ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜ್ಞಾನ: ಭಾರತದ್ದು ಅದ್ವಿತೀಯ ಸಾಧನೆ’

ವಿಜ್ಞಾನ ವಿಚಾರ ಸಂಕಿರಣದಲ್ಲಿ ಸುಧೀಂದ್ರ ಹಾಲ್ದೊಡ್ಡೇರಿ
Last Updated 2 ಡಿಸೆಂಬರ್ 2013, 5:59 IST
ಅಕ್ಷರ ಗಾತ್ರ

ದಾವಣಗೆರೆ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಜಗತ್ತಿನ ಯಾವುದೇ ಮುಂದುವರಿದ ದೇಶಗಳಿಗೂ ಕಡಿಮೆ ಇಲ್ಲ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ವಿಜ್ಞಾನಿ ಡಾ.ಸುಧೀಂದ್ರ ಹಾಲ್ದೊಡ್ಡೇರಿ ಪ್ರತಿಪಾದಿಸಿದರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ವತಿಯಿಂದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಎವಿಕೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 7ನೇ ವಿಜ್ಞಾನ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಮಾಧ್ಯಮದಲ್ಲಿ ನಿತ್ಯವೂ ಭಾರತದಲ್ಲಿನ ಭ್ರಷ್ಟಾಚಾರದ ವಿಷಯದ ಬಗ್ಗೆ ಪ್ರಚಾರವಾಗುತ್ತಿರುತ್ತದೆ. ಆದರೆ, ಜಗತ್ತಿನ ದೇಶಗಳ ಪೈಕಿ ಕೇವಲ 5–6 ದೇಶಗಳು ಮಾಡಿರುವ ಸಾಧನೆಯಲ್ಲಿ ಭಾರತ ಒಂದಾಗಿದೆ. ಬಾಹ್ಯಾಕಾಶ ವಿಜ್ಞಾನಿಗಳು ಉಪಗ್ರಹವನ್ನು ನಿಶ್ಚಿತ ಕಕ್ಷೆಯಲ್ಲಿ ಸೇರಿಸಿದ್ದರಿಂದಾಗಿ ಮಾತ್ರ ಇಂದು ಎಲ್ಲರ ಕಿಸೆಯಲ್ಲಿ ಮೊಬೈಲ್‌ಗಳು ಬಂದು ಕುಳಿತಿವೆ. ಸುಲಭವಾಗಿ ಸಂಪರ್ಕ ಸಾಧ್ಯವಾಗುತ್ತಿದೆ. ಮಂಗಳ ಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಿ, ನಾಲ್ಕು ರಾಷ್ಟ್ರಗಳ ಪೈಕಿ ಒಂದೆನಿಸಿದೆ. ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಇತರ ದೇಶಗಳಿಗೆ ಸರಿಸಮಾನವಾಗಿ, ಯಾರಿಗೂ ಕಡಿಮೆ ಇಲ್ಲದಂತೆ ಬೀಗುವ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಹೆಮ್ಮೆಯಿಂದ ನುಡಿದರು.

‘ನಮ್ಮಲ್ಲಿರುವ ಶಕ್ತಿಯಿಂದಾಗಿ ಯಾವುದೇ ದೇಶ ನಮ್ಮ ವಿರುದ್ಧ ಯುದ್ಧ ಸಾರಲು ಸಿದ್ಧವಿಲ್ಲ. ಏನೇ ತಂತ್ರಜ್ಞಾನದ ನಿರ್ಬಂಧ ಹೇರಿದರೂ ಅದರ ನಡುವೆಯೂ ಪ್ರಬಲತೆ ಸಾಧಿಸಿಕೊಂಡು ಹೋಗುವ ಶಕ್ತಿ ಭಾರತಕ್ಕಿದೆ’ ಎಂದು ಹೇಳಿದರು.

‘ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಶಕ್ತವಾಗಿದೆ. ದೂರಸಂವೇದಿ ಉಪಗ್ರಹಗಳ ಮೂಲಕ ಅತಿ ಎತ್ತರದಿಂದ ಭೂಮಿಯ ಚಿತ್ರವನ್ನು ನಿಖರವಾಗಿ ತೆಗೆಯುವ ಉಪಗ್ರಹಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಾರಿಸಿದ ದೇಶ ಭಾರತ. ಇತರ ದೇಶಗಳು ನಾವು ತೆಗೆದ ಚಿತ್ರಗಳನ್ನು ಖರೀದಿ ಮಾಡುತ್ತಿವೆ. ಸಂಪರ್ಕ ಉಪಗ್ರಹಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಾರಿಸಿದ್ದೇವೆ. ಇಂದು ಅಂತರ್ಜಾಲದ ಮೂಲಕ ಸುಲಭವಾಗಿ ಮಾಹಿತಿ ಸಿಗುತ್ತಿರಬೇಕಾದರೆ, ನಾವು ಹಾರಿಸಿರುವ ಸಂಪರ್ಕ ಉಪಗ್ರಹಗಳೇ ಕಾರಣ. 25ರಲ್ಲಿ 24 ‘ಪಿಎಸ್‌ಎಲ್‌ವಿ’ (ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌) ಉಪಗ್ರಹಗಳು ಅಪಯಶಸ್ಸು ಕಂಡಿಲ್ಲ. ಜಗತ್ತಿನಲ್ಲಿಯೇ ಇದೊಂದು ದಾಖಲೆ’ ಎಂದರು.

‘ದುರ್ಗಮ ‘ನೀರ್ಗಲ್‌’ ಪ್ರದೇಶದಲ್ಲಿ ನಿತ್ಯವೂ ಹೆಲಿಕಾಪ್ಟರ್‌ ಹಾರಿಸುತ್ತಿರುವ ದೇಶ ನಮ್ಮದು. ಇದರಿಂದಾಗಿ ನೆರೆಯ ದೇಶಗಳು ಗಡಿಯಲ್ಲಿ ಈ ಭಾಗದಲ್ಲಿ ತಂಟೆಗೆ ಬರುತ್ತಿಲ್ಲ. ಪಾಕಿಸ್ತಾನದವರು ಹೇಸರಗತ್ತೆಯ ಮೇಲೆ ಪದಾರ್ಥ ಪೂರೈಸಿದರೆ, ನಾವು ಹೆಲಿಕಾಫ್ಟರ್‌ನಲ್ಲಿ ಹೋಗಿ ನಮ್ಮ ಸೈನಿಕರಿಗೆ ಅಗತ್ಯವಾದ ಸಾಮಗ್ರಿಗಳನ್ನು ತಲುಪಿಸುತ್ತಿದ್ದೇವೆ. ಜಗತ್ತಿನ ಯಾವುದೇ ದೇಶವೂ ಇಂಥ ಸಾಧನೆ ಮಾಡಿಲ್ಲ’ ಎಂದು ಹೇಳಿದರು.

ಹಿಂದೆ, ಉಪಗ್ರಹದ ಒಂದು ಭಾಗವನ್ನೂ ಕೂಡ ಬೇರೆ ದೇಶದವರು ನಮಗೆ ಕೊಡುತ್ತಿರಲಿಲ್ಲ. ನಾವು ಈಗ ಬೇರೆಯವರಿಗೆ ಕೊಡುವಷ್ಟು ಸಶಕ್ತರಾಗಿದ್ದೇವೆ. ನಮ್ಮ ಸಂಪರ್ಕ ವ್ಯವಸ್ಥೆ ಅಗ್ಗ ಹಾಗೂ ಅತಿ ವಿಶ್ವಾಸಾರ್ಹವಾಗಿರುವುದರಿಂದ ಬೇರೆ ದೇಶಗಳು ನಮ್ಮನ್ನು ಅವಲಂಬಿಸಿವೆ. ವಿಜ್ಞಾನಿಗಳಂತೆ ಯುವಜನರು ದೇಶದ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನೂತನ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್‌.ವಿ. ಶಿವಶಂಕರ್‌ ಮಾತನಾಡಿ, ವಿಜ್ಞಾನವನ್ನು ಗ್ರಾಮೀಣ ಬಡವರ ಅಭ್ಯುದಯಕ್ಕೆ ಬಳಸಬೇಕು. ಅನ್ವಯಿಕ ವಿಜ್ಞಾನ ಇಂದು ತುಂಬಾ ಬಾಲ್ಯಾವಸ್ಥೆಯಲ್ಲಿದೆ. ಮೋಟಾರ್‌ ದುರಸ್ತಿ ಬಗ್ಗೆ ಹೇಳಿಕೊಡುತ್ತೇವೆಯೇ ಹೊರತು, ಕಲಿಸಿಕೊಡುವುದಿಲ್ಲ. ಹೀಗಾಗಬಾರದು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ಸಹಕಾರಿ ಯಾಗಬೇಕು ಎಂದು ಹೇಳಿದರು.

ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಐಇಟಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಿ.ಇ.ರಂಗಸ್ವಾಮಿ ಹಾಜರಿದ್ದರು. ಡಿ.ಕೆ.ಕರುಣಾಶ್ರೀ ಪ್ರಾರ್ಥಿಸಿದರು. ಪ್ರಾಂಶುಪಾಲ ಪ್ರೊ.ಎಂ.ಸಿ.ರುದ್ರಪ್ಪ ಸ್ವಾಗತಿಸಿದರು. ಬಸವರಾಜ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT