ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್‌ಎಂವಿ ಕಾರ್ಯಕ್ಷಮತೆ ಪ್ರೇರಣೆಯಾಗಲಿ’

ಸರ್‌.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ
Last Updated 16 ಸೆಪ್ಟೆಂಬರ್ 2013, 9:08 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸರ್ ಎಂ. ವಿಶ್ವೇಶ್ವರಯ್ ಅವರು ಎಂಜಿನಿಯರ್ ಮಾತ್ರವಲ್ಲ; ಅವರೊಬ್ಬ ದಾರ್ಶನಿಕ ಕೂಡ ಆಗಿದ್ದರು’ ಎಂದು ಕುವೆಂಪು ವಿವಿಯ ಪ್ರಸಾರಾಂಗದ ನಿರ್ದೇಶಕ ಡಾ.ಜಿ.ಪ್ರಶಾಂತನಾಯಕ್ ಹೇಳಿದರು.

ನಗರದಲ್ಲಿ ಭಾನುವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಎಂಜಿನಿಯರ್‌  ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯ ಅವರು ಒಬ್ಬ ಎಂಜಿನಿಯರ್ ಆಗಿ ಕೇವಲ ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ಶ್ರಮಿಸಲಿಲ್ಲ. ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಯತ್ನಿಸಿದರು. ದೇಶದ ಭವಿಷ್ಯದ ಬಗೆಗಿನ ಮುನ್ನೋಟ, ದೂರದೃಷ್ಟಿ ಹೊಂದಿದ್ದ ದಾರ್ಶನಿಕರು ಎಂದರು.

ಶಿಕ್ಷಕರು, ಶಿಕ್ಷಣದ ಮೂಲಕ ಬೌದ್ಧಿಕವಾಗಿ ದೇಶ ನಿರ್ಮಾಣ ಮಾಡಿದಂತೆ, ಎಂಜಿನಿಯರ್ ಭೌತಿಕ ನಿರ್ಮಾಣದ ಮೂಲಕ ದೇಶದ ಅಭಿವೃದ್ಧಿ ಮಾಡಬಹುದು ಎಂಬುದನ್ನು ವಿಶ್ವೇಶ್ವರಯ್ಯ ತೋರಿಸಿದರು ಎಂದು ಹೇಳಿದರು.

ಶರಾವತಿ ಯೋಜನೆ ಮೂಲಕ ರಾಜ್ಯಕ್ಕೆ ಅಗತ್ಯವಾದ ಇಂಧನ ಉತ್ಪಾದನೆ ಮಾಡಿದ ವಿಶ್ವೇಶ್ವರಯ್ಯ, ಕೆ.ಆರ್.ಎಸ್. ಅಣೆಕಟ್ಟು ನಿರ್ಮಿಸಿ ಮಂಡ್ಯ ಜಿಲ್ಲೆಯನ್ನು ಹಸಿರಾಗಿಸಿದರು. ವಿಎಸ್ಐಎಲ್, ಎಂ.ಪಿ.ಎಂ, ಮೈಸೂರು ಸಾಬೂನು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ಮಾಡಿ ರಾಜ್ಯದ ಆರ್ಥಿಕತೆ ಭದ್ರಪಡಿಸಿದರು ಎಂದು ಶ್ಲಾಘಿಸಿದರು.

ವಿಶ್ವೇಶ್ವರಯ್ಯ ಅವರನ್ನು ಕೆಲವರು ಸರ್ವಾಧಿಕಾರಿ ಎಂದು ಟೀಕಿಸಿದ್ದಾರೆ. ಆದರೆ, ವಿಶ್ವೇಶ್ವರಯ್ಯ ತಾವು ಅಂದುಕೊಂಡ ಕೆಲಸವನ್ನು ಮುಗಿಸುವುದರಲ್ಲಿ ಬದ್ಧತೆ, ದಿಟ್ಟತನ ತೋರುತ್ತಿದ್ದರು ಅಷ್ಟೆ. ಇದು ಕೆಲವರಿಗೆ ಸರ್ವಾಧಿಕಾರಿ ವರ್ತನೆಯಂತೆ ಕಂಡಿರಬಹುದು ಎಂದು ವಿಶ್ಲೇಷಿಸಿದರು.

ಸಂಘದ ಅಧ್ಯಕ್ಷ ಎಚ್.ಮಹೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ರುದ್ರೇಶ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಸರ್‌ಎಂವಿ ಸ್ಮರಣೆ
ಭದ್ರಾವತಿ: ‘ದೇಶದ ಎಲ್ಲಾ ಕ್ಷೇತ್ರದಲ್ಲೂ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಿದೆ ’ ಎಂದು ಉಪನ್ಯಾಸಕ ಡಾ.ಎಂ.ಜಿ. ಉಮಾಶಂಕರ್‌ ಹೇಳಿದರು.

ಇಲ್ಲಿನ ಜಯಶ್ರೀ ಕಲ್ಯಾಣ ಮಂದಿರದಲ್ಲಿ ಭಾನುವಾರ ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಆಯೋಜಿಸಿದ್ದ ಸರ್‌.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾಯರ್ಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು.

ಆರ್ಥಿಕ, ಕೈಗಾರಿಕಾ, ಶೈಕ್ಷಣಿಕ ಹಾಗೂ ಕೃಷಿ ವಲಯಕ್ಕೆ ಆದ್ಯತೆ ನೀಡುವ ಕೆಲಸ ಮಾಡುವ ಮೂಲಕ ಭವಿಷ್ಯದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟ ಸರ್‌ಎಂವಿ ಕಾರ್ಯಶೈಲಿ ಅವಿಸ್ಮರಣೀಯ ಎಂದು ನುಡಿದ ಅವರು ಈಗ ಅದನ್ನು ಉಳಿಸಿಕೊಂಡು ಹೋಗುವ ಸಂಗತಿಗಳೇ ಕಷ್ಟಕರವಾಗಿದೆ ಎಂದು ವಿಷಾದಿಸಿದರು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಜೆ. ಅಪ್ಪಾಜಿ, ನಗರದ ಎರಡು ಕಣ್ಣುಗಳಾದ ಎಂಪಿಎಂ, ವಿಐಎಸ್‌ಎಲ್‌ ಕಾರ್ಖಾನೆ ಇಂದು ಸಂಕಷ್ಟ ಹಾದಿ ಹಿಡಿದಿದೆ. ಈ ತೊಂದರೆಯಿಂದ ಅದನ್ನು ಮೇಲೆ ತರಲು ಹಲವು ಪ್ರಯತ್ನಗಳು ನಡೆದಿದ್ದು ಇದಕ್ಕ ಎಲ್ಲರ ಸಹಕಾರ ಅಗತ್ಯ ಎಂದರು.

   ಈ ಕಾರ್ಖಾನೆಗಳ ಉಳಿವಿಗೆ ಬೆಂಗಳೂರಿಗೆ ಪಾದಯಾತ್ರೆ ಹೋಗುವ ಕಾಲ ಸಹ ಬರಬಹುದು. ಅದಕ್ಕೆ ಎಲ್ಲರೂ ಸಹಕರಿಸಿ ಎಂದು ಹೇಳಿದ ಅವರು ಸರ್‌ಎಂವಿ ಅವರ ಕಾರ್ಯಕ್ಷಮತೆ ನಮ್ಮ ಬದುಕಿಗೆ ಪ್ರೇರಣೆಯಾಗಲಿ ಎಂದರು.

ಜೆ.ಎಸ್‌. ನಾಗಭೂಷಣ್‌  ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಎಸ್‌.ಬಿ. ಶಿವಲಿಂಗಪ್ಪ ಸಂಗಡಿಗರು ಪ್ರಾರ್ಥಿಸಿದರು, ಶಿವಯೋಗಿ ಮಠದ್‌ ನಿರೂಪಿಸಿದರು, ಬಿ. ಯಲ್ಲಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT