ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟದಲ್ಲಿ ಸಿಹಿ, ಕಹಿ ಸಾಮಾನ್ಯ’

ಕಬ್ಬು ಬೆಳೆಗಾರರ ಪರ ಬಿ.ಶ್ರೀರಾಮುಲು ಅಹೋರಾತ್ರಿ ಧರಣಿ
Last Updated 1 ಜನವರಿ 2014, 7:42 IST
ಅಕ್ಷರ ಗಾತ್ರ

ಹೊಸಪೇಟೆ: ಕಾರ್ಖಾನೆಯ ವ್ಯಾಪ್ತಿಯ ಹೆಚ್ಚುವರಿ ಕಬ್ಬನ್ನು ಬೇರೆಡೆಗೆ ಸಾಗಿಸಲು ಅವಕಾಶ ಕಲ್ಪಿಸುವುದು ಹಾಗೂ ಪ್ರತಿ ಟನ್‌ ಕಬ್ಬಿಗೆ ಸರ್ಕಾರ ನಿಗದಿಪಡಿಸಿದ ₨ 2,550 ದರ ನೀಡಬೇಕು ಎಂದು ಆಗ್ರಹಿಸಿ ಬಿಎಸ್‌ಆರ್‌ ಕಾಂಗ್ರೆಸ್‌ ಸಂಸ್ಥಾ ಪಕ, ಶಾಸಕ ಬಿ.ಶ್ರೀರಾಮುಲು ಅವರು ಸ್ಥಳೀಯ ಐಎಸ್‌ಆರ್‌ ಕಾರ್ಖಾನೆ ಎದುರು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.

ಈ ಕಾರಣದಿಂದ ಶ್ರೀರಾಮುಲು ಅವರು ತಮ್ಮ ಬೆಂಬಲಿಗರ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಗಳನ್ನು ಸಿದ್ಧಪಡಿಸಿ ಧರಣಿ ಸತ್ಯಾಗ್ರಹ ವನ್ನು ಮುಂದುವರಿಸಿದ್ದಾರೆ. ಕಬ್ಬು ಬೆಳೆಗಾರರ ಪರ ಹೀಗೆ ಏಕಾಏಕಿ ಹೋರಾಟಕ್ಕೆ ಇಳಿದ ಶ್ರೀರಾಮುಲು ಅವರು ಕಾರ್ಖಾನೆಯ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಅವ ರೊಂದಿಗೆ ನಡೆಸಿದ ಕಿರು ಸಂದರ್ಶನದ ಸಾರಾಂಶ ಹೀಗಿದೆ.

ಐಎಸ್‌ಆರ್‌ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಪರ ಶ್ರೀರಾಮುಲು ಅವರ ಹೋರಾಟ ಎಲ್ಲಿಯವರೆಗೆ ನಡೆಯಲಿದೆ ?
: ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುವವರೆಗೆ. ಹೊಸಪೇಟೆಯ ವಿಜಯನಗರ ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸ ಕರು ಸಿಬಿಐ ವಶದಲ್ಲಿದ್ದಾರೆ. ಈ ಕುರಿತು ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್‌ ಅವರು ನನ್ನೊಂದಿಗೆ ಮಾತನಾಡಿದ್ದಾರೆ. ಕ್ಷೇತ್ರದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಜವಾಬ್ದಾರಿ ನೀಡಿದ್ದಾರೆ. ಈ ಹಿನ್ನೆಲೆ ಯಲ್ಲಿ ಈ ಹೋರಾಟಕ್ಕೆ ಇಳಿದಿರುವೆ. ಈಗ ಧರಣಿ ಹಿಂಪಡೆದರೂ ಮುಂದಿನ ಹೋರಾಟದ ರೂಪುರೇಷೆಗಳು ಸಿದ್ಧಗೊಂಡಿವೆ.

ಪ್ರ: ಕಬ್ಬು ಬೆಳೆಗಾರರ ಸಮಸ್ಯೆ ತಾರಕಕ್ಕೇರಿದ ಸಂದರ್ಭದಲ್ಲಿ ಹೋರಾ ಟಕ್ಕೆ ಇಳಿಯಲು ಕಾರಣವೇನು ?
ಉ:
ಕಳೆದ ಐದು ವರ್ಷಗಳ ಹಿಂದೆ ಐಎಸ್‌ಆರ್‌ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರು ಇದೇ ರೀತಿ ಸಮಸ್ಯೆ ಎದುರಿಸು ತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಶಾಸಕ ಆನಂದಸಿಂಗ್ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಮಸ್ಯೆಯನ್ನು ತಕ್ಕ ಮಟ್ಟಿಗೆ ಪರಿಹರಿಸಿದ್ದರು. ಆದರೆ, ಈಗ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ. ಅವರಿಬ್ಬರ ಅನುಪಸ್ಥಿತಿಯಲ್ಲಿ ಹೋರಾಟ ಅನಿವಾರ್ಯವಾಗಿದೆ.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಹಾಗೂ ತಮ್ಮ ಈ ಹೋರಾಟಕ್ಕೆ ಜಿಲ್ಲಾಡಳಿತದ ಪ್ರತಿಕ್ರಿಯೆ ಏನು?
ಉ:
ಕಾರ್ಖಾನೆಯ ಬಹುತೇಕ ವಿಷಯಗಳು ನ್ಯಾಯಾಲಯದಲ್ಲಿ ವಿಚಾ ರಣೆ ಹಂತದಲ್ಲಿವೆ. ಹೀಗಾಗಿ ಜಿಲ್ಲಾಡಳಿತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿವೆ. ಅಧಿಕಾರಿಗಳಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಕಾನೂನು ಮೊದಲ ಆದ್ಯತೆಯಾಗಿದೆ ಹೊರತು ರೈತರಲ್ಲ.

ಇನ್ನೂ ಉಪವಿಭಾಗಾಧಿಕಾರಿ ಪಿ. ಸುನೀಲಕುಮಾರ್‌ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.ಆದರೆ ರೈತರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ನಿಗದಿಪಡಿಸಿದ ದರ ಕೊಡಿಸಲು ಕಟ್ಟುನಿಟ್ಟಿನ ಆದೇಶ ಹೊರ ಡಿಸುವ ಬದಲು ಕಾರ್ಖಾನೆ ಹಾಗೂ ರೈತರ ಮಧ್ಯೆ ನಡೆಯುವ ಒಪ್ಪಂದದ ಮಧ್ಯಸ್ಥಿಕೆ ವಹಿಸುವುದು ಯಾವ ನ್ಯಾಯ? ಈ ಕಾರಣದಿಂದ ಜಿಲ್ಲಾಡ ಳಿತದ ಮೇಲೆ ನಂಬಿಕೆ ಇಲ್ಲದಾಗಿದೆ.

ಬಿ.ಶ್ರೀರಾಮುಲು ಅವರ ಕಬ್ಬು ಬೆಳೆಗಾರರ ಪರ ಹೋರಾಟ ಮುಂಬ ರುವ ಲೋಕಸಭಾ ಚುನಾವಣೆಯ ಗಿಮಿಕ್ಕು ಎಂಬ ಆರೋಪ ಕೇಳಿ ಬರುತ್ತಿದೆಯಲ್ಲಾ?
ಶ್ರೀರಾಮುಲು ಲೋಕಸಭಾ ಚುನಾ ವಣೆಗೆ ಗಿಮಿಕ್ಕು ಮಾಡಬೇಕಾದ ಅಗತ್ಯ ವಿಲ್ಲ. ಅಲ್ಲದೆ ನನಗೆ ರಾಜ್ಯ ರಾಜಕಾ ರಣವೇ ಸಾಕು. ಅದರಲ್ಲೂ ಸಂಕಷ್ಟದಲ್ಲಿ ರುವ ಕಬ್ಬು ಬೆಳೆಗಾರರನ್ನು ಮುಂದಿಟ್ಟು ಕೊಂಡು ಸ್ವಹಿತಾಶಕ್ತಿಗೆ ಹೋರಾಟ ಮಾಡುವ ಜಾಯಮಾನ ನನ್ನದಲ್ಲ. ಕಬ್ಬು ಬೆಳೆಗಾರರ ಸಂಕಷ್ಟವನ್ನು ಕಣ್ಣಾರೆ ಕಂಡ ಮೇಲೆ ಈ ಹೋರಾಟ ಅನಿ ವಾರ್ಯ ಎನಿಸಿದೆ ಹೊರತು ಚುನಾವಣೆ ಗಿಮಿಕ್ಕಿಗಾಗಿ ಹೋರಾಟಕ್ಕೆ ಇಳಿದಿಲ್ಲ.

ಕಬ್ಬು ಬೆಳೆಗಾರರ ಪರ ಹೀಗೆ ಏಕಾಏಕಿಯಾಗಿ ಹೋರಾಟಕ್ಕೆ ಇಳಿದು ತಪ್ಪು ಮಾಡಿದೆ ಎಂದು ಅನ್ನಿಸುತ್ತಿದೆಯಾ?
ನಾನು ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಇಂಥ ಹೋರಾಟಗಳಲ್ಲಿ ಕೆಲವೊಂದರಲ್ಲಿ ಗೆಲವು ಇನ್ನೂ ಕೆಲವೊಂದರಲ್ಲಿ ಸೋಲು ಕಂಡಿದ್ದೇನೆ. ಈಗ ಐಎಸ್‌ಆರ್‌ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಹೋರಾಟದಲ್ಲಿ ಯಶಸ್ವಿಯಾದರೆ ಅದು ರೈತರ ಗೆಲುವು. ಒಂದು ವೇಳೆ ಸೋಲಾದರೆ ಅದು ಶ್ರೀರಾಮುಲು ಅವರ ಸೋಲಾಗಲಿದೆ. ಇದಾವುದಕ್ಕೂ ನಾನು ಎದೆಗುಂದುವುದಿಲ್ಲ.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತಿದೆ?
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರೈತ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆ ಕೇವಲ ಸದನಕ್ಕೆ ಸೀಮಿತವಾಯಿತೆ ಹೊರತು ಜಾರಿಯಾಗಲಿಲ್ಲ. ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ರೈತರಿಗೆ ಕೊಟ್ಟ ಮಾತು ತಪ್ಪಿದ್ದಾರೆ. ಇನ್ನೂ ಐಎಸ್‌ಆರ್ ಕಾರ್ಖಾನೆ ಹೋರಾಟಕ್ಕೆ ಸಂಬಂಧಿಸಿದಂತೆ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಅವರು ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT