ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದ್ಯಕೀಯ ಶಿಕ್ಷಣಕ್ಕೆ ಚೀನಾ ಮಾದರಿ ಬರಲಿ’

Last Updated 21 ಸೆಪ್ಟೆಂಬರ್ 2013, 8:56 IST
ಅಕ್ಷರ ಗಾತ್ರ

ಕೋಲಾರ: ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರು ಕಡ್ಡಾಯವಾಗಿ ಅಲ್ಲಿನ ದೇಸಿ ಔಷಧಿ– ಚಿಕಿತ್ಸಾ ಪದ್ಧತಿ­ಗಳನ್ನೂ ಕಲಿಯುವ ವ್ಯವಸ್ಥೆ ಇದೆ. ಪಠ್ಯಕ್ರಮದಲ್ಲೇ ಅದನ್ನು ಅಳವಡಿಸ­ಲಾಗಿದೆ. 

ಎಂಬಿಬಿಎಸ್ ಬದಲಿಗೆ ಸಮಗ್ರ ಆರೋಗ್ಯ ಚಿಕಿತ್ಸೆಯನ್ನು ಕೇಂದ್ರೀಕರಿಸಿದ ಸಮನ್ವಯ ಕಲಿಕಾ ವ್ಯವಸ್ಥೆಯು ಭಾರತ­ದಲ್ಲೂ ಜಾರಿಗೆ ಬರಬೇಕಾಗಿದೆ ಎಂದು ವಿವೇಕಾನಂದ ಯೋಗ ವಿಶ್ವವಿದ್ಯಾ­ಲಯದ ಯೋಗ ವಿಭಾಗದ ಮಾಜಿ ಡೀನ್ ಡಾ.ಆರ್‌.ನಾಗರತ್ನ ಪ್ರತಿಪಾದಿಸಿ­ದರು.

ನಗರ ಹೊರವಲಯದ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಶುಕ್ರ­ವಾರದಿಂದ ಆರಂಭವಾದ ಪರ್ಯಾ­ಯ ಔಷಧಗಳ ಕುರಿತ ಎರಡು ದಿನದ ವಿಚಾರ ಸಂಕಿರಣವನ್ನು ಉದ್ಘಾ­ಟಿಸಿ ಮಾತನಾಡಿದ ಅವರು, ಪಠ್ಯಕ್ರಮದಲ್ಲೇ ದೇಸಿ ಚಿಕಿತ್ಸಾ ಪದ್ಧತಿ ಕಲಿಕೆಯನ್ನು ಅಳವಡಿಸಿರುವುದರಿಂದ ಚೀನಾದಲ್ಲಿ ವೈದ್ಯ ಪದವಿ ಪಡೆಯುವ ಪ್ರತಿಯೊಬ್ಬರಿಗೂ ಪರ್ಯಾಯ ಚಿಕಿತ್ಸಾ ಕ್ರಮಗಳ ಅರಿವು ಇದ್ದೇ ಇರುತ್ತದೆ. ತುರ್ತು ಸಂದರ್ಭದಲ್ಲಿ ಈ ಅರಿವು ಹೆಚ್ಚು ಪ್ರಯೋಜನಕ್ಕೆ ಬರುತ್ತದೆ ಎಂದರು.

ಇಂಥ ಸಮನ್ವಯ ವೈದ್ಯಕೀಯ ಚಿಕಿತ್ಸೆ ಕುರಿತು ದೇಶದಲ್ಲಿ ಇನ್ನೂ ಚರ್ಚೆ ಮಾತ್ರ ನಡೆಯುತ್ತಿದೆ. ಆದರೆ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಹಲವು ಬಗೆಯ ಚಿಕಿತ್ಸೆಗಳನ್ನು ಕಲಿಸುವ ಮತ್ತು ಪ್ರಯೋಗ ಮಾಡುವ ಕೆಲಸ ಶುರು­ವಾಗಿ ಹಲವು ವರ್ಷಗಳೇ ಆಗಿವೆ ಎಂದರು.

ಭಾರತದಲ್ಲಿ ಆಲೋಪಥಿ, ಹೋಮಿಯೋ­ಪಥಿ, ಸಿದ್ಧ, ಯುನಾನಿ, ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸಾ ಕ್ರಮಗಳು ಪರಸ್ಪರ ಅರ್ಥ ಮಾಡಿಕೊಂಡಿಲ್ಲ. ಹೀಗಾ­ಗಿಯೇ ವಿವಿಧ ಬಗೆಯ ಔಷಧಿ ಮತ್ತು ಚಿಕಿತ್ಸೆಯನ್ನು ಸಮನ್ವಯ ವಿಧಾನ­ದಲ್ಲಿ ಬಳಸುವ ಕುರಿತು ಕಾರ್ಯಕ್ರಮಗಳು ನಾಲ್ಕು ದಶಕದಿಂದ ನಡೆಯುತ್ತಲೇ ಇದ್ದರೂ ಪ್ರಯೋ­ಜನವೇ ಆಗಿಲ್ಲ ಎಂದು ವಿಷಾದಿಸಿದರು.

ಸಮನ್ವಯ ಚಿಕಿತ್ಸಾ ಪದ್ಧತಿ ದೇಶ­ದಲ್ಲಿ ಅಸ್ತಿತ್ವಕ್ಕೆ ಬರುವುದು ಯಾವಾಗ ಎಂದು ಪ್ರಶ್ನಿಸಿದ ಅವರು, ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲೂ ಇದೇ ಸನ್ನಿ­ವೇಶವಿದೆ. ಪ್ರಭಾವ ಮತ್ತು ಪರಿ­ಣಾಮಗಳ ದೃಷ್ಟಿಯಿಂದ ಚಿಕಿತ್ಸಾ ಪದ್ಧತಿ­ಗಳನ್ನು ತೌಲನಿಕ ನೆಲೆಯಲ್ಲಿ ಅಧ್ಯಯನ ಮಾಡುವ ಪ್ರಯತ್ನಗಳು ಸರಿಯಾದ ರೀತಿ ನಡೆಯುತ್ತಿಲ್ಲ. ಅಧ್ಯಯನ ಮತ್ತು ಸಂಶೋಧನಾ ಶಿಸ್ತಿನೊಳಗೆ ಇದು ಮೂಡಿಬರಬೇಕಾಗಿದೆ. ನೀತಿಗಳನ್ನು ರೂಪಿಸುವ ಸರ್ಕಾರಗಳೂ ಈ ಕಡೆಗೆ ಗಂಭೀರ ಗಮನ ಹರಿಸಬೇಕಾಗಿದೆ ಎಂದರು.

ಆಧುನಿಕ ವಿಜ್ಞಾನ ಮತ್ತು ವೈದ್ಯ­ಕೀಯ ಕ್ಷೇತ್ರದಲ್ಲಿ ಪಶ್ಚಿಮದ ದೇಶಗಳ ಸಾಧನೆಗೆ ಹೋಲಿಸಿದರೆ 30 ವರ್ಷ­ಗಳಷ್ಟು ಹಿಂದೆಯೇ ಉಳಿದಿದ್ದ ಭಾರತ ಈಗ ಸಾಕಷ್ಟು ಸಾಧನೆ ಮಾಡಿದೆ. ವೈದ್ಯ­ಕೀಯ ಕ್ಷೇತ್ರದಲ್ಲಿ ಪಶ್ಚಿಮ ದೇಶಗಳು ಕೊಟ್ಟಿದ್ದನ್ನೇ ಪಾಲಿಸುತ್ತಿರುವ ದೇಶವು ಇನ್ನು ಮುಂದಾದರೂ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಚಿಕಿತ್ಸಾ ಕ್ರಮಗಳ ಕುರಿತು ಆ ದೇಶಗಳಿಗೆ ಕಲಿಸಿ­ಕೊಡಬೇಕಾಗಿದೆ. ಅದಕ್ಕೆ ಈಗ ಕಾಲವೂ ಕೂಡಿ ಬಂದಿದೆ ಎಂಬುದನ್ನು ಗಮನಿಸ­ಬೇಕಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ದೇವ­ರಾಜ ಅರಸು ವಿಶ್ವವಿದ್ಯಾಲಯದ ಕುಲ­ಪತಿ ಡಾ.ಪಿ.ಎ
ಫ್.ಕೊಟೂರ್, ಅರಿ­ವಳಿಕೆ ಚಿಕಿತ್ಸೆಯು ಆಲೋಪಥಿಯ ಒಂದು ವಿಧಾನ. ಆದರೆ ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ವಿಭಾಗದಲ್ಲಿ ಅರಿವಳಿಕೆ ಕುರಿತ ಎಂಡಿ ಪದವಿ ಕೋರ್ಸ್ ಇರುವುದು ವಿಪ­ರ್ಯಾಸ. ಆಲೋಪಥಿಯಲ್ಲಿ ಈ ವಿಷಯ­ವನ್ನು ಅಧ್ಯಯನ ಮಾಡಿದ ಪದವೀಧರರು ಸಾವಿರಾರು ರೂಪಾಯಿ ಶುಲ್ಕ ವಿಧಿಸುತ್ತಿರುವ ವೇಳೆಯಲ್ಲಿಯೇ ಆಯುರ್ವೇದದಲ್ಲಿ ಅರಿವಳಿಕೆ ಚಿಕಿತ್ಸೆ­ಯನ್ನು ಅಧ್ಯಯನ ಮಾಡಿದವರು ರೋಗಿ ಆರೈಕೆಯ ಅವಕಾಶಗಳಿಗಾಗಿ ಬನಾ­ರಸ್ ಪ್ರದೇಶದ ಬೀದಿಗಳನ್ನು ಸುತ್ತುತ್ತಿದ್ದಾರೆ. ಅಪ್ರಾಯೋಗಿಕ­ವಾಗಿರುವ ಕೋರ್ಸ್ ಓದಿದ ಫಲ ಇದು ಎಂದು ವಿಷಾದಿಸಿದರು.

ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನನ್ನ ಸಂಬಂಧಿಯೊಬ್ಬರ ಆರೋಗ್ಯ ವಿಚಾ­ರಿಸಲು ಬಂದ ಅಲ್ಲಿನ ನಿವಾಸಿ ವೈದ್ಯರು ಆಯುರ್ವೇದ ಪದವೀಧರ­ರಾಗಿದ್ದರು.

ಹೃದಯ ಶಸ್ತ್ರಚಿಕಿತ್ಸೆ ಮಾಡಿ­ಸಿ­ಕೊಂಡ ರೋಗಿಗೂ ಆಯು­ರ್ವೇದವನ್ನು ಕಲಿತವರಿಗೂ ಎಲ್ಲಿನ ಸಂಬಂಧ? ಇಂಥ ವಿಪರ್ಯಾಸದ ಸನ್ನಿ­ವೇಶಗಳು ಬದಲಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.
ಕೊಯಮತ್ತೂರಿನ ಎವಿಪಿ ಸಂಶೋ­ಧನಾ ಫೌಂಡೇಷನ್ ನಿರ್ದೇಶಕ ಡಾ.ಪಿ.ರಾಮಮನೋಹರ್,  ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.­ಪಿ.ಎನ್.ಶ್ರೀರಾಮುಲು, ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ಕುಲಸಚಿವ ಡಾ.ಎವಿಎಂ ಕುಟ್ಟಿ, ಸಂಕಿರಣದ ಸಂಘ­ಟನಾ ಅಧ್ಯಕ್ಷ ಡಾ.ಸಿ.ಮುನಿ­ನಾರಾ­ಯಣ, ಸಂಚಾಲಕ ಡಾ.ಎನ್.ಎಸ್.­ಅನಿಲ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT