ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಶಕ್ತಿ’ಯ ಅನಾವರಣ...

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೋದ ವಾರ ಬೆಂಗಳೂರಿನಲ್ಲಿ ನಡೆದ 29ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಯುವ ಸ್ಪರ್ಧಿಗಳ ಸಾಮರ್ಥ್ಯ ತೋರಿಸಲು ಉತ್ತಮ ಅವಕಾಶ ಮಾಡಿಕೊಟ್ಟಿತು. ಕರ್ನಾಟಕದ ಅಥ್ಲೀಟ್‌ಗಳೂ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದರು.

ಬಡತನ ಒಡ್ಡಿದ ಸವಾಲನ್ನು ಲೆಕ್ಕಿಸದೆ ಕಠಿಣ ಪ್ರಯತ್ನದ ಮೂಲಕ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ವಿಜಯಕುಮಾರಿ, ಗಾಯದ ಸಮಸ್ಯೆಯಿದ್ದರೂ ಎದೆಗುಂದದೆ ಹೊಸ ಎತ್ತರ ಕಂಡುಕೊಂಡ ಎಸ್‌. ಹರ್ಷಿತ್‌, ಟ್ರ್ಯಾಕ್‌ನಲ್ಲಿಟ್ಟ ಹರ್ಡಲ್‌ಗಳನ್ನು ಅನಾಯಾಸದಿಂದ ದಾಟಿ ಮೊದಲಿಗರಾಗಿ ಗುರಿಮುಟ್ಟಿದ ಮೇಘನಾ ಶೆಟ್ಟಿ, ಎಳೆಹರೆಯದಲ್ಲೇ ಭರವಸೆ ಮೂಡಿಸಿರುವ ಟಾಮಿ ವೈಷ್ಣವಿ...

29ನೇ ರಾಷ್ಟ್ರೀಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿ ಕರ್ನಾಟಕಕ್ಕೆ ಹೆಮ್ಮೆ ತಂದಿತ್ತ ಅಥ್ಲೀಟ್‌ಗಳು ಇವರು. ಇದರ ಜೊತೆ ಹಲವರು ಬೆಳ್ಳಿ ಹಾಗೂ ಕಂಚು ಜಯಿಸಿ ಆತಿಥೇಯರ ಪಾಲಿಗೆ ಸಂಭ್ರಮಕ್ಕೆ ಕಾರಣರಾದರು.

ಹಲವು ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಹಾಗೂ ಒಲಿಂಪಿಯನ್‌ಗಳನ್ನು ರಾಷ್ಟ್ರಕ್ಕೆ ನೀಡಿರುವ ಕರ್ನಾಟಕದಲ್ಲಿ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ ಎಂಬುದನ್ನು ಡಿ. 3 ರಿಂದ 7ರ ವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೂಟ ತೋರಿಸಿಕೊಟ್ಟಿತು.

ಬಾಲಕಿಯರ 18 ವರ್ಷ ವಯಸ್ಸಿನೊಳಗಿನವರ ವಿಭಾಗದ 400 ಮೀ. ಓಟದಲ್ಲಿ ಮೊದಲಿಗರಾಗಿ ಗುರಿಮುಟ್ಟಿದ ವಿಜಯಕುಮಾರಿ ಅವರದ್ದು ಹೋರಾಟದ ಬದುಕು. ಮಂಡ್ಯ ಜಿಲ್ಲೆಯ ಗೌಡೇನಹಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ವಿಜಯಕುಮಾರಿ ಜೀವನದಲ್ಲಿ ಎದುರಾದ ಹಲವು ಸವಾಲುಗಳನ್ನು ಮೆಟ್ಟಿನಿಂತು ಈ ಹಂತಕ್ಕೆ ಏರಿ ನಿಂತಿದ್ದಾರೆ.

17ರ ಹರೆಯದ ವಿಜಯಕುಮಾರಿ ಮೇ ತಿಂಗಳಲ್ಲಿ ಗುಂಟೂರಿನಲ್ಲಿ ನಡೆದಿದ್ದ ಯೂತ್‌ ನ್ಯಾಷನಲ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದ್ದರು. ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿದ್ದುಕೊಂಡು ಕೋಚ್‌ ವೈ.ಎಸ್‌. ಲಕ್ಷ್ಮೀಶ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಚೀನಾದ ನಾನ್‌ಜಿಂಗ್‌ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್‌ ಯೂತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ವಿಜಯಕುಮಾರಿ ಇದ್ದರು. ಆದರೆ ವಯೋಮಿತಿ ಮೀರಿದೆ ಎಂಬ ಕಾರಣ ವಿಜಯಕುಮಾರಿ ಒಳಗೊಂಡಂತೆ ಭಾರತದ ಕೆಲ ಅಥ್ಲೀಟ್‌ಗಳನ್ನು ವಾಪಸು ಕಳುಹಿಸಲಾಗಿತ್ತು.

ಚೀನಾದಿಂದ ನವದೆಹಲಿಗೆ ಬಂದಿದ್ದ ವಿಜಯಕುಮಾರಿ ಅಲ್ಲಿ ತಂಗಲು ಸೂಕ್ತ ವ್ಯವಸ್ಥೆ ಲಭಿಸದೆ ಪರದಾಟ ನಡೆಸಿದ್ದರು. ಮಾತ್ರವಲ್ಲ, ಅಲ್ಲಿಂದ ಬೆಂಗಳೂರಿಗೆ ಬರಲು ರೈಲ್ವೆ ಟಿಕೆಟ್‌ಗಾಗಿ ಕಷ್ಟಪಟ್ಟಿದ್ದರು. ಇದೀಗ ದೊರೆತ ಚಿನ್ನ ಆ ಕಹಿ ಘಟನೆಯನ್ನು ಮರೆಸಿದೆ.

‘ನಮ್ಮದು ಬಡ ಕುಟುಂಬ. ಹೆತ್ತವರು ಬೇಸಾಯ ಮಾಡಿ ದಿನದೂಡುತ್ತಿದ್ದಾರೆ.  ಆದರೂ ನನಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ಇದುವರೆಗೆ ಪಟ್ಟ ಕಠಿಣ ಶ್ರಮಕ್ಕೆ ತಕ್ಕ ಫಲ ಲಭಿಸಿದೆ’ ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು ವಿಜಯಕುಮಾರಿ. 

ಸ್ಪರ್ಧೆಯ ಆರಂಭಕ್ಕೆ ಮುನ್ನ ತಮ್ಮ ಕೈಗಳಿಂದ ಮುಖ ಮುಚ್ಚಿಕೊಂಡು ಕೆಲ ಕ್ಷಣ ಧ್ಯಾನ ಮಾಡಿದ್ದ ವಿಜಯ, ಮೊದಲಿಗರಾಗಿ ಗುರಿ ಮುಟ್ಟುತ್ತಿದ್ದಂತೆಯೇ ಶೂಗಳನ್ನು ಬಿಚ್ಚಿ ಅದನ್ನು ಕಣ್ಣಿಗೆ ಒತ್ತಿ ಹಿಡಿದರಲ್ಲದೆ, ಚುಂಬಿಸಿದರು. ಏನನ್ನೋ ಸಾಧಿಸಿದ ಸಂತಸ ಅವರ ಮುಖದಲ್ಲಿ  ಕಾಣಬಹುದಿತ್ತು.

ಬಾಲಕರ 20 ವರ್ಷ ವಯಸ್ಸಿನೊಳಗಿನವರ ಹೈಜಂಪ್‌ನಲ್ಲಿ ಸ್ವರ್ಣದೆಡೆಗೆ ನೆಗೆದ ಹರ್ಷಿತ್‌ ಕೂಡಾ ಪಟ್ಟುಬಿಡದ ಛಲಗಾರ. ರಾಷ್ಟ್ರೀಯ ತರಬೇತಿ ಶಿಬಿರದಲ್ಲಿದ್ದ ಹರ್ಷಿತ್‌ ಕಾಲಿನ ಬೆರಳಿನ ಗಾಯಕ್ಕೆ ಒಳಗಾಗಿದ್ದರು. ಇದರಿಂದ ಪ್ರದರ್ಶನಮಟ್ಟದಲ್ಲಿ ಕುಸಿತ ಕಂಡಿತದಲ್ಲದೆ, ಶಿಬಿರದಿಂದಲೂ ಹೊರಬಿದ್ದಿದ್ದರು. ಇದೀಗ ಪುಟಿದೆದ್ದು ನಿಂತರಲ್ಲದೆ, ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿದ್ದಾರೆ. ‘ಮತ್ತೆ ರಾಷ್ಟ್ರೀಯ ಶಿಬಿರ ಸೇರುವುದು ನನ್ನ ಗುರಿ’ ಎಂಬುದು ಹರ್ಷಿತ್‌ ಹೇಳಿಕೆ.

ಬಾಲಕಿಯರ 20 ವರ್ಷ ವಯಸ್ಸಿನೊಳಗಿನವರ ವಿಭಾಗದ 100 ಮೀ. ಹರ್ಡಲ್ಸ್‌ನಲ್ಲಿ ಬಂಗಾರ ಜಯಿಸಿದ ಮೇಘನಾ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿರುವ ಪ್ರತಿಭಾನ್ವಿತೆ. 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಟ್ರಯಥ್ಲಾನ್‌ನಲ್ಲಿ ಚಿನ್ನ ಹಾಗೂ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಜಯಿಸಿದ ಟಾಮಿ ವೈಷ್ಣವಿ ಕರ್ನಾಟಕದ ಭವಿಷ್ಯದ ಅಥ್ಲೀಟ್‌ ಎನಿಸಿಕೊಂಡಿದ್ದಾರೆ.

ಹಿರಿಯ ಕೋಚ್‌ ವಿ.ಆರ್‌. ಬೀಡು ಅವರಿಂದ ಮಾರ್ಗದರ್ಶನ ಪಡೆಯುತ್ತಿರುವ ವೈಷ್ಣವಿ, ಇತ್ತೀಚೆಗೆ ನಡೆದ  ‘ಪ್ರಜಾವಾಣಿ- ಡೆಕ್ಕನ್‌ ಹೆರಾಲ್ಡ್‌’ ಪ್ರಾಯೋಜಕತ್ವದ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ವಾರಾಂತ್ಯ ಕೂಟದಲ್ಲೂ ಮಿಂಚಿನ ಪ್ರದರ್ಶನ ನೀಡಿದ್ದರು.

ಉದ್ದೀಪನಾ ಮದ್ದು ವಿವಾದದ ಕರಿನೆರಳು: ಕೂಟದ ವೇಳೆ ಅಥ್ಲೀಟ್‌ಗಳು ಅಂಗಳದಲ್ಲಿ ತೋರಿದ ಪ್ರದರ್ಶನದ ಜೊತೆಗೆ ಚರ್ಚೆಗೆ ಎಡೆಮಾಡಿಕೊಡುವ ಇತರ ಕೆಲ ಘಟನೆಗಳೂ ನಡೆದವು.

ಈ ಕೂಟ ಉದ್ದೀಪನಾ ಮದ್ದು ವಿವಾದದಿಂದ ಹೊರತಾಗಿರಲಿಲ್ಲ. ಕ್ರೀಡಾಂಗಣದ ಶೌಚಾಲಯಗಳಲ್ಲಿ ಸಿರಿಂಜ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಅದೇ ರೀತಿ ಚಾಂಪಿಯನ್‌ಷಿಪ್‌ನ ಮೊದಲ ದಿನ ಪದಕ ಗೆದ್ದ ಇಬ್ಬರು ಅಥ್ಲೀಟ್‌ಗಳು ನಾಡಾ ತಂಡಕ್ಕೆ ತಮ್ಮ ಸ್ಯಾಂಪಲ್‌ ನೀಡದೆ ‘ತಲೆಮರೆಸಿ ಕೊಂಡದ್ದು’ ಕೂಡಾ ಅನುಮಾನಗಳು ಬಲಪಡುವಂತೆ ಮಾಡಿವೆ. ಈ ಇಬ್ಬರು ಅಥ್ಲೀಟ್‌ಗಳನ್ನು ಅನರ್ಹಗೊಳಿಸಲಾಗಿದೆ.

ಹಲವು ಅಥ್ಲೀಟ್‌ಗಳ ಸ್ಯಾಂಪಲ್‌ ಗಳನ್ನು ನಾಡಾದ ತಂಡ ಸಂಗ್ರಹಿಸಿವೆ. ಉದ್ದೀಪನಾ ಮದ್ದು ಸೇವಿಸಿದ್ದರೇ ಎಂಬುದು ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕವೇ ತಿಳಿಯಲಿದೆ. 1800 ಕ್ಕೂ ಅಧಿಕ ಅಥ್ಲೀಟ್‌ಗಳು ಪಾಲ್ಗೊಳ್ಳುವ ಇಂತಹ ದೊಡ್ಡ ಕೂಟವನ್ನು ಆಯೋಜಿಸಲು ಸಂಘಟಕರು ಸೂಕ್ತ ರೀತಿಯಲ್ಲಿ ಸಜ್ಜಾಗಿರಲಿಲ್ಲ ಎಂಬ ಆರೋಪಗಳೂ ಕೇಳಿಬಂದವು.

ಏನೇ ಇರಲಿ, ಸೂಕ್ತ ಸೌಲಭ್ಯ ದೊರೆಯದಿದ್ದರೂ, ಆ ಬಗ್ಗೆ ಯಾವುದೇ ದೂರು ನೀಡದೆ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಅಥ್ಲೀಟ್‌ಗಳಿಗೆ ಶಹಬ್ಬಾಸ್‌ ಹೇಳಲೇಬೇಕು.

ಹಲವು ದಾಖಲೆಗಳು ಪತನ

ಐದು ದಿನಗಳ ಚಾಂಪಿಯನ್‌ ಷಿಪ್‌ನಲ್ಲಿ ಹಲವು ಕೂಟ ಹಾಗೂ ರಾಷ್ಟ್ರೀಯ ದಾಖಲೆಗಳು ಪತನ ಗೊಂಡವು. ದೇಶದ ಅಥ್ಲೆಟಿಕ್ಸ್‌ನ ಭವಿಷ್ಯ ಉಜ್ವಲವಾಗಿದೆ ಎಂಬುದು ಇದರಿಂದ ತಿಳಿಯಬಹುದು.

ಅದರಲ್ಲೂ ಕೂಟದ ಮೂರನೇ ದಿನ ನಾಲ್ಕು ರಾಷ್ಟ್ರೀಯ ದಾಖಲೆಗಳು ಮೂಡಿಬಂದದ್ದು ವಿಶೇಷ. ಬಾಲಕರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ 400 ಮೀ. ಓಟದಲ್ಲಿ ದಾಖಲೆ ಮಾಡಿದ ಪಶ್ಚಿಮ ಬಂಗಾಳದ ಚಂದನ್‌ ಬವೂರ್‌, ಇದೇ ವಯೋ ವರ್ಗದ ಲಾಂಗ್‌ಜಂಪ್‌ನಲ್ಲಿ ಹೊಸ ದಾಖಲೆ ಬರೆದ  ಹರಿಯಾಣದ ಸಾಹಿಲ್‌ ಮಹಾಬಲಿ ಈ ಚಾಂಪಿಯ ನ್‌ಷಿಪ್‌ನ ಕಳೆ ಹೆಚ್ಚಿಸಿದರು. ಇವರು ಉತ್ತಮ ಅಂತರದಲ್ಲೇ ಹೊಸ ದಾಖಲೆ ಯನ್ನು ತಮ್ಮ ಹೆಸರಿಗೆ ಬರೆಯಿಸಿ ಕೊಂಡರು.

ಕೇರಳದ ಪಾರಮ್ಯ: ನಿರೀಕ್ಷೆ ಯಂತೆಯೇ ಕೇರಳದ ಅಥ್ಲೀಟ್‌ಗಳು ಈ ಬಾರಿಯೂ ತಮ್ಮ ಪ್ರಭುತ್ವ ಮೆರೆದರು. ಹೋದ ವರ್ಷ ಲಖನೌದಲ್ಲಿ ನಡೆದಿದ್ದ 28ನೇ ರಾಷ್ಟ್ರೀಯ ಜೂನಿಯರ್‌ ಕೂಟದಲ್ಲಿ ಕೇರಳ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತ್ತು.

ಮೊದಲ ದಿನದಿಂದಲೇ ಪದಕದ ‘ಬೇಟೆ’ ಶುರುಮಾಡಿಕೊಂಡಿದ್ದ ಈ ರಾಜ್ಯದ ಅಥ್ಲೀಟ್‌ಗಳು ಅದನ್ನು ಐದು ದಿನಗಳ ಕಾಲವೂ ಮುಂದುವರಿಸಿದ್ದು ವಿಶೇಷ.  ಅಥ್ಲೆಟಿಕ್ಸ್‌ಗೆ ಕೇರಳದಲ್ಲಿ ದೊರೆಯು ವಂತಹ  ಪ್ರಾಧಾನ್ಯತೆ ಭಾರತದ ಇತರ ರಾಜ್ಯಗಳಲ್ಲಿ ಕಾಣಲು ಸಾಧ್ಯವಿಲ್ಲ. ಯುವ ಪ್ರತಿಭೆಗಳನ್ನು ಬೆಳಕಿಗೆ ತರಲು ಇಲ್ಲಿ ಸಾಕಷ್ಟು ಅಥ್ಲೆ ಟಿಕ್‌ ಸ್ಕೂಲ್‌ ಹಾಗೂ ಅಕಾಡೆಮಿಗಳು ಕಾರ್ಯ ನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT