಹೇಳಿದರು.

ಬಳಿಕ ಹಿರಿಯ ವಿದೂಷಕ ಕಲಾವಿದ ಮಿಜಾರು ಅಣ್ಣಪ್ಪ, ಹಿರಿಯ ಸ್ತ್ರೀಪಾತ್ರ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್‌ ಅವರನ್ನು ಸನ್ಮಾನಿಸ­ಲಾಯಿತು. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು ವಿವಿ ಯಕ್ಷಗಾನ ಕೇಂದ್ರದ ನಿರ್ದೇಶಕ ಪ್ರೊ. ಕೆ. ಚಿನ್ನಪ್ಪ ಗೌಡ ಶುಭಾಶಂಸನೆ ಮಾಡಿದರು.

ಕಾರ್ಯದರ್ಶಿ ಕೆ. ಸದಾಶಿವ, ಕೋಶಾಧಿಕಾರಿ ಬಾಬು ಜಿ. ಕೋಟೆಕಾರ್‌, ಕಲಾಗಂಗೋತ್ರಿ ಯಕ್ಷಗಾನ ಕೇಂದ್ರದ ಮೊದಲನೇ ಅಧ್ಯಕ್ಷರಾಗಿದ್ದ ಉಳ್ಳಾಲ ಮೋಹನ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. ನಂತರ ಕಾಟಿಪಳ್ಳದ ಬಾಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ‘ಕೃಷ್ಣ ಲೀಲೆ ಕಂಸವಧೆ’ ಎಂಬ ಪ್ರಸಂಗ ಪ್ರಸ್ತುತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT