ಏಷ್ಯನ್‌ ಕ್ರೀಡಾಕೂಟಕ್ಕೆ ಕನಸಿನ ‘ಸವಾರಿ’

ಮಂಗಳವಾರ, ಜೂನ್ 18, 2019
28 °C

ಏಷ್ಯನ್‌ ಕ್ರೀಡಾಕೂಟಕ್ಕೆ ಕನಸಿನ ‘ಸವಾರಿ’

Published:
Updated:
ಬೆಂಗಳೂರಿನಲ್ಲಿ ಅಶ್ವಾರೋಹಿ ಒಬ್ಬರು ಅಭ್ಯಾಸ ನಡೆಸಿದ ಸಂದರ್ಭ

ಭಾರತದ ಅಶ್ವಾರೋಹಿ ಪಟುಗಳಿಗೆ ಜೂನ್ ಎರಡನೇ ವಾರ ಬಂದ ಆ ಸುದ್ದಿಯನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಏಷ್ಯನ್‌ ಕ್ರೀಡಾಕೂಟಕ್ಕೆ ಇಕ್ವೆಸ್ಟ್ರಿಯನ್‌ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ ಎಂಬ ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಹೇಳಿಕೆ, ಕೂಟಕ್ಕೆ ಸಜ್ಜಾಗಿದ್ದ ಅಶ್ವಾರೋಹಿಗಳನ್ನು ನಿರಾಸೆಯ ಕಡಲಿಗೆ ತಳ್ಳಿತ್ತು.

ಏಷ್ಯನ್ ಕ್ರೀಡಾಕೂಟದಲ್ಲಿ 1982ರಿಂದ ಇಕ್ವೆಸ್ಟ್ರಿಯನ್ ಸ್ಪರ್ಧೆ ನಡೆಯುತ್ತಿದೆ. ಮೊದಲ ವರ್ಷ ಭಾರತ ಪದಕಗಳ ಬೇಟೆಯಾಡಿ ಚಾಂಪಿಯನ್ ಆಗಿತ್ತು. 2010 ಮತ್ತು 2014 ಬಿಟ್ಟು ಉಳಿದಂತೆ ಪ್ರತಿ ವರ್ಷವೂ ಈ ಕ್ರೀಡೆಯ ಒಂದಿಲ್ಲ ಒಂದು ವಿಭಾಗದಲ್ಲಿ ಭಾರತ ಪದಕಗಳನ್ನು ಗೆದ್ದಿದೆ. ಈ ವರ್ಷವೂ ಪದಕದ ಸಾಮರ್ಥ್ಯ ತೋರುವ ಅವಕಾಶಗಳು ಧಾರಾಳವಾಗಿ ಇದ್ದವು.

ಜೂನ್‌ ಮೊದಲ ವಾರದಲ್ಲಿ ಈವೆಂಟಿಂಗ್ ಮತ್ತು ಶೋ ಜಂಪಿಂಗ್‌ ವಿಭಾಗದ ಏಳು ಮಂದಿಯ ತಂಡವನ್ನು ಭಾರತ ಇಕ್ವೆಸ್ಟ್ರಿಯನ್‌ ಫೆಡರೇಷನ್‌ (ಇಎಫ್‌ಐ) ಆಯ್ಕೆ ಮಾಡಿತ್ತು. ಆದರೆ ತಂಡವನ್ನು ಕಳುಹಿಸಲಾಗುವುದಿಲ್ಲ ಎಂದು ಒಲಿಂಪಿಕ್ ಸಂಸ್ಥೆ ಹೇಳಿತ್ತು.

ಏಷ್ಯಾಡ್‌ನಲ್ಲಿ ಮೂರು ಬಾರಿ ಕಂಚಿನ ಪದಕ ಗೆದ್ದಿದ್ದ ರಾಜೇಶ್‌ ಪಟ್ಟು ಅವರ ನೇತೃತ್ವದಲ್ಲಿ ಫವಾದ್ ಮಿರ್ಜಾ, ಜಿತೇಂದರ್ ಸಿಂಗ್‌ ಮತ್ತು ರಾಕೇಶ್ ಕುಮಾರ್‌ ಅವರು ಈವೆಂಟಿಂಗ್ ವಿಭಾಗದಲ್ಲಿ ಸ್ಪರ್ಧೆಗೆ ಸಿದ್ಧವಾಗಿದ್ದರು. ಶೋ ಜಂಪಿಂಗ್‌ನಲ್ಲಿ ಚೇತನ್‌ ರೆಡ್ಡಿ, ಸೆಟಲ್ವಾಡ್‌ ಸಹೋದರರಾದ ಕೀವನ್ ಮತ್ತು ಜಹಾನ್‌ ಆಯ್ಕೆಯಾಗಿದ್ದರು.

ಅವಕಾಶದ ಬಾಗಿಲು ಮುಚ್ಚಿಲ್ಲ

ತಂಡವನ್ನು ಕಳುಹಿಸದೇ ಇರಲು ಒಲಿಂಪಿಕ್ ಸಂಸ್ಥೆ ನಿರ್ಧರಿಸಿದರೂ ಅವಕಾಶದ ಬಾಗಿಲು ಪೂರ್ಣವಾಗಿ ಮುಚ್ಚಲಿಲ್ಲ ಎಂಬುದು ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರ ಅಭಿ ಪ್ರಾಯ. ಇಎಫ್‌ಐ ಮುತುವರ್ಜಿ ವಹಿಸಿ ಐಒಎ ಮೇಲೆ ಒತ್ತಡ ಹೇರಿದರೆ ನಿರ್ಧಾರ ಮರುಪರಿಶೀಲಿಸಲು ಸಂಸ್ಥೆ ಮನಸ್ಸು ಮಾಡಲಿದೆ ಎಂಬುದು ಅವರ ವಿಶ್ವಾಸ.

‘ಚೆಂಡು ಈಗ ಇಎಫ್‌ಐ ಅಂಗಳದಲ್ಲಿದೆ. ಅದರ ಮೇಲೆ ನಾವೆಲ್ಲರೂ ಒತ್ತಡ ಹಾಕು ತ್ತಿದ್ದೇವೆ. ಇದಕ್ಕೆ ಫಲ ಸಿಕ್ಕೇ ಸಿಗುತ್ತದೆ’ ಎಂದು ಬೆಂಗಳೂರಿನ ಎಂಬೆಸಿ ಇಂಟರ್‌ನ್ಯಾಷನಲ್ ರೈಡಿಂಗ್ ಸ್ಕೂಲ್‌ನ ನಿರ್ದೇಶಕಿ ಸಿಲ್ವಾ ಸ್ಟೊರಾಯ್‌ ಹೇಳುತ್ತಾರೆ. ಭಾರತದ ಅಶ್ವಾರೋಹಿಗಳು ಈವೆಂಟಿಂಗ್ ವಿಭಾಗದಲ್ಲಿ ಈ ವರೆಗೆ ಉತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲೂ ತಂಡ ವಿಭಾಗದಲ್ಲಿ ಸಾಕಷ್ಟು ಪದಕಗಳನ್ನು ಕಲೆ ಹಾಕಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ತಲಾ ಒಂದೊಂದು ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದಿದ್ದರೆ ತಂಡ ವಿಭಾಗದಲ್ಲಿ ಒಂದು ಚಿನ್ನ ಮತ್ತು ನಾಲ್ಕು ಕಂಚು ಗೆದ್ದಿದ್ದಾರೆ. ವೈಯಕ್ತಿಕ ಟೆಂಟ್ ಪೆಕಿಂಗ್‌ನಲ್ಲಿ ಏಕೈಕ ಚಿನ್ನ ಮತ್ತು ಡ್ರೆಸೇಜ್‌ ತಂಡ ವಿಭಾಗದಲ್ಲಿ ಒಂದು ಕಂಚು ಭಾರತದ ಪಾಲಾಗಿದೆ.

ದುಬಾರಿ ಕ್ರೀಡೆ

ಅಶ್ವಾರೋಹಣ ಕ್ರೀಡೆಯು ಅತ್ಯಂತ ದುಬಾರಿ. ಕುದುರೆಯನ್ನು ಖರೀದಿಸಲು ಮತ್ತು ಸಾಕಲು ಧಾರಾಳ ಮೊತ್ತ ವ್ಯಯಿಸಬೇಕು. ಅಭ್ಯಾಸ ನಡೆಸಲು ವಿಶಾಲವಾದ ಅಂಗಣ, ಸೌಲಭ್ಯ ಇತ್ಯಾದಿ ಬೇಕು. ಆದ್ದರಿಂದ ಯಾರೂ ಇದನ್ನು ವೈಯಕ್ತಿಕವಾಗಿ ಮಾಡುವುದಿಲ್ಲ. ಕ್ಲಬ್‌ಗಳು, ಅಕಾಡೆಮಿಗಳಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂದಾಗುತ್ತಾರೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ತರ ಬೇತಿಯನ್ನು ನೀಡಲಾಗುತ್ತದೆ.

ಒಂಬತ್ತು ವರ್ಷಗಳಿಂದ ಇಕ್ವೆಸ್ಟ್ರಿಯನ್ ಲೀಗ್ ಕೂಡ ಆಯೋಜಿಸುತ್ತಿದ್ದು ಅಶ್ವಾರೋಹಿಗಳ ಪ್ರತಿಭೆ ಹೊರಹೊಮ್ಮಲು ಇದು ವೇದಿಕೆ ಯಾಗುತ್ತಿದೆ.

‘ಇದು ದುಬಾರಿ ಕ್ರೀಡೆ ನಿಜ. ಉತ್ತಮ ಕುದುರೆಗಳನ್ನು ಖರೀದಿಸಲು ವಿದೇಶಕ್ಕೆ ಹೋಗಬೇಕು. ಆಸಕ್ತಿ ಇರುವವರು ಇದನ್ನೆಲ್ಲ ಮಾಡಲು ಖುಷಿಪಡುತ್ತಾರೆ. ವೈಯಕ್ತಿಕವಾಗಿ ಮಾಡಲಾಗದವರಿಗೆ ಅಕಾಡೆಮಿ, ಕ್ಲಬ್‌ಗಳಲ್ಲಿ ಸಾಕಷ್ಟು ಅವಕಾಶವಿದೆ’ ಎನ್ನುತ್ತಾರೆ ಸಿಲ್ವಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !