ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳು ರಾಜಕೀಯ ಪ್ರವೇಶ ಮಾಡುವುದು ಬೇಡ’

Last Updated 9 ಜನವರಿ 2014, 6:52 IST
ಅಕ್ಷರ ಗಾತ್ರ

ಬೀಳಗಿ: ಇಂದಿನ ಕಲುಷಿತ ರಾಜಕೀಯ ವಾತಾವರಣದಲ್ಲಿ ವಿದ್ಯಾರ್ಥಿಗಳು ರಾಜಕೀಯ ಪ್ರವೇಶ ಮಾಡುವುದು ಬೇಡ, ಪ್ರವೇಶ ಮಾಡಿದರೂ ಕೇವಲ ಪಕ್ಷದ ಪ್ರಣಾಳಿಕೆ ಹಾಗೂ ಅಭ್ಯರ್ಥಿಯ ಆರ್ಥಿಕ ಬಲಿಷ್ಠತೆಯನ್ನು ಆಧಾರವಾಗಿಟ್ಟುಕೊಂಡು ಬೆಂಬ­ಲಿಸದೇ ಅಭ್ಯರ್ಥಿಯ ಗುಣಾವಗುಣಗಳನ್ನು ಅಳೆದು, ತೂಗಿ ಬೆಂಬಲಿಸಬೇಕು ಎಂದು ಶಾಸಕ ಜೆ.ಟಿ.ಪಾಟೀಲ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬುಧವಾರ ಇಲ್ಲಿನ ಸ್ವಾಮಿ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ ಇಲಾಖೆ, ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಸ್ವಾಮಿ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ಜಿಲ್ಲಾ ಮಟ್ಟದ ಯುವ ಸ್ಪರ್ಧೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸನ ರಚನೆಯ,  ಮಸೂದೆ ಮಂಡನೆಯ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಅಪಾರ ಅಧ್ಯಯನದೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ದುರದೃಷ್ಟಕರ ಸಂಗತಿ ಎಂದರೆ ಬಹುಪಾಲು ನಮ್ಮ ಜನಪ್ರತಿನಿಧಿಗಳು ಮುತುವರ್ಜಿ ವಹಿಸುವುದಿಲ್ಲ. ಕೆಲವರ ಅಸಭ್ಯ ವರ್ತನೆಯಿಂದ ಸದನದ ಗೌರವವೇ ಹಾಳಾಗತೊಡಗಿದೆ. ಹೀಗಾಗು­ವುದರಿಂದ ಸದನಗಳು ಕೆಲವೇ ಜನರ ಸೊತ್ತಾಗುತ್ತವೆ ಎಂದು ವಿಷಾದಿಸಿದರು.

ಹಿಂದೆ ಸದನಗಳಲ್ಲಿ ಮುತ್ಸದ್ದಿ ನಾಯಕರಿಂದ  ಗಂಭೀರ ಚರ್ಚೆಗಳು ನಡೆದು ಶಾಸನಗಳು ರಚನೆಯಾ­ಗುತ್ತಿದ್ದವು. ಮಸೂದೆಗಳು ಮಂಡನೆಯಾಗುತ್ತಿದ್ದವು. ಆದರೆ ಇಂದು ದೇಶದ ಹಿತ ಕಾಯುವ ಗಂಭೀರ ವಿಷಯಗಳನ್ನು ಬದಿಗಿರಿಸಿ ಕ್ಷುಲ್ಲಕ ವಿಷಯಗಳ ಕುರಿತಾಗಿ ಸದನದಲ್ಲಿ ಹುಯಿಲೆಬ್ಬಿಸಲಾಗುತ್ತಿದೆ ಎಂದು ಹೇಳಿದರು.

ಶೀಲಾ ದೀಕ್ಷಿತ್‌ ಒಳ್ಳೆಯ ಆಡಳಿತ ನೀಡಿದ್ದರೂ ಏಷ್ಯನ್ ಕ್ರೀಡಾಕೂಟ, ದೆಹಲಿ ಅತ್ಯಾಚಾರ ಪ್ರಕರಣ, ಅಗತ್ಯ ವಸ್ತಗಳ ಬೆಲೆ ಏರಿಕೆಯಂತಹ ಗಂಭೀರ ಪ್ರಕರಣಗಳಿಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು. ದೇಶದ ಜನತೆ ಬದಲಾವಣೆ ಬಯಸುತ್ತಿದ್ದಾರೆಂದು ಹೇಳಿದ ಅವರು ಬದಲಾಗಿರುವ ಸನ್ನಿವೇಶಕ್ಕೂ ಸಮಯಾವಕಾಶ ಕೊಟ್ಟು ಕಾದು ನೋಡಬೇಕು. ಭ್ರಷ್ಟಾಚಾರದ ವಿಷಯ ಬಂದಾಗ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪಾಲುದಾರರೇ ಆಗಿದ್ದೇವೆ ಎಂದರು.

ಇಡೀ ದೇಶದಲ್ಲಿ ಶೇ.37ರಷ್ಟು ಇರಬೇಕಾದ ಅರಣ್ಯ ಪ್ರದೇಶ ಇಂದು ಶೇ. 9ಕ್ಕೆ ಇಳಿದಿದೆ. ನಾವು ಪರಿಸರ ರಕ್ಷಣೆ ಮಾಡದೇ ಹೋದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಅದನ್ನರಿತುಕೊಂಡು ವಿದ್ಯಾರ್ಥಿಗಳು ಹಾಗೂ ಯುವ ಜನತೆ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ ಅಧ್ಯಕ್ಷತೆವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೈ.ಎಚ್. ಇಲಾಳ ಮಾತನಾಡಿದರು.

ಪ್ರೊ.ಜಿ.ಎಚ್.ಬಡಿಗೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸಾವಿತ್ರಿ ಗದಿಗೆಪ್ಪಗೌಡರ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT