ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಸ್ತಿನಿಂದ ಚಿತ್ರರಂಗದ ಅಭಿವೃದ್ಧಿ ಸಾಧ್ಯ’

Last Updated 8 ಡಿಸೆಂಬರ್ 2013, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಚಲನಚಿತ್ರ ನಿರ್ಮಾಣ­ದಲ್ಲಿ ಶಿಸ್ತನ್ನು ರೂಢಿಸಿಕೊಂಡಾಗ ಚಿತ್ರ­ರಂಗದ ಅಭಿವೃದ್ಧಿ ಸಾಧ್ಯ’ ಎಂದು ಹಿರಿಯ ಛಾಯಾಗ್ರಾಹಕ ಎಚ್‌.ಎಂ.ಕೆ.­ಮೂರ್ತಿ ಅಭಿಪ್ರಾಯ­ಪಟ್ಟರು.

ಕರ್ನಾಟಕ ಚಲನಚಿತ್ರ  ಛಾಯಾ­ಗ್ರಾಹಕರ ಸಂಘದ  ವತಿಯಿಂದ ಭಾರ­ತೀಯ ಚಲನಚಿತ್ರರಂಗದ ಶತಮಾ­ನೋತ್ಸವ ಮತ್ತು ಕನ್ನಡ ಚಿತ್ರರಂಗದ 80ನೇ ವರ್ಷಾಚರಣೆಯ ಅಂಗವಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮನೆ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಲನಚಿತ್ರ ನಿರ್ಮಾಣದಲ್ಲಿ ನಿರ್ಮಾಪಕ­ನಷ್ಟೆ ಜವಾಬ್ದಾರಿ ಛಾಯಾ­ಗ್ರಾಹಕನ ಮೇಲಿರುತ್ತದೆ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು  ಸರಿಯಾದ ಸಮಯಕ್ಕೆ ಚಿತ್ರೀಕರಣದಲ್ಲಿ ಪಾಲ್ಗೊ­ಳ್ಳುವ ಮೂಲಕ ನಿರ್ಮಾಪಕನಿಗೆ ಸಹಕಾರ ನೀಡಬೇಕು.  ಅನಗತ್ಯ ವೆಚ್ಚ­ವನ್ನು ತಗ್ಗಿಸಬೇಕು ಎಂದರು.

ಅರವತ್ತರ ದಶಕದಲ್ಲಿ 30–40 ಚಿತ್ರಗಳು ತಯಾರಾಗುತ್ತಿದ್ದವು. ಆದರೆ, ಇಂದು 150ಕ್ಕೂ ಹೆಚ್ಚು ಚಿತ್ರಗಳು ತೆರೆ ಕಾಣುತ್ತಿವೆ. ‘ಡೆಬ್ರಿ ಕ್ಯಾಮೆರಾದಿಂದ ಡಿಜಿಟಲ್‌ ಕ್ಯಾಮೆರಾದ­ವರೆಗೆ ತಂತ್ರ­ಜ್ಞಾನ ಬೆಳವಣಿಗೆಯಾಗಿದೆ. ಚಿತ್ರರಂಗ ವಿಶಾಲವಾಗಿದೆ. ವಿಪುಲ ಅವಕಾಶ­ಗಳು ಸೃಷ್ಟಿಯಾಗು­ತ್ತಿವೆ. ಛಾಯಾಗ್ರಾಹಕರು ಇದನ್ನು ಬಳಸಿಕೊಂಡು ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಹಿರಿಯ ಛಾಯಾಗ್ರಾಹಕ ಕೆ.ಜಾನಕಿರಾಂ, ಛಾಯಾಗ್ರಹಣವನ್ನು  ಸಮರ್ಥ­ವಾಗಿ ನಿರ್ವಹಿಸಿದರೆ ಹಣ, ಕೀರ್ತಿ ತಾನಾ­ಗಿಯೆ ಬರುತ್ತದೆ ಎಂದರು.

ಉತ್ತಮ ತಂತ್ರಜ್ಞರನ್ನು ಚೆನ್ನೈ, ಮುಂಬೈಗಳಿಂದ ಕರೆಸಬೇಕಾಗಿತ್ತು. ಈಗ ನಗರದಲ್ಲಿಯೇ ಸಾಕಷ್ಟು ಪ್ರತಿಭಾವಂತ ತಂತ್ರಜ್ಞರಿದ್ದಾರೆ. ಅವರನ್ನು ಸಮರ್ಥ­ವಾಗಿ ಬಳಸಿಕೊಳ್ಳಬೇಕು ಎಂದರು.

ಹಿರಿಯ ಛಾಯಾಗ್ರಾಹಕ ವಿ.ಕೆ.­ಮೂರ್ತಿ, ಚಿತ್ರರಂಗದಲ್ಲಿ ಕಳೆದ ಪ್ರತಿ­ಕ್ಷಣ ಕೂಡ ಅಮೂಲ್ಯವಾ­ಗಿವೆ. ಆರಂಭದ ದಿನಗಳನ್ನು ನೆನಪಿಸಿ­ಕೊಂಡರೆ ಈಗಲೂ ಮೈ ಪುಳಕಗೊಳ್ಳು­ತ್ತದೆ. ಛಾಯಾಗ್ರಾಹಕರ ಸಂಘವು ಸನ್ಮಾನಿ­ಸುತ್ತಿರುವುದು ಖುಷಿ ತಂದಿದೆ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಚ್‌.ಡಿ.­ಗಂಗ­ರಾಜು, ಕರ್ನಾಟಕ ಚಲನಚಿತ್ರ ಛಾಯಾ­ಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ.ಕೃಷ್ಣ, ಉಪಾಧ್ಯಕ್ಷ ಬಿ.ಎಸ್‌.ಬಸವರಾಜು, ಪ್ರಧಾನ ಕಾರ್ಯದರ್ಶಿ ವಿ.ಚಂದ್ರ­ಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT