ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯ ಸಮ್ಮೇಳನದಲ್ಲಿ ಲಿಂಗ ತಾರತಮ್ಯ’

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಮಡಿಕೇರಿಯಲ್ಲಿ ನಡೆಯುತ್ತಿರುವ 80ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಕೊಡಗಿನ ಗೌರಮ್ಮ ಎಂಬ ಹೆಸರು ಇಡಲಾಗಿದೆ. ಆದರೆ, ಅಲ್ಲಿ ಲಿಂಗ ತಾರತಮ್ಯ ನಡೆಸಲಾಗಿದೆ’ ಎಂದು ಡಾ.ವಸುಂಧರಾ ಭೂಪತಿ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಷನಲ್‌ ಬುಕ್‌ ಟ್ರಸ್ಟ್‌, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘ ಹಾಗೂ ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಆಶ್ರಯದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ 110ರ ಸಂಭ್ರಮಾಚರಣೆ ಅಂಗವಾಗಿ ಇಲ್ಲಿನ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿರುವ ‘ಮಹಿಳಾ ಸಾಹಿತ್ಯ ಸಮಾವೇಶ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಎಂಬ ನೆಲೆಯಲ್ಲಿ ಉಮಾಶ್ರೀ ಅವರನ್ನು ಆಹ್ವಾನಿಸಿದ್ದು ಹೊರತುಪಡಿಸಿ, ವೇದಿಕೆಯಲ್ಲಿ ಇದ್ದವರೆಲ್ಲ ಪುರುಷರೇ. ವಿಚಾರಗೋಷ್ಠಿಗಳಲ್ಲೂ ಬೆರಳೆಣಿಕೆಯ ಮಹಿಳೆಯರಿಗಷ್ಟೇ ಅವಕಾಶ ನೀಡಲಾಗಿದೆ’ ಎಂದು ದೂರಿದರು.

‘ಬೌದ್ಧಿಕ ಆರೋಗ್ಯ ಗಳಿಸಲು ಸಾಹಿತ್ಯ ಬೇಕೇ ಬೇಕು. ಮನೆಯ ಶ್ರೀಮಂತಿಕೆ­ಯನ್ನು ಚಿನ್ನಾಭರಣದ ಮೂಲಕ ಅಳೆಯುವುದಲ್ಲ. ಮನೆಯ ಗ್ರಂಥಾಲಯ ಕುಟುಂಬದ ಶ್ರಿಮಂತಿಕೆಯನ್ನು ಹೇಳುವಂತಾಗಬೇಕು’ ಎಂದರು.

ಹಿರಿಯ ಸಾಹಿತಿ ಪದ್ಮಾ ಶೆಣೈ ಸಮಾವೇಶವನ್ನು ಉದ್ಘಾಟಿಸಿದರು. ಸಾಹಿತಿಗಳಾದ ಪ್ರೇಮಾ ಭಟ್‌, ವಿಜಯಲಕ್ಷ್ಮೀ ಜಿ.ಶೆಟ್ಟಿ, ಜಾನಕೀ ಬ್ರಹ್ಮಾವರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಉಪನಿರ್ದೇಶಕ ಚಂದ್ರಹಾಸ ಬಿ.ರೈ, ಕೊಂಕಣಿ ಸಾಹಿತಿ ಬಸ್ತಿ ವಾಮನ ಶೆಣೈ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT