ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗೆ ಪೂರ್ವಾಭ್ಯಾಸ ಅಗತ್ಯ’

Last Updated 16 ಸೆಪ್ಟೆಂಬರ್ 2013, 9:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿದ್ಯಾರ್ಥಿಗಳು ತಾವು ಬದುಕಿನಲ್ಲಿ ಏನಾಗಬೇಕು ಮತ್ತು ಏನನ್ನು ಓದಬೇಕು ಎಂಬು­ದನ್ನು ಮೊದಲೇ ನಿಶ್ಚಯಿಸಿ ಅದಕ್ಕೆ ತಕ್ಕಂತೆ ವಿದ್ಯಾಭ್ಯಾಸ ಮಾಡಬೇಕು ಎಂದು ಪ್ರಭಾರ ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಮಿತ್ರಾ ಹೆರಾಜೆ ಕಿವಿಮಾತು ಹೇಳಿದ್ದಾರೆ.

ನಗರದ ಕಾಮಧೇನು ಕ್ಷೇತ್ರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿ­ಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನಿಗೂ ತಾನು ಬದುಕಿನಲ್ಲಿ ಏನಾಗಬೇಕು ಎಂಬ ಸ್ಪಷ್ಟವಾದ ಗುರಿ ಇರಬೇಕು. ಅದಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದ ಅವರು  ತಾನು ಏನಾಗಬೇಕೆಂಬ ಗುರಿ ಇದ್ದರೆ ಅದಕ್ಕೆ ತಕ್ಕಂತೆ ಪ್ರಯತ್ನ ಮಾಡಲು ಮತ್ತು ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಕೊನೇ ಗಳಿಗೆಯಲ್ಲಿ ಪ್ರಯತ್ನ ಮಾಡುವ ಬದಲು ಮೊದಲಿನಿಂದಲೇ ಶ್ರದ್ಧೆಯಿಂದ ಶ್ರಮ­ವಹಿಸಿ ವಿದ್ಯಾರ್ಜನೆ ಮಾಡಬೇಕು ಆಗ ಸುಲಭವಾಗಿ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಬಿ.ರಾಜಪ್ಪ ಮಾತನಾಡಿ ಮನುಷ್ಯನಿಗೆ ವಿದ್ಯೆಯೇ ಅತೀ ದೊಡ್ಡ ಆಸ್ತಿಯಾಗಿದ್ದು ಅದನ್ನು ಹೆತ್ತವರು ತಮಗೆ ಎಷ್ಟೇ ಕಷ್ಟವಾ­ದರೂ ಬಿಡದೇ ಮಕ್ಕಳಿಗೆ ನೀಡಬೇಕು ಎಂದು ಸಲಹೆ ನೀಡಿದರು.

ಮಕ್ಕಳು ವಿದ್ಯಾರ್ಥಿ ದಿಸೆಯಲ್ಲಿ ಸಮಯ ವ್ಯರ್ಥಮಾಡದೇ ಶ್ರದ್ಧೆ­ಯಿಂದ ವಿದ್ಯಾರ್ಜನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಅವರಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ಉನ್ನತ ವಿಚಾರಗಳನ್ನು ತುಂಬುವ ಮೂಲಕ ಅವರನ್ನು ಉತ್ತಮ ನಾಗರೀಕರನ್ನಾಗಿ ಶಿಕ್ಷಕರು ಮಾಡಬೇಕು ಎಂದು ಕರೆ ನೀಡಿದರು.

ಸಾಹಿತಿ ಹಳೆಕೋಟೆ ರಮೇಶ್ ಮಾತನಾಡಿ ದೇವಾಲಯಕ್ಕೆ ವಿದ್ಯುತ್ ಜನರೇಟರ್ ಕೊಡುಗೆಯಾಗಿ ನೀಡುವ ಭರವಸೆ ನೀಡಿದರು. ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್.­ನಂಜುಂಡಸ್ವಾಮಿ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಹತ್ತು ವರ್ಷಗಳಿಂದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಾಹಿತಿ ದಿ.ಚಂದ್ರಯ್ಯನಾಯ್ಡು ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಸೇವೆಸಲ್ಲಿಸಿದ ಹತ್ತು ಶಿಕ್ಷಕರಿಗೆ ಶ್ರೀಕಾಮಧೇನು ಸೇವಾರತ್ನ ಪ್ರಶಸ್ತಿ ಮತ್ತು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ 109 ವಿದ್ಯಾರ್ಥಿಗಳಿಗೆ ಶ್ರೀಶಾರದಾ ಅನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಎ.ಐ.ಟಿ.ಪ್ರಾಂಶುಪಾಲ ಡಾ. ಸಿ.ಕೆ.­ಸುಬ್ರಾಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಾಣಾಧಿಕಾರಿ ರಾಜೇಗೌಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪಿ.ಲಕ್ಷ್ಮಣ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಉಪಸ್ಥಿತರಿದ್ದರು. ಲೇಖಕಿ ವಾಣಿ ಚಂದ್ರಯ್ಯನಾಯ್ಡು ನಿರೂಪಿಸಿದರು. ಪಶುಪರೀಕ್ಷಕ ರಾಮ­ಚಂದ್ರೇ­ಗೌಡ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT