ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವ ಹಬ್ಬ’ದ ಸಂಭ್ರಮ, ಸಡಗರ

ಸ್ನೇಹ ಪ್ರೀತಿ ಬಾಂಧವ್ಯ ಬೆಸುಗೆ ಅಧ್ಯಾತ್ಮ ಸಂದೇಶ ಸನ್ನಿಧಾನ ಸಾರುವ ಹಬ್ಬ
Last Updated 24 ಡಿಸೆಂಬರ್ 2013, 6:34 IST
ಅಕ್ಷರ ಗಾತ್ರ

‘ಕ್ರಿಸ್‌ಮಸ್‌‘... ಎಂಬುದು ಕೇವಲ ಒಂದು ಪದವಲ್ಲ ಮತ್ತು ಹಬ್ಬ­ವೊಂದರ ಹೆಸರಲ್ಲ. ಕ್ರಿಸ್‌ಮಸ್‌ ಎಂಬುದು ಕ್ರೈಸ್ತ ಸಮುದಾಯದ ಪಾಲಿಗೆ ಸಂಭ್ರಮವಿದ್ದಂತೆ.

ಡಿಸೆಂಬರ್ 24ರ ಮಧ್ಯರಾತ್ರಿ ಏಸು ಜನಿಸಿದ ಸಂತಸ ಒಂದೆಡೆಯಿದ್ದರೆ, ಏಸು ಸ್ಮರಣೆಯಲ್ಲಿ ಪ್ರಾರ್ಥನೆ ಗೀತೆಗಳನ್ನು ಹಾಡುವ ಸಡಗರವೇ ಮತ್ತೊಂದೆಡೆ. ಶಾಂತಿದೂತನಾದ ಏಸು ಎಲ್ಲೆಡೆ ಶಾಂತಿ ಮತ್ತು ನೆಮ್ಮದಿ ಮೂಡಿಸಲಿ ಎಂಬ ಪ್ರಾರ್ಥನೆ ಒಂದೆಡೆಯಾದರೆ, ಮತ್ತೊಂದೆಡೆ ಏಸುವಿನ ಕರುಣೆ ಮತ್ತು ಪ್ರೀತಿ ಸದಾ ಇರುತ್ತದೆ ಎಂಬ ನಂಬಿಕೆ. ಕ್ರಿಸ್‌ಮಸ್‌ ಸಂದರ್ಭ­ದಲ್ಲಿ ಚರ್ಚ್‌ಗಳು ಮಾತ್ರವೇ ಝಗಮಗಿಸುವುದಿಲ್ಲ. ಕ್ರೈಸ್ತ ಸಮು­ದಾಯದವರು ಸೇರಿದಂತೆ ಬಹುತೇಕ ಮನೆಗಳು ಸಹ ಬೆಳಕಿನಿಂದ ಕಂಗೊಳಿಸುತ್ತವೆ.

 ಆಕಾಶಬುಟ್ಟಿ, ನಕ್ಷತ್ರಗಳು ಹೊಳೆಯುವುದಲ್ಲದೇ ಮೈಮನವು ಕೂಡ ಸಂತೋಷದಿಂದ ಅರಳುತ್ತದೆ. ಏಸು ಪರವಾಗಿ ಕೊಡುಗೆಗಳ ಬುತ್ತಿಯನ್ನೇ ತರುವ ಸಾಂತಾ ಕ್ಲಾಸ್ ಮಕ್ಕಳ ಮೊಗದಲ್ಲಿ ಸಂತಸ ಇಮ್ಮಡಿಗೊಳಿಸುತ್ತಾ ಹಬ್ಬದ ಸಡಗರವನ್ನು ತಾರಕಕ್ಕೇರಿಸುತ್ತಾರೆ. ಹೊಸ ಉಡುಪುಗಳನ್ನು ತೊಟ್ಟುಕೊಂಡು ಬಗೆಬಗೆಯ ಸಿಹಿ ತಿನಿಸು ಮತ್ತು ಕೇಕ್‌ಗಳನ್ನು ಸವಿಯುತ್ತ ಮಕ್ಕಳು ನಲಿದಾಡುತ್ತಾರೆ. ಅವರೊಂದಿಗೆ ಹಿರಿಯರು ಸಹ ಪಾಲ್ಗೊಂಡು ಹಬ್ಬದ ಸವಿಯನ್ನು ಸವಿಯುತ್ತಾರೆ.

‘ಕ್ರಿಸ್‌ಮಸ್‌ ಹಬ್ಬದ ಸಂಭ್ರಮದಲ್ಲಿ ಆಕಾಶಬುಟ್ಟಿ, ದೀಪಾಲಂಕಾರ ಮತ್ತು ಕೇಕ್‌ಗಳಿಗೆ ಭಾರಿ ಬೇಡಿಕೆಯಿರುತ್ತದೆ. ಹಬ್ಬದ ಸಂದರ್ಭದಲ್ಲಿ ಒತ್ತಡ ಹೆಚ್ಚಾಗಬಾರದೆಂದೇ ನಾವು ಮೊದಲೇ ಕೇಕ್‌ಗಳನ್ನು ತಯಾರಿಸಿಟ್ಟಿರುತ್ತೇವೆ. ಹಬ್ಬದ ಹಿನ್ನೆಲೆಯಲ್ಲಿ ಕೆಲವರು ಮೊದಲೇ ಬುಕ್ಕಿಂಗ್‌ ಮಾಡಿರುತ್ತಾರೆ. ಬಣ್ಣಬಣ್ಣದ ಮತ್ತು ವಿವಿಧ ವಿನ್ಯಾಸದ ಕೇಕ್‌ಗಳನ್ನು ತಯಾರಿಸಿ ನಾವು ನೀಡಿದಾಗ, ಅವರ ಮೊಗದಲ್ಲಿ ಸಂತೋಷ ನೋಡುವುದೇ ಸೊಗಸು. ಕೇಕ್‌ಗಳನ್ನು ಸವಿಯುವುದು ಅಷ್ಟೇ ಅಲ್ಲ, ಮನೆ­ಗಳನ್ನು ಅಂದಚೆಂದವಾಗಿ ಶೃಂಗರಿಸುತ್ತಾರೆ. ಕ್ರಿಸ್‌ಮಸ್‌ ಟ್ರೀ ಕೂಡ ಆಕರ್ಷಕವಾಗಿರುತ್ತದೆ’ ಎಂದು ಬೇಕರಿಯೊಂದರ ನೌಕರ ಡೇವಿಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇತಿಹಾಸದ ಲೆಕ್ಕಾಚಾರ ಹಾಕಿದರೆ, ಚಿಕ್ಕಬಳ್ಳಾಪುರ ಮತ್ತು ಕ್ರೈಸ್ತ ಸಮುದಾಯಗಳಿಗೆ ಶತಮಾನಗಳ ನಂಟು ಇದೆ. ಸಮುದಾಯದ ಪಂಗಡಗಳಾದ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್‌  ಚರ್ಚ್‌ಗಳನ್ನು ಹೊಂದಿದ್ದಾರೆ. ಎರಡೂ ಪಂಗಡದವರು ಏಸು ಕ್ರಿಸ್ತನನ್ನು ಆರಾಧಿಸಿ ಪ್ರಾರ್ಥಿಸುತ್ತಾರೆ. ಆದರೆ ಚರ್ಚ್‌ಗಳಲ್ಲಿ ಪ್ರಾರ್ಥನಾ ಸಮಯ ಬೇರೆಬೇರೆಯದ್ದೇ ಇರುತ್ತದೆ.

ಚಿಕ್ಕಬಳ್ಳಾಪುರದಲ್ಲಿ ಕ್ಯಾಥೊಲಿಕ್‌ ಪಂಗಡದ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ ಇದ್ದರೆ, ಪ್ರೊಟೆಸ್ಟಂಟ್‌ ಪಂಗಡದ ಸಿಎಸ್‌ಐ ಕ್ರೈಸ್ಟ್‌ ಚರ್ಚ್‌ ಇದೆ. 
ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌:  ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆ ಬದಿಯಲ್ಲಿರುವ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ಗೆ ರೆವರೆಂಡ್‌ ಡಾ.ಥಾಮಸ್‌ ಫೊಥಾಕಮುರಿ ಅವರು 1954ರ ಆಗಸ್ಟ್‌ 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಚರ್ಚ್ ವಿಶಾಲವಾಗಿದ್ದರೂ ಜನದಟ್ಟಣೆಯಿಂದ ಸಭಾಂಗಣ ಕಿರಿದಾದ ಕಾರಣದಿಂದ ನೂತನ ಕಟ್ಟಡವನ್ನು ನಿರ್ಮಿಸಲು 2011ರಲ್ಲಿ ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
‘1954ರಲ್ಲಿ ಚರ್ಚ್ ಕಟ್ಟುವಾಗ ನಾನು ತುಂಬಾ ಚಿಕ್ಕವನಿದ್ದೆ. ಎಲ್ಲರೂ ಜೊತೆಗೂಡಿ ಚರ್ಚ್‌ ಕಟ್ಟಿದ್ದು, ಧನ ಸಂಗ್ರಹಣೆ ಮಾಡಿದ್ದು ಮತ್ತು ಅದಕ್ಕಾಗಿ ಶ್ರಮಿಸಿದ್ದು ಎಲ್ಲವೂ ಚೆನ್ನಾಗಿ ನೆನಪಿದೆ.

ಆಗಿನ ಕಾಲದಲ್ಲಿ 18 ಸಾವಿರ ರೂಪಾಯಿ ವೆಚ್ಚದಲ್ಲಿ ಚರ್ಚ್‌ ನಿರ್ಮಿಸಿದ್ದೆವು. ಈಗ ನೂತನ ಕಟ್ಟಡವೊಂದನ್ನು ನಿರ್ಮಿಸಿ ವಿಶಾಲವಾದ ಸಭಾಂಗಣದಲ್ಲಿ ಒಂದು ಸಾವಿರ ಮಂದಿ ಪ್ರಾರ್ಥಿಸಲು ಅವಕಾಶ ಕಲ್ಪಿಸಿದ್ದೇವೆ. ಸುಮಾರು 2 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಿರ­ಬಹುದು’ ಎಂದು ನಗರದ ನಿವಾಸಿ ಥಾಮಸ್‌ ತಿಳಿಸಿದರು.

‘ಮೈಸೂರು ಸಂಸ್ಥಾನ ಆಳಿದ ಒಡೆಯರ್‌ ವಂಶಸ್ಥರು ಚರ್ಚ್‌ ನಿರ್ಮಿಸಿಕೊಳ್ಳಲು ನಿವೇಶನ ನೀಡಿದರು. ಎಲ್ಲ ಜಾತಿ–ಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದ ಅವರು ಚರ್ಚ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟರು. ನೂತನ ಕಟ್ಟಡದಲ್ಲಿ ಪ್ರಥಮ ಕ್ರಿಸ್‌ಮಸ್‌ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಮಂಗಳವರ ಮಧ್ಯರಾತ್ರಿ 11.30 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಶಾಂತಿಯನ್ನು ಕೋರುವ ಗೀತೆಗಳನ್ನು ಹಾಡುತ್ತೇವೆ. ಎಲ್ಲೆಡೆ ಶಾಂತಿ ಮತ್ತು ಸಹನೆ ನೆಲೆಸಲಿಯೆಂದು ವಿಶೇಷ ಪ್ರಾರ್ಥನೆ ಮಾಡುತ್ತೇವೆ’ ಎಂದು ಚರ್ಚ್‌ನ ನೂತನ ಫಾದ್ರಿ ರೆವರೆಂಡ್‌ ರಾಯ್ಸ್‌ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT