ಶನಿವಾರ, ನವೆಂಬರ್ 16, 2019
21 °C
ಐಎಸ್‌ಎಸ್‌ನಲ್ಲಿ ಮೊದಲ ಬಾರಿ ಪ್ರಯೋಗ

ವ್ಯೋಮದಲ್ಲಿ ಸಿಮೆಂಟ್‌ ಮಿಶ್ರಣ

Published:
Updated:

ವಾಷಿಂಗ್ಟನ್‌: ಅಂತರ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದೊಳಗಿನ(ಐಎಸ್‌ಎಸ್‌) ಗಗನಯಾತ್ರಿಗಳು, ಇದೇ ಮೊದಲ ಬಾರಿಗೆ ಗುರುತ್ವಾಕರ್ಷಣೆ ಕಡಿಮೆ ಇರುವಂಥ ವಾತಾವರಣದಲ್ಲಿ ಸಿಮೆಂಟ್‌ ಮಿಶ್ರಣ ಮಾಡಿ ಪರೀಕ್ಷಿಸಿದ್ದಾರೆ. 

‘ಈ ಪರೀಕ್ಷೆಯಿಂದ ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿನ ತೀವ್ರವಾದ ತಾಪಮಾನ ಮತ್ತು ವಿಕಿರಣಗಳಿಂದ ಗಗನಯಾತ್ರಿಗಳನ್ನು ರಕ್ಷಿಸಲು ಸಾಧ್ಯವಾಗಲಿದೆ’ ಎಂದು ನಾಸಾ ತಿಳಿಸಿದೆ.

ಗುರುತ್ವಾಕರ್ಷಣೆ ಇಲ್ಲದ ವಾತಾವರಣದಲ್ಲಿ ಸಿಮೆಂಟ್‌ ಹೇಗೆ ಘನ ರೂಪಕ್ಕೆ ತಿರುಗುತ್ತದೆ(ಮಿಕ್ಸ್‌) ಎನ್ನುವುದನ್ನು ಈ ಮೂಲಕ ಅಧ್ಯಯನ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ ಸಿಮೆಂಟ್‌ನ ಮೂಲ ಉತ್ಪನ್ನದಲ್ಲಿ ಒಂದಾದ ಟ್ರೈಕ್ಯಾಲ್ಸಿಯಂ ಸಿಲಿಕೇಟ್‌(ಸಿ3ಎಸ್‌)ಅನ್ನು ನೀರಿನ ಜತೆ ಮಿಶ್ರಣ ಮಾಡಲಾಯಿತು. ಮಿಕ್ಸ್‌ ಯೋಜನೆಯಡಿ ಇದೇ ಮೊದಲ ಬಾರಿಗೆ ಭೂಮಿಯಲ್ಲಿ ತಯಾರಿಸಲ್ಪಟ್ಟ ಸಿಮೆಂಟ್‌ ಮಿಶ್ರಣ ಹಾಗೂ ಬಾಹ್ಯಾಕಾಶದಲ್ಲಿ ತಯಾರಿಸಲ್ಪಟ್ಟ ಸಿಮೆಂಟ್‌ ಮಿಶ್ರಣದ ವ್ಯತ್ಯಾಸವನ್ನು ಅಧ್ಯಯನ ಮಾಡಲಾಗಿದೆ. ಮಿಶ್ರಣದಿಂದ ತಯಾರಾದ ಉತ್ಪನ್ನದ ಸೂಕ್ಷ್ಮ ರಚನೆಯಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದು, ಇದರ ಸಾಮರ್ಥ್ಯವನ್ನು ಪರೀಕ್ಷಿಸಬೇಕಾಗಿದೆ ಎಂದು ತಿಳಿಸಲಾಗಿದೆ.  

‘ಗಗನಯಾತ್ರಿಗಳು ಭವಿಷ್ಯದಲ್ಲಿ ಚಂದ್ರ ಹಾಗೂ ಮಂಗಳ ಗ್ರಹಕ್ಕೆ ತೆರಳುವ ಸಂದರ್ಭದಲ್ಲಿ ಅಲ್ಲಿ ವಾಸಿಸಲು ಹಾಗೂ ಅಧ್ಯಯನ ನಡೆಸಲು ಸುರಕ್ಷಿತ ಪ್ರದೇಶದ ನಿರ್ಮಾಣ ಅಗತ್ಯ. ಕಾಂಕ್ರೀಟ್‌ನಿಂದ ಸದೃಢವಾದ ಹಾಗೂ ಕಿರಣಗಳನ್ನು ತಡೆಯಬಲ್ಲ ಗೋಡೆ ನಿರ್ಮಾಣ ಸಾಧ್ಯ. ಕಾಂಕ್ರೀಟ್‌ ತಯಾರಿಸಲು ಮರಳು, ಕಲ್ಲು, ನೀರು ಹಾಗೂ ಸಿಮೆಂಟ್‌ ಬಳಸುತ್ತೇವೆ. ಬಾಹ್ಯಾಕಾಶದಲ್ಲಿ ಕಾಂಕ್ರೀಟ್‌ ತಯಾರಿಸುವ ಸಂದರ್ಭದಲ್ಲಿ ಆಗುವ ವ್ಯತ್ಯಾಸಗಳನ್ನು ಇನ್ನಷ್ಟೇ ಪರೀಕ್ಷಿಸಬೇಕಿದೆ’ ಎಂದು ನಾಸಾ ತಿಳಿಸಿದೆ.  

ಭೂಮಿ ಹೋಲುವ ಗ್ರಹದಲ್ಲಿ ನೀರಿನಂಶ!
ಲಂಡನ್‌(ಪಿಟಿಐ):
ಸೌರವ್ಯೂಹದ ಹೊರಗಿರುವ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವ ಭೂಮಿಯ ವಾತಾವರಣವನ್ನೇ ಹೋಲುವ ಗ್ರಹವೊಂದರಲ್ಲಿ ನೀರಿನ ಅಂಶವಿರುವುದನ್ನು ಖಗೋಳಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ಈ ನಕ್ಷತ್ರ(ರೆಡ್‌ ಡ್ವಾರ್ಫ್‌) ಅಂದಾಜು 110 ಜ್ಯೋತಿರ್ವರ್ಷ ದೂರದಲ್ಲಿ ಲಿಯೋ ನಕ್ಷತ್ರ ಪುಂಜದಲ್ಲಿದೆ.

‘ಈ ಗ್ರಹವನ್ನು ಕೆ2–18ಬಿ ಎಂದು ಗುರುತಿಸಲಾಗಿದ್ದು, ಇದರ ದ್ರವ್ಯರಾಶಿ ಭೂಮಿಯ ದ್ರವ್ಯರಾಶಿಗಿಂತ 8 ಪಟ್ಟು ಅಧಿಕವಾಗಿದೆ. ನಮ್ಮ ಸೌರವ್ಯೂಹದ ಹೊರಗೆ ವಾಸಯೋಗ್ಯವಾದ ತಾಪಮಾನ ಹಾಗೂ ನೀರಿನ ಅಂಶ ಹೊಂದಿರುವ ಏಕೈಕ ಗ್ರಹ ಇದಾಗಿದೆ’ ಎಂದು ನೇಚರ್‌ ಅಸ್ಟ್ರೋನೊಮಿ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಉಲ್ಲೇಖಿಸಲಾಗಿದೆ. 

‘ಭೂಮಿಯನ್ನು ಹೊರತುಪಡಿಸಿ ನೀರಿನ ಅಂಶ ಇರುವಂತಹ ವಾಸ ಯೋಗ್ಯ ಗ್ರಹಗಳನ್ನು ಪತ್ತೆ ಹಚ್ಚುವುದು ನಿಜವಾಗಿಯೂ ರೋಮಾಂಚಕಾರಿ. ಕೆ2–18ಬಿ ಮತ್ತೊಂದು ಭೂಮಿಯಲ್ಲ. ಇದರ ವಾತಾವರಣ ಕೊಂಚ ವಿಭಿನ್ನವಾಗಿದೆ. ಆದರೆ ನಮ್ಮ ಭೂಮಿ ಏತಕ್ಕೆ ಅಸಾಮಾನ್ಯ ಎನ್ನುವ ಪ್ರಶ್ನೆಗೆ ಇದು ಉತ್ತರಿಸುತ್ತದೆ’ ಎಂದು ಲೇಖಕ, ಬ್ರಿಟನ್‌ನ ಯೂನಿವರ್ಸಿಟಿ ಕಾಲೇಜ್ ಲಂಡನ್‌ನ(ಯುಸಿಎಲ್‌) ಆ್ಯಂಜಿಲೋಸ್‌ ಸಿಯಾರಸ್‌ ಹೇಳಿದ್ದಾರೆ.space

ಪ್ರತಿಕ್ರಿಯಿಸಿ (+)