ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜ್ಞಾನಿಗಳು– ಕೃಷಿಕರು ಸೇರಿ ಪರಿಹಾರ ರೂಪಿಸಿ’

ಗುಣಮಟ್ಟದ ಆಹಾರ ಉತ್ಪಾದನೆ
Last Updated 19 ಡಿಸೆಂಬರ್ 2013, 6:30 IST
ಅಕ್ಷರ ಗಾತ್ರ

ಮೈಸೂರು:  ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಗುಣಮಟ್ಟದ ಆಹಾರ ಉತ್ಪಾದಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮತ್ತು ರೈತರು ಒಗ್ಗೂಡಿ ಸೂಕ್ತ ಪರಿಹಾರೋಪಾಯಗಳನ್ನು ರೂಪಿಸುವ ಅಗತ್ಯ ಇದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಸಲಹೆ ನೀಡಿದರು.

ರಕ್ಷಣಾ ಆಹಾರ ಸಂಶೋಧನಾಲಯ, ಕೇಂದ್ರ ಆಹಾರ ವಿಜ್ಞಾನ ಸಂಶೋಧನೆ ಸಂಸ್ಥೆ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಬುಧವಾರ ಆರಂಭವಾದ 7ನೇ ಅಂತರರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ (ಇಫ್ಕಾನ್‌–2013) ಅವರು ಮಾತನಾಡಿದರು. ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನು ಸಾಕಷ್ಟು ಸುಧಾರಣೆಗಳು ಆಗಬೇಕಿದೆ.

ಇಂದಿನ ವೈಜ್ಞಾನಿಕ ಯುಗದಲ್ಲೂ ಕೆಲವಾರು ರೋಗಗಳು ಆಹಾರ ಸೇವನೆಯೊಂದಿಗೆ ಥಳಕು ಹಾಕಿಕೊಂಡಿರುವುದನ್ನು ಗುರುತಿಸ ಬಹುದಾಗಿದೆ. ಹೀಗಾಗಿ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಸುರಕ್ಷಿತ ಆಹಾರ, ಪೌಷ್ಟಿಕತೆ, ಆರೋಗ್ಯ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಕೈಗೊಂಡು ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.

ದೇಶದಲ್ಲಿ ಕೃಷಿ, ಆರೋಗ್ಯ, ಆರ್ಥಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳಾಗಿವೆ. ಆದರೆ, ಪೌಷ್ಟಿಕತೆ ವಲಯದಲ್ಲೂ ಸಾಕಷ್ಟು ಹಣ ವೆಚ್ಚ ಮಾಡುತ್ತಿದ್ದರೂ ಅಪೌಷ್ಟಿಕತೆ ಮತ್ತು ಅತಿಪೌಷ್ಟಿಕತೆ ನಿವಾರಣೆ ನಿಟ್ಟಿನಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಆಗಿಲ್ಲ. ಹೀಗಾಗಿ ಸುರಕ್ಷಿತ, ಪೌಷ್ಟಿಕ ಆಹಾರ ಒದಗಿಸಲು ಕೃಷಿ ಬೆಳವಣಿಗೆ ಮತ್ತು ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಆವಿಷ್ಕಾರಗಳು ಆಗಬೇಕಿದೆ ಎಂದು ಸಲಹೆ ನೀಡಿದರು.

ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮತ್ತು ಮಿತ ದೈಹಿಕ ಶ್ರಮದಿಂದ ಅನಾರೋಗ್ಯ ಉಂಟಾಗುತ್ತದೆ. ವಿಶೇಷವಾಗಿ ಇಂಥ ಸಂದರ್ಭದಲ್ಲಿ ಅತಿಪೌಷ್ಟಿಕತೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ  ಮಾನವ ಶರೀರ ಸೂಚ್ಯಂಕ ಆಧರಿಸಿ ಅಪೌಷ್ಟಿಕತೆ ನಿವಾರಣೆಗೆ ಪರಿಹಾರಗಳನ್ನು ಕಂಡುಕೊಳ್ಳುವುದು ಇತರ ವಿಧಾನಗಳಿಗಿಂತ ಉತ್ತಮವಾಗಿದೆ ಎಂದು ಹೇಳಿದರು.

ವಿವಿಧ ತರಕಾರಿ ಸೊಪ್ಪಿನಿಂದ ತಯಾರಿಸಿದ್ದ ಹಸಿರು ಹಾಲನ್ನು ಜನರು ಕುಡಿದು ಖುಷಿಪಟ್ಟರು. ಸಿಎಫ್‌ಟಿಆರ್‌ಐ ಆವರಣದಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಹಸಿರು ಹಾಲನ್ನು ಗುರುವಾರ ಸಾರ್ವಜನಿಕರು ಸವಿಯಬಹುದಾಗಿದೆ. ಪ್ರದರ್ಶನದಲ್ಲಿ 50 ವಿವಿಧ ಮಳಿಗೆಗಳು ಇರಲಿವೆ. ಇಫ್ಕಾನ್‌ ಸಮ್ಮೇಳನ ಡಿ. 21ರವರೆಗೆ ನಡೆಯಲಿದೆ.

ಇಫ್ಕಾನ್‌ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಕೆ.ಡಿ. ಯಾದವ್‌, ಡಾ. ಅಜಿತ್‌ಕುಮಾರ್‌, ಪ್ರೊ.ನವಮ್‌ ಎಸ್‌. ಹೆಟ್ಟಿರಾಚ್ಚಿ, ಡಿಎಫ್‌ಆರ್‌ಎಲ್‌ ನಿರ್ದೇಶಕ ಡಾ. ಹರ್ಷವರ್ಧನ್‌ ಬಾತ್ರಾ, ಸಿಎಫ್‌ಟಿಆರ್‌ಐ ನಿರ್ದೇಶಕ ಪ್ರೊ. ರಾಮರಾಜಶೇಖರನ್‌, ಇಫ್ಕಾನ್‌ ಸಂಘಟನಾ ಕಾರ್ಯದರ್ಶಿ ಡಾ.ಎನ್‌. ಭಾಸ್ಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT