ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಂತ್ರ್ಯಾನಂತರವೂ ದಲಿತರ ಮೇಲೆ ದೌರ್ಜನ್ಯ’

Last Updated 30 ಸೆಪ್ಟೆಂಬರ್ 2013, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಪುಣೆ ನಗರದ ಯರವಡ ಜೈಲಿನಲ್ಲಿ 1932ರ ಸೆ.24 ರಂದು ನಡೆದ ಪೂನಾ ಒಪ್ಪಂದದಿಂದ ಕೆಳಸ್ತರದ ಸಮುದಾಯಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳು ಸ್ವಾತಂತ್ರ್ಯಾನಂತರವೂ ಮುಂದು ವರಿದಿರುವುದು ಒಂದು ದೊಡ್ಡ ದುರಂತ’ ಎಂದು ಬಹುಜನ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯು  ‘ಪೂನಾ ಒಪ್ಪಂದ’ ಕರಾಳ ದಿನದ ನೆನಪಿನ ಅಂಗವಾಗಿ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್‌ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಪೂನಾ ಒಪ್ಪಂದಕ್ಕಾಗಿ ಅಂಬೇಡ್ಕರ್‌ ಅವರ ಮೇಲೆ ಒತ್ತಡ ಹೇರಲಾಯಿತು. ಅವರ ಮೇಲೆ ಒತ್ತಡ ಹೇರಲೆಂದೇ ಮಹಾತ್ಮ ಗಾಂಧೀಜಿ ಅವರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಗಾಂಧೀಜಿ ಅವರಿಗೂ ದಲಿತರಿಗೆ ಸಮಾನ ಅವಕಾಶ ನೀಡುವುದು ಒಪ್ಪಿತವಾಗಿರಲಿಲ್ಲ’ ಎಂದರು.

‘ಇಂದಿನ ರಾಜ್ಯ ಕಾಂಗ್ರೆಸ್‌ ಸರ್ಕಾರವು 30 ಕೆಜಿ ಅಕ್ಕಿ ನೀಡುವ ಬದಲು ಕೈ ತುಂಬ ಕೆಲಸ ನೀಡಲಿ. ಕೆಲಸಕ್ಕೆ ತಕ್ಕಂತೆ ವೇತನ ನೀಡಲಿ. ದಲಿತರು ಸ್ವಾಭಿಮಾನದಿಂದ ಬದುಕುವ ದಾರಿ ಮಾಡಿಕೊಡಲಿ. ಅವರಿಗೆ ಯಾರದೇ ಭಿಕ್ಷೆ ಬೇಕಾಗಿಲ್ಲ. ಶತಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಸಮುದಾಯಕ್ಕೆ ಅವರ ಹಕ್ಕು ದೊರೆಯಬೇಕು’ ಎಂದರು.

‘ಸರ್ಕಾರವು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಬೇಕು. ದಲಿತರಲ್ಲಿಯೂ ಪ್ರತಿಭೆಗಳಿವೆ. ಅದನ್ನು ಗುರುತಿಸಬೇಕು. ಅಲ್ಲದೇ, ಸರ್ಕಾರದ ಯಾವುದೇ ಪ್ರಮುಖ ಹುದ್ದೆಯಲ್ಲಿ ದಲಿತರಿಗೆ ಯಾವುದೇ ಸ್ಥಾನವನ್ನೂ ನೀಡಿಲ್ಲ. ಕಾಂಗ್ರೆಸ್‌ ಸರ್ಕಾರ ಎಂದಿಗೂ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್‌.ಮೋಹನ್‌ರಾಜ್‌ ಮಾತನಾಡಿ, ‘ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಿದವರನ್ನು ಮತ್ತು ಪಡೆದವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಬೇಕು. ಬಗರ್‌ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು’ ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT