ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಚಿವರ ಸಿಗರೆಟ್‌ ವೆಚ್ಚದಷ್ಟು ಗೌರವಧನವೂ ಇಲ್ಲ!’

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ಕಾರ್ಮಿಕರ ಪ್ರತಿಭಟನೆ
Last Updated 6 ಡಿಸೆಂಬರ್ 2013, 11:16 IST
ಅಕ್ಷರ ಗಾತ್ರ

ಮಂಗಳೂರು: ‘ಸಚಿವರು ಸಿಗರೆಟ್‌ ಸೇವನೆಗೆ ವೆಚ್ಚ ಮಾಡುವಷ್ಟು ಮೊತ್ತವನ್ನೂ ಅಕ್ಷರ ದಾಸೋಹ ಕಾರ್ಮಿಕರಿಗೆ ಸರ್ಕಾರ ನಿಡುತ್ತಿಲ್ಲ. ಇಂದಿನ ದಿನದಲ್ಲಿ ತಿಂಗಳಿಗೆ ಕೇವಲ ರೂ1200 ಮೊತ್ತದಲ್ಲಿ ಜೀವನ ನಡೆಸಲು ಸಾಧ್ಯವೇ?’ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಪ್ರಶ್ನಿಸಿದರು.

ಬಿಸಿಯೂಟ ನೌಕರರ ಗೌರವ ಧನ ಹೆಚ್ಚಳಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಬೆಂಬಲಿಸಿ ಕರ್ನಾಟಕ ರಾಜ್ಯ ಬಿಸಿಯೂಟ ನೌಕರರ ಸಂಘದ (ಸಿಐಟಿಯು) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಗುರುವಾರ ನಡೆದ ಧರಣಿಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳಿಗೆ ಹಾಲು, ಪೂರಿ, ಚಪಾತಿ, ಬಾಳೆಹಣ್ಣುಗಳನ್ನು ವಿತರಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸಬೇಕಾದ ಕಾರ್ಮಿಕರನ್ನು ತಾತ್ಸಾರದಿಂದ ನೋಡುತ್ತಿದೆ. ಹೀಗಾದರೆ ಯೋಜನೆ ಯಶಸ್ವಿಯಾಗಲು ಹೇಗೆ ಸಾಧ್ಯ? ಬಿಸಿಯೂಟ ನೌಕರರು ನಿತ್ಯ ಆರು ಗಂಟೆ ಕೆಲಸ ಮಾಡುತ್ತಾರೆ. ಅವರಿಗೆ ತಮಿಳುನಾಡಿನಲ್ಲಿ ರೂ 4500 ಗೌರವಧನ ನೀಡಲಾಗುತ್ತಿದೆ. ನಮ್ಮ ಸರ್ಕಾರ ಈಗಿರುವ ರೂ 1,200 ಗೌರವಧನವನ್ನು 3 ಸಾವಿರಕ್ಕಾದರೂ ಏರಿಸಬೇಕು’ ಎಂದು ಒತ್ತಾಯಿಸಿದರು. 

ಧರಣಿಯನ್ನು ಉದ್ಘಾಟಿಸಿದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಾಲಕೃಷ್ಣ ಬಿ ಶೆಟ್ಟಿ ಮಾತನಾಡಿ, ‘ಖಾಸಗಿ ಸಂಸ್ಥೆಗಳು ಪೂರೈಸುವ ಆಹಾರದ ಗುಣಮಟ್ಟದ ಬಗ್ಗೆ ಬಹಳಷ್ಟು ದೂರುಗಳಿದ್ದರೂ ರಾಜ್ಯ ಸರ್ಕಾರ ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

‘ಬಿಸಿಯೂಟ ತಯಾರಿಸುವಾಗ ಬೆಂಕಿ ತಗುಲಿ, ಸ್ಟೌ ಸಿಡಿದು ಅನೇಕ ಕಾರ್ಮಿಕರು ಗಾಯಗೊಂಡಿದ್ದಾರೆ. ಬಿಸಿಯೂಟ ನೌಕರರಿಗೆ ಯಾವ ಆರ್ಥಿಕ ಭದ್ರತೆಯೂ ಇಲ್ಲ.  ಒಂದೆಡೆ ದೇಶದಲ್ಲಿ ಶೇ 42 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ  ಎಂದು ವರದಿಗಳು ಹೇಳುತ್ತಿವೆ. ಅಪೌಷ್ಟಿಕತೆ ನಿವಾರಣೆಗಾಗಿ ಪ್ರಧಾನಿ ಮನಮೋಹನ ಸಿಂಗ್‌ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿಲ್ಲ’ ಎಂದರು.

ಸಿಐಟಿಯು ಮುಖಂಡರಾದ ಜಯಂತಿ ಬಿ.ಶೆಟ್ಟಿ, ಸುನಿಲ್‌ ಕುಮಾರ್‌ ಬಜಾಲ್‌, ವಿದ್ಯಾರ್ಥಿ ನಾಯಕ ಪ್ರಶಾಂತ ಆಚಾರ್ ಮಾತನಾಡಿದರು. ಬಿಸಿಯೂಟ ನೌಕರರ ಸಂಘದ (ಸಿಐಟಿಯು) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯರ್ದರ್ಶಿ ಗಿರಿಜಾ ಮೂಡುಬಿದ್ರಿ ಸ್ವಾಗತಿಸಿದರು. ಭವ್ಯಾ ಮುಚ್ಚೂರು ವಂದಿಸಿದರು. ಸಮಿತಿಯ ಪ್ರಮುಖರಾದ ರಾಧಾ ಮೂಡುಬಿದ್ರಿ, ಸೇವಂತಿ, ಮೂಡುಬಿದ್ರಿ, ಸರಸ್ವತಿ ತೊಕ್ಕೊಟ್ಟು,  ಬಬಿತಾ ಮಂಜನಾಡಿ, ಮೋನಮ್ಮ ಕಲ್ಲಾಡಿ, ಶೋಭಾ ಹೊನ್ನಮ್ಮ ಮೊದಲಾದವರು ಧರಣಿಯ ನೇತೃತ್ವ ವಹಿಸಿದರು.

ಬೆಳ್ತಂಗಡಿ, ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ತಾಲ್ಲೂಕು ಕಚೇರಿ ಎದುರೂ ಗುರುವಾರ ಧರಣಿ ನಡೆದಿದೆ ಎಂದು ಸಿಐಟಿಯು ಮುಖಂಡರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT