ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಸಋಷಿ’ಯ ರಸಂ!

ನಳ ಪಾಕ
Last Updated 16 ಜನವರಿ 2017, 15:41 IST
ಅಕ್ಷರ ಗಾತ್ರ

ಆಹಾರೋದ್ಯಮದಲ್ಲಿ 25 ವರ್ಷಗಳ ಅನುಭವ ಹೊಂದಿರುವ ರಾಮಸ್ವಾಮಿ ಸೆಲ್ವರಾಜು ದೇಶದ ಸೆಲಬ್ರಿಟಿ ಶೆಫ್‌ಗಳಲ್ಲಿ ಒಬ್ಬರು. ಶ್ರೀಲಂಕಾ, ಒಮನ್ ರಾಷ್ಟ್ರಗಳಲ್ಲಿ ಅಲ್ಲಿನ ರಾಷ್ಟ್ರಾಧ್ಯಕ್ಷರಿಗೆ ತಮ್ಮ ಕೈರುಚಿ ಉಣಬಡಿಸಿರುವ ಅನುಭವಿ ಬಾಣಸಿಗರು. ಗುಣಮಟ್ಟ ಹಾಗೂ ರುಚಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಕಡಿಮೆ ಬೆಲೆಯಲ್ಲಿ ಆಹಾರ ತಯಾರಿಸಬಲ್ಲ ಪಾಕತಜ್ಞ.

ಅಡುಗೆ ತಯಾರಿಸುವುದಷ್ಟೇ ಅಲ್ಲದೇ ಇವರು ಆಹಾರ ತಯಾರಿಕೆ ವೇಳೆ ಅನುಸರಿಸಬೇಕಾದ ಗುಣಮಟ್ಟದ ಕಾರ್ಯವಿಧಾನ ಹಾಗೂ ನಿಯಮಗಳ ಪರಿಣತರು ಕೂಡ ಹೌದು. ಅಧಿಕ ಒತ್ತಡದ ಸಂದರ್ಭ ನಿರ್ವಹಿಸುವುದರಲ್ಲಿ ಹಾಗೂ ಬಾಣಸಿಗರ ತಂಡವನ್ನು ನಿಭಾಯಿಸುವುದರಲ್ಲಿ ನಿಪುಣರಾಗಿರುವ ಇವರು ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವ ಹಾಗೂ ಸ್ವಾದಿಷ್ಟ ಆಹಾರ ತಯಾರಿಸಲು ತರಬೇತಿ ನೀಡುವಲ್ಲಿಯೂ ಸಮರ್ಥರು.

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ವಿವಾಂತ ಬೈ ತಾಜ್ ಹೋಟೆಲ್‌ನಲ್ಲಿ  ಕಾರ್ಯನಿರ್ವಾಕ ಬಾಣಸಿಗರಾಗಿರುವ ಸೆಲ್ವರಾಜು ಇಟಾಲಿಯನ್, ಫ್ರೆಂಚ್, ಕೆರೆಬಿಯನ್, ಮಿಡ್ಲ್ ಈಸ್ಟರ್ನ್, ಆಸ್ಟ್ರೇಲಿಯನ್, ಫ್ಯೂಷನ್ ಫುಡ್ ಜೊತೆಗೆ ಆರೋಗ್ಯಪೂರ್ಣ ಆಹಾರಗಳ ಸಂಶೋಧನೆಯಲ್ಲಿ ‘ರಸಋಷಿ’ ಎನಿಸಿಕೊಂಡವರು.

ಆದಾಯ ಹಾಗೂ ನಿರ್ವಹಣಾ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಹೆಚ್ಚಿಸಲು ಬೇಕಾದ ಮಾರುಕಟ್ಟೆ ತಾಣ ಮತ್ತು ಸ್ಪರ್ಧಿಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಇವರು ತಂಡ ನಿರ್ಮಾಣ ಕೌಶಲಗಳನ್ನೂ ಹೊಂದಿದ್ದಾರೆ. ಆಹಾರ ತಯಾರಿಕೆ, ಮೆನು ಅಭಿವೃದ್ಧಿ, ಕಾರ್ಯಕ್ರಮ ಯೋಜನೆ, ಕೇಟರಿಂಗ್ ಮತ್ತು ಖರೀದಿ ಪಟ್ಟಿ ತಯಾರಿ ಮುಂತಾದ ಪಾಕಶಾಲೆ ಕಲೆಗಳನ್ನೂ ಇವರು ಕರಗತ ಮಾಡಿಕೊಂಡಿರುದ್ದಾರೆ. ಆಹಾರೋದ್ಯಮದಲ್ಲಿ ಅತ್ಯುತ್ತಮ ಟ್ರ್ಯಾಕ್‌ ರೆಕಾರ್ಡ್‌ ಹೊಂದಿರುವ ಸೆಲ್ವರಾಜು ಇಲ್ಲಿ ದಕ್ಷಿಣ ಭಾರತೀಯರ ಅಚ್ಚುಮೆಚ್ಚಿನ ‘ರಸಂ’ಗಳ ರೆಸಿಪಿ ಹಂಚಿಕೊಂಡಿದ್ದಾರೆ.

***
ಮೂಂಗ್‌ ದಾಲ್‌ ಶೋರ್ಬಾ
ಬೇಳೆಗಳು ಭಾರತದ ಪ್ರಮುಖ ಆಹಾರ. ಇಲ್ಲಿ ಬೆಳೆದ ಬಹುತೇಕ ಎಲ್ಲ ಬಗೆಯ ಬೇಳೆಗಳನ್ನು ಇಲ್ಲಿ ಆಹಾರವಾಗಿ ಬಳಸಲಾಗುತ್ತದೆ. ಬಹಳಷ್ಟು ಮನೆಗಳಲ್ಲಿ ಬೇಳೆಗಳಿಂದ ಮಾಡಿದ ಕನಿಷ್ಠ ಒಂದಾದರೂ ಆಹಾರ ಇರದಿದ್ದರೆ ಊಟ ಅಪೂರ್ಣ. ಭಾರತೀಯ ಆಹಾರ ಪದ್ಧತಿಯಲ್ಲಿ ಹೆಸರುಬೇಳೆ ಬಹಳ ಜನಪ್ರಿಯ. ಇದನ್ನು ನೆನೆಹಾಕಲು ಹಾಗೂ ಬೇಯಿಸಲು ಅತಿ ಕಡಿಮೆ ಸಮಯ ಸಾಕು.

ಬಾಣಸಿಗ ಸೆಲ್ವರಾಜು ಅವರ ಮೂಂಗ್‌ ದಾಲ್‌ ಶೋರ್ಬಾ ರೆಸಿಪಿ ಇಲ್ಲಿದೆ. ಹಸಿರು ಮೆಣಸು ಹಾಗೂ ಕೆಂಪು ಮೆಣಸಿನ ಪುಡಿಯಿಂದ ಇದನ್ನು ಖಾರದ ಆಹಾರವಾಗಿಸಬಹುದಾದರೂ ನಿಮ್ಮ ರುಚಿಗೆ ತಕ್ಕಂತೆ ಅದನ್ನು ಬಳಸಬಹುದು. ಶೋರ್ಬಾಗೆ ಹೆಚ್ಚಿದ ತರಕಾರಿಗಳನ್ನು ಬೇಯಿಸಿ ಹಾಕುವುದರಿಂದ ಇದನ್ನು ಇಡೀ ಕುಟುಂಬದ ಆರೋಗ್ಯಪೂರ್ಣ ಆಹಾರವಾಗಿಸಬಹುದು.

ಸಾಮಗ್ರಿಗಳು: 100 ಗ್ರಾಂ ಹೆಸರುಬೇಳೆ, 50 ಗ್ರಾಂ ಹೆಚ್ಚಿದ ಈರುಳ್ಳಿ, 50 ಗ್ರಾಂ ಟೊಮೊಟೊ, ಸಿಗಿದ ಒಂದು ಹಸಿ ಮೆಣಸಿನಕಾಯಿ, ಐದು ಗ್ರಾಂ ಖಾರದ ಪುಡಿ, ಐದು ಗ್ರಾಂ ಹೆಚ್ಚಿದ ಶುಂಠಿ, ಐದು ಗ್ರಾಂ ಅರಿಶಿಣ ಪುಡಿ, ಐದು ಗ್ರಾಂ ಗರಂ ಮಸಾಲ, 10 ಗ್ರಾಂ ತುಪ್ಪ, 10 ಗ್ರಾಂ ಚೆನ್ನಾಗಿ ಹೆಚ್ಚಿದ ಬೆಳ್ಳುಳ್ಳಿ, ಅಲಂಕಾರಕ್ಕೆ ತಕ್ಕಷ್ಟು ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಹೆಸರು ಬೇಳೆಯನ್ನು ಸ್ವಚ್ಛಗೊಳಿಸಿ ತೊಳೆದು 30 ನಿಮಿಷ ನೆನೆಹಾಕಿ ಬಳಿಕ ನೀರನ್ನು ಸೋಸಬೇಕು. ಬೇಳೆ, ಈರುಳ್ಳಿ, ಟೊಮೊಟೊ, ಹಸಿಮೆಣಸು, ಮೆಣಸಿನ ಪುಡಿ, ಶುಂಠಿ, ಅರಿಶಿಣ, ಗರಂ ಮಸಾಲ, ಉಪ್ಪು ಇವುಗಳ ಜೊತೆಗೆ ಎರಡು ಕಪ್ ನೀರು ಹಾಕಿ ಮಿಶ್ರಣ ಮಾಡಿ 30 ನಿಮಿಷ ಕುದಿಸಬೇಕು. ಮೇಲೆ ಬರುವ ಬರುಗನ್ನು ತೆಗೆಯುತ್ತಿರಬೇಕು. ಅಗಲವಾದ ಬಾಣಲೆಯಲ್ಲಿ ತುಪ್ಪ ಕಾಯಿಸಿ, ಅದಕ್ಕೆ ಬೆಳ್ಳುಳ್ಳಿ ಬೆರೆಸಿ ಹದವಾದ ಉರಿಯಲ್ಲಿ ಕೆಲ ಸೆಕೆಂಡುಗಳ ಕಾಲ ಕಾಯಿಸಬೇಕು.

ನಂತರ ಬೇಯಿಸಿದ ಬೇಳೆಯ ಮಿಶ್ರಣವನ್ನು ಒಂದು ಕಪ್ ನೀರಿನ ಜೊತೆಗೆ ಹಾಕಿ ಹದವಾದ ಉರಿಯಲ್ಲಿ ಎರಡು ನಿಮಿಷ ಕಾಯಿಸಬೇಕು. ಮತ್ತೆ ಒಂದು ಲೋಟ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹದವಾದ ಬೆಂಕಿಯ ಮೇಲೆ ಮೂರರಿಂದ ನಾಲ್ಕು ನಿಮಿಷಗಳ ಕಾಲ ಸೌಟಿನಲ್ಲಿ ಚೆನ್ನಾಗಿ ತಿರುತ್ತಿರಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಅದರ ಮೇಲೆ ಉದುರಿಸಿ ಬಿಸಿಬಿಸಿಯಾಗಿ ಬಡಿಸಬೇಕು.

ತಯಾರಿ ಅವಧಿ: 10 ನಿಮಿಷ, ಅಡುಗೆಯ ಅವಧಿ: 30 ನಿಮಿಷ. ಭಾಗ: ನಾಲ್ಕು ಜನರಿಗೆ ಬಡಿಸಬಹುದು.

***
ಲೈಮ್‌ ಪೆಪ್ಪರ್‌ ರಸಂ
ಸಾಮಗ್ರಿಗಳು:
25 ಗ್ರಾಂ ತೊಗರಿಬೇಳೆ, 20 ಗ್ರಾಂ ಹಸಿಶುಂಠಿ (ಸಿಪ್ಪೆ ತೆಗೆದು ತುರಿದದ್ದು), ನಾಲ್ಕು ಹಸಿಮೆಣಸಿನಕಾಯಿ, ಐದು ಗ್ರಾಂ ಜೀರಿಗೆ, ಐದು ಗ್ರಾಂ ಕಾಳುಮೆಣಸು, ಐದು ಗ್ರಾಂ ಅರಿಶಿಣ ಪುಡಿ, ಐದು ಗ್ರಾಂ ಉಪ್ಪು, ಟೊಮೊಟೊ, ನಾಲ್ಕು ಭಾಗ ಮಾಡಿದ್ದು. 10 ಎಂಎಲ್ ನಿಂಬೆರಸ, ಸ್ವಲ್ಪ ಕೊತ್ತಂಬರಿ ಸೊಪ್ಪು (ಅಲಂಕಾರಕ್ಕಾಗಿ).

ಒಗ್ಗರಣೆಗೆ: ಸ್ವಲ್ಪ ತುಪ್ಪ, ಐದು ಗ್ರಾಂ ಸಾಸಿವೆ, ಒಂದು ಚಿಟಿಕೆ ಇಂಗಿನ ಪುಡಿ, ಒಂದು ಕೆಂಪುಮೆಣಸಿನಕಾಯಿ (ಇಬ್ಭಾಗಿಸಿದ್ದು), 10 ಕರಿಬೇವಿನ ಎಲೆ.  

ಮಾಡುವ ವಿಧಾನ: ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಬಳಿಕ ಬೇಳೆಯನ್ನು ಬಾಣಲೆಯಲ್ಲಿ ಹಾಕಬೇಕು. ಒಂದು ಕಪ್ ನೀರು ಹಾಕಿ ಬಾಣಲೆಮುಚ್ಚಿ ನೀರನ್ನು ಕಾಯಿಸಬೇಕು. ಅದು ಕುದಿಯತೊಡಗಿದಂತೆ   ಉರಿ ತಗ್ಗಿಸಿ 45 ನಿಮಿಷಗಳಿಂದ ಒಂದು ಗಂಟೆಯವರೆಗೆ ಅಥವಾ ಬೇಳೆ ಮೆತ್ತಗಾಗುವರೆಗೆ ಬೇಯಿಸಬೇಕು. ಕೊನೆಯ 30 ನಿಮಿಷಗಳಲ್ಲಿ ಅವಧಿಯಲ್ಲಿ ಆಗಾಗ ತಿರುವುತ್ತಿರಬೇಕು. (ನೀರು ಪೂರ್ಣ ಆವಿಯಾಗಬೇಕು).

ಬೇಯಿಸಿದ ಬೇಳೆಯನ್ನು ಸೋಸದೆ ಹಾಗೇ ಇರಿಸಿಕೊಳ್ಳಿ. ಆಮೇಲೆ ಹಸಿ ಶುಂಠಿ ಹಾಗೂ ಹಸಿ ಮೆಣಸಿನ ಪೇಸ್ಟ್ ತಯಾರಿಸಿಕೊಳ್ಳಬೇಕು. ಜೀರಿಗೆ ಹಾಗೂ ಕಾಳುಮೆಣಸನ್ನು ಕೂಡ ಪುಡಿ ಮಾಡಿಟ್ಟುಕೊಳ್ಳಬೇಕು. ಈಗ ಬೇಯಿಸಿ ಸೋಸದ ಬೇಳೆಯನ್ನು ಮತ್ತೊಂದು ಬಾಣಲೆಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರು, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ-ಹಸಿಮೆಣಸಿನ ಪೇಸ್ಟ್ ಬೆರೆಸಬೇಕು.

ನಿಧಾನವಾಗಿ ಕುದಿಸಬೇಕು. ಒಗ್ಗರಣೆಯಲ್ಲಿ ಎರಡು ಟೇಬಲ್ ಚಮಚಗಳಷ್ಟು ತುಪ್ಪವನ್ನು ತವಾದಲ್ಲಿ ಕಾಯಿಸಬೇಕು. ಅದಕ್ಕೆ ಸಾಸಿವೆ, ಇಂಗಿನ ಪುಡಿ, ಕೆಂಪು ಮೆಣಸು ಹಾಗೂ ಕರಿಬೇವಿನ ಎಲೆಗಳನ್ನು ಹಾಕಬೇಕು. ಸಾಸಿವೆ ಸಿಡಿಯುತ್ತಿದ್ದಂತೆ ಈ ಮಿಶ್ರಣವನ್ನು ರಸಂಗೆ ಹಾಕಬೇಕು. ಉರಿ ಆರಿಸಿ ನಿಂಬೆರಸ ಸೇರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಬಿಸಿಯಾಗಿರುವಾಗಲೇ ಬಡಿಸಿ.

***
ಚೆಟ್ಟಿನಾಡು ಕೋಳಿ ರಸಂ
ಸಾಮಗ್ರಿಗಳು:
200 ಗ್ರಾಂ ಚಿಕನ್ (ಮೂಳೆ ಇರುವಂಥದ್ದು), 50 ಗ್ರಾಂ ಸಣ್ಣೀರುಳ್ಳಿ, 100 ಗ್ರಾಂ ಟೊಮೊಟೊ, 100 ಗ್ರಾಂ ಶುಂಠಿ, 100 ಗ್ರಾಂ ಬೆಳ್ಳುಳ್ಳಿ, ಅರಿಶಿಣ ಪುಡಿ (ಐದು ಗ್ರಾಂ), 20 ಎಂಎಲ್ ಎಳ್ಳೆಣ್ಣೆ, ಸ್ವಲ್ಪ ಸಾಸಿವೆ, ದಪ್ಪ ಸೋಂಪು, ಲವಂಗ, ದಾಲ್ಚಿನ್ನಿ ಚಕ್ಕೆ, ಕರಿಬೇವಿನ ಎಲೆ, ಕೊತ್ತಂಬರಿ, ರುಚಿಗೆ ತಕ್ಕಷ್ಟು ಉಪ್ಪು.

ರುಬ್ಬಲು: ಮೂರು ಒಣಗಿದ ಕೆಂಪು ಮೆಣಸಿನಕಾಯಿ, ನಾಲ್ಕರಿಂದ ಐದು ಕಾಳುಮೆಣಸು, ಐದು ಗ್ರಾಂ ಜೀರಿಗೆ ಮತ್ತು ಧನಿಯಾ. 

ವಿಧಾನ: ಒಣ ಕೆಂಪುಮೆಣಸು, ಕಾಳುಮೆಣಸು, ಜೀರಿಗೆ ಹಾಗೂ ಧನಿಯಾಗಳನ್ನು ಪುಡಿ ಮಾಡಿ ಬದಿಗಿರಿಸಿಕೊಳ್ಳಿ. ಬಾಣಲೆಯಲ್ಲಿ ಎಳ್ಳೆಣ್ಣೆ ಹಾಕಿ ಕಾಯಿಸಿ, ಅದಕ್ಕೆ ಸಾಸಿವೆ, ಲವಂಗ, ಚಕ್ಕೆ ಹಾಕಿ ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಹದವಾಗಿ ಕಾಯಿಸಬೇಕು.

ನಂತರ ಹೆಚ್ಚಿದ ಟೊಮೊಟೊ, ಶುಂಠಿ, ಬೆಳ್ಳುಳ್ಳಿಯನ್ನು ಹಾಕಿ ಬೇಯಿಸಬೇಕು. ಆಮೇಲೆ ಮೂಳೆ ಇರುವ ಚಿಕನ್ ಪೀಸ್, ಅರಿಶಿಣ ಪುಡಿ, ರುಬ್ಬಿದ ಮಸಾಲೆ ಪುಡಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಅರ್ಧ ಲೀಟರ್‌ ನೀರು ಹಾಕಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಅದರ ಮೇಲೆ ಮುಚ್ಚಳ ಮುಚ್ಚಿ ಒಂದು ಗಂಟೆಯವರೆಗೆ ಹದವಾದ ಉರಿಯಲ್ಲಿ ಕಾಯಿಸಬೇಕು.

ಹೀಗೆ ಮಾಡುವಾಗ ಮೇಲೆ ಬರುವ ಬುರುಗನ್ನು ತೆಗೆಯುತ್ತಿರಬೇಕು. ಎಳ್ಳೆಣ್ಣೆಯನ್ನು ತವಾದಲ್ಲಿ ಕಾಯಿಸಿ ಅದರಲ್ಲಿ ಸೋಂಪು ಹಾಗೂ ಬೇವಿನಎಲೆ ಹಾಕಿ ಕಾಯಿಸಿದ ನಂತರ ಚಿಕನ್ ರಸಂಗೆ ಸುರಿಯಬೇಕು. ತದನಂತರ ಪಾತ್ರೆಯನ್ನು ಒಲೆಯಿಂದ ಇಳಿಸಿ ಅನ್ನದೊಂದಿಗೆ ಬಿಸಿಬಿಸಿಯಾಗಿ ಸವಿಯಬಹುದು ಅಥವಾ ಹಾಗೆಯೇ ಕುಡಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT