ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತಿಗಳಿಗಿಂತ ರಾಜಕಾರಣಿಗಳೇ ಮೇಲು’

ಸಾಹಿತ್ಯ ಜಾತ್ರೆಯಲ್ಲಿ ರಾಜಕೀಯದ ವಿಮರ್ಶೆ
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೂಡುಬಿದಿರೆ: ಆಳ್ವಾಸ್ ವಿಶ್ವನುಡಿಸಿರಿ ವೇದಿಕೆ­ಯಲ್ಲಿ ಇದೇ ಮೊದಲ ಬಾರಿಗೆ ನಡೆದ ‘ರಾಜ­ಕೀಯ’ ಕುರಿತ ಗೋಷ್ಠಿ ರಾಜಕೀಯ ಮುಖಂಡರ ಆತ್ಮ ವಿಮರ್ಶೆ­ಯ ಮಾತುಗಳಿಗೆ, ರಾಜ­ಕೀಯ ­ಶುದ್ಧೀಕರಣ ಬಗೆಗಿನ ಸಂವೇ­ದನೆಗಳಿಗೆ, ಸಾಹಿತ್ಯ ಲೋಕದ ರಾಜ­ಕಾರಣ ಕುರಿತ ಮಾತುಗಳಿಗೆ ಸಾಕ್ಷಿ­ಯಾಯಿತು.

ಶನಿವಾರ ನಡೆದ ಗೋಷ್ಠಿಗೆ ಚಾಲನೆ ನೀಡಿದ ಜೆಡಿಎಸ್ ಮುಖಂಡ ಎಂ.ಸಿ. ನಾಣಯ್ಯ, ‘ನಾನು ರಾಜಕೀಯ­ದಲ್ಲಿದ್ದೇನೆ ಎಂಬುದು ನಿಜ. ಕೆಲವು ಸಾಹಿತಿಗಳ ನಡುವೆ ಇರುವಷ್ಟು ರಾಜಕಾರಣ, ರಾಜಕೀಯ ವ್ಯಕ್ತಿಗಳ ನಡುವೆ ಇಲ್ಲ’ ಎಂದು ನೇರವಾಗಿ ನುಡಿದರು.

‘ಜ್ಞಾನಪೀಠ ಪ್ರಶಸ್ತಿ ಪಡೆದ ಕೆಲವರು, ಇತರ ಕೆಲವು ಸಾಹಿತಿಗಳು ಮಾತ­ನಾಡುವುದನ್ನು, ಬರೆ­ಯು­ವು­ದನ್ನು ­ನೋಡಿದರೆ ಅವರಿಗಿಂತ ರಾಜ­ಕಾರಣಿ­ಗಳಾದ ನಾವೇ ಒಳ್ಳೆಯವರು ಎಂದು ಅನಿಸುತ್ತದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಸಾಮಾಜಿಕ ಸಮಾನತೆಯ ನೆಲೆಯಲ್ಲಿ ಸಾವಿರಾರು ವಿದ್ಯಾರ್ಥಿ­ಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಆಳ್ವರು ನಡೆಸುವ ನುಡಿಸಿರಿಯಲ್ಲಿ ಸಾಹಿತ್ಯವಿಲ್ಲ, ವಾಣಿಜ್ಯ ಉದ್ದೇಶ ಇದೆ ಎಂಬಂಥ ಮಾತುಗಳನ್ನು ಆಡುವುದೂ ಒಂದು ರಾಜಕಾರಣವೇ’ ಎಂದು ನಾಣಯ್ಯ ಹೇಳಿದರು.

ಸರ್ಕಾರದಿಂದ ಅನುದಾನ ದೊರೆ­ಯದಿದ್ದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬೀಗ ಹಾಕಬೇ­ಕಾಗುತ್ತದೆ ಎಂದು ಅದರ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ. ಅವರಿಂದ ಇಂಥ ಮಾತು ಬರಬಾರದಿತ್ತು. ಪರಿಷತ್ತು ಮತ್ತು ಸಾಹಿತಿ­ಗಳಿಗೆ ಜನರಿಂದ ಹಣ ಸಂಗ್ರಹಿಸಿ, ಸಾಹಿತ್ಯ ಸಮ್ಮೇಳನ ನಡೆಸಲು ಆಗುವು­ದಿಲ್ಲವೇ? ಹಣ ಸರ್ಕಾರ­ದಿಂದಲೇ ಬರಬೇಕೇ? ಎಂದು ಖಡಕ್ ಆಗಿ ಪ್ರಶ್ನಿಸಿದರು.

ಭ್ರಷ್ಟಾಚಾರ ನಮ್ಮ ದೇಶದ ಅಂತಃ­ಸತ್ವವನ್ನು ನಾಶ ಮಾಡುತ್ತದೆ. ನಮ್ಮ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಭ್ರಷ್ಟ­ಗೊಂಡಿವೆ. ಲೋಕ­ಪಾಲ ವ್ಯವಸ್ಥೆಯಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಗಾಂಧಿ­ವಾದಿ ಅಣ್ಣಾ ಹಜಾರೆ ಚಳವಳಿ ನಡೆಸದಿದ್ದರೆ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 28 ಸ್ಥಾನ ಪಡೆಯದಿದ್ದರೆ ಲೋಕಪಾಲ ಮಸೂದೆಗೆ ಸಂಸತ್ತಿನ ಅನು­ಮೋದನೆ ದೊರೆಯುತ್ತಿರಲಿಲ್ಲ ಎಂದು ವಿಶ್ಲೇಷಿಸಿದರು.

‘ಸಹಿಸಲಾಗದು’: ‘ಭ್ರಷ್ಟಚಾರ, ಸ್ವಜನ ಪಕ್ಷಪಾತ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ದೆಹಲಿಯ ಮತದಾರ ನೀಡಿದ್ದಾನೆ. ಜನ ಒಳ್ಳೆಯ ರಾಜಕಾರಣ ಬಯಸಿದ್ದಾರೆ ಎಂದು ಅನಿಸಲು ಶುರುವಾಗಿದೆ. ರಾಜಕಾರಣಿಗಳು ಆದರ್ಶ­ಪ್ರಾಯರಾಗಿರಬೇಕು, ನಿಜ. ಆದರೆ ಇಂದಿನ ಸಂದರ್ಭ ಅದಕ್ಕೆ ಅನುಕೂಲಕರ ಆಗಿದೆಯೇ?’ ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ಪ್ರಶ್ನಿಸಿದರು.

ಚುನಾವಣೆ ಗೆಲ್ಲಲು ಬೇಕಿರುವ ಅರ್ಹತೆಗಳು ಮತ್ತು ಸರ್ಕಾರ ರಚಿಸಲು ಬೇಕಿರುವ ಅರ್ಹತೆಗಳ ನಡುವೆ ವ್ಯತ್ಯಾಸ ಇದೆ ಎಂಬುದನ್ನು ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಆಗ­ಬಹುದಾದ ಮೈತ್ರಿ ವಿಷದ­-ಪಡಿ­ಸುತ್ತಿದೆ. ಆದರೆ ಮುಂದೊಂದು ದಿನ ಋಜು ಮಾರ್ಗವನ್ನು ಅನುಸರಿಸಲೇಬೇಕಾದ ಅನಿವಾರ್ಯತೆ ರಾಜಕೀಯ ಪಕ್ಷಗಳಿಗೆ ಖಂಡಿತ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪರಿಹಾರ: ರಾಜಕೀಯದಲ್ಲಿ ಬದ­ಲಾವಣೆ ತರಲು ಕೆಲವು ಸೂತ್ರಗಳನ್ನು ಮುಂದಿಟ್ಟ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ‘ಲೋಕಸಭೆ ಮತ್ತು ವಿಧಾನಸಭೆಗಳಿಗೆ ಐದು ವರ್ಷಕ್ಕೊಮ್ಮೆ, ಒಟ್ಟೊಟ್ಟಿಗೇ ಚುನಾವಣೆ ನಡೆಸಬೇಕು. ಅಧಿಕಾರಿಗಳು, ಉದ್ಯಮಿಗಳು ಚುನಾ­ವಣೆಗಳಲ್ಲಿ ನೇರವಾಗಿ ಪಾಲ್ಗೊಳ್ಳದಂತೆ ಮಾಡಬೇಕು’ ಎಂದರು.

ಅಪರಾಧೀಕರಣ, ವಾಣಿಜ್ಯೀಕರಣ, ಜಾತಿ -ಮತಗಳ ಆಧಾರದಲ್ಲಿ ಆಗಿರುವ ಒಡಕು, ಹಿತಾಸಕ್ತಿಗಳ ಸಂಘರ್ಷ, ವಂಶ­ಪಾರಂಪರ್ಯ ರಾಜಕಾರಣ, ಉತ್ತ­ರದಾಯಿತ್ವ ಇಲ್ಲದಿರುವಿಕೆ ರಾಜಕೀ­ಯದ ಪಾಲಿಗೆ ಸವಾಲುಗಳಾಗಿವೆ.

ಇದಕ್ಕೆ ಉತ್ತರ ಜನಸಮೂಹದ ನಡುವೆ­ಯೇ ಇದೆ. ದೆಹಲಿಯ ಜನ ಅದನ್ನು ತೋರಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT