ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಅಸ್ಪೃಶ್ಯತೆ’

Last Updated 10 ಸೆಪ್ಟೆಂಬರ್ 2013, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಶಾಲೆಗಳು ಆಧುನಿಕ ಅಸ್ಪೃಶ್ಯತೆಯನ್ನು ಹುಟ್ಟು ಹಾಕುತ್ತಿವೆ. ಈ ಶಾಲೆಗಳು ಒಂದು ವರ್ಗದ ಜನರಿಗೆ ಮಾತ್ರ ಸೀಮಿತವಾಗಿದೆ’ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ.­ನಿರಂಜನಾರಾಧ್ಯ ಕಳವಳ ವ್ಯಕ್ತಪಡಿಸಿದರು.

ಸ್ಟೂಡೆಂಟ್‌ ಇಸ್ಲಾಮಿಕ್‌ ಆರ್ಗರ್ನೈಸೇಷನ್‌ ಆಫ್‌ ಇಂಡಿಯಾದ ಕರ್ನಾಟಕ ಘಟಕದ ವತಿಯಿಂದ ನಗರದ ಶಾಸಕರ ಭವನದಲ್ಲಿ ಮಂಗಳವಾರ ನಡೆದ ಸದನದಲ್ಲಿ ‘ಶಿಕ್ಷಣ’ ಕುರಿತ ದುಂಡುಮೇಜಿನ ಸಭೆಯಲ್ಲಿ ಅವರು ಮಾತ­ನಾಡಿ, ‘ಉಳ್ಳವರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಬಡವರು ಹಾಗೂ ಹಿಂದುಳಿದವರು ಸರ್ಕಾರಿ ಶಾಲೆಗಳಲ್ಲಿ ಕಲಿಯು­ತ್ತಿದ್ದಾರೆ’ ಎಂದರು.

‘ವಿದ್ಯಾರ್ಥಿಗಳ ಕೊರತೆ ಕಾರಣ ನೀಡಿ  ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ ಬಗ್ಗೆ ಸದನದಲ್ಲಿ ಚರ್ಚಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಹೊಸ ಸರ್ಕಾರಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆಯಲ್ಲಿದ್ದೆವು. ಈ ನಿರೀಕ್ಷೆ ಹುಸಿಯಾಗಿದೆ’ ಎಂದರು.

‘80ರ ದಶಕದಲ್ಲಿ ಆಡಳಿತವನ್ನು ಹೆಂಡದ ಲಾಬಿ ನಿಯಂತ್ರಣ ಮಾಡುತ್ತಿತ್ತು. ಈಗ ಶಿಕ್ಷಣ ಲಾಬಿ ನಿಯಂತ್ರಣ ಮಾಡುತ್ತಿದೆ. ರಾಜಕಾರಣಿ­ಗಳೇ ಬಹುತೇಕ ಖಾಸಗಿ ಶಾಲಾ ಕಾಲೇಜುಗಳನ್ನು ನಡೆಸುತ್ತಿದ್ದಾರೆ. ಸದನದ ಚಟುವಟಿಕೆಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ನಿಯಂತ್ರಿಸುತ್ತಿವೆ’ ಎಂದು ಅವರು ಕಿಡಿಕಾರಿದರು.

'ರಾಜ್ಯದ ಶಾಲೆಗಳ ಸ್ಥಿತಿಗತಿ ಬಗ್ಗೆ ಕಳೆದ ಮೂರು ವರ್ಷಗಳಿಂದ ವರದಿ ತಯಾರಿಸಿ ಎಲ್ಲ ಶಾಸಕರಿಗೆ ನೀಡುತ್ತಿದೆ. ಆದರೆ, ಶಾಸಕರು ಇದರ ಅಧ್ಯಯನ ನಡೆಸುತ್ತಿಲ್ಲ. ಕ್ಷೇತ್ರದಲ್ಲಿ ಎಷ್ಟು ಶಾಲೆಗಳಿವೆ, ಎಷ್ಟು ಉಪನ್ಯಾಸಕರು ಇದ್ದಾರೆ ಎಂಬ ಪ್ರಶ್ನೆಗಳನ್ನೇ ಸದನದಲ್ಲಿ ಕೇಳುತ್ತಾರೆ. ಇದೊಂದು ಹಾಸ್ಯಾಸ್ಪದ ಸಂಗತಿ’ ಎಂದರು.

ಚಿಂತಕ ಜಿ.ರಾಮಕೃಷ್ಣ, ‘1986ರ ಶಿಕ್ಷಣ ನೀತಿಯ ಪ್ರಕಾರ ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿಯ ಶೇ 7ರಷ್ಟು ಮೊತ್ತವನ್ನು ಮೀಸಲಿಡಬೇಕಿದೆ. ಕೀನ್ಯಾ­ದಲ್ಲಿ ಶೇ 7, ಪೆರುವಿನಲ್ಲಿ ಶೇ 9.5 ಮೊತ್ತ ಮೀಸಲಿಡಲಾಗುತ್ತಿದೆ. ನಮ್ಮಲ್ಲಿ ಮಾತ್ರ ಶೇ 3ರಷ್ಟು ಮೊತ್ತ ಮೀಸಲಿಡಲಾಗುತ್ತಿದೆ’ ಎಂದರು. ಎಸ್‌ಐಒ ರಾಜ್ಯ ಘಟಕದ ಅಧ್ಯಕ್ಷ ತೌಸೀಫ್‌ ಅಹ್ಮದ್‌ ಎಂ.ವೈ, '2013–14ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳ ಹಾಗೂ ಸದನದ ಕಲಾಪದಲ್ಲಿ ಸದಸ್ಯರು ಶಿಕ್ಷಣ ಕ್ಷೇತ್ರಕ್ಕೆ ಕೇಳಿದ ಪ್ರಶ್ನೆಗಳ ಮಾಹಿತಿ ಕಲೆ ಹಾಕಲಾಗಿದೆ.

ಸದನದಲ್ಲಿ ಸರ್ಕಾರಿ ಶಾಲಾ–ಕಾಲೇಜುಗಳ ಕಟ್ಟಡಗಳ ದುಸ್ಥಿತಿಯ ಬಗ್ಗೆ, ಶಿಕ್ಷಕರ ನೇಮಕಾತಿ, ಬೋಧಕೇತರ ಸಿಬ್ಬಂ­ದಿಗಳ ಕೊರತೆ ಸೇರಿದಂತೆ ಮೂಲ­ಸೌಕರ್ಯ-­ಗಳ ಬಗ್ಗೆ ಮಾತ್ರ ಚರ್ಚೆಯಾಗಿದೆ’ ಎಂದರು. 'ಶಿಕ್ಷಣದ ಖಾಸಗೀಕರಣ ಬೀರಿರುವ ಪರಿಣಾಮ ಹಾಗೂ ಅದರ ನಿಯಂತ್ರಣದ ಬಗ್ಗೆ ನಮ್ಮ ಜನಪ್ರತಿನಿಧಿಗಳು ಚರ್ಚೆ ನಡೆಸಲಿಲ್ಲ. ಖಾಸಗಿ ವಿಶ್ವವಿದ್ಯಾಲಯಗಳ ಕಾರ್ಯವೈಖರಿ, ಶಿಕ್ಷಣ ನೀತಿ, ಜ್ಞಾನ ಆಯೋಗದ ಶಿಫಾರಸುಗಳು ಹಾಗೂ ಶಿಕ್ಷಣದ ಭಾಷೆಯ ಕುರಿತೂ ಚರ್ಚಿಸಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಚ್‌.ಡಿ. ಪ್ರಶಾಂತ್‌, ‘ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯೇ ದೊಡ್ಡ ಮೋಸ. ಈ ಕಾಯ್ದೆ ಮೂಲಕ ಶಿಕ್ಷಣ ಕ್ಷೇತ್ರದ ಅಸಮಾನತೆ ಹೋಗ­ಲಾಡಿಸಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗಿ ಶಾಲೆಗಳು ಮುಚ್ಚುತ್ತಿವೆ’ ಎಂದರು. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT