ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮನ್ವಯದಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ’

Last Updated 20 ಸೆಪ್ಟೆಂಬರ್ 2013, 9:35 IST
ಅಕ್ಷರ ಗಾತ್ರ

ಹಾಸನ: ‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾಂಘಿಕ ಪ್ರಯತ್ನ ಅಗತ್ಯವಿದ್ದು, ವಿವಿಧ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ತಂಡದ ರೂಪದಲ್ಲಿ ಕಲಸ ಮಾಡಬೇಕು‘ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬಾಲಕಾರ್ಮಿಕ ಯೋಜನಾ ಸೊಸೈಟಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘14 ವರ್ಷದೊಳಗಿನ ಎಲ್ಲ ಮಕ್ಕಳು ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ ಶಾಲೆಯಲ್ಲಿರಬೇಕು. ಯಾರೂ ಶಿಕ್ಷಣದ ಹಕ್ಕಿನಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದರು.

‘ಕಾರ್ಮಿಕ ಇಲಾಖೆ, ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಂದಾಯ, ಪೊಲೀಸ್, ಆರೋಗ್ಯ ಇಲಾಖೆಗಳು, ಮಕ್ಕಳ ರಕ್ಷಣಾ ಘಟಕ ಸ್ವಯಂ ಸೇವಾ ಸಂಘಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದರಿಂದ ನಿರ್ದಿಷ್ಟ ಗುರಿ ಸಾಧಿಸಲು ಆಗಲಾರದು. ಪರಸ್ಪರ ಸಮನ್ವಯತೆ ಸಾಧಿಸಿ, ಪ್ರತಿ ತಿಂಗಳೂ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ ಬೇರೆ ಬೇರೆ ಮೂಲಗಳಿಂದ ಮಾಹಿತಿ ಪಡೆದು ಅರಿವು ಮೂಡಿಸಲು ಪ್ರಯತ್ನಿಸುವುದರಿಂದ ಪರಿಣಾಮಕಾರಿಯಾಗಿ ಕ್ರಮ ವಹಿಸಬಹುದು ಎಂದರು.

ಅರಕಲಗೂಡು ತಾಲ್ಲೂಕಿನ ರಾಗಿಮರೂರು ಗ್ರಾಮ ಒಂದರಲ್ಲೇ 16 ಮಕ್ಕಳು ಶಾಲೆ ಬಿಟ್ಟು ದುಡಿಮೆಯಲ್ಲಿ ತೊಡಗಿದ್ದು ಗಮನಕ್ಕೆ ಬಂದಿದೆ. ಅವರನ್ನು ಈಗ ಮರಳಿ ಶಾಲಾ ಕಾಲೇಜುಗಳಿಗೆ ಸೇರಿಸಲಾಗಿದೆ. ಇತರೆಡೆಯಲ್ಲೂ ಇಂಥ ಮಕ್ಕಳು ಇರಬಹುದು. ಈ ತಿಂಗಳ ಅಂತ್ಯದೊಳಗೆ ಪ್ರತಿ ಶಾಲೆ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟ ಮಕ್ಕಳು ಎಷ್ಟಿದ್ದಾರೆ ಎಂಬ ವಿವರ ಸಿದ್ಧವಾಗಬೇಕು. ಶಿಕ್ಷಣ ಇಲಾಖೆ ಈ ಬಗ್ಗೆ ವಿಶೇಷ  ಕಾಳಜಿವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಮಕ್ಕಳು ತಮ್ಮ ಪಾಲಕರ ಜೊತೆಯಲ್ಲಿಯೂ ಬೇರೆಯವರ ಜಮೀನಿನಲ್ಲಿ ದುಡಿಯುವಂತಿಲ್ಲ. ಹೆಚ್ಚು ಮಕ್ಕಳ ದುಡಿಮೆ ಬಯಸುವ ಕೃಷಿ ಪದ್ಧತಿಯನ್ನು ಅಪಾಯಕಾರಿ ವೃತ್ತಿ ಎಂದು ಘೋಷಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದೇ ವೇಳೆ ಬಾಲಕಾರ್ಮಿಕ ಯೋಜನೆ ಸೊಸೈಟಿ ನವೀಕರಣಕ್ಕೆ ಅನುಮತಿ ನೀಡಲಾಯಿತು. ಕಾರ್ಮಿಕ ಅಧಿಕಾರಿ ಪ್ರಹ್ಲಾದ್‌ ಈ ವರೆಗೆ ಸಂಸ್ಥೆವತಿಯಿಂದ ನಡೆಸಲಾಗಿರುವ ಚಟುವಟಿಕೆಗಳು, ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT