ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೈಕ್ಷಣಿಕ ಅಭಿವೃದ್ಧಿಗೆ ಮಠಗಳ ನೆರವು ಅಗತ್ಯ’

Last Updated 16 ಸೆಪ್ಟೆಂಬರ್ 2013, 8:35 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸರ್ಕಾರದ ಜತೆಗೆ ಮಠಗಳು ಕೈ ಜೋಡಿಸುತ್ತಿರುವುದರಿಂದ ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಈ ವಿಷಯದಲ್ಲಿ ದಿ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಸೇವೆಯನ್ನು ನಾವೆಂದೂ ಮರೆಯುವಂತಿಲ್ಲ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ನಗರದಲ್ಲಿ ಚಿತ್ರದುರ್ಗ ಜಿಲ್ಲಾ ನಾಗರಿಕ ಸಮಿತಿ, ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೋತ್ಸವ, ಆದಿಚುಂಚನಗಿರಿ ಸಂಸ್ಥಾನದ 72ನೇ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಪುರಪ್ರವೇಶ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲಗಂಗಾಧರನಾಥ ಸ್ವಾಮೀಜಿ ಅವರ ನಂತರ ಯಾರು ಪೀಠಾಧ್ಯಕ್ಷರಾಗಬಹುದು ಎಂಬ ಗೊಂದಲ ಭಕ್ತರನ್ನು ಕಾಡುತ್ತಿತ್ತು. ಅಂಥ ಗೊಂದಲಕ್ಕೆ ಆಸ್ಪದ ಕೊಡದೇ ತನ್ನಷ್ಟೇ ಜ್ಞಾನವಂತ, ದೂರದೃಷ್ಟಿಯುಳ್ಳ ನಿರ್ಮಲಾನಂದನಾಥ ಸ್ವಾಮೀಜಿ ಅವರ ಹೆಸರನ್ನು ಉಯಿಲಿನಲ್ಲಿ ಬರೆಯುವ ಮೂಲಕ, ಭಕ್ತರ ಆತಂಕವನ್ನು ಬಾಲಗಂಗಾಧರನಾಥ ಶ್ರೀಗಳು ನಿವಾರಿಸಿದ್ದರು’ ಎಂದು ಹೇಳಿದರು.

‘ಬಾಲಗಂಗಾಧರನಾಥ ಸ್ವಾಮೀಜಿ ಅವರು ಶಿಕ್ಷಣದ ಜತೆಗೆ ರೈತರ ನೋವಿಗೆ ಸ್ಪಂದಿಸುತ್ತಿದ್ದರು. ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಮಾರ್ಗದರ್ಶನದಲ್ಲಿ ಸರ್ಕಾರ ರಾಜ್ಯದಾದ್ಯಂತ 5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಆದರೆ ಸ್ವಾಮೀಜಿ ಅವರು ಪ್ರತಿ ಬಾರಿ 5 ಕೋಟಿ ಸಸಿಗಳನ್ನು ನೆಟ್ಟಿದ್ದಕ್ಕೆ ಲೆಕ್ಕ ಕೇಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ’ ಎಂದು ಸಚಿವರು ಸ್ಮರಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ನಾವು ಹಿಂದುಳಿದಿದ್ದೇವೆ. ಎಷ್ಟೇ ಕಾನೂನುಗಳನ್ನು ರೂಪಿಸಿದರೂ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವಲ್ಲಿ ಸರ್ಕಾರ ಯಶಸ್ವಿಯಾಗುತ್ತಿಲ್ಲ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲ್ಲೂ ಸಫಲರಾಗಿಲ್ಲ. ಈ ಕೊರತೆಗಳನ್ನು ನೀಗಿಸಲು ಮಠಗಳು ಮುಂದೆ ಬರಬೇಕು. ಸ್ವಾಮೀಜಿ ಅವರು ಇಂಥ ಜವಾಬ್ದಾರಿಯನ್ನು ತೆಗೆದುಕೊಂಡರೆ, ಅದಕ್ಕೆ ಸರ್ಕಾರವೂ ಕೈ ಜೋಡಿಸುತ್ತದೆ’ ಎಂದು ಹೇಳಿದರು.

‘ಮುಂದಿನ ಶತಮಾನ ಭಾರತೀಯರ ಶತಮಾನ. ಆ ಯುಗದಲ್ಲಿ ಶಿಕ್ಷಣದಲ್ಲಿ ಭಾರತ ಶೇ 100ರಷ್ಟು ಸಾಧನೆ ಮಾಡುವ ಗುರಿ ಹೊಂದಬೇಕು. ಹಾಗೆ ಆಗಬೇಕಾದರೆ ಮಠ ಮಾನ್ಯಗಳು ನೇತೃತ್ವವಹಿಸಿಕೊಳ್ಳಬೇಕು. ಇದು ನಿರ್ಮಲನಂದ ಸ್ವಾಮೀಜಿಯಂಥ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದವರಿಂದ ಮಾತ್ರ ಸಾಧ್ಯ. ಸರ್ಕಾರ ಕೂಡ ಅವರಿಂದ ಅಂಥಹ ಸೇವೆಯನ್ನು ನಿರೀಕ್ಷಿಸುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ  .ರೂ.ಚನ್ನಬಸಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ರಾಜ್ಯ ಸಾರಿಗೆ ಇಲಾಖೆ ಆಯುಕ್ತೆ ಕೆ.ಅಮರನಾರಾಯಣ, ನಗರಸಭೆ ಅಧ್ಯಕ್ಷ ಬಿ.ಕಾಂತರಾಜು, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿ.ಪಂ ಸಿಇಒ ನಾರಾಯಣ ಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವೈ.ಎಸ್‌.ರವಿಕುಮಾರ್, ಮಾಜಿ ಶಾಸಕರಾದ ಎಸ್‌.ಕೆ.ಬಸವರಾಜನ್, ಎನ್‌.ವೈ.ಗೋಪಾಲಕೃಷ್ಣ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT