ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿವಿಗೆ ಮಲ್ಲಿಕಾರ್ಜುನಸ್ವಾಮಿ ಕೊಡುಗೆ ಅನನ್ಯ’

Last Updated 10 ಡಿಸೆಂಬರ್ 2013, 6:59 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗವನ್ನು ಪ್ರತ್ಯೇಕಿಸಲು ಸಿಂಡಿಕೇಟ್‌ ಸಮಿತಿ ಒಪ್ಪಿಗೆ ಸೂಚಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅದನ್ನು ಅನುಷ್ಠಾನಕ್ಕೆ ತರಲಾಗುವುದು’ ಎಂದು ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಹೇಳಿದರು.

ಮೈಸೂರು ವಿವಿಯ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗ ಸೋಮವಾರ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾಜಿ ಉನ್ನತ ಶಿಕ್ಷಣ ಸಚಿವ ದಿವಂಗತ ಎಂ. ಮಲ್ಲಿಕಾರ್ಜುನಸ್ವಾಮಿ ದತ್ತಿ ಉಪನ್ಯಾಸ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮೈಸೂರು ವಿವಿಗೆ ಮಲ್ಲಿಕಾರ್ಜುನಸ್ವಾಮಿ ನೀಡಿದ ಕೊಡುಗೆ ಪ್ರಾತಃಸ್ವರಣೀಯವಾದುದು. ಅವರ ಪ್ರಾಮಾಣಿಕತೆ, ಸಾಧನೆಯನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮುಂದಿನ ವರ್ಷ ಇದೇ ದತ್ತಿ ಉಪನ್ಯಾಸವನ್ನು ವಿವಿ ವತಿಯಿಂದಲೇ ಆಯೋಜಿಸಲಾಗುವುದು’ ಎಂದರು ಹೇಳಿದರು.

ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡ ಅವರು ‘ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ಸವಾಲುಗಳು’ ಕುರಿತು ಉಪನ್ಯಾಸ ನೀಡಿ, ‘ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯ ಕಾಯ್ದೆ ಜಾರಿಯಾಗಲು ಮಲ್ಲಿಕಾರ್ಜುನಸ್ವಾಮಿ ಕಾರಣಕರ್ತರು. ಕಾಲಕಾಲಕ್ಕೆ ಉನ್ನತ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಆಗಬೇಕು. ಹಳೆಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮ ಕೌಶಲ ಮತ್ತು ಜ್ಞಾನವನ್ನು ಪಡೆದು ದೇಶದ ಅಭಿವೃದ್ಧಿಗೆ ಪಣ ತೊಡಬೇಕು ಎಂದು ಸಲಹೆ ನೀಡಿದರು. ಬೆಂಗಳೂರಿನ ಡಾ.ಬಿ.ಆರ್‌. ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಕುಬೇರಪ್ಪ ಮಾತನಾಡಿ, ‘ಮಲ್ಲಿಕಾರ್ಜುನಸ್ವಾಮಿ ಅವರು ನೇರ ಸ್ವಭಾವದ ವ್ಯಕ್ತಿತ್ವ ಹೊಂದಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ’ ಎಂದರು.

ಮಲ್ಲಿಕಾರ್ಜುನಸ್ವಾಮಿ ಪುತ್ರ ಡಾ.ಎಂ. ಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಪಾಂಡಿಚೇರಿ ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಪ್ರೊ.ವಿ.ಟಿ. ಪಾಟೀಲ, ಪ್ರಾಧ್ಯಾಪಕ ಪ್ರೊ.ದಯಾನಂದ ಮಾನೆ, ಶಿವಲಿಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT