ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೈಕ್ಷಣಿಕ ಸಮಸ್ಯೆ: ಸರ್ಕಾರ ಚಿಂತನೆ ನಡೆಸಲಿ’

Last Updated 18 ಡಿಸೆಂಬರ್ 2013, 6:02 IST
ಅಕ್ಷರ ಗಾತ್ರ

ಯಾದಗಿರಿ:  ಹೈದರಾಬಾದ್‌ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಹಲವಾರು ಸಮಸ್ಯೆಗಳಿದ್ದು, ಅವುಗಳಲ್ಲಿ ಶೈಕ್ಷಣಿಕ ಸಮಸ್ಯೆಯು ಒಂದು. ಸರ್ಕಾರ ಈ ಪ್ರದೇಶದ ಶೈಕ್ಷಣಿಕ ಸಮಸ್ಯೆಗಳತ್ತ ಚಿಂತನೆ ನಡೆಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಸೂಗಯ್ಯ ಹಿರೇಮಠ ಹೇಳಿದರು.

ತಾಲ್ಲೂಕಿನ ಮೋಟ್ನಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪಾಲಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಪ್ರದೇಶಗಳ ಹಲವಾರು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದರಿಂದ ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದ ಅವರು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದರೂ, ಮೂಲ ಸೌಕರ್ಯ ಕಲ್ಪಿಸದಿದ್ದರೆ ಅವುಗಳು ನಿರರ್ಥಕ­ವಾಗುತ್ತವೆ ಎಂದರು.

ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು, ಗ್ರಾಮೀಣ ಪ್ರದೇಶದಲ್ಲಿನ ಶಾಲೆಗಳ ಬಗ್ಗೆ ಪಾಲಕರು ಮುತುವರ್ಜಿ ವಹಿಸಿ ಶಾಲೆಯ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕ ಕಲ್ಯಾಣಾ­ಧಿಕಾರಿ ಮಹಿಪಾಲರಡ್ಡಿ ಬೆಗಾರ ಮಾತನಾಡಿ, ಸರ್ಕಾರ ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪಾಲಕರೂ ಶಾಲೆಯ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದರು.

ನಮ್ಮ ಮಕ್ಕಳು ಜ್ಞಾನದಿಂದ ದೊಡ್ಡವರಾಗಬೇಕೆ ವಿನಾ, ಹಣ ಗಳಿಸುವುದರಿಂದ ದೊಡ್ಡವರಾಗ­ಬಾರದು, ಶಿಕ್ಷಣ ಕಲಿಯುವ ಹಂತದಲ್ಲಿ ಮಕ್ಕಳನ್ನು ಹಣದ ವ್ಯಾಮೋಹದಿಂದ ದೂರವಿಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ಡಾ.ಗಾಳೆಪ್ಪ ಪೂಜಾರಿ, ಶಾಲೆಯೂ ಒಂದು ವನವಿದ್ದಂತೆ. ಮಕ್ಕಳು ಅಲ್ಲಿನ ಹೂಗಳು. ಶಿಕ್ಷಕರು ಪಾಲಕರಿದ್ದಂತೆ, ಅವರಿಗೆ ಉನ್ನತ ಮಟ್ಟದ ಶಿಕ್ಷಣ ನೀಡಿ, ಅವರನ್ನು ಹೊರ ಜಗತ್ತಿಗೆ ಕಳುಹಿಸಬೇಕಾದದ್ದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಹೇಳಿದರು.

ವಡಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ ತಡಿಬಿಡಿ, ಕೋಡ್ಲಾ ಶಾಲೆಯ ಮುಖ್ಯಶಿಕ್ಷಕಿ ಅರ್ಪಣಾ, ಸಾಹೇಬ­ಗೌಡ ಬಿರಾದಾರ, ಮಲ್ಲೇಶಿ ಕುರಕುಂದಿ, ಶರಣಯ್ಯ ಸ್ವಾಮಿ, ವೆಂಕಟೇಶ ಕಾವಲಿ, ಮೊನ್ನಪ್ಪ ಪಾಂಚಾಳ, ಸುನೀಲ­ಕುಮಾರ, ಮಲ್ಲಪ್ಪ ಬಡಿಗೇರ, ಬಸವರಾಜೇಶ್ವರಿ, ಸಂಗೀತಾ, ಮಂಜುಳಾ, ನಾಗರಾಜ, ವಯಸ್ಕರ ಕಾರ್ಯಕ್ರಮ ಸಹಾಯಕ ಶ್ರೀಶೈಲ್ ಹೊಸಮನಿ, ಹಣಮರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT