ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಮನೂರು’ ಕಂಪೆನಿಗೇ ಕಬ್ಬು ನೀಡಲು ಆದೇಶ!

ಸರ್ಕಾರದ ಆದೇಶ ವಿರೋಧಿಸಿ ಹೈಕೋರ್ಟ್‌ ಮೆಟ್ಟಿಲೇರಿದ ರೈತರು; ಇಂದು ವಿಚಾರಣೆ
Last Updated 4 ಡಿಸೆಂಬರ್ 2013, 6:07 IST
ಅಕ್ಷರ ಗಾತ್ರ

ಬೆಂಗಳೂರು: ದಾವಣಗೆರೆ ಜಿಲ್ಲೆಯ ಒಟ್ಟು 79 ಮತ್ತು ರಾಣೇಬೆನ್ನೂರು ತಾಲ್ಲೂಕಿನ ಎರಡು ಗ್ರಾಮಗಳ ರೈತರು ಪ್ರಸಕ್ತ ಹಂಗಾಮಿನ ಕಬ್ಬನ್ನು ಶಾಮನೂರು ಸಕ್ಕರೆ ಕಂಪೆನಿ ಅಥವಾ ದಾವಣಗೆರೆ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧೀನ ಕಾರ್ಯದರ್ಶಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.

ಈ ಎರಡೂ ಕಂಪೆನಿಗಳು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಒಡೆತನದಲ್ಲಿವೆ. ಸರ್ಕಾರವು ಅ.19ರಂದು ಹೊರಡಿಸಿರುವ ಆದೇಶ ವಿರೋಧಿಸಿರುವ ದಾವಣಗೆರೆಯ ರೈತ ಜಿ.ಬಿ.ಶಿವಕುಮಾರ್ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ನಡೆಸುತ್ತಿದ್ದಾರೆ.

ಅರ್ಜಿದಾರರು 2004ರವರೆಗೆ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದರು. ನಂತರ ಆ ಕಾರ್ಖಾನೆ ಸ್ಥಗಿತಗೊಂಡಿತು. ಈ ಕಾರ್ಖಾನೆಯನ್ನು ಗುತ್ತಿಗೆ ಆಧಾರದಲ್ಲಿ 30 ವರ್ಷಗಳ ಅವಧಿಗೆ ಬೇರೆಯವರಿಗೆ ನೀಡಲು ಸರ್ಕಾರ 2009ರಲ್ಲಿ ಅನುಮತಿ ನೀಡಿತು. ಇದರ ಗುತ್ತಿಗೆ ಪಡೆದುಕೊಂಡ ಗ್ಯಾನ್‌ಬಾ ಶುಗರ್ಸ್ ಕಂಪೆನಿ 2010–11ರಲ್ಲಿ ಮಾತ್ರ ಕಬ್ಬು ಅರೆದಿದೆ.

2011ರ ನವೆಂಬರ್‌ನಲ್ಲಿ ಇನ್ನೊಂದು ಆದೇಶ ಹೊರಡಿಸಿದ ಸರ್ಕಾರ, ಭದ್ರಾ ಕಾರ್ಖಾನೆ ವ್ಯಾಪ್ತಿಯ ರೈತರು ಯಾವುದೇ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಬಹುದು ಎಂದು ಹೇಳಿತು. ಆದರೆ, ಅ.19ರಂದು ಹೊಸ ಆದೇಶ ಹೊರಡಿಸಿದ ಸರ್ಕಾರ, ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿದ್ದ 52 ಗ್ರಾಮಗಳನ್ನು ಶಾಮನೂರು ಸಕ್ಕರೆ ಕಂಪೆನಿಗೆ, 29 ಗ್ರಾಮಗಳನ್ನು ದಾವಣಗೆರೆ ಸಕ್ಕರೆ ಕಂಪೆನಿಗೆ ಹಂಚಿಕೆ ಮಾಡಿದೆ ಎಂದು ರೈತರು ಹೈಕೋರ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

‘ಈ ಕಂಪೆನಿಗಳಿಗಿಂತ ಇತರೆ ಕಂಪೆನಿಗಳು ರೈತರಿಗೆ ಹೆಚ್ಚಿನ ಬೆಲೆ ನೀಡುತ್ತಿವೆ. ಸರ್ಕಾರದ ಆದೇಶದಿಂದ ರೈತರ ಹಕ್ಕುಗಳ ದಮನ ಆಗಿದೆ. ಸ್ಥಾಪಿತ ಹಿತಾಸಕ್ತಿಗಳಿಗೆ ಸಹಾಯ ಆಗುವಂತೆ ಇಂಥ ಆದೇಶವನ್ನು ಏಕಪಕ್ಷೀಯವಾಗಿ ಹೊರಡಿಸಲಾಗಿದೆ. ಈ ಆದೇಶ ರದ್ದು ಮಾಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ಕಡ್ಡಾಯವಲ್ಲ’: ರೈತರ ಅರ್ಜಿಗೆ ಪ್ರತಿಹೇಳಿಕೆ ಸಲ್ಲಿಸಿರುವ ಸರ್ಕಾರಿ ವಕೀಲರು, ರೈತರು ಬೆಳೆದ ಕಬ್ಬನ್ನು ಶಾಮನೂರು ಮತ್ತು ದಾವಣಗೆರೆ ಸಕ್ಕರೆ ಕಂಪೆನಿಗಳಿಗೆ ಪೂರೈಸುವುದು ಕಡ್ಡಾಯ ಎಂದು ಹೇಳಿಲ್ಲ ಎಂಬ ಸ್ಪಷ್ಟೀಕರಣ ನೀಡಿದ್ದಾರೆ. ನ್ಯಾ.ಬೋಪಣ್ಣ ಅವರು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದಾರೆ.

ಆದೇಶದಲ್ಲಿ ಇರುವುದೇನು?
* ಒಟ್ಟು 81 ಗ್ರಾಮಗಳ ರೈತರು ಶಾಮನೂರು ಮತ್ತು ದಾವಣಗೆರೆ ಸಕ್ಕರೆ ಕಂಪೆನಿಗಳಿಗೆ ಕಬ್ಬು ಮಾರಬೇಕು ಎಂದಿರುವುದು 2013–14ನೇ ಸಾಲಿಗೆ ಮಾತ್ರ ಸೀಮಿತ.

* ತಮಗೆ ಕಬ್ಬು ಸರಬರಾಜು ಮಾಡುವ ಭದ್ರಾ ಸಹಕಾರಿ ಕಾರ್ಖಾನೆ ವ್ಯಾಪ್ತಿಯ ರೈತರ ಹಿತಕ್ಕೆ ಧಕ್ಕೆಯಾಗದಂತೆ ಶಾಮನೂರು ಮತ್ತು ದಾವಣಗೆರೆ ಸಕ್ಕರೆ ಕಂಪೆನಿಗಳು ನಿಗಾವಹಿಸಬೇಕು.

* ಕೇಂದ್ರ ಸರ್ಕಾರವು 2013–14ನೇ ಸಾಲಿಗೆ ನಿಗದಿ ಮಾಡಿರುವ ಕನಿಷ್ಠ ದರ ಅಥವಾ ಕಾರ್ಖಾನೆಗಳು ರೈತರ ಜೊತೆ ಮಾಡಿಕೊಳ್ಳುವ ದರದಲ್ಲಿ ಹೆಚ್ಚಿನ ಮೊತ್ತ ಯಾವುದಿದೆಯೋ ಅದನ್ನೇ ರೈತರಿಗೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT