ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಿತಿ ವರದಿ ಜನ ಸ್ನೇಹಿಯಾಗಿರಲಿದೆ’

ನಾಗರಿಕರ ಕ್ರಿಯಾ ವೇದಿಕೆ ಸಂವಾದದಲ್ಲಿ ರವಿಚಂದರ್‌ ಭರವಸೆ
Last Updated 8 ಮಾರ್ಚ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೂ ಸಮಿತಿಗೂ ಯಾವುದೇ ಸಂಬಂಧವಿಲ್ಲ. ಈ ಸಂಬಂಧ ನಮ್ಮ ಮೇಲೆ ಒತ್ತಡವೂ ಇಲ್ಲ. ಪಾಲಿಕೆ ಪುನರ್‌ರಚನೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವುದಷ್ಟೆ ನಮ್ಮ ಕೆಲಸ’ ಎಂದು ಬಿಬಿಎಂಪಿ ಪುನರ್‌ರಚನೆ ತಜ್ಞರ ಸಮಿತಿ  ಸದಸ್ಯ ವಿ.ರವಿಚಂದರ್‌ ಸ್ಪಷ್ಟಪಡಿಸಿದರು.

ನಾಗರಿಕರ ಕ್ರಿಯಾ ವೇದಿಕೆ ಭಾನುವಾರ ಇಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವೇದಿಕೆ ಸದಸ್ಯರ ಸಲಹೆಗಳಿಗೆ ಕಿವಿಗೊಟ್ಟ ಅವರು ಕೆಲ ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸಿದರು. ಅಲ್ಲದೆ, ಪುನರ್‌ ರಚನೆಗೆ ಸಂಬಂಧಿಸಿದಂತೆ ನಾಗರಿಕ ಸ್ನೇಹಿ ವರದಿ ನೀಡುವ ಭರವಸೆ ನೀಡಿದರು.

ಬೆಂಗಳೂರು ಭಾರಿ ವೇಗದಲ್ಲಿ ಬೆಳೆಯುತ್ತಿದೆ. ಜನಸಂಖ್ಯೆಯೂ ಹೆಚ್ಚಾ­ಗು­­ತ್ತಿದೆ. ಈ ಕಾರಣಕ್ಕಾಗಿ ಬೆಂಗಳೂರಿಗೆ ಪ್ರತ್ಯೇಕವಾಗಿ ನೂತನ ಕಾಯ್ದೆಯ ಅಗತ್ಯವಿದೆ ಎಂದು ಅಭಿಪ್ರಾಯಟ್ಟರು.
‘ವಿಭಜನೆ’ ಎಂಬ ಶಬ್ದ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು ಪಾಲಿಕೆಯನ್ನು ಹೋಳು ಮಾಡುವ ಗುರಿಯನ್ನು ಸಮಿತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

‘ರೋಗಿಯ ಆರೋಗ್ಯ ಸರಿಯಿಲ್ಲ ಎಂದು ಆತನನ್ನು ಹೋಳು ಮಾಡಲು ಸಾಧ್ಯವೇ? ಹೋಳು ಮಾಡಿದರೂ ಆತನ ಆರೋಗ್ಯ ಸುಧಾರಿಸುವುದೇ? ಹಾಗಾಗಿ ಪಾಲಿಕೆಯನ್ನು ಹೋಳು ಮಾಡುವ ಉದ್ದೇಶ ನಮ್ಮದಲ್ಲ. ಪುನರ್‌ರಚನೆಯ ದೃಷ್ಟಿ ಕೋನದಿಂದ ಅಧ್ಯಯನಕ್ಕೆ ಮುಂದಾಗಿದ್ದೇವೆ’ ಎಂದರು.

ಪಾಲಿಕೆಯ ಎಂಟು ವಲಯಗಳ ಸ್ವರೂಪ ಅವೈಜ್ಞಾನಿಕವಾಗಿದೆ. ದಾಸರಹಳ್ಳಿ ವ್ಯಾಪ್ತಿಯಲ್ಲಿ ಕೇವಲ ಒಂದು ವಿಧಾನಸಭಾ ಕ್ಷೇತ್ರವಿದೆ. ಆದರೆ, ಇನ್ನುಳಿದ ಏಳು ವಲಯಗಳ ವ್ಯಾಪ್ತಿ­ಯಲ್ಲಿ 27 ವಿಧಾನಸಭಾ ಕ್ಷೇತ್ರಗಳಿವೆ. ಹಾಗಾಗಿಯೇ ಪುನರ್‌ರಚನೆ ಅಗತ್ಯವಿದೆ ಎಂದು  ಅವರು ಪ್ರತಿಪಾದಿಸಿದರು.

‘ವರದಿಯಲ್ಲಿ ಯಾವುದೇ ಕಥೆ ಇರುವುದಿಲ್ಲ. ಬದಲಾಗಿ ಅಂಕಿ ಅಂಶಗಳು, ದಾಖಲೆಗಳು, ಬೇರೆ ಬೇರೆ ದೇಶಗಳ ಉದಾಹರಣೆ ಸೇರಿದಂತೆ ಯಶಸ್ವಿ ಆಡಳಿತ ನಡೆಸಲು ಪೂರಕವಾಗಿರುವ ಅಂಶಗಳು ಇರಲಿವೆ. ಪಾಲಿಕೆ ಸದಸ್ಯರ ಜವಾಬ್ದಾರಿ ಬಗ್ಗೆ ಬೆಳಕು ಚೆಲ್ಲಲಾಗುವುದು. ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎನ್‌.ಎಸ್‌.ಮುಕುಂದ, ಅಧ್ಯಕ್ಷ ಡಿ.ಎಸ್‌.ರಾಜಶೇಖರ್‌, ಆಮ್‌ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT