ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮನ್ವಯ ಕೃಷಿ ಲಾಭದಾಯಕ’

Last Updated 23 ಸೆಪ್ಟೆಂಬರ್ 2013, 9:37 IST
ಅಕ್ಷರ ಗಾತ್ರ

ಶಿರಸಿ: ‘ಕೃಷಿ ಮತ್ತು ಉದ್ಯಮದ ಸಮನ್ವಯತೆಯಿಂದ ಲಾಭದಾಯಕ ಕೃಷಿ ನಡೆಸಬಹುದಾಗಿದ್ದು, ಯುವ ಜನತೆಯನ್ನು ಕೃಷಿಯತ್ತ ಸೆಳೆಯಲು ‘ಆರ್ಯ’ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ಮಹಾನಿರ್ದೇಶಕ ಡಾ.ಎಸ್‌. ಅಯ್ಯಪ್ಪನ್ ಹೇಳಿದರು.

ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌, ತೋಟಗಾರ್ಸ್‌ ಕೋ–ಆಪರೇಟಿವ್‌ ಸೇಲ್ಸ್‌ ಸೊಸೈಟಿ ಜಂಟಿಯಾಗಿ ಇಲ್ಲಿನ ಟಿಎಸ್‌ಎಸ್‌ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಪಶು ಆಹಾರವಾಗಿ ಪೈನಾಪಲ್‌ ಶೇಷದ ರಸಮೇವಿನ ಸದ್ಬಳಕೆ ಹಾಗೂ ಸಮತೋಲನ ಆಹಾರ ತಯಾರಿಕೆ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಆರ್ಯ (ಆಟ್ರಾಕ್ಟಿಂಗ್‌ ಆಂಡ್‌ ರಿಟೇನಿಂಗ್‌ ಯುತ್ಸ್‌ ಇನ್‌ ಅಗ್ರಿಕಲ್ಚರ್‌) ಕಾರ್ಯಕ್ರಮದ ಮೂಲಕ ಮುಂದಿನ ಒಂದು ದಶಕದಲ್ಲಿ ಕೃಷಿ ಕ್ಷೇತ್ರದ ಸಾಧ್ಯತೆ ಮತ್ತು ಅವಕಾಶಗಳು, ಕೃಷಿ ಸಾಧಕರ ಪರಿಚಯವನ್ನು ಕೃಷಿ ಪದವೀಧರರು, ಯುವಕರಿಗೆ ಮಾಡಿಕೊಡಲಾಗುತ್ತಿದೆ’ ಎಂದರು. 

‘ಪೈಸಾ, ಪ್ರೆಸ್ಟೀಜ್‌, ಪಾರ್ಟನರ್‌ಶಿಪ್‌ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸುವ ಜೊತೆಗೆ ಲಾಭ ಗಳಿಸಬಹುದು. ಕೃಷಿಕರು ಪ್ರಾಥಮಿಕ ಕೃಷಿಯಿಂದ ಎರಡನೇ ಹಂತದ ಕೃಷಿಗೆ ಹೆಜ್ಜೆ ಇಡಬೇಕಾಗಿದೆ. ಹವಾಮಾನ ವೈಪರೀತ್ಯದಲ್ಲಿ ವಿವಿಧೀಕೃತ ಕೃಷಿ ರೈತನಿಗೆ ಹೆಚ್ಚು ನಷ್ಟ ಉಂಟುಮಾಡಲಾರದು’ ಎಂದರು.

‘ಅನಾನಸ್‌ ಎಲೆ ಮತ್ತು ಸಿಪ್ಪೆಯನ್ನು ತುಂಡರಿಸಿ ಪಶುಆಹಾರ ಅಥವಾ ಒಣಮೇವಿನ ಜೊತೆ ಮಿಶ್ರಣ ಮಾಡಿಕೊಟ್ಟರೆ ಪಶುಗಳಿಗೆ ಉತ್ತಮ ರಸಮೇವು ದೊರೆಯುತ್ತದೆ. ಶಿರಸಿ ತಾಲ್ಲೂಕಿನ ಬನವಾಸಿ ತಿಗಣಿಯಲ್ಲಿ ಅನಾನಸ್‌ ತಾ್ಯಜ್ಯವನ್ನು ಪಶುಆಹಾರ ವಾಗಿ ಬಳಸುವ ಪ್ರಥಮ ಪ್ರಯೋಗ ಕೈಕೊಂಡ ಸಂಸ್ಥೆ ಯಶಸ್ಸು ಕಂಡಿದೆ. ಅನಾನಸ್‌ ಹಂಗಾಮಿನಲ್ಲಿ ಶಿರಸಿ ಭಾಗದಲ್ಲಿ 15–17 ಟನ್‌ನಷ್ಟು ಶೇಷ ಪ್ರತಿದಿನ ಉತ್ಪಾದನೆಯಾಗುತ್ತದೆ. ಇದನ್ನು 1ಸಾವಿರ ಹಸುಗಳಿಗೆ ಆಹಾರವಾಗಿ ಒದಗಿಸಬಹುದಾಗಿದ್ದು, ಪ್ರತಿ ಹಸುವಿನಿಂದ ಒಂದು ಲೀಟರ್‌ ಹಾಲು ಹೆಚ್ಚಳವಾದರೆ ದಿನಕ್ಕೆ ₨20ಸಾವಿರ ಹೆಚ್ಚುವರಿ ಆದಾಯ ಗಳಿಸಬಹುದು’ ಎಂದು ಪ್ರಧಾನ ವಿಜ್ಞಾನಿ ಎನ್‌.ಕೆ.ಎಸ್‌.ಗೌಡ ವಿವರಿಸಿದರು.

‘ಅನಾನಸ್‌ನ ಶೇಷವನ್ನು ತುಂಡರಿಸಿ ಹೊರಗಿನ ಗಾಳಿ, ತೇವಾಂಶರಹಿತ ಡ್ರಮ್‌ನಲ್ಲಿ ಅಥವಾ ಚೀಲದಲ್ಲಿ ಮಿಶ್ರಣ ಮಾಡಿಟ್ಟರೆ 15–20 ದಿನಗಳಲ್ಲಿ ಬಳಕೆಗೆ ಯೋಗ್ಯವಾಗುತ್ತದೆ. ಅನಾನಸ್‌ ಶೇಷ ಒಂದನ್ನು ಮಾತ್ರ ಪಶುಆಹಾರವಾಗಿ ಬಳಸಿದರೆ ಪಶುಗಳ ಹೊಟ್ಟೆಯಲ್ಲಿ ದುಷ್ಪರಿಣಾಮ ಉಂಟಾಗಬಹುದು. ಹೀಗಾಗಿ ಪಶುಆಹಾರ, ಇತರ ಆಹಾರಗಳ ಜೊತೆ ಮಿಶ್ರಣ ಮಾಡಿ ಕೊಡಬೇಕು’ ಎಂದರು.

ಸಂಸ್ಥೆಯ ಮಾಜಿ ನಿರ್ದೇಶಕ ಕೆ.ಟಿ.ಸಂಪತ್‌, ಕೆ.ಎಂ.ಎಫ್‌. ಮಾಜಿ ನಿರ್ವಾಹಕ ನಿರ್ದೇಶಕ ಎಂ.ಎನ್‌.ವೆಂಕಟರಾಮ್‌, ನಬಾರ್ಡ್‌ ಅಧಿಕಾರಿ ಯೋಗೇಶ, ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಟಿಎಂಎಸ್‌ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಉಪಸ್ಥಿತರಿದ್ದರು.

ಸ್ಥಳೀಯ ಹೈನುಗಾರರಾದ ಸೀತಾರಾಮ ಹೆಗಡೆ ನೀರ್ನಳ್ಳಿ, ರವೀಂದ್ರ ಹೆಗಡೆ, ಅಬ್ದುಲ್‌ ಕರೀಮ್‌ ಅನುಭವ ಹಂಚಿಕೊಂಡರು.
ಸಂಸ್ಥೆಯ ನಿರ್ದೇಶಕ ಸಿ.ಎಸ್‌.ಪ್ರಸಾದ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT