ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುದ್ಧಕ್ಕೆ ಮೊದಲೇ ಕಾಂಗ್ರೆಸ್‌ನಿಂದ ಶಸ್ತ್ರತ್ಯಾಗ’

Last Updated 19 ಮಾರ್ಚ್ 2014, 11:12 IST
ಅಕ್ಷರ ಗಾತ್ರ

ಕೊಪ್ಪ: ‘ಚುನಾವಣೆ ನಡೆಯಲು ಇನ್ನೂ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ಸಿಗರಿಗೆ ಸೋಲಿನ ಭೀತಿ ಆವರಿಸಿದ್ದು, ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗಕ್ಕೆ ಮುಂದಾಗಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್‌ ಸಂಪುಟದ 20ಕ್ಕೂ ಹೆಚ್ಚು ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಡಿ.ಎನ್. ಜೀವರಾಜ್ ಲೇವಡಿ ಮಾಡಿದರು.

ಮಂಗಳವಾರ ಇಲ್ಲಿನ ಲಕ್ಕವಳ್ಳಿ ಮಂಜಪ್ಪ ನಾಯ್ಕ್ ಸ್ಮಾರಕ ಲಯನ್ಸ್ ರೂರಲ್ ಸಭಾಭವನದಲ್ಲಿ ನಡೆದ ಕೊಪ್ಪ ಕಸಬಾ ಹೋಬಳಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ 71 ಸಾವಿರ ಮತಗಳ ದಾಖಲೆ ಅಂತರದಿಂದ ಗೆಲುವು ಕಂಡವರು. ಮುಖ್ಯಮಂತ್ರಿಯೇ ಅವರಿಗೆ ಲೋಕಸಭೆಗೆ ಸ್ಪರ್ಧಿಸುವಂತೆ ಟಿಕೆಟ್ ನೀಡಿದರೆ ಒಲ್ಲೆ ಎಂದು ಓಡಿ ಹೋಗುತ್ತಿದ್ದಾರೆ. ಯುವ ನಾಯಕ ಕೃಷ್ಣ ಭೈರೇಗೌಡ ಅವರಿಗೆ ಟಿಕೇಟ್ ಘೋಷಣೆಯಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ಟೀಕಿಸಿದರು.

'ರಾಜ್ಯದಲ್ಲಿ ಬಿಜೆಪಿ 20, ಕಾಂಗ್ರೆಸ್ 6 ಮತ್ತು ಜೆಡಿಎಸ್ 2 ಸ್ಥಾನ ಪಡೆಯುವುದಾಗಿ  ಮಾಧ್ಯಮ ಸಮೀಕ್ಷೆಗಳು ಹೇಳುತ್ತಿವೆ. ಇದೇ ಸ್ಥಿತಿ ಮುಂದುವರೆದರೆ ಕಾಂಗ್ರೆಸ್ ಸಾಧನೆ ಸೊನ್ನೆಯಾದರೂ ಅಚ್ಚರಿಯಿಲ್ಲ. ಬಿಜೆಪಿ ಊಹೆಗೂ ನಿಲುಕದ ಯಶಸ್ಸು ಪಡೆಯುತ್ತಿದ್ದು, ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತ' ಎಂದರು.


ಈ ಭಾಗದ ಸಂಸದ ಜಯಪ್ರಕಾಶ ಹೆಗ್ಡೆ ಪ್ರಸಕ್ತ ಲೋಕಸಭೆ ಕಂಡ ಅತ್ಯಂತ ದುರ್ಬಲ ಸಂಸದ ಎಂದು ಟೀಕಿಸಿದ ಅವರು, ‘ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಲು 1400 ಕೋಟಿ ಹಣ ಬಿಡುಗಡೆಯಾಗಿದೆ. ಚುನಾವಣೆ ಮುಗಿದ ಬಳಿಕ ಕೊಡುತ್ತೇವೆ ಎಂದು ಕೇಂದ್ರ ಮಂತ್ರಿಗಳ ಮೂಲಕ ಮತದಾರರನ್ನು ಮರುಳು ಮಾಡಿ ಈ ಕ್ಷೇತ್ರದ  ಸಂಸದರಾದ ಹೆಗ್ಡೆಯವರು ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮದೇ ಸರ್ಕಾರ, ಸಂಪುಟ ಸಹೋದ್ಯೋಗಿಯಾಗಿದ್ದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಅಡಿಕೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿಲ್ಲ. ಈಗ 134 ಕೋಟಿ ನೆರವಿನ ಆಮಿಷ ತೋರಿಸುತ್ತಿರುವುದನ್ನು ಮತದಾರರು ನಂಬುವ ಸ್ಥಿತಿಯಲ್ಲಿಲ್ಲ’ ಎಂದರು.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ದಾಖಲೆ ತೋರಿಸಿದರೆ ರಾಜಕೀಯ ನಿವೃತ್ತಿಯ ಸವಾಲು ಹಾಕುವ ಅವರು ಕೇಂದ್ರ ಸರ್ಕಾರದ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ನೀಡಿದ ಲಿಖಿತ ಹೇಳಿಕೆಗೂ ಅಫಿಡವಿಟ್‌ಗೂ ಪರಿಣಾಮದಲ್ಲಿ ವ್ಯತ್ಯಾಸವಿದೆಯೇ ಎಂದು ಸ್ಪಷ್ಟಪಡಿಸಲಿ ಎಂದು ಮರು ಸವಾಲು ಹಾಕಿದರು.

ರಾಜ್ಯದಲ್ಲಿ ಇಂಧನ, ಗ್ರಾಮೀಣಾಭಿವೃದ್ಧಿ, ಆಹಾರ ಸಚಿವೆಯಾಗಿ ಪ್ರಾಮಾಣಿಕ ಸೇವೆಯ ಮೂಲಕ ಜನಮನ ಗೆದ್ದಿರುವ ಶೋಭಾ ಕರಂದ್ಲಾಜೆ ಪರ ಕ್ಷೇತ್ರದ ಎಲ್ಲೆಡೆ ಅಭೂತಪೂರ್ವ ಜನಬೆಂಬಲ ವ್ಯಕ್ತ­ವಾ­ಗುತ್ತಿದ್ದು, ಅಧಿಕಾರವಿದದಾಗ ಧ್ವನಿಯಿಲ್ಲದವರ ಪರ ಧ್ವನಿಯೆತ್ತಿರುವ ಅವರು ಈ ಕ್ಷೇತ್ರದಲ್ಲಿ ಧ್ವನಿ ಕಳೆದುಕೊಂಡಿರುವ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಸಮರ್ಥರಾಗಿದ್ದು, ಅವರ ಗೆಲುವಿಗೆ ಶ್ರಮಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆನಿಡಿದರು.

ಮುಖಂಡರಾದ ಎಸ್.ಎನ್.ರಾಮಸ್ವಾಮಿ, ಬಿ.ಎನ್.ಭಾಸ್ಕರ್, ಪದ್ಮಾವತಿ ರಮೇಶ್, ಅನ್ನಪೂರ್ಣ ಚನ್ನಕೇಶವ್, ಜಿ.ಎಸ್.ಮಹಾಬಲ್, ಪೂರ್ಣಚಂದ್ರ, ಬಿ.ಆರ್.ನಾರಾಯಣ್, ಬೆಳಗೊಳ ರಮೇಶ್,  ಎಚ್.ಕೆ.ದಿನೇಶ್, ನಾಗೇಂದ್ರಪ್ರಸಾದ್, ದಯಾಕರ್, ಪುಣ್ಯಪಾಲ್, ವಾಸಪ್ಪ, ಪ್ರದೀಪ್ ನಂದೊಳ್ಳಿ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT