ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣುಭ್ರೂಣ ಹತ್ಯೆ ನಿಯಂತ್ರಿಸಲು ಕೈಜೋಡಿಸಿ’

Last Updated 7 ಡಿಸೆಂಬರ್ 2013, 8:41 IST
ಅಕ್ಷರ ಗಾತ್ರ

ಹಾಸನ: ‘ಸಮಾಜದಲ್ಲಿ ಹೆಣ್ಣು ಗಂಡಿಗೆ ಸಮಾನಳು ಎಂಬ ಭಾವನೆ ಮೂಡಿಸಿ, ಹೆಣ್ಣುಭ್ರೂಣ ಹತ್ಯೆ ತಡೆಗಟ್ಟಲು ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜೆ.ಎಸ್‌. ಸೋಮಶೇಖರ್‌ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗಂಡು ಮಗು ಬೇಕೆನ್ನುವ ಹಂಬಲದಿಂದ ಈಗಲೂ ಅನೇಕ ಮಂದಿ ಹೆಣ್ಣುಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಭಾರತದಲ್ಲಿ 1991ರಲ್ಲಿ ಒಂದು ಸಾವಿರ ಪುರುಷರಿಗೆ 972 ಮಹಿಳೆಯರು ಇದ್ದರು. 2001ರಲ್ಲಿ ಮಹಿಳೆಯರ ಪ್ರಮಾಣ 942ಕ್ಕೆ ಇಳಿದಿದೆ. ರಾಜ್ಯದಲ್ಲಿ ಮಹಿಳೆಯರ ಪ್ರಮಾಣ 963ಕ್ಕೆ ಇಳಿದಿದ್ದು, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಲಿಂಗಾನುಪಾತದ ವ್ಯತ್ಯಾಸ ಇನ್ನೂ ಹೆಚ್ಚಾಗಿದೆ. ಈ ಸ್ಥಿತಿ ಮುಂದುವರಿದರೆ ಸಾಮಾಜಿಕ ಸುವ್ಯವಸ್ಥೆ ಹಾಳಾಗಲಿದೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್‌.ಎ. ಮುಸ್ತಫ ಹುಸೇನ್, ‘ತಾಯಿ ಗರ್ಭದಲ್ಲಿರುವ ಮಗುವಿಗೂ ಕಾನೂನಿಲ್ಲಿ ಬದುಕುವ ಹಕ್ಕನ್ನು ನೀಡಲಾಗಿದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರ, ಪ್ರಯೋಗಾಲಯ ಮುಂದಾದವು ಈ ಹಕ್ಕನ್ನು ಕಸಿಯುವ ಕೇಂದ್ರಗಳಾಗಬಾರದು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ. ಶ್ಯಾಮಲಾದೇವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಎಚ್.ಎಲ್. ಜನಾರ್ದನ, ಪಿ.ಎನ್.ಡಿ.ಟಿ. ಉಪ ನಿರ್ದೇಶಕಿ ಡಾ.ರಾಹತ್- ಎ-ಜಾನ್ -ಶೇಖ್, ಪಿ.ಎನ್‌.ಡಿ.ಟಿ ಕಾನೂನು ಸಲಹೆಗಾರರಾದ ರಾಜೇಶ್ವರಿ ದೇವಿ, ಫಾಗ್ಸಿ ಅಧ್ಯಕ್ಷೆ ಡಾ. ಲೀಲಾವತಿ ಜನಾರ್ದನ, ಪಿ.ಎನ್.ಡಿ.ಟಿ. ಸಲಹಾ ಮಂಡಳಿ ಅಧ್ಯಕ್ಷ ಡಾ. ಲಕ್ಷ್ಮಿಕಾಂತ್, ರಾಷ್ಟ್ರೀಯ ಐ.ಎಂ.ಎ. ಸದಸ್ಯ ಡಾ. ನಾಗರಾಜ್, ಡಾ. ಗುರುರಾಜ್ ಹೆಬ್ಬಾರ್, ಡಾ. ವಿಜಯೇಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಬ್ಬೀರ್ ಅಹಮದ್ ಇತರರು ಹಾಜರಿದ್ದರು.


ಜಾಗೃತಿ ಜಾಥಾ ನಾಳೆ
ಹೊಳೆನರಸೀಪುರ: ‘ನೀರನ್ನು ಮಿತವಾಗಿ ಬಳಸಿ, ನೀರನ್ನು ಉಳಿಸಿ‘ ಎಂಬ ಜಾಗೃತಿ ಕಾರ್ಯಕ್ರಮವನ್ನು ಪಟ್ಟಣದ ಪ್ರೇಮಾ ಮಹಿಳಾ ಸಮಾಜದ ವತಿಯಿಂದ ಡಿ. 8ರಂದು ಬೆಳಿಗ್ಗೆ 11 ಗಂಟೆಗೆ ಹೌಸಿಂಗ್‌ ಬೋರ್ಡ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಎಚ್‌.ವಿ. ಹರೀಶ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT