ಬುಧವಾರ, ಡಿಸೆಂಬರ್ 11, 2019
21 °C

ಅಂಗಿ ಮೇಲೆ ಅರುಣ ಕಲೆ

Published:
Updated:
Deccan Herald

ಬೆಂಗಳೂರಿನಲ್ಲೀಗ ಬ್ರ್ಯಾಂಡಿಂಗ್‌ ಜಮಾನಾ. ಯೋಗ, ಓಟ, ಪ್ರತಿಭಟನೆ, ಅಭಿಯಾನ, ಚುನಾವಣೆ ಏನೇ ಇರಲಿ, ಅದಕ್ಕೆ ಸಂಬಂಧಿಸಿದ ಒಂದು ಟೀಶರ್ಟ್‌ ಅಂತೂ ಇದ್ದೇ ಇರುತ್ತದೆ. ಇನ್ನು ಕಾರ್ಪೊರೇಟ್‌ ಕಚೇರಿಗಳಲ್ಲಿ ಅವರದ್ದೇ ಆದ ಮಗ್‌, ಟೇಬಲ್‌ಟಾಪ್‌ಗಳು ಇದ್ದೇ ಇರುತ್ತವೆ. ಪ್ರಚಾರ ಪಡೆಯಲು ಒಂದಷ್ಟು ಬಾವುಟ ಬ್ಯಾನರ್‌ಗಳೂ ಹಿಂದೆ ಬೀಳುವುದಿಲ್ಲ. ಆದರೆ ಇವೆಲ್ಲವನ್ನೂ ವಿನ್ಯಾಸಗೊಳಿಸುವುದು ಸುಲಭದ ಕೆಲಸವೇ?

ಇಲ್ಲ ಎನ್ನುತ್ತಾರೆ, ಕಲಾವಿದ ಅರುಣ್‌ ಕುಮಾರ್‌. ದಶಕದಿಂದ ಇಂಥ ಪ್ರಚಾರ ಪರಿಕರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಇವರು ಓದಿದ್ದು ಬಿಕಾಂ. ಕೈ ಹಿಡಿದಿದ್ದು ಈ ಕಲೆ.

ಗ್ರಾಫಿಕ್‌ ಕಲಾವಿದರಾಗಿದ್ದ ಅರುಣ್‌ಕುಮಾರ್‌ಗೆ ಇಂಥ ಪರಿಕರಗಳಿಗೊಂದು ವಿಷಾಲವಾದ ಮಾರುಕಟ್ಟೆಯಿದೆ ಎಂದೆನಿಸಿದಾಗಲೇ ಈ ನಿಟ್ಟಿನಲ್ಲಿ ಮುಂದುವರಿದರು. ಆದರೆ ಅವಕಾಶಗಳು ಬೇಕಲ್ಲ, ಅವಕಾಶವನ್ನರಸಿ ಹೋದಾಗ, ಅಧಿಕಾರಿಯೊಬ್ಬರು ಇದಕ್ಕೆಲ್ಲ ಸಾಕಷ್ಟು ಬಂಡವಾಳ ಬೇಕು, ನೀವು ಕಲಾವಿದರು, ನೀವೇನು ಮಾಡಬಲ್ಲಿರಿ ಎಂದು ಹೀಯಾಳಿಸಿದ್ದರು. ಆ ಹೀಯಾಳಿಕೆಯನ್ನೇ ಸವಾಲಾಗಿ ಸ್ವೀಕರಿಸಿದ ಅರುಣ್‌ ಕುಮಾರ್‌ ಖಾಸಗಿ ಆದೇಶಗಳನ್ನು ಪೂರ್ಣಗೊಳಿಸುವತ್ತ ಗಮನ ನೀಡಿದರು.  ಆರಂಭಿಕ ವರ್ಷಗಳಲ್ಲಿ ಯಾವುದೇ ಲಾಭಾಂಶದ ನಿರೀಕ್ಷೆಯಿಲ್ಲದೇ ಸಣ್ಣಪುಟ್ಟ ಕೆಲಸಗಳನ್ನೂ ಕೈಗೊಂಡರು.

ಇಲ್ಲಿ ಬಾಯ್ಮಾತಿನ ಪ್ರಚಾರ ಹೆಚ್ಚು ಕೆಲಸ ತರತೊಡಗಿತು. ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಯ ಮಹಾಪೂರವೇ ಕಂಡು ಬಂದಿತು. ಆಗ ತಮ್ಮ ಕೆಲಸಗಳ ಬಗ್ಗೆ ವೆಬ್‌ಸೈಟ್‌ ನಿರ್ಮಿಸಿದರು. ಇದೀಗ ಅವರ ಬಳಿ 10–15 ಜನರು ಕೆಲಸ ಮಾಡುತ್ತಾರೆ. ಅರುಣ್‌ ಎಂಟರ್‌ಪ್ರೈಸಸ್‌ ಆರಂಭವಾಗಿದ್ದು ಹೀಗೆ.

ಜನರ ಅಭಿರುಚಿ, ಅವರ ಬಜೆಟ್‌ ಹಾಗೂ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸಗಳನ್ನು ಸಿದ್ಧಪಡಿಸುತ್ತೇವೆ. ಯಾವುದೇ ಕಾರಣಕ್ಕೂ ವಿನ್ಯಾಸಗಳಲ್ಲಿ ಏಕರೂಪವನ್ನು ಕಾಣಲು ಬಿಡುವುದಿಲ್ಲ. ಈ ವಿಭಿನ್ನ ಆಸಕ್ತಿಯೇ ಮಾರುಕಟ್ಟೆ ಒದಗಿಸಿಕೊಟ್ಟಿದೆ ಎನ್ನುತ್ತಾರೆ ಅವರು. ಬೆಲೆಯೂ 100 ರೂಗಳಿಂದ ಆರಂಭವಾಗುತ್ತದೆ.

ದಸರಾದಿಂದ ಸೀಸನ್‌ ಆರಂಭವಾದರೆ ಸಮ್ಮೇಳನ, ಚುನಾವಣೆ, ಮ್ಯಾರಥಾನ್‌, ಅಭಿಯಾನಗಳಿದ್ದಾಗ ಬೇಡಿಕೆ ಇರುತ್ತದೆ ಎನ್ನುತ್ತಾರೆ ಅವರು. ರಿದಂ ಪ್ಯಾಡ್‌ ವಾದಕರೂ ಆಗಿರುವ ಅರುಣ್‌ ಕುಮಾರ್‌ಗೆ ಸಂಗೀತ ಹಾಗೂ ಕಲೆ ಎರಡೂ ಕೈ ಹಿಡಿದು ನಡೆಸಿವೆ ಎನ್ನುತ್ತಾರೆ. ಕೆಲವು ಹೆಸರಾಂತ ಕಂಪನಿಗಳಿಗೂ, ರಾಜಕೀಯ ಪಕ್ಷಗಳಿಗೂ ನಿಗದಿತವಾಗಿ ಪ್ರಚಾರ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ ಅರುಣ್‌.

ಹೆಚ್ಚಿನ ಮಾಹಿತಿಗೆ: 9886075533

ಪ್ರತಿಕ್ರಿಯಿಸಿ (+)