ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇತುವೆಯನ್ನೇ ಕೊಟ್ಟಿಲ್ಲ–ಹೇಗೆ ಅಣೆಕಟ್ಟು ಕಟ್ಟುತ್ತಾರೆ’

ಎತ್ತಿನಹೊಳೆ ಯೋಜನೆ: ಸ್ಥಳೀಯರನ್ನು ಕತ್ತಲಲ್ಲಿಟ್ಟ ಸರ್ಕಾರ
Last Updated 19 ಸೆಪ್ಟೆಂಬರ್ 2013, 10:02 IST
ಅಕ್ಷರ ಗಾತ್ರ

ಮಂಗಳೂರು: ಎತ್ತಿನಹೊಳೆ ಯೋಜನೆಯ ಬಗ್ಗೆ ರಾಜ್ಯದ ಕರಾವಳಿ ಜಿಲ್ಲೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸರ್ಕಾರ ಈ ಯೋಜನೆಗಾಗಿ ಪಶ್ಚಿಮ ಘಟ್ಟದ ಹೊಳೆಗಳಿಗೆ ಒಡ್ಡು ನಿರ್ಮಿಸುವ ಕಡೆಗಳಲ್ಲಿ ಸ್ಥಳೀಯರನ್ನೂ ಕತ್ತಲಲ್ಲಿಟ್ಟದೆ. ಸ್ಥಳೀಯರಿಗೆ ಈ ಯೋಜನೆ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂ­ಕಿನಲ್ಲಿ ಹರಿಯುವ ಎತ್ತಿನಹೊಳೆಗೆ ಮೂರು ಕಡೆ, ಹೊಂಗದಹಳ್ಳ ಹೊಳೆ ಮತ್ತು ಕೀರಿ ಹೊಳೆಗೆ ತಲಾ ಒಂದು ಕಡೆ, ಕಾಡುಮನೆ ಹೊಳೆಗೆ ಮೂರು ಕಡೆ ಸೇರಿ ಒಟ್ಟು ಎಂಟು ಕಡೆ ಒಡ್ಡುಗಳನ್ನು ಕಟ್ಟಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪೂರೈಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಯೋಜನೆಗೆ ಬಜೆಟ್‌ನಲ್ಲಿ ₨ 1 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟು, ಶಂಕುಸ್ಥಾಪನೆಗೆ ಸಿದ್ಧತೆ ನಡೆಸುತ್ತಿರುವ ಸರ್ಕಾರ ಒಡ್ಡುಗಳು ನಿರ್ಮಾಣಗೊಳ್ಳಲಿರುವ ಗ್ರಾಮದ ಜನತೆಗೆ ಇನ್ನೂ ಮಾಹಿತಿಯನ್ನೇ ನೀಡಿಲ್ಲ.

ಒಡ್ಡು ನಿರ್ಮಾಣವಾಗಲಿರುವ ಎತ್ತಿನ­ಹೊಳೆ ಆಸುಪಾಸಿನ ಆಲುವಳ್ಳಿ, ಕಡಗರವಳ್ಳಿ ಪ್ರದೇಶದ ರೈತರು, ‘ನಮಗಿನ್ನೂ ಈ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೇತುವೆಯೇ ಕಟ್ಟಿಲ್ಲ– ಎಲ್ಲಿಯ ಅಣೆಕಟ್ಟೆ: ‘ಕೀರಿ ಹೊಳೆಗೆ ಸೇತುವೆ ಕಟ್ಟಿದರೆ ಇಲ್ಲಿನ 200ಕ್ಕೂ ಅಧಿಕ ಮನೆಗಳಿಗೆ ಪ್ರಯೋಜನ­ವಾಗುತ್ತದೆ. ಇಷ್ಟು ವರ್ಷವಾದರೂ ಸೇತು­ವೇನೆ ಕಟ್ಟಿಲ್ಲ. ನಮ್ಮೂರಿನ ಮಣ್ಣಿನ ರಸ್ತೆ ಅಧ್ವಾನ­ವಾಗಿ ಜೀಪು ಕೂಡಾ ಸಾಗದಂ­ತಾಗಿದೆ. ಮೂಲ ಸೌಕರ್ಯವನ್ನೇ ಕೊಡದ ಸರ್ಕಾರ, ಅದು ಹೇಗೆ ಅಣೆಕಟ್ಟನ್ನು ಕಟ್ಟು­ತ್ತದೆ’ ಎಂದು ಪ್ರಶ್ನಿಸುತ್ತಾರೆ ಕಡಗರವಳ್ಳಿಯ ಗುರುವ.
‘ನಮಗೆ 2 ಎಕರೆ ಜಮೀನಿದೆ. ಇಲ್ಲಿ ಅಣೆಕಟ್ಟೆ ಆಗುತ್ತದೆ ಎಂದು ಕಳೆದ 25 ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಈ ಗೊಂದಲದಿಂದಾಗಿ ಏಲಕ್ಕಿ, ಕಾಫಿ ಗಿಡಗಳನ್ನು ಬೆಳೆಸುವುದಕ್ಕೂ ಹೆದರಿಕೆ ಆಗುತ್ತದೆ. ಈ ಯೋಜನೆಗೆ ನಮ್ಮ ವಿರೋಧವಿದೆ’ ಎನ್ನುತ್ತಾರೆ ಕಡಗರವಳ್ಳಿಯ ದೇವರಾಜ್‌.

‘ನಮ್ಮ ಜಮೀನಿನಲ್ಲಿ ವರ್ಷದ ಹಿಂದೆ ಅಧಿ­ಕಾರಿಗಳು ಬಂದು ಸರ್ವೇ ನಡೆಸಿದ್ದರು. ಬಳಿಕ ಸರ್ಕಾರದಿಂದ ಯಾವ ಮಾಹಿತಿಯೂ ಬಂದಿಲ್ಲ. ಕೃಷಿ ಜಮೀನನ್ನು ಬಿಟ್ಟುಕೊಡಲು ನಮಗೆ ಇಷ್ಟವಿಲ್ಲ’ ಎನ್ನುತ್ತಾರೆ ಹೊಂಗದ­ಹಳ್ಳದ ದೇವಕಿ. ‘ಇಲ್ಲಿ ಅಣೆಕಟ್ಟು ಕಟ್ಟುವ ವಿಚಾರ ತಿಳಿ­ದದ್ದು ಮಾಧ್ಯಮಗಳಿಂದಲೇ. ಗ್ರಾಮ ಸಭೆ­ಯಲ್ಲೂ ಈ ಬಗ್ಗೆ ವಿಚಾರಿಸಿದಾಗ, ಅಧಿಕಾರಿ­ಗಳು ನಮಗೂ ಮಾಹಿತಿ ಇಲ್ಲ ಎಂದಿದ್ದಾರೆ’ ಎಂದು ಆಲುವಳ್ಳಿಯ ದೊಡ್ಡಪ್ಪ ಗೌಡ ತಿಳಿಸಿದರು. ರಾಜ್ಯದ ಜಿಲ್ಲೆಗಳ ಜನರನ್ನು ಎತ್ತಿಕಟ್ಟುವ ಯೋಜನೆ­ಯನ್ನು ಕೈಬಿಡಬೇಕು ಎಂದು ಪರಿಸರ ಹೋರಾ­ಟಗಾರ ಹೆತ್ತೂರು ದೇವರಾಜ್‌ ಆಗ್ರಹಿಸಿದರು.

ರಾಜಸ್ತಾನದಲ್ಲಿ ರಾಜೇಂದ್ರ ಸಿಂಗ್‌ ಹಾಗೂ ಲಕ್ಷ್ಮಣ್‌ ಸಿಂಗ್‌ ಅವರು ನದಿಗೆ ಮರುಜೀವ ನೀಡಿದ ಪ್ರಯತ್ನ ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲೂ ನಡೆಯಬೇಕು ಎಂಬುದು ಹಾಸನದ ಸಿಪಿಐ ಕಾರ್ಯದರ್ಶಿ ಎಂ.ಸಿ.ಡೋಂಗ್ರೆ ಅವರ ಆಶಯ.

‘ಎತ್ತಿನಹೊಳೆ ಪಶ್ಚಿಮವಾಹಿನಿ ನದಿ’
‘ಒಡ್ಡು ನಿರ್ಮಾಣವಾಗಲಿರುವ ಎತ್ತಿನ ಹೊಳೆ, ಕೀರಿ ಹೊಳೆ, ಕಾಡುಮನೆ ಹೊಳೆ, ಹೊಂಗಡಹಳ್ಳ ಇವೆಲ್ಲವೂ ನೇತ್ರಾವತಿಯ ಉಪನದಿಗಳೇ. ಇವ್ಯಾವುದೂ ಪೂರ್ವಕ್ಕೆ ಹರಿಯುವ ತೊರೆಗಳಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನತೆಯಿಂದ ವಿರೋಧ ವ್ಯಕ್ತ ಆಗಬಹುದು ಎಂಬ ಭೀತಿಯಿಂದ ಸರ್ಕಾರ ಇವೆಲ್ಲವೂ ಪೂರ್ವಕ್ಕೆ ಹರಿಯುವ ಹೊಳೆಗಳು ಎಂದು ಬಿಂಬಿಸಿದೆ. ನೇತ್ರಾವತಿ ತಿರುವು ಯೋಜನೆಯ ಹೆಸರನ್ನು ‘ಸಕಲೇಶಪುರದ (ಪಶ್ಚಿಮ) ಪ್ರವಾಹದ ನೀರನ್ನು ಕೋಲಾರ/ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ (ಪೂರ್ವ) ತಿರುಗಿಸುವ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ’ ಎನ್ನುತ್ತ್ತಾರೆ ಪಶ್ಚಿಮಘಟ್ಟ ಉಳಿಸುವ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ  ಕಿಶೋರ್‌ ಕುಮಾರ್‌.

‘ಅನೇಕ ನದಿಗಳ ಉಗಮ ಸ್ಥಾನವಾಗಿರುವ ಪಶ್ಚಿಮಘಟ್ಟ ತುಂಬಾ ಸೂಕ್ಷ್ಮ ಪ್ರದೇಶ. ವಿಶ್ವದ ಅತ್ಯಪರೂಪದ ಎಂಟು ಪರಿಸರ ತಾಣಗಳಲ್ಲಿ ಇದೊಂದು. ಇಲ್ಲಿನ ಸಿಂಹ ಬಾಲದ ಸಿಂಗಳೀಕ, ಸಿಲೋನ್‌ ಕಪ್ಪೆ ಬಾಯಿ ಹಕ್ಕಿ ಮೊದಲಾದ ವನ್ಯಜೀವಿಗಳು ವಿಶ್ವದ ಬೇರೆಲ್ಲೂ ಸಿಗದವು. ಅವು ಈಗಾಗಲೇ ಅಪಾಯದ ಅಂಚಿನಲ್ಲಿವೆ. ಇಂತಹ ಪರಿಸರ ಮಾರಕ ಯೋಜನೆಗಳು ಪಶ್ಚಿಮ ಘಟ್ಟವನ್ನು ನಿರ್ನಾಮ ಮಾಡಲಿವೆ. ಆನೆ ಹಾವಳಿಯಿಂದ ಸಕಲೇಶಪುರ ತಾಲ್ಲೂಕಿನ ರೈತರು ತತ್ತರಿಸಿದ್ದಾರೆ. ಈ ಯೋಜನೆ ಆನೆ ಹಾವಳಿ ಮತ್ತಷ್ಟು ಹೆಚ್ಚುವುದಕ್ಕೆ ಕಾರಣವಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT