ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪೀಕ್‌ ಏಷ್ಯಾ’ ಪ್ರವರ್ತಕ ಬಂಧನ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ರೂ 2,200 ಕೋಟಿ ಮೊತ್ತದ ಅಂತರ್ಜಾಲ ಮಾರ್ಕೆಟಿಂಗ್‌ ಹಗರಣದ ಮೂವರು ರೂವಾರಿಗಳಲ್ಲಿ ಒಬ್ಬನಾದ ‘ಸ್ಪೀಕ್‌ ಏಷ್ಯಾ’ ಸಂಸ್ಥೆಯ ಪ್ರವರ್ತಕ  ರಾಮ್‌ ನಿವಾಸ್‌ ಪಾಲ್‌ನನ್ನು ದೆಹಲಿ ಪೊಲೀಸರು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಬಂಧಿಸಿದ್ದಾರೆ.

ಹೆಚ್ಚಿನ ಆದಾಯದ ಆಮಿಷ ಒಡ್ಡಿ ದೇಶದ 24 ಲಕ್ಷಕ್ಕೂ ಅಧಿಕ ಜನರನ್ನು ಅಂತರ್ಜಾಲ ಮಾರುಕಟ್ಟೆ ಸಮೀಕ್ಷಾ ಸಂಸ್ಥೆಯಾದ ‘ಸ್ಪೀಕ್‌ ಏಷ್ಯಾ’ ವಂಚಿಸಿತ್ತು.  ಭಾರತ ಹೊರತಾಗಿ ಇಟಲಿ ಮತ್ತು ಬ್ರೆಜಿಲ್‌ನಲ್ಲೂ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು.

ಉತ್ತರ ಪ್ರದೇಶ ಷಹಜಾನ್‌ಪುರ ನಿವಾಸಿಯಾಗಿರುವ ಪಾಲ್‌, ಅಭಯ್‌ ಸಿಂಗ್‌ ಚಂದೇಲ್‌ ಎಂಬ ನಕಲಿ ಹೆಸರಿ­ನಿಂದ ಬೆಂಗಳೂರಿನಲ್ಲಿ ತಲೆ ಮರೆಸಿ­ಕೊಂಡಿದ್ದ. ಗುರುತು ಪತ್ತೆಯಾಗದಿರ­ಲೆಂದು ವೇಷವನ್ನೂ ಬದಲಾಯಿಸಿ­ಕೊಂಡಿದ್ದ.
ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಾಲ್‌ನ ತಮ್ಮ, ರಾಮ್‌ ಸುಮಿರನ್‌ ಪಾಲ್‌ನನ್ನು  ಕಳೆದ ವಾರ ನವದೆಹಲಿಯಲ್ಲಿ ಬಂಧಿಸಿದ್ದರು.

ಆತ ನೀಡಿದ್ದ ಸುಳಿವಿನ ಮೇರೆಗೆ ಆರು ಸದಸ್ಯರ ಪೊಲೀಸ್‌ ತಂಡ ಬೆಂಗಳೂರಿಗೆ ತೆರಳಿ ರಾಮ್ ನಿವಾಸ್‌ ಪಾಲ್‌ನನ್ನು ಬಂಧಿಸಿದೆ. ಪ್ರಕರಣದ ಮೂರನೇ ಆರೋಪಿ ಮನೋಜ್‌ ಕುಮಾರ್‌ ಶರ್ಮಾನನ್ನು ಇನ್ನಷ್ಟೇ ಪತ್ತೆಹಚ್ಚ ಬೇಕಿದೆ.

‘ಪಾಲ್‌ ಸ್ಪೀಕ್‌ ಏಷ್ಯಾ ಹಗರಣದ ಪ್ರಮುಖ ರೂವಾರಿ. ಆತ ಬೆಂಗಳೂರಿ­ನಲ್ಲಿ ನೆಲೆಸಿರುವ ಬಗ್ಗೆ ನಮಗೆ ಮಾಹಿತಿ ಇತ್ತು’ ಎಂದು ದೆಹಲಿಯ ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ ಮತ್ತು ರೈಲ್ವೆ) ರವೀಂದ್ರ ಯಾದವ್‌ ಹೇಳಿದರು.

ನವೆಂಬರ್‌ 25ಕ್ಕೆ ಬೆಂಗಳೂರಿಗೆ ತೆರಳಿದ್ದ ಪೊಲೀಸರ ತಂಡ, ಆತ ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಮನೆಯಲ್ಲಿ ಇದ್ದುದನ್ನು ಪತ್ತೆಹಚ್ಚಿದ್ದರು. ನವೆಂಬರ್‌ 30ರಂದು ಆತನ ಮನೆ ಮೇಲೆ ದಾಳಿ ನಡೆಸಿದ್ದರು. ಪಾಲ್‌ ತನ್ನ ಪತ್ನಿ ಹಾಗೂ ಎಂಟು ತಿಂಗಳ ಪುತ್ರನೊಂದಿಗೆ ಮನೆ­ಯ­ಲ್ಲಿದ್ದ. ಮತದಾರರ ಗುರುತಿನ ಚೀಟಿಯ ಆಧಾರದಲ್ಲಿ ಆರೋಪಿಯ ಗುರುತನ್ನು ಪತ್ತೆ ಹಚ್ಚಲಾಯಿತು ಎಂದು ಅವರು ತಿಳಿಸಿದರು.

ನಂತರ ಪಾಲ್‌ನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, ದೆಹಲಿಗೆ ಕರೆ­ದೊ­ಯ್ಯಲು ಅನುಮತಿ ಪಡೆಯಲಾಯಿತು ಎಂದು ಹೇಳಿದರು.

ಬೆಂಗಳೂರಿನಲ್ಲಿ ಪಾಲ್‌ ಮಲೇಷ್ಯಾ ಮೂಲದ ಐಟಿ ಕಂಪೆನಿಗೆ ವ್ಯವಹಾರ ಯೋಜನೆಯೊಂದನ್ನು ಅಭಿವೃದ್ಧಿ ಪಡಿಸುತ್ತಿದ್ದ ಎಂದು ಹೇಳಲಾಗಿದೆ.

ಪಾಲ್‌ ಸೋದರರು, ಮತ್ತು ಶರ್ಮಾ ಪಾಲುದಾರಿಕೆಯ ಸ್ಪೀಕ್‌ ಏಷ್ಯಾ ಸಂಸ್ಥೆ ಸಿಂಗಪುರ­ದಲ್ಲಿ ನೋಂದಣಿ­ಯಾಗಿತ್ತು. ಇದು 2010ರಲ್ಲಿ ಭಾರತಕ್ಕೆ ಕಾಲಿಟ್ಟಿತ್ತು. ಇವರು ಸಿಂಗಪುರ, ಇಟಲಿ, ಬ್ರೆಜಿಲ್‌­ನಲ್ಲಿ ನೋಂದಣಿ­ಯಾಗಿದ್ದ ಹಲವು ಕಂಪೆನಿ­ಗಳಲ್ಲೂ ತೊಡಗಿಕೊಂಡಿದ್ದರು.

ಸ್ಪೀಕ್‌ ಏಷ್ಯಾ ಮತ್ತು ಹಗರಣ
ಸ್ಪೀಕ್‌ ಏಷ್ಯಾ ಸಂಸ್ಥೆಯು ₨11,000ಕ್ಕೆ ಗ್ರಾಹಕರಿಗೆ ಸದಸ್ಯತ್ವ ನೀಡುತ್ತಿತ್ತು.  ಬಹುರಾಷ್ಟ್ರೀಯ ಕಂಪೆನಿ­ಗಳು ನಡೆಸುವ ಆನ್‌ಲೈನ್‌ ಸಮೀಕ್ಷಾ ಅರ್ಜಿಗಳನ್ನು ಗ್ರಾಹಕರು ತುಂಬ­ಬೇಕಿತ್ತು. ಇದಕ್ಕೆ ಪ್ರತಿಯಾಗಿ ವಾರ್ಷಿಕ­ವಾಗಿ ₨52,000 ಮೊತ್ತ ನೀಡುವು­ದಾಗಿ ಸಂಸ್ಥೆ ಭರವಸೆ ನೀಡಿತ್ತು.

ಆರಂಭದಲ್ಲಿ ಬಂಡವಾಳ ಹೂಡಿದ್ದ ಕೆಲವರಿಗೆ ನಿಗದಿತ ಮೊತ್ತ ನೀಡಿದ ಕಂಪೆನಿ, 2011ರಲ್ಲಿ ತನ್ನ ಕಾರ್ಯಾ­ಚರಣೆ ಸ್ಥಗಿತಗೊಳಿಸಿತ್ತು. ಆ ಮೂಲಕ ಸಂಸ್ಥೆಯಲ್ಲಿ ಬಂಡವಾಳ ಹೂಡಿದ್ದ 24 ಲಕ್ಷ ಗ್ರಾಹಕರಿಗೆ ₨2,276 ಕೋಟಿ ವಂಚಿಸಿತ್ತು.

ಸಂಸ್ಥೆ ಬಾಗಿಲು ಮುಚ್ಚಿದ ಕೂಡಲೇ ಹಿರಿಯ ಅಧಿಕಾರಿಗಳು ತಲೆಮರೆಸಿ­ಕೊಂಡಿದ್ದರು. ಮುಂಬೈ, ಆಂಧ್ರ ಪ್ರದೇಶ, ಮಧ್ಯ ಪ್ರದೇಶಗಳಲ್ಲಿ  ಸ್ಪೀಕ್‌ ಏಷ್ಯಾ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT