ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟದ ಬದುಕು ನನ್ನದು’

‘ಯು ವಿ ಕ್ಯಾನ್‌’ ಪ್ರತಿಷ್ಠಾನದ ಮೂಲಕ ಕ್ಯಾನ್ಸರ್‌ ಪತ್ತೆ ಅಭಿಯಾನ
Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಆ ಕೋಣೆಯಲ್ಲಿ ಸ್ವಲ್ಪ ಹೊತ್ತು ಮೌನ ನೆಲೆಸಿತ್ತು. ಆ ಮೌನದೊಳಗೆ ಭಾವುಕತೆ ತುಂಬಿತ್ತು. 28 ವರ್ಷಗಳ ಬಳಿಕ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಯುವರಾಜ್‌ ಸಿಂಗ್‌ ಅವರು ಕ್ಯಾನ್ಸರ್‌ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೆಲ ಕ್ಷಣಗಳ ವಿಡಿಯೋ ತುಣುಕುಗಳು ಕಣ್ಣೀರು ತರಿಸುವುದೊಂದೇ ಬಾಕಿ.

‘ಕ್ಯಾನ್ಸರ್‌ ಪತ್ತೆ ತಿಂಗಳು’ ಎಂಬ ಉಚಿತ ಶಿಬಿರ ಆಯೋಜಿಸು ತ್ತಿರುವ ಇಂಡಿಯನ್‌ ಕ್ಯಾನ್ಸರ್‌ ಸೊಸೈಟಿ ಹಾಗೂ ಕರ್ನಾಟಕ ಕ್ಯಾನ್ಸರ್‌ ಸೊಸೈಟಿ ಜೊತೆ ‘ಯು ವಿ ಕ್ಯಾನ್‌’ ಪ್ರತಿಷ್ಠಾನ ಕೂಡ ಕೈ ಜೋಡಿಸಲು ಮುಂದಾದ ಕಾರ್ಯಕ್ರಮವದು.

ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರುವ ಯುವರಾಜ್‌ ಅವರು ಈ ಸಮಸ್ಯೆಗೆ ಒಳಗಾಗಿರುವ ವ್ಯಕ್ತಿಗಳಿಗೆ ನೆರವು ನೀಡಲು ಸ್ಥಾಪಿಸಿರುವ ಪ್ರತಿಷ್ಠಾನವೇ ‘ಯು ವಿ ಕ್ಯಾನ್‌’. ಈ ಶಿಬಿರಕ್ಕೆ ಈ ಪ್ರತಿಷ್ಠಾನ ಧನ ಸಹಾಯ ಮಾಡುತ್ತಿದೆ.

ಯುವಿ ಅಮೆರಿಕದ ಬೋಸ್ಟನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೀತಿ, ದುಃಖದಿಂದ ಬಿಕ್ಕಳಿಸುತ್ತಿದ್ದ ಕ್ಷಣಗಳು, ಅಮ್ಮ ಶಬ್ನಮ್‌ ಸಿಂಗ್‌ ಅವರ ಆರೈಕೆ... ಹೀಗೆ ಭಾವುಕ ಕ್ಷಣಗಳು ಆ ವಿಡಿಯೋ ತುಣುಕಿನಲ್ಲಿ ಹರಿದು ಹೋದವು.

‘ನನ್ನದು ಹೋರಾಟದ ಬದುಕು. ಇಷ್ಟು ದಿನ ಹೋರಾಡಿದ್ದೇನೆ. ಅದು ಮುಂದೆಯೂ ಮುಂದುವರಿಯಲಿದೆ. ಕೈಚೆಲ್ಲಿ ಕೂರವ ಜಾಯಮಾನ ನನ್ನದಲ್ಲ. ಹಾಗೇ, ಮತ್ತೆ ಭಾರತ ತಂಡಕ್ಕೆ ಮರಳುವ ವಿಶ್ವಾಸ ನನ್ನದು. ಆದರೆ ಕ್ರಿಕೆಟ್‌ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅದಕ್ಕೆ ಇದು ವೇದಿಕೆ ಅಲ್ಲ’ ಎಂದು ಯುವರಾಜ್‌ ಶುಕ್ರವಾರ ಇಲ್ಲಿ ನುಡಿದರು.

ಹೆಚ್ಚುತ್ತಿರುವ ಕ್ಯಾನ್ಸರ್‌ ಸಮಸ್ಯೆ ಬಗ್ಗೆ  ಪ್ರತಿಕ್ರಿಯಿಸಿದ ಅವರು, ‘ನನ್ನ ಅನುಭವದ ಮೇಲೆ ಹೇಳುವುದಾದರೆ ಕ್ಯಾನ್ಸರ್‌ ಇರುವುದು ಬೇಗನೇ ಪತ್ತೆಯಾದರೆ ಅದಕ್ಕೆ ಪರಿಹಾರವಿದೆ. ಹಾಗಾಗಿ ಯಾವುದೇ ಭಯ ಬೇಡ. ಪತ್ತೆ ಪರೀಕ್ಷೆ ಮಾಡಿಸಿಕೊಳ್ಳುತ್ತಿರಿ. ಅಕಸ್ಮಾತ್‌ ಪತ್ತೆಯಾದರೆ ಅದರ ವಿರುದ್ಧ ಧೈರ್ಯದಿಂದ ಹೋರಾಡಿ’ ಎಂದರು.

ಇಂಡಿಯನ್‌ ಕ್ಯಾನ್ಸರ್‌ ಸೊಸೈಟಿಯ ಮುಖ್ಯಸ್ಥ ಕಿಶೋರ್‌ ಆರ್‌.ರಾವ್‌ ಹಾಗೂ ಕರ್ನಾಟಕ ಕ್ಯಾನ್ಸರ್‌ ಸೊಸೈಟಿಯ ಡಾ.ಶಾಸ್ತ್ರಿ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇಳೆ ಯುವಿ ಅವರೊಂದಿಗೆ ನಡೆಸಿದ ಚುಟುಕು ಮಾತುಕತೆಯ ವಿವರ ಇಲ್ಲಿದೆ...

* ಕ್ಯಾನ್ಸರ್‌ ಎದುರಿನ ಹೋರಾಟದಲ್ಲಿ ಗೆದ್ದ ಮೇಲೆ ನಿಮ್ಮ ಜೀವನದಲ್ಲಿ ಆಗಿರುವ ಬದಲಾವಣೆಗಳು ಏನು?
ತುಂಬಾ ಬದಲಾವಣೆಗಳಾಗಿವೆ. ಬದಲಾವಣೆ ಮಾಡಿಕೊಳ್ಳ ಲೇಬೇಕು. ದೇಹವನ್ನು ಮತ್ತಷ್ಟು ಪ್ರೀತಿಸಲು ಶುರು ಮಾಡಿ ದ್ದೇನೆ. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ಮತ್ತಷ್ಟು ಧೈರ್ಯ ಬಂದಿದೆ.

* ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತೇನೆ ಎಂಬ ವಿಶ್ವಾಸ ನಿಮಗಿತ್ತೆ?
ಕ್ರಿಕೆಟ್‌ಅನ್ನು ತುಂಬಾ ಪ್ರೀತಿಸುತ್ತೇನೆ. ಜೀವನ ಅದಕ್ಕಿಂತ ಮುಖ್ಯ ನಿಜ. ಆದರೆ ನಾನು ಈ ಹಂತಕ್ಕೆ ಬಂದು ನಿಲ್ಲಲು ಕಾರಣ ಕ್ರಿಕೆಟ್‌. ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಈ ಬಗ್ಗೆ ತುಂಬಾ ಚಿಂತಿಸುತ್ತಿದ್ದೆ. ಮತ್ತೆ ಆಡಲು ಸಾಧ್ಯವೇ ಎಂಬ ಪ್ರಶ್ನೆ ಹಾಕಿಕೊಳ್ಳುತ್ತಿದ್ದೆ. ಆದರೆ ಸೂಕ್ತ ಚಿಕಿತ್ಸೆ, ಉತ್ತಮ ಸಲಹೆ ನಾನು ಮತ್ತೆ ಕಣಕ್ಕಿಳಿಯಲು ಅನುವು  ಮಾಡಿಕೊಟ್ಟವು.

* ಸಂಕಷ್ಟಕ್ಕೆ ಸಿಲುಕಿದ್ದ ಆ ದಿನಗಳಲ್ಲಿ ನಿಮಗೆ ಯಾವ ರೀತಿಯ ಪ್ರೇರಣೆ ಲಭಿಸಿತು?
ಸಾವಿರಾರು ಅಭಿಮಾನಿಗಳು ಪತ್ರ ಬರೆಯುತ್ತಿದ್ದರು. ಇಮೇಲ್‌ ಮಾಡುತ್ತಿದ್ದರು. ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದರು. ಕುಟುಂಬ, ಸ್ನೇಹಿತರು, ಕ್ರಿಕೆಟಿಗರ ಬೆಂಬಲ ಹಾಗೂ ಅವರ ಮಾತುಗಳು ನನ್ನಲ್ಲಿ ವಿಶ್ವಾಸ ತುಂಬಿದವು.

* ಈ ಸಮಸ್ಯೆ ನಿಮ್ಮ ಆಟದ ಮೇಲೆ ಪರಿಣಾಮ ಬೀರಿದೆಯೇ?
ಖಂಡಿತ ಪರಿಣಾಮ ಬೀರಿದೆ. ಅದು ಸಹಜ ಕೂಡ. ಯಾತನೆಯ ದಾರಿ ಸವೆಸಿ ಬಂದಿದ್ದೇನೆ. ಸುಮಾರು ಎರಡು ವರ್ಷ ಈ ಸಮಸ್ಯೆ ಎದುರು ಹೋರಾಡಿದ್ದೇನೆ. ಹಾಗಾಗಿ ಮಾನಸಿಕ ಹಾಗೂ ದೈಹಿಕವಾಗಿ ಹೈರಾಣಾಗಿದ್ದೇನೆ. ಇದು ನನ್ನ ಆಟದ ಮೇಲೆ ಪರಿಣಾಮ ಬೀರಿದೆ. ಮತ್ತೆ ಎಂದಿನಂತೆ ಆಡುವುದು ಸುಲಭದ ಮಾತಲ್ಲ.

* ಇಂತಹ ಸಮಸ್ಯೆಗೆ ಒಳಗಾಗಿರುವ ವ್ಯಕ್ತಿಗಳಿಗೆ ನಿಮ್ಮ ಸಲಹೆ ಏನು?
ಅಂಥ ವ್ಯಕ್ತಿಗಳಿಗೆ ಪ್ರತಿಯೊಬ್ಬರ ಸಹಾಯಬೇಕು. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಇದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಇದು ಎಷ್ಟೊಂದು ಯಾತನೆಯ ಬದುಕು ಎಂಬುದು ನನಗೆ ಗೊತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT