ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಧಾರಿತ ಕೃಷಿ ತಂತ್ರಜ್ಞಾನ ಬಳಸಿ’

Last Updated 9 ಡಿಸೆಂಬರ್ 2013, 5:50 IST
ಅಕ್ಷರ ಗಾತ್ರ

ರಾಮದುರ್ಗ: ‘ಕೃಷಿಯಲ್ಲಿ ರೈತರು ಅಭಿವೃದ್ಧಿ ಹೊಂದಲು ಸುಧಾರಿತ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ನೀರಿನ ಮಿತ ಬಳಕೆ ಮಾಡಿ ಹೆಚ್ಚಿನ ಬೆಳೆ ಬೆಳೆಯಲು ರೈತರು ಮುಂದಾಗಬೇಕು’ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಕಟಕೋಳ ಗ್ರಾಮದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡ  ‘ಕೃಷಿ ಉತ್ಸವ’ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಮಾಡಬೇಕಾದ ಹಲ­ವಾರು ಕಾರ್ಯಕ್ರಮಗಳನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಯೋಜನೆಯಡಿ ರಚಿತವಾಗಿರುವ ಸ್ವಸಹಾಯ ಸಂಘಗಳು ನಿಯಮಿತ­ವಾಗಿ ಉಳಿತಾಯದ ಜೊತೆಗೆ ಬ್ಯಾಂಕು­ಗಳಿಂದ ಪಡೆದ ಸಾಲವನ್ನು ಪ್ರಾಮಾ­ಣಿಕ­ವಾಗಿ ಮರುಪಾವತಿ ಮಾಡುತ್ತಿ­ರುವುದು ಉಳಿದ ಸ್ವ ಸಹಾಯ ಸಂಘ­ಗಳಿಗೆ ಮಾದರಿಯಾಗಿದ್ದು, ಬ್ಯಾಂಕ­ಗಳಿಂದ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಮರುಪವಾತಿ ಮಾಡಿದರೆ ಸಂಘಗಳು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿದ ಶಿವಸಾಗರ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಪಾಟೀಲ ಮಾತನಾಡಿ, ಕೃಷಿಯಲ್ಲಿ ಹೆಚ್ಚಿನ ಬೆಳೆ ಬೆಳೆಯ ಬೇಕಾದರೆ ರೈತರು ವೈಜ್ಞಾನಿ­ಕವಾಗಿ ವಿಚಾರ ಮಾಡಬೇಕು ಜೊತೆಗೆ ಹೊಸ ಹೊಸ ಆವಿಷ್ಕಾರಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ ಜಿಲ್ಲಾ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಯೋಜನೆಯಡಿ ಜಿಲ್ಲೆಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರಿಗೆ ಬ್ಯಾಂಕ್‌ ವ್ಯವಹಾರ ಮತ್ತು ಎಟಿಎಂ ಕಾರ್ಡ್‌ ಬಳಕೆ ಮಾಡುವಂತೆ ಮಾಡಿದೆ ಎಂದು ತಿಳಿಸಿದರು. ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ತೊರಗಲ್‌ ಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಪಾರಶೆಟ್ಟಿ, ತಾ.ಪಂ ಸದಸ್ಯ ಮಹೇಶ ದೇಸಾಯಿ, ಸಹಾಯಕ ಕೃಷಿ ನಿರ್ದೇಶಕ ಆರ್.ಡಿ. ಕಟಗಲ್, ಮರಿತಮ್ಮಪ್ಪ ಲಠ್ಠಿ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ವೈ. ಪ್ರಕಾಶ ಸ್ವಾಗತಿಸಿದರು. ಸುಮಂಗಲಾ ಕಳಸಪ್ಪನವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT