ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣಕಾಸು ನಿರ್ವಹಣೆ: ಎಡವಿದ ಕಾಂಗ್ರೆಸ್’

ಬೆಳಗಾವಿ ವಿಧಾನಮಂಡಲ ಅಧಿವೇಶನ–2013: ಬರದ ನಡುವೆಯೂ ಆರ್ಥಿಕ ಸುಸ್ಥಿತಿ ಕಾಪಾಡಿದ ಬಿಜೆಪಿ: ಸದಾನಂದಗೌಡ
Last Updated 5 ಡಿಸೆಂಬರ್ 2013, 8:50 IST
ಅಕ್ಷರ ಗಾತ್ರ

ಸುವರ್ಣ ಸೌಧ (ಬೆಳಗಾವಿ): ಬರದ ಕಾಟ ಇಲ್ಲದಿದ್ದರೂ ರಾಜ್ಯದ ಹಣಕಾಸು ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಹಿನ್ನಡೆ ಅನುಭವಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ ವಾದಿಸಿದರು.

ಧನ ವಿನಿಯೋಗ ಲೆಕ್ಕಗಳನ್ನು ಸದನದ ಮುಂದಿಟ್ಟು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಪೂರಕ ಅಂದಾಜಿಗೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ ಅವರು ಭೀಕರ ಬರಗಾಲ ಇದ್ದರೂ ಕಳೆದ ಎರಡು ವರ್ಷ ಗಳಲ್ಲಿ ಬಿಜೆಪಿ ಸರ್ಕಾರ ಆರ್ಥಿಕವಾಗಿ ರಾಜ್ಯವನ್ನು ಸುಸ್ಥಿತಿಯಲ್ಲಿ ಇರಿಸಿತ್ತು. ಆದರೆ ಈ ಬಾರಿ ಸಾಕಷ್ಟು ಮಳೆ ಬಂದು ರಾಜ್ಯ ಸಮೃದ್ಧವಾಗಿದ್ದರೂ ಸಂಪನ್ಮೂಲ ಸಂಗ್ರಹಣೆ ಯಲ್ಲಿ ಸರ್ಕಾರ ಹಿಂದೆ ಬಿದ್ದಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿಯ ವರೆಗೂ ರಾಜ್ಯ ಸುಭಿಕ್ಷವಾಗಿದೆ. ಈ ಬಾರಿ ವಿದ್ಯುತ್ ಖರೀದಿಯ ಅಗತ್ಯ ಬೀಳುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ೨೦೧೧ರ ಎರಡನೇ ತ್ರೈವಾರ್ಷಿಕ ಅವಧಿಯಲ್ಲಿ ಶೇ ೪೫.೬ ತೆರಿಗೆ ಸಂಗ್ರಹವಾಗಿದ್ದರೆ ಕಳೆದ ವರ್ಷ ಈ ಅವಧಿಯಲ್ಲಿ ಈ ಮೊತ್ತ ಶೇ ೪೫ ಆಗಿತ್ತು. ಆದರೆ ಈ ವರ್ಷ ಕೇವಲ ಶೇ ೩೯.೭ ಆಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಂಥ ಹಣಕಾಸು ತಜ್ಞರು ಮುಖ್ಯಮಂತ್ರಿ ಆಗಿರುವಾಗಲೇ ಆರ್ಥಿಕ ಹಿನ್ನಡೆ ಕಂಡು ಬಂದಿರುವುದು ಗಂಭೀರ ವಿಷಯ. ಇದರಿಂದ ರಾಜ್ಯದ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ ಸದಾನಂದಗೌಡರು ಸಾಲ ಕಡಿತ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ, ವೆಚ್ಚ ಏರಿಕೆ ತಡೆಯುವುದಕ್ಕೂ ಸಾಧ್ಯ ವಾಗಲಿಲ್ಲ. ಆರ್ಥಿಕ ಸಮತೋಲನವನ್ನು ಕಾಪಾಡಲು, ಅಪವ್ಯಯ ತಡೆದು ಮಿತವ್ಯಯವನ್ನು  ಅಳವಡಿಸಿಕೊಳ್ಳಲು ಆಗಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.

ವಾಣಿಜ್ಯ ತೆರಿಗೆ ಸಂಗ್ರಹದಲ್ಲೂ ಗುರಿ ತಲುಪಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕಳೆದ ವರ್ಷ ಮೊದಲ ಆರು ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ ೪೯.೬೬ ಗುರಿ ತಲುಪಿದ್ದರೆ ೨೦೧೧ರಲ್ಲಿ ಈ ಮೊತ್ತ ಶೇ ೪೯.೨ ಆಗಿತ್ತು. ಈ ಬಾರಿ ಇದು ಶೇ ೪೫.೮೮ ಮಾತ್ರ ಆಗಿದೆ. ವಾಣಿಜ್ಯ ತೆರಿಗೆ ಸಂಗ್ರಹ, ಮೋಟಾರು ವಾಹನ ತೆರಿಗೆ, ಅಬಕಾರಿ ತೆರಿಗೆ ಇತ್ಯಾದಿ ಎಲ್ಲ ವಿಷಯ ದಲ್ಲೂ ಸರ್ಕಾರದ ಆಮೆ ನಡಿಗೆ ಮುಂದುವರಿದಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT