ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣರ ಹುಣ್ಣಿಮೆ’ಯಲ್ಲಿ ಸಂದೇಶದ ಬೆಳಕು

Last Updated 23 ಡಿಸೆಂಬರ್ 2013, 7:43 IST
ಅಕ್ಷರ ಗಾತ್ರ

ಕೊಪ್ಪಳ: ಸಮಾನತೆಯ ಹರಿಕಾರ ಬಸವಣ್ಣ ಆರಂಭಿಸಿದ ಸಾಮಾಜಿಕ ಚಳವಳಿಗೆ ಕೈಜೋಡಿ ಸಿದ ಮಹನೀಯರ ಸಂಖ್ಯೆ ದೊಡ್ಡದು. ಆ ಪೈಕಿ ಕೆಲವೇ ಪ್ರಮುಖರ ಹೆಸರುಗಳು ಈಗಲೂ ಜನರ ನಾಲಿಗೆ ಮೇಲೆ ಹರಿದಾಡಿದರೂ, ಎಷ್ಟೋ ಜನ ಶರಣ–ಶರಣೆಯರ ಜೀವನ–ಸಾಧನೆ ಬೆಳಕಿಗೆ ಬಂದಿಲ್ಲ.

ಇಂತಹ ಅನುಭಾವಿಗಳು ಬೋಧಿಸಿದ ಮೌಲ್ಯ ಗಳು ಯಾವವು? ಅವರು ತಮ್ಮ ವಚನಗಳ ಮೂಲಕ ಸಾರಿದ ಜೀವನಾದರ್ಶ ಎಂಥದು ಎಂಬಂತಹ ವಿಷಯಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕೊಪ್ಪಳದ ವಿಶ್ವಗುರು ಬಸವೇಶ್ವರ ಚಾರಿಟೇಬಲ್‌ ಟ್ರಸ್ಟ್‌ ಸದ್ದಿಲ್ಲದೇ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದೆ.

ಹೆಸರೇ ಹೇಳುವಂತೆ ಸಮಾಜ ಸೇವೆ ಮಾಡುವ ಉದ್ದೇಶದಿಂದ ಸಮಾನ ಮನಸ್ಕರು ಸೇರಿ 2008ರ ಅಕ್ಟೋಬರ್ 24ರಂದು ರಚಿಸಿಕೊಂಡ ಸಂಘಟನೆ ಇದು. ಬಸವ ಜಯಂತಿ, ಬಸವ ಪಂಚಮಿ ಹಾಗೂ ಶರಣರ ಜಯಂತಿ ಕಾರ್ಯಕ್ರಮಗಳು, ಆ ಅಂಗವಾಗಿ ವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡುವುದು ಟ್ರಸ್ಟ್‌ನ ಮೂಲ ಉದ್ದೇಶ ಹಾಗೂ ಪ್ರಾರಂಭಿಕ ಕಾರ್ಯವೂ ಆಗಿತ್ತು.

‘ಆದರೆ, ಪ್ರತಿ ತಿಂಗಳೂ ಶರಣರೊಬ್ಬರ ಸಂದೇಶ ಕುರಿತಂತೆ ಚಿಂತನ–ಮಂಥನ ನಡೆಯಬೇಕು ಎಂಬ ದೃಷ್ಟಿಯಿಂದ 2009ರ ನವೆಂಬರ್‌ನಲ್ಲಿ ಶರಣ ಹುಣ್ಣಿಮೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು’ ಎಂದು ಪ್ರತಿ ಹುಣ್ಣಿಮೆ ದಿನ ನಡೆಯುತ್ತಿರುವ ಈ ವಿಶಿಷ್ಟ ಕಾರ್ಯಕ್ರಮ ಆರಂಭಗೊಂಡ ಬಗೆಯನ್ನು ಟ್ರಸ್ಟ್‌ನ ಕಾರ್ಯದರ್ಶಿ ರಾಜೇಶ ಸಸಿಮಠ ವಿವರಿಸುತ್ತಾರೆ.

ನಗರದ ಹುಡ್ಕೋ ಕಾಲೋನಿಯಲ್ಲಿ ವರ್ತಕ ಶಂಭು ಬಾವಿಹಳ್ಳಿ ಟ್ರಸ್ಟ್‌ನ ಚಟುವಟಿಕೆಗಳನ್ನು ನಡೆಸಲು ತಮ್ಮ ಮನೆಯೊಂದನ್ನು ಉಚಿತವಾಗಿ ನೀಡಿದ್ದಾರೆ ಎಂದು ವಿವರಿಸುತ್ತಾರೆ.

ಟ್ರಸ್ಟ್‌  ಒಂದು ರೀತಿಯಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ಟ್ರಸ್ಟ್‌ನ ಪದಾಧಿಕಾ ರಿಗಳಲ್ಲಿ ಎಲ್ಲ ಜಾತಿ, ಧರ್ಮಕ್ಕೆ ಸೇರಿದವರಿದ್ದಾರೆ. ಎಲ್ಲರೂ ಶ್ರದ್ಧೆಯಿಂದ ಈ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾನತೆ ಕಾಣುತ್ತಿದ್ದೇವೆ ಎಂಬ ಹೆಮ್ಮೆ ಇದೆ ಎನ್ನುವ ಅವರು, ಬಸವಣ್ಣನವರ ಆಶಯ ಇದೇ ಆಗಿತ್ತು ಎಂದು ಹೇಳಲು ಮರೆಯು ವುದಿಲ್ಲ.

ನಾಡಿನ ಹೆಸರಾಂತ ಮಠಾಧೀಶರು, ಬಸವ ಅನುಯಾಯಿಗಳು ಈ ಶರಣ ಹುಣ್ಣಿಮೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ತಮ್ಮ ಪ್ರವ ಚನಗಳ ಮೂಲಕ ಶ್ರೋತೃಗಳ ಮನದಂಗಳದ ತುಂಬಾ ಶರಣರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಎಂಬ ಬೆಳದಿಂಗಳನ್ನೇ ಪಸರಿಸಿದ್ದಾರೆ ಎನ್ನುತ್ತಾರೆ ಟ್ರಸ್ಟ್‌ನ ಅಧ್ಯಕ್ಷ ಬಸವರಾಜ ಮೆರವಣಿಗೆ.

ತೋಂಟದ ಸಿದ್ಧಲಿಂಗ ಶ್ರೀಗಳು, ಧಾರವಾಡ ಮನಗುಂಡಿಯ ಬಸವಾನಂದ ಶ್ರೀಗಳು, ಬೀದರ್‌ನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ, ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಇಳಕಲ್ಲಿನ ಚಿತ್ತರಗಿ ಸಂಸ್ಥಾನಮಠದ ಡಾ.ವಿಜಯ ಮಹಾಂತ ಸ್ವಾಮೀಜಿ, ಆಸ್ಟ್ರೇಲಿಯಾದಲ್ಲಿರುವ ಬಸವ ಸಮಿತಿಯ ಗಿರಿಜಕ್ಕ ಧರ್ಮರೆಡ್ಡಿ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವವರಲ್ಲಿ ಪ್ರಮುಖರು.

‘ಕಾಳವ್ವೆ, ಕದರಿ ರಮ್ಯವ್ವ ಅವರಂತಹ ಶರಣೆಯರ ಕುರಿತು ಬಹಳ ಜನರಿಗೆ ಗೊತ್ತೇ ಇಲ್ಲ. ಇಂತಹ ಶರಣೆಯರ ಜೀವನ–ಸಾಧನೆ ಕುರಿತು ತಿಳಿಸಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಅಲ್ಲದೇ, ಕಂದಾಚಾರ, ಮೂಢನಂಬಿಕೆಗಳ ಕುರಿತು ಜಾಗೃತಿ ಮೂಡಿ ಸಲು, ಪ್ರೌಢಶಾಲಾ ಹಂತದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಸಹ ಟ್ರಸ್ಟ್‌ ಸಂಘಟಿಸು ತ್ತದೆ’ ಎಂದು ರಾಜೇಶ್‌ ವಿವರಿಸುತ್ತಾರೆ.

‘ಪ್ರಾರ್ಥನಾ ಮಂದಿರ ಹಾಗೂ ಎಲ್ಲ ಜಾತಿಗೆ ಸೇರಿದ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ಕಲ್ಪಿಸುವಂತಹ ಹಾಸ್ಟೆಲ್‌ ನಿರ್ಮಿಸುವ ಉದ್ದೇಶವಿದೆ. ಇದಕ್ಕಾಗಿ ಟ್ರಸ್ಟ್‌ಗೆ ಸ್ವಂತ ಕಟ್ಟಡ ಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ’ ಎಂದು ಮುಂದಿನ ಗುರಿ ಕುರಿತು ಹೇಳುತ್ತಾರೆ.

ಅಂದ ಹಾಗೆ, ಟ್ರಸ್ಟ್‌ವತಿಯಿಂದ ಯಶಸ್ವಿ ಯಾಗಿ ಈವರೆಗೆ 39 ‘ಶರಣ ಹುಣ್ಣಿಮೆ’ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂದಿನ ಯೋಜನೆಗಳೂ ಸಾಕಷ್ಟಿವೆ. ಟ್ರಸ್ಟ್‌ನ ಈ ಕಾರ್ಯಕ್ಕೆ ಕೈಜೋಡಿಸಲು ಇಚ್ಛಿಸುವವರು ರಾಜೇಶ್‌ ಸಸಿಮಠ ಅವರನ್ನು (97421–99058) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT