ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕೃತಿ ಗ್ರಹಿಕೆಗೆ ಪ್ರಾದೇಶಿಕ ಭಾಷೆಯೇ ಅಗತ್ಯ’

ಡಾ. ಭೈರಪ್ಪ, ಕಂಬಾರರಿಗೆ ಸನ್ಮಾನ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೂಡುಬಿದರೆ: ‘ನಾನು ಸಾಹಿತ್ಯದ ಮೂಲಕ ಸಮಾಜ ಸುಧಾರಣೆ ಮಾಡುತ್ತೇನೆ ಎಂಬ ನಂಬಿಕೆಯನ್ನು ಇರಿಸಿ ಕೊಂಡಿಲ್ಲ. ಸಾಹಿತ್ಯದ ಮೂಲಕ ನಿರಂತರವಾಗಿ ಸತ್ಯದ ಹುಡು ಕಾಟ ನಡೆಸುತ್ತಿದ್ದೇನೆ. ಸಮಾಜ ಸೇವೆಯ ಅಂಶಗಳೇನಿದ್ದರೂ ವೈಯಕ್ತಿಕ ಬದುಕಿನಲ್ಲಿ ಕಂಡುಕೊಳ್ಳ­ಬಹುದೇ ಹೊರತು ಸಾಹಿತ್ಯದಲ್ಲಿ ಅಲ್ಲ’ ಎಂದು ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಹೇಳಿದರು.

ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್‌ನ ರತ್ನಾಕರವರ್ಣಿ ವೇದಿಕೆಯಲ್ಲಿ ಶುಕ್ರ­ವಾರ ನಡೆದ ಸಮಾವೇಶ ಗೋಷ್ಠಿಯಲ್ಲಿ ಅವರು ‘ಸಾಹಿತ್ಯ ಅಂದು ಇಂದು ಮುಂದು’ ವಿಷಯದ ಬಗ್ಗೆ ಮಾತ­ನಾಡುತ್ತ ಈ ವಿಷಯ ತಿಳಿಸಿದರು.

‘ನನಗೆ ಜೀವನ ಮೌಲ್ಯಗಳ ಸಂಘರ್ಷ­ದಲ್ಲಿ ನಂಬಿಕೆ ಇದೆ, ಸಾಮಾಜಿಕ ಸಂಘರ್ಷಗಳಲ್ಲಿ ನಂಬಿಕೆ ಇದೆ. ಆದರೆ ಇಂದು ಉದಾರೀಕರಣ ನೀತಿ ಫಲವಾಗಿ ಆರ್ಥಿಕ ಕ್ಷೇತ್ರದಲ್ಲಷ್ಟೇ ಬದಲಾವಣೆ ಆಗಿಲ್ಲ. ಅದು ಭಾಷೆ ಮತ್ತು ಸಂಸ್ಕೃತಿಯ ಮೇಲೆಯೂ ಗಾಢ ಪರಿಣಾಮ ಬೀರಿದೆ. ಇಂದಿನ ಮಕ್ಕಳು ಆಂಗ್ಲ ಮಾಧ್ಯಮ­ದಲ್ಲಿಯೇ ಓದಬೇಕು ಎಂದು ರಾಜ­ಕಾರಣಿ­ಗಳೂ ಬಯಸುತ್ತಾರೆ. ಹಾಗಾಗಿ ಮಕ್ಕಳಿಗೆ ಕನ್ನಡದ ಪದಗಳಾಗಲೀ, ಒಂದಿಷ್ಟು ಹಾಡುಗಳಾಗಲೀ ಗೊತ್ತಿಲ್ಲ.

ಕನ್ನಡ ಅಥವಾ ಯಾವುದೇ ಪ್ರಾದೇಶಿಕ ಭಾಷೆಗಳ ಮೂಲಕ ಮಾತ್ರ ಭಾರತೀಯ ಸಂಸ್ಕೃತಿಯನ್ನು, ಭಾರತೀಯ ತತ್ವ ಶಾಸ್ತ್ರ­ವನ್ನು ಅರ್ಥ ಮಾಡಿಕೊಳ್ಳಬಹುದು. ಇಂಗ್ಲಿಷ್ ಮೂಲಕ ಇಲ್ಲಿನ ನೆಲದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಅಂದಮೇಲೆ ಸಂಸ್ಕೃತಿ ಮತ್ತು ಜನಜೀವನದ ಪ್ರತಿಬಿಂಬವೇ ಆಗಿರುವ ಸಾಹಿತ್ಯವನ್ನು ಮಕ್ಕಳು ಇಂಗ್ಲಿಷ್ ನಲ್ಲಿ ಸೃಷ್ಟಿ ಮಾಡುವುದು ಸಾಧ್ಯವೇ ಎಂದು ಪ ಅವರು ಪ್ರಶ್ನಿಸಿದರು.

ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ‘ಇತಿಹಾಸವನ್ನು ಎದುರಿಸಿಯೂ ಕನ್ನಡವಾಗಿ ಉಳಿಯಬಲ್ಲ ನಮ್ಮ ಸಾಹಿತ್ಯ ಪರಂಪರೆಯನ್ನು ಮುಂದುವರೆಸುವ ಪ್ರಯತ್ನ ನನ್ನದು. ಈ ಕಾಲದ ಎಲ್ಲ  ಲೇಖಕರೂ ಅಕ್ಷರಸ್ಥರೂ ವಿದ್ಯಾವಂತರೂ ಹೌದು. ಆದರೆ ಕಾವ್ಯವನ್ನು ಕೇಳುವವರು ಕಡಿಮೆ. ಹಿಂದಿನ ತಲೆಮಾರಿನ ಸಾಹಿತ್ಯವನ್ನು ಗಮನಿಸದೇ ಇರುವ ಇಂದಿನ ತಲೆಮಾರಿಗೆ ವಸ್ತುವಿನ ಆಯ್ಕೆಯೂ ಒಂದು ನೈತಿಕ ಸಮಸ್ಯೆಯಾಗಿದೆ. ಅದರಿಂದ ಜವಾಬ್ದಾರಿಯೂ ಹೆಚ್ಚಾಗಿದೆ. ಕೇವಲ ಭಾಷೆಯ ಮೂಲಕವೇ ಜಗತ್ತಿನೊಂದಿಗೆ ಸಂಬಂಧವನ್ನು ಸ್ಥಾಪಿಸಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ಕಾವ್ಯದ ಸಂವಹನ ಕ್ರಿಯೆಯೂ ಒಂದು ಸಮಸ್ಯೆಯಾಗಿದೆ ಎಂದು ಹೇಳಿದರು.

ವಸಾಹತು ಯುಗಕ್ಕೆ ಮುನ್ನ ಬರೆದವರ ಬರವಣಿಗೆಯ ಲೋಕ ಅತ್ಯಂತ ವಿಸ್ತಾರವಾಗಿತ್ತು. ಆದರೆ ವಸಾಹತು ಶಾಹಿಯ ಬಳಿಕ ಜಗತ್ತಿಗೆ ಪ್ರಗತಿಯೆಂಬ ದೆವ್ವ ಬಡಿದು ಕೊಂಡಿತು. ಎಲ್ಲದಕ್ಕೂ ಬೆಲೆ ಕಟ್ಟುವ ಅಳತೆಗೋಲು, ತೂಕಗಳು ಬಂದವು. ಬದಲಾದ ಪರಿಸ್ಥಿತಿಯಲ್ಲಿ ಸಾಹಿತ್ಯದ ಸ್ವರೂಪವೂ ಮಾರ್ಪಾಡಾಯಿತು ಎಂದು ಹೇಳಿದ ಅವರು ಗತದ ನೆನಪುಗಳಿಂದ ಬಿಡಿಸಿಕೊಂಡು ಪ್ರಗತಿಮುಖಿ ಚರಿತ್ರೆಯ ಯಂತ್ರವಾಗತೊಡಗಿತು ಎಂದು ಹೇಳಿದರು.

ಬರವಣಿಗೆ ಏನೇ ಇರಲಿ, ಅದರಲ್ಲಿ ಜನರಿಗೆ ಆಸಕ್ತಿ ಮೂಡಬೇಕು. ಅದು ಪ್ರಯೋಜನವಾಗಬೇಕಾದ್ದು ಜನರಿಗೆ ಎನ್ನುವುದನ್ನು ಬರೆಯುವಾತ ನೆನಪಿನಲ್ಲಿಡಬೇಕು. ಆದರೆ ಇಂದು ಬರೆಯವವರಿಗೆ ಇದೊಂದು ಸವಾಲಾಗಿದೆ ಎಂದು ಕಂಬಾರರು ಹೇಳಿದರು.

ಕಾರ್ಯಕ್ರಮದಲ್ಲಿ ಇಬ್ಬರೂ ಸಾಹಿತಿ ದಿಗ್ಗಜರನ್ನು ಶಾಲು ಹೊದಿಸಿ, ಪ್ರಶಸ್ತಿ ಫಲಕ ಮತ್ತು ರೂ50 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಸರ್ವಾಧ್ಯಕ್ಷರಾದ ಡಾ. ಬಿ.ಎ.ವಿವೇಕ ರೈ, ಡಾ.ನಾ.ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT