ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ವ್ಯವಸ್ಥೆ ದುರ್ಬಲಗೊಳಿಸುವ ಹುನ್ನಾರ’

ವ್ಯಾಪಕ ಮೌಲ್ಯಮಾಪನ, ನಲಿಕಲಿ ಅವೈಜ್ಞಾನಿಕ: ಗುರಿಕಾರ
Last Updated 11 ಜನವರಿ 2014, 7:07 IST
ಅಕ್ಷರ ಗಾತ್ರ

ಕೊಪ್ಪಳ: ನಿರಂತರ ವ್ಯಾಪಕ ಮೌಲ್ಯ­ಮಾಪನ, ನಲಿ ಕಲಿ ಮತ್ತಿತರ ಅವೈ­ಜ್ಞಾನಿಕ ಕಾರ್ಯಕ್ರಮಗಳಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಣ ವ್ಯವಸ್ಥೆ­ಯನ್ನು ವ್ಯವಸ್ಥಿತವಾಗಿ ದುರ್ಬಲ­ಗೊಳಿಸಲಾಗುತ್ತಿದೆ. ಆದ್ದರಿಂದ ಈ ಪದ್ಧತಿ­ ಬದಲಾಯಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಶುಕ್ರವಾರ ಮಾತನಾಡಿ, ನಿರಂತರ ವ್ಯಾಪಕ ಮೌಲ್ಯಮಾಪನ ಕಾರ್ಯಕ್ರಮದ ಅಡಿ ಶಿಕ್ಷಕರು 8 ಗಂಟೆ ಬೋಧಿಸಬೇಕು ಎಂಬ ನಿಯಮವಿದೆ. ಶಿಕ್ಷಕರು ಪ್ರತಿದಿನ ವಿಶ್ರಾಂತಿಯಿಲ್ಲದೇ ನಿರಂತರ 8 ಗಂಟೆ ಬೋಧಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಾಥಮಿಕ ಶಾಲೆಗಳಿಗೆ ಜವಾನ ಸಹಿತ ಗುಮಾಸ್ತರೊಬ್ಬರನ್ನು ನೇಮಿಸ­ಬೇಕು. ಹಾಲಿ ಪರಿಸ್ಥಿತಿಯಲ್ಲಿ ಮುಖ್ಯ ಶಿಕ್ಷಕರು 80 ದಾಖಲೆ ಪುಸ್ತಕಗಳನ್ನು ನಿರ್ವಹಿಸಬೇಕು. ಹೀಗಿರುವಾಗ ಶಾಲೆ, ಶಿಕ್ಷಣದ ಅಭಿವೃದ್ಧಿ ಕಡೆ ಗಮನಹರಿಸ­ಲಾಗದು. ವೇತನ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರಗಳಿಗೆ ಸಂಬಂಧಿ­ಸಿದಂತೆ ಅಧಿಕಾರಿಗಳು ಶಿಕ್ಷಕ­ರನ್ನು ಅಲೆದಾಡಿಸುವುದು ಸಲ್ಲದು. ಈ ಬಗ್ಗೆ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.

ವರ್ಗಾವಣೆ ಗೋಳು: ವರ್ಗಾವಣೆಗೆ ಸಂಬಂಧಿಸಿದಂತೆ ದಂಪತಿ ಪ್ರಕರಣದ ಪೈಕಿ 14 ಸಾವಿರ, ಕೋರಿಕೆ ವರ್ಗಾವಣೆ­ಯಲ್ಲಿ 40 ಸಾವಿರ ಅರ್ಜಿಗಳು ಬಾಕಿ ಇವೆ. ಈ ವರ್ಗಾವಣೆಗಳು ನಡೆದರೆ ರಾಜ್ಯದಲ್ಲಿ 3 ಸಾವಿರ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಆದ್ದರಿಂದ ದಂಪತಿ ಪ್ರಕರಣದಲ್ಲಿ ವರ್ಗಾವಣೆಗೆ ಅವಕಾಶ ನೀಡಬೇಕು. ಈ ಬಗ್ಗೆ ಸಚಿವರ ಜತೆ ಚರ್ಚಿಸಿರುವುದಾಗಿ ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಂಘದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಶಿಕ್ಷಕರ ಹಲವಾರು ಅಹವಾಲುಗಳ ಕುರಿತು ಚರ್ಚೆ ನಡೆಯಲಿದೆ. ಎಲ್ಲರೂ ಭಾಗವಹಿಸಬೇಕು ಎಂದು ಕೋರಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭು ಕಿಡದಾಳ್‌ ಮಾತನಾಡಿ, ಪದವೀಧರ ಶಿಕ್ಷಕರಿಗೆ ಜ.21ರ ಒಳಗೆ ಬಡ್ತಿ ಸಿಗಬೇಕು. ಇಲ್ಲವಾದರೆ ಜ. 22ರಿಂದ ಹೋರಾಟ ನಡೆಸಲಾಗು­ವುದು. ಅದಕ್ಕೆ ಎಲ್ಲ ಪದವೀಧರ ಶಿಕ್ಷಕರು ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಂಘದ ಖಜಾಂಚಿ ಖಾದರ್‌ ಸಾಬ್‌ ಹುಲ್ಲೂರು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಪ್ಪ ಜೋಗಿ, ಶಿಕ್ಷಕ–ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT