ಜೆಡಿಎಸ್ ಎಚ್‌ಎಂಟಿ ಇದ್ದಂತೆ: ಲಿಂಬಾವಳಿ

ಶುಕ್ರವಾರ, ಏಪ್ರಿಲ್ 19, 2019
31 °C
ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಅನುದಾನ: ಲೆಕ್ಕಪರಿಶೋಧನೆಗೆ ಆಗ್ರಹ

ಜೆಡಿಎಸ್ ಎಚ್‌ಎಂಟಿ ಇದ್ದಂತೆ: ಲಿಂಬಾವಳಿ

Published:
Updated:

ಬೆಂಗಳೂರು: ‘ಜೆಡಿಎಸ್‌ ಎಚ್ಎಂಟಿಗೆ (ಹಾಸನ, ಮಂಡ್ಯ, ತುಮಕೂರು) ಸೀಮಿತವಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಲೇವಡಿ ಮಾಡಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಬಯ್ಯುವುದರಲ್ಲಿ, ಜಗಳ ಬಿಡಿಸುವುದರಲ್ಲಿ, ಪಂಚಾಯಿತಿ ಮಾಡಿಸುವುದರಲ್ಲೇ ತಲ್ಲೀನರಾಗಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಲೋಕಸಭಾ ಚುನಾವಣೆಯ ಬಳಿಕ ಸಮ್ಮಿಶ್ರ ಸರ್ಕಾರ ಒಳಜಗಳ, ಕಿತ್ತಾಟದಿಂದಲೇ ಪತನಗೊಳ್ಳುತ್ತದೆ. ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಲೆಕ್ಕಪರಿಶೋಧನೆಗೆ ಆಗ್ರಹ: ‘ಕೇಂದ್ರ ಸರ್ಕಾರ ಅನೇಕ ಯೋಜನೆಗಳಿಗೆ ಸಾವಿ ರಾರು ಕೋಟಿ ಒದಗಿಸಿದ್ದರೂ, ರಾಜ್ಯ ಸರ್ಕಾರ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಅನ್ಯ ಉದ್ದೇಶಗಳಿಗೆ ಉಪಯೋಗಿಸುತ್ತಿದೆ. ಈ ಕುರಿ ತಂತೆ ಲೆಕ್ಕಪರಿಶೋಧನೆ ನಡೆಯಬೇಕು’ ಎಂದು ಅವರು ಆಗ್ರಹಿಸಿದರು.

‘ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಹಾಗೂ ವಿಸ್ತರಣೆಗೆ ₹17,557 ಕೋಟಿ, ಐದು ನೀರಾವರಿ ಯೋಜನೆಗಳಿಗೆ ₹1,833 ಕೋಟಿ ಅನುದಾನ ಒದಗಿಸಿದೆ. ಸ್ವಚ್ಛ ಭಾರತ ಯೋಜನೆಯಡಿ 44 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಲಾಗಿದ್ದು, ಫಸಲ್‌ ಬಿಮಾ ಯೋಜನೆಯಡಿ 46 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. 14 ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಮೂರು ವರ್ಷಗಳಲ್ಲಿ ₹2 ಲಕ್ಷ ಕೋಟಿ ಅನುದಾನ ಒದಗಿಸಲಾಗಿದೆ. ಯುಪಿಎ ಸರ್ಕಾರ ಇದ್ದಾಗ ಐದು ವರ್ಷಗಳಲ್ಲಿ ₹75 ಸಾವಿರ ಕೋಟಿ ನೀಡಿತ್ತು’ ಎಂದು ಅವರು ಹೇಳಿದರು.

*
ಮಂಡ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರ ಪ್ರಚಾರದಲ್ಲಿ ತೊಡಗುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ.
-ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !