ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₨ 7.5 ಕೋಟಿ ಅಕ್ರಮ ಆಸ್ತಿ ಪತ್ತೆ

ಏಳು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಏಳು ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಏಕಕಾಲಕ್ಕೆ 21 ಸ್ಥಳಗಳಲ್ಲಿ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು ₨ 7.5 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಭಿವೃದ್ಧಿ ಅಧಿಕಾರಿ ಎಚ್‌.ವಿ.ಓಂಕಾರಮೂರ್ತಿ, ಮಾಹಿತಿ ತಂತ್ರಜ್ಞಾನ ಸಚಿವ ಎಸ್‌.ಆರ್‌,ಪಾಟೀಲ ಅವರ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದ ಬಾಗಲಕೋಟೆಯ ಜಿಲ್ಲಾ ಮುಖ್ಯ ಖಜಾನೆ ಅಧಿಕಾರಿ ಬಾಳಪ್ಪ ಬೈರಪ್ಪ ಅಥಣಿ, ವಿಜಾಪುರ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ ನಾಗೇಂದ್ರ ಸಾ ಮಲಜಿ, ಬೀದರ್‌ನ ಅಬಕಾರಿ ಉಪ ಆಯುಕ್ತ ಎಸ್‌.ಎಸ್‌.ಸಾವಳಗಿ, ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಸೇವ್ಯಾ ನಾಯಕ್‌, ಗುಲ್ಬರ್ಗದ ಕರ್ನಾಟಕ ಗೃಹ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿ.ಮಲ್ಲಣ್ಣ ಮತ್ತು ಚಿಂಚೋಳಿಯ ಕಿರಿಯ ಆರೋಗ್ಯ ಸಹಾಯಕ ಸಿದ್ದಣ್ಣ ಪಾಟೀಲ್‌ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಈ ಕುರಿತು ಪತ್ರಕರ್ತರಿಗೆ ವಿವರ ನೀಡಿದ ಲೋಕಾಯುಕ್ತದ ಹೆಚ್ಚುವರಿ ಪೊಲಿಸ್‌ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣ ರಾವ್‌, ‘ಏಳು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ಗುರುವಾರವೇ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು. ಈ ಸಂಬಂಧ ಬೆಂಗಳೂರು, ಬಾಗಲಕೋಟೆ, ವಿಜಾಪುರ, ಬೀದರ್‌, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಮತ್ತು ಗುಲ್ಬರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 21 ಸ್ಥಳಗಳ ಮೇಲೆ ದಾಳಿಮಾಡಿ ಶೋಧ ನಡೆಸಲಾಗಿದೆ’ ಎಂದರು.

ಬ್ಯಾಂಕ್‌ ಖಾತೆಯಲ್ಲಿ ₨ 38 ಲಕ್ಷ: ಸಚಿವ ಎಸ್‌.ಆರ್‌.ಪಾಟೀಲರ ಆಪ್ತ ಸಹಾಯಕ ಹುದ್ದೆಯಲ್ಲಿರುವ ಬಾಳಪ್ಪ ಅಥಣಿ ಬಾಗಲಕೋಟೆ ಮತ್ತು ಬೀಳಗಿಯ ಎರಡು ಸಹಕಾರ ಬ್ಯಾಂಕ್‌ ಖಾತೆಗಳಲ್ಲಿ ₨ 38 ಲಕ್ಷ ಇರಿಸಿರುವುದು ದಾಳಿ ವೇಳೆ ಪತ್ತೆಯಾಗಿದೆ. ಇದೇ ಬ್ಯಾಂಕ್‌ಗಳಲ್ಲಿ ಆರೋಪಿಯು ₨ 31.05 ಲಕ್ಷದಷ್ಟು ಸಾಲ ಪಡೆದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
ಇವರು 22.22 ಎಕರೆ ಜಮೀನು ಹಾಗೂ ಆರು ನಿವೇಶನಗಳನ್ನು ಖರೀದಿಸಿದ್ದಾರೆ. ಮೂರು ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿದ್ದಾರೆ.

ಗೋಪಿನಾಥ ಮಲಜಿ ವಿಜಾಪುರ ನಗರದಲ್ಲೇ ಏಳು ನಿವೇಶನ ಹೊಂದಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಹೊನ್ನಕಟ್ಟಿ ಗ್ರಾಮದಲ್ಲಿ ಪತ್ನಿ ಹಾಗೂ ಸಂಬಂಧಿಕರ ಹೆಸರಿನಲ್ಲಿ 49.05 ಎಕರೆ ಜಮೀನು ಖರೀದಿಸಿದ್ದಾರೆ.

ಎಸ್‌.ಎಸ್‌.ಸಾವಳಗಿ ಆಂಧ್ರಪ್ರದೇಶದಲ್ಲೂ ಜಮೀನು ಖರೀದಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಅಲ್ಲಿನ ಮೇಡಕ್‌ ಜಿಲ್ಲೆಯ ಗಣೇಶಪುರ ಗ್ರಾಮದಲ್ಲಿ ಸ್ವಂತ ಮತ್ತು ಪತ್ನಿಯ ಹೆಸರಿನಲ್ಲಿ 2008ರಲ್ಲಿ 8.16 ಎಕರೆ ಜಮೀನು ಖರೀದಿಸಿದ್ದಾರೆ. ಅಲ್ಲಿಯೇ ಒಂದು ಫಾರ್ಮ್‌ಹೌಸ್‌ ನಿರ್ಮಿಸಿದ್ದಾರೆ.

ಈ ಅಧಿಕಾರಿಯ ಬಳಿ ಒಟ್ಟು 17.01 ಎಕರೆ ಕೃಷಿ ಜಮೀನು, ಎಂಟು ನಿವೇಶನ, ಮೂರು ಮನೆ ಮತ್ತು ಎರಡು ವಾಣಿಜ್ಯ ಸಂಕೀರ್ಣಗಳು ಪತ್ತೆಯಾಗಿವೆ.

ಮಲ್ಲಣ್ಣ ಅವರು ತಾವು ಕಾರ್ಯನಿರ್ವಹಿಸುತ್ತಿರುವ ಗೃಹ ಮಂಡಳಿಯಲ್ಲೇ ಎರಡು ಆಸ್ತಿ ಖರೀದಿಸಿದ್ದಾರೆ. ಮಂಡಳಿಯು ಆನೇಕಲ್‌ನ ಸೂರ್ಯನಗರದಲ್ಲಿ ನಿರ್ಮಿಸಿರುವ ವಸತಿ ಬಡಾವಣೆಯಲ್ಲಿ ಒಂದು ನಿವೇಶನ ಹಾಗೂ ಯಲಹಂಕ ಉಪನಗರದಲ್ಲಿ ಮಂಡಳಿಯ ವಸತಿ ಸಮುಚ್ಚಯದಲ್ಲಿ ಒಂದು ಫ್ಲ್ಯಾಟ್‌ ಖರೀದಿಸಿದ್ದಾರೆ.

ಎರಡು ಮನೆ, ರಸಗೊಬ್ಬರದ ಅಂಗಡಿ, ಮದ್ಯದಂಗಡಿ, ಮೂರು ನಿವೇಶನ, 6 ಎಕರೆ ಕೃಷಿ ಜಮೀನು ಸೇರಿದಂತೆ ಹಲವು ಆಸ್ತಿಗಳು ಇವರ ಬಳಿ ಪತ್ತೆಯಾಗಿವೆ.

ಓಂಕಾರಮೂರ್ತಿ ಕೂಡ ಜಮೀನಿನ ಮೇಲೆ ಹೆಚ್ಚು ‘ಹೂಡಿಕೆ’ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೂರು ನಿವೇಶನ, ಒಂದು ಫ್ಲ್ಯಾಟ್‌, ಹಾಸನ ಮತ್ತು ಮೈಸೂರಿನಲ್ಲಿ ಎರಡು ಕೈಗಾರಿಕಾ ನಿವೇಶನ, ಶಿವಮೊಗ್ಗದಲ್ಲಿ ಎರಡು ನಿವೇಶನ, ತರೀಕೆರೆಯಲ್ಲಿ ಏಳು ಎಕರೆ ಕೃಷಿ ಜಮೀನು ಅವರ ಬಳಿ ಪತ್ತೆಯಾಗಿದೆ.

ಹುದ್ದೆ ಚಿಕ್ಕದು, ಆಸ್ತಿ ದೊಡ್ಡದು
ಕಿರಿಯ ಆರೋಗ್ಯ ಸಹಾಯಕರಾಗಿರುವ ಸಿದ್ದಣ್ಣ ಪಾಟೀಲ್‌ ಬಳಿ ₨ 1.30 ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿದೆ. ಎಂಟು ನಿವೇಶನ, ಮೂರು ಮನೆ, ಎರಡು ವಾಣಿಜ್ಯ ಸಂಕೀರ್ಣಗಳು ಇವರ ಬಳಿ ಇವೆ.

ಆರೋಪಿ ನೌಕರ ಮೂರು ಮದ್ಯದಂಗಡಿಗಳನ್ನು ಹೊಂದಿದ್ದಾರೆ. ‘ಫೈನಾನ್ಸ್‌’ ವ್ಯವಹಾರವೂ ಪತ್ತೆಯಾಗಿದೆ.

ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರ ಐಷಾರಾಮಿ ಜೀವನ
ವಿಜಾಪುರ ವರದಿ: ತಮ್ಮ ಬೆಡ್‌ರೂಮ್‌ಗೆ ಎ.ಸಿ., ಮಕ್ಕಳಿಗೆ ಕೂಲರ್‌. ಓಡಾಡಲು ಕಚೇರಿಯ ವಾಹನದ ಜೊತೆಗೆ ಹುಂಡೈ ಐ–20 ಕಾರು, ದೊಡ್ಡ ಪರದೆಯ ಟಿ.ವಿ., ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ಎರಡು ಮನೆ, ಐದು ನಿವೇಶನ, 46 ಎಕರೆ ಜಮೀನು...
ಇಲ್ಲಿಯ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ ನಾಗೇಂದ್ರಸಾ ಮಲಜಿ ಅವರ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ನಡೆಸಿದ ದಾಳಿಯಲ್ಲಿ ಪತ್ತೆಯಾದ ಆಸ್ತಿಪಾಸ್ತಿ ಇದು.

ಸರ್ಕಾರಿ ಕಾಮಗಾರಿಗಳನ್ನು ತ್ವರಿತಗತಿ­ಯಲ್ಲಿ ಮಾಡುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ಸರ್ಕಾರ ನಿರ್ಮಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು ಆಯಾ ಜಿಲ್ಲಾಧಿಕಾರಿಗಳು ಈ ಕೇಂದ್ರದ ಅಧ್ಯಕ್ಷರಾಗಿರುತ್ತಾರೆ. ಮಲಜಿ ವಿಜಾಪುರ ಜಿಲ್ಲೆಯಲ್ಲಿ 1993ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ದಾಳಿಯ ಕಾಲಕ್ಕೆ ಹಲವು ಬ್ಯಾಂಕ್‌ಗಳಲ್ಲಿ ಅವರ ಖಾತೆ ಮತ್ತು ಲಾಕರ್‌ ಇರುವುದು ಪತ್ತೆಯಾಗಿದೆ. ಭೂಮಿಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಾರೆ ಎಂದು ಲೋಕಾ­ಯುಕ್ತ ಅಧಿಕಾರಿಗಳು ಮಾಹಿತಿ ನೀಡಿದರು.

ಲೋಕಾಯುಕ್ತ ಡಿವೈಎಸ್ಪಿ ಎಸ್‌.ಪಿ. ತೋಳಮಟ್ಟಿ ಅವರ ನೇತೃತ್ವದಲ್ಲಿ ಲೋಕಾಯುಕ್ತದ ವಿಜಾಪುರ, ಬಾಗಲಕೋಟೆ, ಬೆಳಗಾವಿಯ ಅಧಿಕಾರಿಗಳು, ಮಲಜಿ ಅವರ ಸ್ಥಳೀಯ ಭಾವಸಾರ ನಗರದಲ್ಲಿರುವ ನಿವಾಸ, ಕಚೇರಿ, ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದಲ್ಲಿಯ ತೋಟದ ಮನೆಗಳ ಮೇಲೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದರು.

‘ಕೋರ್ಟ್‌ ಸರ್ಚ್‌ ವಾರಂಟ್‌ ಹಾಗೂ ಪಂಚರೊಂದಿಗೆ ಬೆಳಿಗ್ಗೆ 6 ಗಂಟೆಗೆ ಅವರ ಮನೆಗೆ ಬಂದು ಬಾಗಿಲು ತಟ್ಟಿದೆವು. ಅವರಿನ್ನೂ ಎದ್ದಿರಲಿಲ್ಲ. ಯಾವುದೇ ಪ್ರತಿರೋಧ ಒಡ್ಡದೆ ಬಾಗಿಲು ತೆಗೆದರು. ದಾಳಿ ನಡೆದ ಸಂದರ್ಭದಲ್ಲಿ ಮಲಜಿ ಮನೆಯಲ್ಲಿಯೇ ಇದ್ದರು’ ಎಂದು ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

ದಾಳಿಗೆ ಒಳಗಾದ ಅಧಿಕಾರಿಗಳ ಆಸ್ತಿ ವಿವರ

*ಎಚ್‌.ವಿ.ಓಂಕಾರಮೂರ್ತಿ
(ಅಭಿವೃದ್ಧಿ ಅಧಿಕಾರಿ, ಕೆಐಎಡಿಬಿ, ಬೆಂಗಳೂರು)
ಪತ್ತೆಯಾದ ಆಸ್ತಿ- ₨ 1.21 ಕೋಟಿ
ಖರ್ಚು– ₨ 40 ಲಕ್ಷ
ಅಧಿಕೃತ ಆದಾಯ– ₨ 80 ಲಕ್ಷ
ಅಕ್ರಮ ಆಸ್ತಿಯ ಪ್ರಮಾಣ– ಶೇ 102

*ಬಾಳಪ್ಪ ಬೈರಪ್ಪ ಅಥಣಿ
(ಸಚಿವ ಎಸ್‌.ಆರ್‌.ಪಾಟೀಲರ ಆಪ್ತ ಸಹಾಯಕ)
ಪತ್ತೆಯಾದ ಆಸ್ತಿ- ₨ 1.53 ಕೋಟಿ
ಖರ್ಚು– ₨ 11 ಲಕ್ಷ
ಅಧಿಕೃತ ಆದಾಯ– ₨ 84.05 ಲಕ್ಷ
ಅಕ್ರಮ ಆಸ್ತಿಯ ಪ್ರಮಾಣ– ಶೇ 96.01

*ಗೋಪಿನಾಥ ನಾಗೇಂದ್ರ ಸಾ ಮಲಜಿ
(ಯೋಜನಾ ವ್ಯವಸ್ಥಾಪಕ, ನಿರ್ಮಿತಿ ಕೇಂದ್ರ, ವಿಜಾಪುರ)
ಪತ್ತೆಯಾದ ಆಸ್ತಿ– ₨ 2.11 ಕೋಟಿ
ಖರ್ಚು– ₨ 24 ಲಕ್ಷ
ಅಧಿಕೃತ ಆದಾಯ– ₨ 60 ಲಕ್ಷ
ಅಕ್ರಮ ಆಸ್ತಿಯ ಪ್ರಮಾಣ– ಶೇ 293.31

*ಎಸ್‌.ಎಸ್‌.ಸಾವಳಗಿ
(ಅಬಕಾರಿ ಉಪ ಆಯುಕ್ತ, ಬೀದರ್‌)
ಒಟ್ಟು ಆಸ್ತಿ– ₨ 1.35 ಕೋಟಿ
ಖರ್ಚು– ₨ 35 ಲಕ್ಷ
ಅಧಿಕೃತ ಆದಾಯ– ₨ 75 ಲಕ್ಷ
ಅಕ್ರಮ ಆಸ್ತಿಯ ಪ್ರಮಾಣ– ಶೇ 127.71

*ಸೇವ್ಯಾನಾಯಕ್‌
(ಇಇ, ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗ)
ಒಟ್ಟು ಆಸ್ತಿ– ₨ 1.29 ಕೋಟಿ
ಖರ್ಚು– ₨ 16.25 ಲಕ್ಷ
ಅಧಿಕೃತ ಆದಾಯ– ₨ 56 ಲಕ್ಷ
ಅಕ್ರಮ ಆಸ್ತಿಯ ಪ್ರಮಾಣ– ಶೇ 160.62

*ಸಿದ್ದಣ್ಣ ಪಾಟೀಲ್‌
(ಕಿರಿಯ ಆರೋಗ್ಯ ಸಹಾಯಕ, ಚಿಂಚೋಳಿ)
ಒಟ್ಟು ಆಸ್ತಿ– ₨ 1.30 ಕೋಟಿ
ಖರ್ಚು– ₨ 8 ಲಕ್ಷ
ಅಧಿಕೃತ ಆದಾಯ– ₨ 40 ಲಕ್ಷ
ಅಕ್ರಮ ಆಸ್ತಿಯ ಪ್ರಮಾಣ– ಶೇ 245.81

*ಮಲ್ಲಣ್ಣ
(ಇಇ, ಕರ್ನಾಟಕ ಗೃಹ ಮಂಡಳಿ, ಗುಲ್ಬರ್ಗ)
ಒಟ್ಟು ಆಸ್ತಿ– ₨ 89.09 ಲಕ್ಷ
ಖರ್ಚು– ₨ 15 ಲಕ್ಷ
ಅಧಿಕೃತ ಆದಾಯ– ₨ 40 ಲಕ್ಷ
ಅಕ್ರಮ ಆಸ್ತಿಯ ಪ್ರಮಾಣ– ಶೇ 160.24

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT