ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾಜಿಕ ಕ್ರಾಂತಿ ಕಡಿಮೆ ಸಾಧನೆಯಲ್ಲ’

ಪಂಚಾಯತ್ ರಾಜ್ –20
Last Updated 19 ಜನವರಿ 2014, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಮೊದಲ ಬಾರಿಗೆ ಜಿಲ್ಲಾ ಪರಿಷತ್‌ ವ್ಯವಸ್ಥೆ ಜಾರಿಗೆ ಬಂದಾಗ ಧಾರವಾಡ ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕರಾಗಿದ್ದ ಡಿ.ಆರ್‌.ಪಾಟೀಲ್‌ ಅವರು ಪಂಚಾಯತ್‌ ವ್ಯವಸ್ಥೆಯ ಬಗ್ಗೆ ತಳಮಟ್ಟದ ಜ್ಞಾನ ಪಡೆದವರು. ರಾಜೀವ ಗಾಂಧಿ ಅವರು ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಇಡೀ ದೇಶದಲ್ಲಿ ಜಾರಿಗೊಳಿಸಲು ಬಯಸಿದಾಗ ಅವರಿಗೂ ಈ ಬಗ್ಗೆ ಸ್ಪಷ್ಟ ತಿಳಿವಳಿಕೆಯನ್ನು ನೀಡಿದವರು ಡಿ.ಆರ್‌.ಪಾಟೀಲ್‌. ಸಂವಿಧಾನದ 73ನೇ ತಿದ್ದುಪಡಿಗೆ 20 ವರ್ಷವಾಗಿರುವ ಹಿನ್ನೆಲೆಯಲ್ಲಿ ಪಂಚಾಯತ್‌ರಾಜ್‌ ವ್ಯವಸ್ಥೆಯ ಪುನರಾವಲೋಕನಕ್ಕೆ ರಾಜ್ಯ ಸರ್ಕಾರ ರಚಿಸಿರುವ ಸಮಿತಿಯ ಸದಸ್ಯರೂ ಆಗಿರುವ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರ: ಪಂಚಾಯತ್‌ರಾಜ್‌ ವ್ಯವಸ್ಥೆಯ ಕಳೆದ 20 ವರ್ಷದ ಸಕಾರಾತ್ಮಕ ಬೆಳವಣಿಗೆಗಳು ಯಾವುವು?
ಅಧಿಕಾರದ ಕನಸನ್ನೇ ಕಾಣದವರಿಗೆ ಅಧಿಕಾರವನ್ನು ನೀಡಿದ್ದು ಇದರ ಹೆಚ್ಚುಗಾರಿಕೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಕ್ರಾಂತಿಯೇ ಆಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಎಲ್ಲರೂ ಆಲೋಚಿಸುವಂತೆ ಆಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಸಿಕ್ಕಿದೆ. ಇದೇನು ಕಡಿಮೆ ಸಾಧನೆಯಲ್ಲ. ಹಳ್ಳಿಗಳಲ್ಲಿ ಈಗಲೂ ದಲಿತರ ಜೊತೆ ಮೇಲ್ವರ್ಗದವರು ಕುಳಿತುಕೊಳ್ಳುವುದಿಲ್ಲ. ಆದರೆ ಮೇಲ್ವರ್ಗದವರು ಮನೆ ಕಟ್ಟಬೇಕು ಎಂದರೆ ದಲಿತ ವ್ಯಕ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದರೆ ಅವನ ಮುಂದೆ ಅರ್ಜಿ ಸಲ್ಲಿಸಲು ನಿಂತಿರುತ್ತಾರೆ.

ಪ್ರ: ಭ್ರಷ್ಟಾಚಾರ ಕೂಡ ವಿಕೇಂದ್ರೀಕರಣವಾಯಿತು ಎಂಬ ಆರೋಪವಿದೆ. ನಿಜವೇ?
ಕೊಂಚಮಟ್ಟಿಗೆ ಅದು ನಿಜ ಇರಬಹುದು. ಆದರೆ ಈಗಲೂ ಗ್ರಾಮೀಣ ಮಟ್ಟದಲ್ಲಿ ಜನರು ಭ್ರಷ್ಟಾಚಾರಕ್ಕೆ ಅಂಜುತ್ತಾರೆ. ಸುದೈವಕ್ಕೆ ಮರ್ಯಾದೆಗೆ ಭಯಪಡುವ ಜನ ಇನ್ನೂ ಇದ್ದಾರೆ. ನೀವು ಹೈಕೋರ್ಟ್ನ್ನು ತಪ್ಪುದಾರಿಗೆ ಎಳೆಯಬಹುದು. ಆದರೆ ಗ್ರಾಮಸಭೆಯನ್ನು ತಪ್ಪು ದಾರಿಗೆ ಎಳೆಯಲಾಗದು. ಈಗ ಒಂದು ಜನರೇಷನ್‌ ಹೋಗಿ ಇನ್ನೊಂದು ಜನರೇಷನ್‌ ಬಂದಿದೆ. ಈಗ ಎಲ್ಲ ಜನಾಂಗದವರೂ ಬುದ್ಧಿವಂತರಾಗುತ್ತಿದ್ದಾರೆ. ಗ್ರಾಮೀಣ ಜನರು ಅಕ್ಷರಸ್ಥರಲ್ಲದಿದ್ದರೂ ಸರಿ ಯಾವುದು ತಪ್ಪು ಯಾವುದು ಎನ್ನುವುದು ಅವರಿಗೆ ಗೊತ್ತಾಗುತ್ತದೆ. ಗ್ರಾಮ ಸಭೆಗಳಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹೇಳದೇ ಇರಬಹುದು. ಆದರೆ ಮತಪೆಟ್ಟಿಗೆಯಲ್ಲಿ ಅವರು ಸ್ಪಷ್ಟ ಅಭಿಪ್ರಾಯ ತಿಳಿಸುತ್ತಾರೆ. ಗ್ರಾಮಸಭೆಗಳನ್ನು ಬಲಪಡಿಸಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು.

ಪ್ರ: ಈಗ ಗ್ರಾಮಸಭೆಗಳೇ ನಡೆಯುತ್ತಿಲ್ಲವಲ್ಲ?
ಹೌದು ಗ್ರಾಮಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಅವು ಕಡ್ಡಾಯವಾಗಿ ನಡೆಯುವಂತೆ ಮಾಡಬೇಕು. ಮಾಧ್ಯಮಗಳೂ ಗ್ರಾಮಸಭೆಯ ಕಲಾಪವನ್ನು ವರದಿ ಮಾಡಬೇಕು. ಶಾಸನಸಭೆ, ಸಂಸತ್ತಿಗೆ ನೀಡಿದಷ್ಟೇ ಮಹತ್ವವನ್ನು ಗ್ರಾಮಸಭೆಗೂ ನೀಡಬೇಕು. ಮಾಧ್ಯಮದವರು ಗ್ರಾಮಸಭೆ ವರದಿ ಮಾಡುತ್ತಾರೆ ಎಂದರೆ ಗ್ರಾಮಸಭೆ ಸರಿಯಾಗಿಯೇ ನಡೆಯುತ್ತದೆ.

ಪ್ರ: ಶಾಸಕರು ಪಂಚಾಯಿತಿ ಸದಸ್ಯರ ಅಧಿಕಾರವನ್ನು ಕಸಿದುಕೊಳ್ಳಲಿಲ್ಲವೇ?
ಅವರೇನೂ ಅಧಿಕಾರ ಕಸಿದುಕೊಂಡಿಲ್ಲ. ಆದರೆ ತಾವೇ ಶಾಸನಸಭೆಯಲ್ಲಿ ಮಾಡಿದ ಕಾನೂನನ್ನು ಅವರೇ ಪಾಲಿಸುತ್ತಿಲ್ಲ. ಆಶ್ರಯ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಬೇಕು ಎಂಬ ಬೇಡಿಕೆ ಇತ್ತು. ಆದರೆ ಅದಕ್ಕೆ ನಮ್ಮ ಪಕ್ಷ ಅವಕಾಶ ನೀಡಲಿಲ್ಲ.

ಪ್ರ: ಪಂಚಾಯತ್‌ರಾಜ್‌ ವ್ಯವಸ್ಥೆ ಪುನರಾವಲೋಕನಕ್ಕೆ ಸರ್ಕಾರ ಸಮಿತಿ ರಚಿಸಿದೆ. ಸಮಿತಿ ಏನು ಮಾಡಬೇಕು ಎಂದುಕೊಂಡಿದೆ?
ಗ್ರಾಮಸಭೆಯ ಕಲಾಪವನ್ನು ಸಂಪೂರ್ಣವಾಗಿ ವೀಡಿಯೊ ಚಿತ್ರೀಕರಣ ಮಾಡಬೇಕು. ಯಾವುದೇ ರೀತಿಯಲ್ಲಿಯೂ ಅಲ್ಲಿನ ನಿರ್ಣಯಗಳನ್ನು ತಿದ್ದುಪಡಿ ಮಾಡಲು ಅವಕಾಶವಿರಬಾರದು. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಸರ್ಕಾರದ ಎಲ್ಲ ಅಧಿಕಾರಿಗಳೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೇ ಬರಬೇಕು. ಶಿಕ್ಷಕರಾಗಲಿ, ವೈದ್ಯರಾಗಲಿ ಎಲ್ಲರೂ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಇರಬೇಕು.

ಪ್ರ: ಇಂತಹ ಅಧಿಕಾರವನ್ನು ಗ್ರಾಮಸಭೆಗೆ ನೀಡಲು ಶಾಸಕರು ಒಪ್ಪುತ್ತಾರೆಯೇ?
ಒಪ್ಪಲೇಬೇಕು. ನಮ್ಮ ಪಕ್ಷದ ಮಟ್ಟಿಗೆ ಹೇಳುವುದಾದರೆ ನಮ್ಮ ನಾಯಕರು ಇದಕ್ಕೆ ಬದ್ಧರಾಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಎಲ್ಲರೂ ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡುವುದರ ಪರವಾಗಿದ್ದಾರೆ.

ಪ್ರ: ಏನೇ ಕಾನೂನು ಮಾಡಿದರೂ ರಂಗೋಲಿ ಕೆಳಗೆ ನುಸುಳುವವರು ಇದ್ದೇ ಇರುತ್ತಾರೆ ಅಲ್ಲವೇ?
ಎಲ್ಲವೂ ಗ್ರಾಮಸಭೆಯ ವ್ಯಾಪ್ತಿಯೊಳಗೆ ಬರುವಂತೆ ಮಾಡಿದರೆ ರಂಗೋಲಿ ಕೆಳಗೆ ನುಸುಳುವ ಪ್ರಯತ್ನ ಕಡಿಮೆಯಾಗುತ್ತದೆ. ಯೋಜನೆ ಯಾವಾಗಲೂ ಕೆಳಗಿನಿಂದ ಮೇಲಕ್ಕೆ ಹೋಗಬೇಕು. ಮೇಲಿಂದ ಕೆಳಕ್ಕೆ ಬರುವುದಲ್ಲ. ಗ್ರಾಮಸಭೆಗಳು ಬಲವಾದರೆ ಯೋಜನೆಗಳ ಅನುಷ್ಠಾನ ಶೇ 80ರಿಂದ 85ರಷ್ಟು ಸರಿಯಾಗುತ್ತದೆ. ಬೋಗಸ್‌ ಬಿಲ್ಲಿಂಗ್‌ ನಿಲ್ಲುತ್ತದೆ.

ಪ್ರ: ಮೊದಲು ಜಿಲ್ಲಾ ಸರ್ಕಾರ ಇತ್ತು. ಈಗ ಅದು ಮಾಯವಾಗಿದೆ. ಮತ್ತೆ ಅದು ಜಾರಿಗೆ ಬರಬಹುದೇ?
ಖಂಡಿತವಾಗಿಯೂ ಜಿಲ್ಲಾ ಸರ್ಕಾರವನ್ನು ಜಾರಿಗೆ ತರುತ್ತೇವೆ. ಗ್ರಾಮ ಮಟ್ಟದಲ್ಲಿಯೂ ಗ್ರಾಮ ಪಂಚಾಯಿತಿಯೇ ಸರ್ಕಾರ. ನಮ್ಮ ಯಾವುದೇ ಕೆಲಸವಾಗಬೇಕಿದ್ದರೂ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಟ್ಟರೆ ಆ ಕೆಲಸವನ್ನು ಗ್ರಾಮ ಪಂಚಾಯಿತಿಯವರು ಮಾಡಿಕೊಡಬೇಕು. ಅದು ವಿಧಾನಸೌಧ, ಸಂಸತ್ತಿನಿಂದ ಆಗಬೇಕಾದ ಕೆಲಸವಾಗಿದ್ದರೂ ಗ್ರಾಮದ ಜನರು ಗ್ರಾಮ ಪಂಚಾಯಿತಿಗೇ ಅರ್ಜಿ ನೀಡಿ ಕೆಲಸ ಮಾಡಿಸಿಕೊಳ್ಳುವಂತಹ ವ್ಯವಸ್ಥೆ ಬರಬೇಕು.

ಪ್ರ: ಇದೆಲ್ಲಾ ತುಂಬಾ ಆದರ್ಶದ ಮಾತು. ಕನಸಿನ ಯೋಜನೆ ಎಂದು ಅನ್ನಿಸುವುದಿಲ್ಲವೇ?
ಜನರಿಂದ ಆರಿಸಿಬರುವ ಪ್ರತಿನಿಧಿ ಜನರಿಗಾಗಿ ಪ್ರತಿನಿಧಿಯೂ ಆದರೆ ಇದೆಲ್ಲಾ ಸಾಧ್ಯ. 20 ವರ್ಷಗಳ ಹಿಂದಿನ ಗ್ರಾಮೀಣ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ವ್ಯತ್ಯಾಸ ಇದೆ. ಅದು ಎಲ್ಲರಿಗೂ ಗೋಚರವಾಗುತ್ತದೆ. ಒಂದು ಪರಿಪೂರ್ಣ ವ್ಯವಸ್ಥೆಯತ್ತ ನಮ್ಮ ಗುರಿ ಇರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT