‘ಆಶ್ಲೇಷಾ’ ಮಳೆಯ ಕೃಪೆ; ರೈತರಲ್ಲಿ ಹರ್ಷ

7
ಮುಂಜಾನೆಯಿಂದಲೂ ಜಿಟಿಜಿಟಿ ಮಳೆ; ಶ್ರಾವಣದ ಸಂಭ್ರಮ ಹೆಚ್ಚಿಸಿದ ವರುಣ

‘ಆಶ್ಲೇಷಾ’ ಮಳೆಯ ಕೃಪೆ; ರೈತರಲ್ಲಿ ಹರ್ಷ

Published:
Updated:
Deccan Herald

ವಿಜಯಪುರ: ಜೂನ್ ಸಾತ್‌ ಬಳಿಕ ನಿರೀಕ್ಷಿತ ಮಳೆ ಸುರಿಯದೆ ಕಂಗಾಲಾಗಿದ್ದ ರೈತ ಸಮೂಹ, ಬುಧವಾರ ರಾತ್ರಿಯಿಂದ ಜಿಲ್ಲೆಯ ಎಲ್ಲೆಡೆ ಚೆದುರಿದಂತೆ ಜಿಟಿಜಿಟಿ ಹನಿದ, ರಭಸವಾಗಿ ಸುರಿದ ಮಳೆಯಿಂದ ಕೊಂಚ ನಿರುಮ್ಮಳಗೊಂಡಿದೆ.

ಬಿತ್ತಿದ್ದ ಮುಂಗಾರು ಬಾಡುವ ಹಂತದಲ್ಲಿದ್ದು; ಇದೀಗ ಮಳೆ ಸುರಿದರೂ ನಿರೀಕ್ಷಿತ ಇಳುವರಿ ಸಿಗಲ್ಲ. ಆದರೆ ಹಿಂಗಾರು ಹಂಗಾಮಿನ ಚಟುವಟಿಕೆಗೆ ಚಾಲನೆ ನೀಡಲು ಈ ಮಳೆ ನಮಗೆ ಆಶಾದಾಯಕವಾಗಿದೆ ಎಂಬ ಅನಿಸಿಕೆ ರೈತ ಸಮೂಹದಿಂದ ವ್ಯಕ್ತವಾಗಿದೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ‘ಆಶ್ಲೇಷಾ’ ಮಳೆ ಬಿಟ್ಟು ಬಿಡದಂತೆ ಹನಿ ಹನಿಯಾಗಿ ಸುರಿದಿದೆ. ಕೆಲವೆಡೆ ರಭಸದ ವರ್ಷಧಾರೆಯೂ ಆಗಿದೆ. ಜಿಟಿಜಿಟಿ ಸೋನೆ ಮಳೆ ಶ್ರಾವಣ ಮಾಸದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಸುರಿವ ಮಳೆ ನಡುವೆಯೇ ನಗರದ ಜನರು ಮೊದಲ ಶ್ರಾವಣ ಶುಕ್ರವಾರದ ಲಕ್ಷ್ಮೀ ಪೂಜೆಗಾಗಿ ದುಬಾರಿ ದುನಿಯಾದಲ್ಲೇ ಗುರುವಾರ ಮುಗಿಬಿದ್ದು ಪೂಜಾ ಸಾಮಗ್ರಿ ಖರೀದಿಸಿದ ಚಿತ್ರಣ ಗೋಚರಿಸಿತು.

ತಿಕೋಟಾ ಭಾಗದಲ್ಲಿ ಬುಧವಾರ ಮಧ್ಯರಾತ್ರಿಯಿಂದ ಮಳೆ ಶುರುವಾಗಿದ್ದು, ಹಸಿ ಮಳೆಯಾಗಿದೆ. ರೈತರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

ಮಳೆಯಿಲ್ಲದೆ ಕಂಗಾಲಾಗಿದ್ದ ಇಂಡಿ ತಾಲ್ಲೂಕಿನ ವ್ಯಾಪ್ತಿಯಲ್ಲೂ ಜಿಟಿ ಜಿಟಿ ಮಳೆಯಿದೆ. ಮುಂಗಾರು ಅಭಾವದಿಂದ ಬಿತ್ತನೆ ನಡೆಸದ ಬಹುತೇಕ ರೈತರು, ಹಿಂಗಾರಿನ ಹಸಿಗಾಗಿ ಕಾದಿದ್ದಾರೆ.

ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ಗುರುವಾರ ನಸುಕಿನಿಂದ ವರ್ಷಧಾರೆಯಾಗಿದೆ. ಪಟ್ಟಣದಲ್ಲಿ ಒಳಚರಂಡಿ ಯೋಜನೆಯಡಿ ಕಾಮಗಾರಿ ನಡೆದಿದ್ದು, ರಸ್ತೆಗಳು ತೀವ್ರ ಹದಗೆಟ್ಟಿರುವುದರಿಂದ ಜನರ ಓಡಾಟಕ್ಕೆ ಸಂಚಕಾರ ಎದುರಾಯ್ತು. ಪುರಸಭೆ ಆಡಳಿತಕ್ಕೆ ಹಿಡಿಶಾಪ ಹಾಕಿದರು.

ನಾಲತವಾಡ ಪಟ್ಟಣದಲ್ಲೂ ಬೆಳಿಗ್ಗೆಯಿಂದಲೇ ಮಳೆ ಬಿರುಸುಗೊಂಡಿತ್ತು. ಜಿಟಿಜಿಟಿ ಮುಂದುವರೆಯಿತು. ಶೀತಗಾಳಿಗೆ ಜನರು ತತ್ತರಿಸಿದರು. ತಾಳಿಕೋಟೆಯಲ್ಲೂ ಮಳೆ ಸುರಿದಿದೆ.

ಬಸವನಬಾಗೇವಾಡಿ, ನಿಡಗುಂದಿ, ಆಲಮಟ್ಟಿಯಲ್ಲಿ ಬುಧವಾರ ರಾತ್ರಿಯಿಂದಲೂ ಮಳೆಯಿದ್ದು ಮುಂದುವರೆದಿದೆ. ಸಿಂದಗಿ ಪಟ್ಟಣ, ತಾಲ್ಲೂಕಿನಲ್ಲಿ ಸುರಿದ ಜಿಟಿಜಿಟಿ ಮಳೆಗೆ ಸ್ಥಳೀಯರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಒಂದು ದಿನವಾದ್ರೂ ನಮಗೆ ಪಶ್ಚಿಮಘಟ್ಟ, ಆಗುಂಬೆ ನೆನಪಾಯ್ತು ಎಂದವರೇ ಹಲವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !