ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇಗದ ಚಳಿ’ಗೆ ಹರಿಯಾಣ ಗಡಗಡ

ರಣಜಿ ಕ್ರಿಕೆಟ್‌: ಪರದಾಡಿದ ಆತಿಥೇಯರಿಗೆ ಸೈನಿ ಶತಕದ ಬಲ
Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಾಹ್ಲಿ, ರೋಹ್ಟಕ್‌: ಮೈ ಕೊರೆಯುವ ಚಳಿ ಆಟಗಾರರನ್ನು ಶುಕ್ರವಾರ ಬೆಳಿಗ್ಗೆ ಮೆತ್ತಗೆ ಮಾಡಿತ್ತು. ನಂತರದಲ್ಲಿ ಹರಡಿದ ಸೂರ್ಯನ ಪ್ರಖರವಾದ ಕಿರಣಗಳು ಕರ್ನಾಟಕ ತಂಡಕ್ಕೆ ವರದಾನವಾದವು. ವಿಜೃಂಭಿಸಿದ ಗೌತಮ್‌ ಬಳಗದ ವೇಗದ ಶಕ್ತಿ ಹರಿಯಾಣ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು.

ಫೀಲ್ಡಿಂಗ್‌ ಮಾಡುವಾಗ ಚೆಂಡು ಹಿಡಿತಕ್ಕೆ ಪಡೆಯಲು ಪರದಾಡುವಷ್ಟು ಚಳಿ ಬನ್ಸಿ ಲಾಲ್‌ ಕ್ರೀಡಾಂಗಣದಲ್ಲಿದೆ. ಆದರೂ, ಕರ್ನಾಟಕ ತಂಡದ ನಾಯಕ ಸಿ.ಎಂ. ಗೌತಮ್‌ ಮಂಜು ಬಿದ್ದು ಹಸಿಯಾಗಿದ್ದ ಅಂಗಳದಲ್ಲಿ ಎದುರಾಳಿ ತಂಡವನ್ನು ಬೇಗನೆ ಕಟ್ಟಿಹಾಕುವ ಲೆಕ್ಕಾಚಾರ ದೊಂದಿಗೆ ಟಾಸ್‌ ಗೆದ್ದು ಫೀಲ್ಡಿಂಗ್‌ ಆರಿಸಿಕೊಂಡರು.

ರಣಜಿ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಕನಸು ಜೀವಂತವಾಗಿ ಉಳಿಯಬೇಕಾದರೆ ಆತಿಥೇಯರಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಆದ್ದರಿಂದ ಆರಂಭದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟರು. ಮೊದಲ ವಿಕೆಟ್‌ಗೆ ಉತ್ತಮ ಬುನಾದಿ ಕಟ್ಟಿದರಾದರೂ, ನಂತರದ ಬ್ಯಾಟ್ಸ್‌ಮನ್‌ಗಳು ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾ ದರು. ಆದರೆ, ನಿತಿನ್‌ ಸೈನಿ ಶತಕ ಗಳಿಸಿ ತಂಡ ವನ್ನು ಅಪಾಯದಂಚಿನಿಂದ ಪಾರು ಮಾಡಿ ದರು. ಇದರಿಂದ ಹರಿಯಾಣ ಮೊದಲ ಇನಿಂಗ್ಸ್‌ನಲ್ಲಿ 76.5 ಓವರ್‌ಗಳಲ್ಲಿ 247 ರನ್‌ ಕಲೆ ಹಾಕಿತು.

ದಿನದಾಟ ಮುಗಿಯಲು 40 ನಿಮಿಷ ಬಾಕಿ ಇದ್ದಾಗ ಗೌತಮ್‌ ಬಳಗಕ್ಕೆ ಬ್ಯಾಟ್‌ ಮಾಡಲು ಅವಕಾಶ ಸಿಕ್ಕಿತು. ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿರುವ ಪಿಚ್‌ನಲ್ಲಿ ಅಪಾಯಕ್ಕೆ ಅವಕಾಶ ನೀಡದೇ ಮಯಂಕ್‌ ಅಗರವಾಲ್‌ (ಬ್ಯಾಟಿಂಗ್‌ 3) ಮತ್ತು ಕೆ.ಎಲ್‌. ರಾಹುಲ್‌ (ಬ್ಯಾಟಿಂಗ್‌ 10) ಕ್ರೀಸ್‌ನಲ್ಲಿದ್ದಾರೆ. ಐದು ಇತರೆ ರನ್‌ಗಳನ್ನು ಪಡೆದ ಕರ್ನಾಟಕ ಶುಕ್ರವಾರದ ದಿನದಾಟದ ಅಂತ್ಯಕ್ಕೆ ನಾಲ್ಕು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 18 ರನ್‌ ಗಳಿಸಿದೆ.

ಗಟ್ಟಿ ಬುನಾದಿ: ಮೊದಲ ವಿಕೆಟ್‌ಗೆ ರಾಹುಲ್ ದೇವನ್‌ (23) ಮತ್ತು ಅವಿ ಬರೋಟ್‌ (35) ಒಟ್ಟು 53 ರನ್‌ ಕಲೆ ಹಾಕಿ ಉತ್ತಮ ಆರಂಭ ನೀಡಿದರು.
ಈ ಜೋಡಿ ಮೊದಲ 90 ನಿಮಿಷ  ರಕ್ಷಣಾತ್ಮಕವಾಗಿ ಆಡಿತು.  ಪೆವಿಲಿಯನ್‌ ತುದಿಯಿಂದ ಬೌಲಿಂಗ್‌ ಆರಂಭಿಸಿದ ಸ್ಟುವರ್ಟ್‌ ಬಿನ್ನಿಗೆ ವಿಕೆಟ್‌ ಪಡೆಯಲು ಆಗಲಿಲ್ಲ. ಆದರೆ, ಬೌಲಿಂಗ್‌ ತುದಿ ಬದಲಿಸಿ ಅವಿ ಬರೋಟ್‌ ಅವರನ್ನು ಬೌಲ್ಡ್‌ ಮಾಡಿದರು. ಮೊದಲ ವಿಕೆಟ್‌ ಬೀಳುತ್ತಿದ್ದಂತೆ ಹರಿಯಾಣ ತಂಡದ ಪರೇಡ್‌ ಶುರುವಾಯಿತು.

ವರವಾದ ಬಿಸಿಲು: ಕೈಯಿಂದ ಜಾರುತ್ತಿದ್ದ ಚೆಂಡಿನಿಂದ ಬೌಲ್‌ ಮಾಡಲು ಕರ್ನಾಟಕದ ವೇಗಿಗಳು ಕೆಲ ಹೊತ್ತು ಪ್ರಯಾಸ ಪಟ್ಟರು. ಆದರೆ, ಬಿಸಿಲು ಚುರುಕಾ ಗುತ್ತಿದ್ದಂತೆ ವೇಗದ ಶಕ್ತಿಯೂ ಮೆರೆದಾಡಿತು. ಹೋದ ಋತುವಿನಲ್ಲಿ ರಣಜಿಗೆ ಪದಾರ್ಪಣೆ ಮಾಡಿದ ಮಂಡ್ಯದ ಎಚ್‌.ಎಸ್‌. ಶರತ್‌ ಎಸೆದ 25ನೇ ಓವರ್‌ನ ಎರಡನೇ ಎಸೆತವನ್ನು ಹೊಡೆತಕ್ಕೆ ಮುಂದಾಗಿ ಅಪಾಯ ತಂದುಕೊಂಡ ಸನ್ನಿ ಸಿಂಗ್‌ ಪೆವಿಲಿಯನ್‌ ಸೇರಿದರು. ಸನ್ನಿ ಔಟಾದ ನಾಲ್ಕು ಓವರ್‌ಗಳ ನಂತರ ರಾಹುಲ್‌ ಧವನ್‌ ಕೂಡಾ ವಿಕೆಟ್‌ ಒಪ್ಪಿಸಿದರು. ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್‌ ಪಡೆದು ಕರ್ನಾಟಕ ಅಪಾಯಕಾರಿಯಾಗುವ ಸೂಚನೆ ನೀಡಿತು.

ನೆರವಾದ ನಿತಿನ್‌: ಹರಿಯಾಣ ಆರಂಭದಲ್ಲಿ ಗಳಿಸಿದ ಮೊತ್ತವನ್ನು ಹಿಗ್ಗಿಸಲು ನಿತಿನ್‌ ಬರಬೇಕಾಯಿತು. ರಾಣಾ ನೆರವು ಪಡೆದು ನಿತಿನ್‌ ಶತಕ ಗಳಿಸಿ ದರು. ಲಾಂಗ್‌ ಆನ್‌ನಲ್ಲಿ ಒಂದು ಮತ್ತು ಲಾಂಗ್‌ ಆಫ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಹನ್ನೊಂದು ಸಲ ಚೆಂಡನ್ನು ಬೌಂಡರಿಗೆ ಅಟ್ಟಿದರು.  ನಾಲ್ಕು ಗಂಟೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಸೈನಿ 152 ಎಸೆತಗಳಲ್ಲಿ 109 ರನ್‌ ಕಲೆ ಹಾಕಿದರು. 

ಐದನೇ ವಿಕೆಟ್‌ ಜೊತೆಯಾಟದಲ್ಲಿ ಸೈನಿ ಮತ್ತು ಸಚಿನ್‌ ರಾಣಾ (36) 17 ಓವರ್‌ಗಳಲ್ಲಿ 72 ರನ್‌ ಕಲೆ ಹಾಕಿ ಸವಾಲಿನ ಮೊತ್ತ ಪೇರಿಸುವ ಸೂಚನೆ ನೀಡಿದರು. ಆದರೆ , ಇದಕ್ಕೆ ಅಭಿಮನ್ಯು ಮಿಥುನ್‌ ಅವಕಾಶ ನೀಡಲಿಲ್ಲ. 59ನೇ ಓವರ್‌ನಲ್ಲಿ ಹೊರಹೋಗುತ್ತಿದ್ದ ಚೆಂಡನ್ನು ತಡವಿಕೊಂಡ ರಾಣಾ ಮೊದಲ ಸ್ಲೀಪ್‌ನಲ್ಲಿದ್ದ ಕೆ.ಎಲ್‌. ರಾಹುಲ್‌ ಕೈಗೆ ಕ್ಯಾಚ್‌ ನೀಡಿದರು. ಆಗ ಮತ್ತೆ ಶುರುವಾಯಿತು ಆತಿಥೇಯರ ಪರೇಡ್‌.

ರಾಹುಲ್‌ ತಿವಾತಿಯಾ, ಹರ್ಷಲ್‌ ಪಟೇಲ್‌, ಆಶಿಶ್‌ ಹೂಡಾ, ಜಯಂತ್‌ ಯಾದವ್‌ ಮತ್ತು ಬಿ. ಸಂಜಯ್‌ ಎರಡಂಕಿಯ ಮೊತ್ತ ಮುಟ್ಟದೇ ಕರ್ನಾಟಕದ ವೇಗದ ದಾಳಿಯ ಮುಂದೆ ಪರದಾಡಿತು. 

ವೇಗದ ಚಳಿ: ದಿಕ್ಕು ಬದಲಿಸಿ ಯಶಸ್ಸು ಕಂಡು ಬಲಗೈ ಮಧ್ಯಮ ವೇಗಿ ಬಿನ್ನಿ ಹೆಚ್ಚು ಯಾರ್ಕರ್‌ಗಳನ್ನು ಎಸೆದು ಹರಿಯಾಣ ಬ್ಯಾಟ್ಸ್‌ಮನ್‌ಗಳಿಗೆ ತಲೆ ನೋವಾದರು. ಆಲ್‌ರೌಂಡರ್‌ ಬಿನ್ನಿ (15-4-43-3) ಬಿಗುವಿನ ದಾಳಿ ನಡೆಸಿದರು. ಮೊದಲೇ ಚಳಿಯ ಅಬ್ಬರಕ್ಕೆ ತತ್ತರಿಸಿದ್ದ ಆತಿಥೇಯರು ಬಿನ್ನಿ, ರೋನಿತ್‌ ಮೋರೆ, ಮಿಥುನ್‌ ಮತ್ತು ಶರತ್‌ ‘ವೇಗದ ಚಳಿ’ಯ ಮುಂದೆ ಒದ್ದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT