ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಸ್ಯೆಗಳ ತವರು’ ಹೆಸರೂರು

ಗ್ರಾಮಾಯಣ: ಗ್ರಾಮ– ಹೆಸರೂರು
Last Updated 3 ಡಿಸೆಂಬರ್ 2013, 11:20 IST
ಅಕ್ಷರ ಗಾತ್ರ

ಕುಷ್ಟಗಿ: ಆ ಊರ ಹೆಸರೇ ಹೆಸರೂರು, ಮುಖ್ಯರಸ್ತೆಯಲ್ಲಿ ಹೋದರೆ ತಾಲ್ಲೂಕು ಕೇಂದ್ರದಿಂದ 10 ಕಿಮೀ ದೂರ. ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವುದು ಮಡುಗಟ್ಟಿದ ಕೊಳಚೆ. ಕೊಳಚೆಯಲ್ಲೇ ನಿಂತು ಬಟ್ಟೆ ತೊಳೆಯುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಪತ್ನಿಯನ್ನು ಮಾತನಾಡಿಸಿದರೆ ‘ಹಿರೇರು ಜವಾಬ್ದಾರಿ ತೊಗೋಬೇಕ್ರಿ ನಾವು ಹೆಣ್ಮಕ್ಳು ಏನ ಮಾಡಬೇಕ್ರಿ’ ಎಂದರು.

ಪಕ್ಕದಲ್ಲೇ ಸರ್ಕಾರಿ ಪ್ರಾಥಮಿಕ ಶಾಲೆ. ಸಮಸ್ಯೆಗಳ ತವರೂರು ಎಂದೆ ಜನ ಹೇಳುತ್ತಿದ್ದರೂ ಸಮಾಧಾನದ ಸಂಗತಿಯಂದರೆ ಶಾಲೆಯದು. ಶಿಕ್ಷಕರು ಸರಿಯಾಗಿ ಬಂದು ಮಕ್ಕಳಿಗೆ ಪಾಠ ಮಾಡುತ್ತಾರೆ, ಸ್ವಚ್ಛವಾಗಿಟ್ಟಿದ್ದಾರೆ ಎಂಬುದು. ದಾರಿಯಲ್ಲಿ ಮಾತಿಗೆ ಸಿಕ್ಕ ಯುವ ಮುಖಂಡ ಶರಣಯ್ಯ ಹಿರೇಮಠ, ‘ಸಾಲೀದು ಏನೂ ಕಂಪ್ಲೇಂಟು ಇಲ್ಲ ಬಿಡ್ರಿ’ ಎನ್ನುತ್ತಲೇ ಊರೊಳಗಿನ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ.

ಗ್ರಾಮದ ಮೂಲ ಸಮಸ್ಯೆ ಕುಡಿಯುವ ನೀರಿನದು. ನೀರುಗಂಟಿ ಇಲ್ಲದ ಕಾರಣ ಕಿರು ನೀರು ಸರಬರಾಜು ಯೋಜನೆ ಬಂದ್‌ ಆದರೆ ಚಾಲೂ ಮಾಡುವವರಿಲ್ಲ, ಚಾಲೂ ಆದರೆ ನೀರು ಹಾಗೇ ಪೋಲಾಗುತ್ತಿರುತ್ತದೆ. ವಿದ್ಯುತ್‌ ಇಲ್ಲವೆಂದರೆ ಜನ ಜಾನುವಾರುಗಳ ಸ್ಥಿತಿ ಅಯೋಮಯವಾಗುತ್ತದೆ. ಊರಿನಲ್ಲಿರುವ ನಾಲ್ಕು ಕೈಪಂಪುಗಳು ಕೆಟ್ಟು ಆರೇಳು ತಿಂಗಳಾದರೂ ದುರಸ್ತಿಯಾಗಿಲ್ಲ. ಮೂರು ಊರುಗಳ ಜನ, ರೈತರು, ಜಾನುವಾರುಗಳಿಗೆ ಅನುಕೂಲ ಇರುವ ಕೊರಮ್ಮ ದೇವಸ್ಥಾನದ ಕೈಪಂಪು ಕೆಟ್ಟುಹೋಗಿದೆ. ನೂರಕ್ಕೂ ಅಧಿಕ ಮನೆಗಳಿರುವ ಜನತಾ ಕಾಲೊನಿಗೆ ನೀರು ಬರುವುದಿಲ್ಲ.

ಮಾಲಿನ್ಯ: ಶಾಲಾ ಆವರಣ, ಊರಿನಲ್ಲೆಲ್ಲ ಮಾಲಿನ್ಯ ಮಡುಗಟ್ಟಿ ಅನಾರೋಗ್ಯಕರ ಸ್ಥಿತಿ ಉಂಟಾಗಿದೆ. ಓಣಿಗಳಲ್ಲಿನ ಕಲ್ಲುಗಳು ಕಿತ್ತು ಬಂದು ನಡೆದಾಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಓಣಿಗಳಲ್ಲಿ ನರಕಸದೃಶ್ಯವಾಗಿರುತ್ತವೆ. ಇನ್ನು ಬೀದಿದೀಪಗಳು ಹಗಲಲ್ಲಿಯೂ ಉರಿಯುತ್ತವೆ. ದೋಟಿಹಾಳ ಗ್ರಾಮ

ಪಂಚಾಯಿತಿ ಸಿಬ್ಬಂದಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಂಗನವಾಡಿಯಲ್ಲಿ ಸ್ಥಿತಿ ಬೇರೆ, ಸರ್ಕಾರದ ಸೌಲಭ್ಯಗಳು ಮಕ್ಕಳಿಗೆ ದಕ್ಕುತ್ತಿಲ್ಲ, ಕಾರ್ಯಕರ್ತೆ ಬೇಕಾಬಿಟ್ಟಿಯಾಗಿ ಬಂದು ಹೋಗುತ್ತಾರೆ ಎಂದು ಜನ ದೂರಿದರು. ಅಲ್ಲದೇ ಅಂಗನವಾಡಿಯನ್ನು ಮುಖ್ಯರಸ್ತೆಯಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದರು.

ಪಂಚಾಯಿತಿಯಿಂದ ಯಾವುದೇ ಸೌಲಭ್ಯಗಳಿಲ್ಲ, ಉದ್ಯೋಗ ಖಾತರಿ ಮತ್ತಿತರೆ ಯೋಜನೆಗಳಲ್ಲಿ ನಮ್ಮೂರಿನ ಹೆಸರಿನಲ್ಲಿ ಲಕ್ಷಾಂತರ ಹಣ ದುರುಪಯೋಗವಾಗಿದೆ. ಅಭಿವೃಧಿ ಅಧಿಕಾರಿ ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಊರು ರಿಪೇರಿ ಮಾಡ್ಲಿ

ಊರಾಗ ಎಷ್ಟೊ ತೊಂದ್ರಿ ಅದಾವ್ರಿ, ಆದ್ರ ರಿಪೇರಿ ಮಾಡೋರಿಲ್ರಿ
ಕ್ಯಾದಿಗೆಪ್ಪ ಕುರಿ, ಹಿರಿಯರು

ಹಗಲು ದೀಪ
ಬೀದಿ ದೀಪಾ ಕಂಬದಾಗ ಹಗಲತ್ತ ಉರಿತ್ಯಾವ, ಸುಟ್ಟುಹೋದ್ರ ಹೊಳ್ಳಿ ಹಾಕಂಗಿಲ್ಲ, ಪಂಚಾತಿಗೆ ಹೇಳಿ ಸಾಕೇಗೇತಿ
–ಶರಣಪ್ಪ ಕೋರಿ ರೈತ

ಮಡುಗಟ್ಟಿದ ಮಾಲಿನ್ಯ
ಗ್ರಾಮ ಎಷ್ಟು ಹಿಂದುಳಿದೆ ಎಂಬುದಕ್ಕೆ ಊರ ಮುಂದಿನ ಮಾಲಿನ್ಯವೇ ಹೊರಗಿನಿಂದ ಬಂದವರಿಗೆ ಸಾಕ್ಷಿ ಒದಗಿಸುತ್ತಿದೆ. ನೈರ್ಮಲ್ಯ ಇಲ್ಲಿ ಕನಸಿನ ಮಾತು
-–ಶಿವು ಕುರಿ, ವಿದ್ಯಾರ್ಥಿ

‘ಓಣಿ ದಾರಿ ಸರಿ ಮಾಡ್ರಿ’

ಮುದುಕ್ರು ತದುಕ್ರು ಹಗಲಾಗ ಅಡ್ಯಾಡಕ ಬರದಂಗಾಗೇತ್ರಿ, ಓಣಿದಾರಿ ಸರಿ ಮಾಡ್ರಿ, ಜನ ನೆನಸ್ತಾರ ನಿಮ್ಮನ್ನ.
–ಸಿದ್ದಪ್ಪ ಕಂದಕೂರು

ಅಭಿವೃದ್ಧಿ ಅಂದ್ರ ಏನ್ರಿ?
ಇಪ್ಪತ್ತು ವರ್ಸ ಆತ್ರಿ ಅಭಿವೃದ್ಧಿ ಕೇಳಬ್ಯಾಡ್ರಿ, ಎಲೆಕ್ಷನ್ಯಾಗ ಬಂದ ರಾಜಕಿ ಮಂದಿ ಮತ್ತ ಹೊಳ್ಳಿ ನೋಡಿಲ್ಲ

–ಶರಣಯ್ಯ ಹಿರೇಮಠ, ಯುವ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT