ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಧಾರಣೆ ಒಂದೇ ಬಾರಿಗೆ ಸಾಧ್ಯವಿಲ್ಲ’

Last Updated 21 ಮಾರ್ಚ್ 2014, 11:12 IST
ಅಕ್ಷರ ಗಾತ್ರ

ಬೀರೂರು: ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿದ್ದು ಭ್ರಷ್ಟಾಚಾರ ನಿರ್ಮೂಲನೆಯಾಗಲಿ ವ್ಯವಸ್ಥೆಯ ಸುಧಾರಣೆಯಾಗಲೀ ಒಂದೇ ಹಂತದಲ್ಲಿ ಸಾಧ್ಯವಿಲ್ಲ ಎಂದು ಸಂಸದ ಎಚ್‌.ವಿಶ್ವನಾಥ್‌ ಅಭಿಪ್ರಾಯಪಟ್ಟರು.

ಮೈಸೂರು ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆ ಬಯಸಿ  ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕಾಗಿನೆಲೆಯಲ್ಲಿ ಕುಲದೇವರಿಗೆ ಪೂಜೆ ಸಲ್ಲಿಸಿ ಮೈಸೂರಿಗೆ ವಾಪಸ್‌ ತೆರಳುವ ಮಾರ್ಗಮಧ್ಯೆ ಬೀರೂರಿನಲ್ಲಿ ಕಾಂಗ್ರೆಸ್‌ ಮುಖಂಡ ಮಹೇಶ್‌ ಒಡೆಯರ್‌ ಮನೆಯಲ್ಲಿ ಪತ್ರಕರ್ತರೊಂದಿಗೆ ಬುಧವಾರ ಅವರು ಮಾತನಾಡಿದರು.

ಕೇಂದ್ರದ ಯುಪಿಎ ಸರ್ಕಾರ ಕಳೆದ ಒಂದು ದಶಕದಲ್ಲಿ ಕೃಷಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ, ಔದ್ಯೋ­ಗಿಕ, ಕೈಗಾರಿಕೆ, ವಿದೇಶಾಂಗ ವ್ಯವಹಾರಗಳೂ ಸೇರಿ­ದಂತೆ ಎಲ್ಲ ರಂಗಗಳಲ್ಲಿ ಗಣನೀಯ ಸಾಧನೆ ಮೆರೆದಿದೆ. ಆದರೆ ಅಂಗಪಕ್ಷಗಳು ನಡೆಸಿದ ಭ್ರಷ್ಟಾಚಾರದ ಹೊರೆಯನ್ನು ಕಾಂಗ್ರೆಸ್‌ ಪಕ್ಷ ಹೊರಬೇಕಾಗಿ ಬಂದಿದ್ದು ವಿಷಾದನೀಯ ಎಂದು ಪರೋಕ್ಷವಾಗಿ ಡಿಎಂಕೆ ಪಕ್ಷವನ್ನು ದೂರಿದರು.

ಭ್ರಷ್ಟಾಚಾರವನ್ನು ವಿಷಯವಾಗಿಸಿ ಯಾರೇ ಮಾತ­ನಾಡಿದರೂ ಆತ್ಮವಂಚನೆ ಮಾಡಿಕೊಂಡಂತೆ ಎಂದು ಸೂಚ್ಯವಾಗಿ ಅರವಿಂದ ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ­ಯವರನ್ನು ಟೀಕಿಸಿದ ಅವರು ಬಾಯಿಮಾತಿನ ಬಡಾಯಿ ಮೂಲಕ ಭ್ರಷ್ಟಾಚಾರ ತೊಲಗಿಸಲು ಸಾಧ್ಯವಿಲ್ಲ. ಭ್ರಷ್ಟರನ್ನು ಮಟ್ಟ ಹಾಕಲು ಕಾಯ್ದೆ ರೂಪಿಸಿದ್ದು ಕಾಂಗ್ರೆಸ್‌ ಪಕ್ಷ, ಮಾಹಿತಿ ಹಕ್ಕಿನ ಮೂಲಕ ಭ್ರಷ್ಟರ ವೇಷ ಕಳಚಲು ಸಾರ್ವಜನಿಕರಿಗೆ ಅವಕಾಶ ಒದಗಿಸಿದ್ದೂ ಕಾಂಗ್ರೆಸ್‌ ಪಕ್ಷ. ಸಾಮಾಜಿಕ ನ್ಯಾಯ ನೀಡಲು ಮತ್ತು ಸಮಾಜವನ್ನು ತಿದ್ದಲು ಮನಃಪೂರ್ವಕವಾಗಿ ಶ್ರಮಿಸಿದ ಬಸವಣ್ಣನವರ ಕಾಲ­ದ­ಲ್ಲಿಯೂ ಭ್ರಷ್ಟಾಚಾರ ಇತ್ತು. ಅದರಿಂದ ಒಮ್ಮೆಲೇ ಯಾವುದನ್ನೂ ನಿವಾರಿಸುತ್ತೇವೆ ಅಥವಾ ಸುಧಾರಿಸುತ್ತೇವೆ ಎಂಬುದು ಕಷ್ಟದ ಮಾತು ಎಂದರು.

ಗುಜರಾತ್‌ನ ಅಭಿವೃದ್ಧಿ ಮಾದರಿಯೇ ದೇಶದ ಅಭಿವೃದ್ಧಿಯ ದಿಕ್ಸೂಚಿ ಎಂಬಂತೆ ಬಿಂಬಿಸಲಾಗಿತ್ತಿರುವ ಸಮಯ­ದಲ್ಲಿ ನರೇಂದ್ರಮೋದಿ ಉತ್ತರಪ್ರದೇಶದಿಂದ ಕಣಕ್ಕಿಳಿಯಲು ಮುಂದಾಗಿರುವುದೇಕೆ? ಎಂದು ಪ್ರಶ್ನಿಸಿದ ಅವರು ಇದು ಬಿಜೆಪಿಯ ಬಂಡವಾಳ ಬಯಲು ಮಾಡುತ್ತಿದೆ. ಕಾಂಗ್ರೆಸ್‌ ಜಾತಿಗಿಂತ ನೀತಿಮುಖ್ಯ ಎಂದು ಬಿಂಬಿಸಿದರೆ ಬಿಜೆಪಿ ನೀತಿಗಿಂತ ಜಾತಿಮುಖ್ಯ ಎಂದು ಪ್ರತಿಪಾದಿಸಿ ಜನರಲ್ಲಿ ಒಡಕು ಉಂಟು ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

‘ಪಕ್ಷದ ಹಿರಿಯ ಮುಖಂಡ ಜಾಫರ್‌ ಷರೀಫ್‌ ಅವರಿಗೆ ಪಕ್ಷ ಎಲ್ಲ ಸ್ಥಾನ ಮಾನ ನೀಡಿ ಗೌರವಿಸಿದೆ. ಅವರು ಪಕ್ಷ ತ್ಯಜಿಸುವುದು ಕೇವಲ ವದಂತಿ, ಈ ಕುರಿತು ಪಕ್ಷದ ವರಿಷ್ಠರು ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇನ್ನು ಮೈಸೂರು ಕ್ಷೇತ್ರದಲ್ಲಿ ತಮ್ಮ ಸಾಧನೆಯೇ ತಮಗೆ ಶ್ರೀರಕ್ಷೆಯಾಗಿದ್ದು, ಎದುರಾಳಿ ಯಾರು ಎಂಬ ಬಗ್ಗೆ ನಾನು ಚಿಂತಿಸುವುದಿಲ್ಲ. ಈ ಬಾರಿಯೂ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಎಲ್ಲ ಸಮೀಕ್ಷೆಗಳೂ ಹುಸಿಹೋಗಲಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಉತ್ತಮ ರೀತಿಯ ಕೆಲಸಗಳನ್ನು ಮಾಡುತ್ತಿರುವ ಸಿದ್ದರಾಮಯ್ಯನವರ ಕಾರ್ಯವೈಖರಿಗೆ ಮತದಾರರು ಉತ್ತಮ ಫಲಿತಾಂಶ ನೀಡಲಿದ್ದು ಡಿ.ಕೆ.ಶಿವಕುಮಾರ್‌ ಪ್ರಕರಣ ಕಾನೂನಿಗೆ ಸಂಬಂಧಿಸಿದ್ದು. ಇದಕ್ಕೂ ಅಭಿವೃದ್ಧಿ ಕಾರ್ಯಗಳಿಗೂ ಸಂಬಂಧವಿಲ್ಲ’ ಎಂದು ಪತ್ರಕ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಶ್ವನಾಥ್‌ ಅವರೊಂದಿಗೆ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ, ಬೀರೂರು ಬ್ಲಾಕ್‌ ಅಧ್ಯಕ್ಷ ಕೆ.ಎಂ.­ವಿನಾಯಕ, ಕಡೂರು ಬ್ಲಾಕ್‌ ಅಧ್ಯಕ್ಷ ಎಂ.ಎಚ್‌.ಚಂದ್ರಪ್ಪ, ಯುವಕಾಂಗ್ರೆಸ್‌ ರಾಜ್ಯ ಪ್ರಧಾನಕಾರ್ಯದರ್ಶಿ ಕೆ.ಎಸ್‌.­ಆನಂದ್‌, ಜಿಲ್ಲಾ ಕಾರ್ಯದರ್ಶಿ ಮಹೇಶ್‌ ಒಡೆಯರ್‌, ಎಂ.ರಾಜಪ್ಪ,ಕೆ.ಜಿ.ಶ್ರೀನಿವಾಸ್‌, ಪುರಸಭೆ ಸದಸ್ಯರಾದ ಮುಕ್ತಿಯಾರ್‌, ವಿಜೇಂದ್ರಬಾಬು, ಜಯಣ್ಣ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT