ಶುಕ್ರವಾರ, ಜೂನ್ 5, 2020
27 °C

ಅಸುಕುಸಾ ಸೆನ್ಸೋಜಿ ಮಂದಿರ

ಗೀತಾ ಕುಂದಾಪುರ Updated:

ಅಕ್ಷರ ಗಾತ್ರ : | |

Prajavani

ವಿಶ್ವದ ದುಬಾರಿ ಹಾಗೂ ಸಿರಿವಂತ ನಗರಗಳಲ್ಲೊಂದಾದ ಟೊಕಿಯೊದಲ್ಲಿ ಅಸುಕುಸಾ ಸೆನ್ಸೋಜಿ ಎಂಬ ಮಂದಿರವಿದೆ. ಇಲ್ಲಿಗೆ ಭೇಟಿ ನೀಡಿದರೆ ಜಪಾನ್‌ ದೇಶದ ಮೂಲ ಸಂಸ್ಕೃತಿ ಮತ್ತು ಸಂಪ್ರದಾಯ ಅರಿಯಬಹುದು.

‘ಕನ್ನೋನ್ ಸೆನ್ಸೋಜಿ‘ ಮಂದಿರ, ಟೊಕಿಯೊದ ಅತೀ ಹಳೆಯ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣ. ಪ್ರತಿ ವರ್ಷ ಸುಮಾರು 30 ಲಕ್ಷ ಜನರು ಸಂದರ್ಶಿಸುತ್ತಾರಂತೆ. ಜಪಾನಿನ ಅಸುಕುಸಾದಲ್ಲಿರುವ ಈ ಬೌದ್ಧ ಮಂದಿರದಿಂದ ಅನತಿ ದೂರದಲ್ಲಿ ಶಿಂತೊ ಧರ್ಮದವರ ಪುಣ್ಯಕ್ಷೇತ್ರವಿದ್ದು ಪಕ್ಕದಲ್ಲಿ ಪಗೋಡ (ಗೋಪುರ)ವಿದೆ.

ಸೆನ್ಸೋಜಿ ಮಂದಿರದಲ್ಲಿ ಬೌದ್ಧ ಧರ್ಮದ ಕನ್ನೋನ್‌ನನ್ನು ಪೂಜಿಸುತ್ತಾರೆ. ಈ ಮಂದಿರದ ಕಥೆಯೇ ಆಕರ್ಷಕವಾಗಿದೆ. ಸುಮಾರು 6ನೇಯ ಶತಮಾನದಲ್ಲಿ ಹಿನುಕೋಮ ಎಂಬ ಅಣ್ಣ ತಮ್ಮಂದಿರು ನದಿಯಲ್ಲಿ ಮೀನು ಹಿಡಿಯುವಾಗ ಬೋಧಿ ಸತ್ವ ಕನ್ನೋನಿನ ಮೂರ್ತಿ ಸಿಕ್ಕಿತಂತೆ. ಅಣ್ಣ ತಮ್ಮಂದಿರು ಮೂರ್ತಿಯನ್ನು ಮನೆಗೆ ತಂದು ಪೂಜಿಸಿ ನಂತರ ಮನೆಯನ್ನೇ ಮಂದಿರವಾಗಿಸಲು ಹೊರಟಾಗ ಊರಿನ ಮುಖ್ಯಸ್ಥ ಸಹಾಯ ಮಾಡಿದನಂತೆ. ಮಂದಿರದ ಕೆಲಸ ಕ್ರಿ.ಶ. 645ರಲ್ಲಿ ಮುಗಿದು ಟೊಕಿಯೊದ ಅತೀ ಹಳೆಯ ಮಂದಿರವೆಂದು ಪ್ರಸಿದ್ಧವಾಯಿತು. ಆದರೆ ಎರಡನೆಯ ವಿಶ್ವ ಯುದ್ಧದಲ್ಲಿ ಮಂದಿರ ಬಾಂಬ್ ದಾಳಿಯಿಂದ ಹಾನಿಗೊಳಗಾಗಿ ನಂತರ ಮರು ನಿರ್ಮಾಣವಾಯಿತು.

ನಾವು ಕನ್ನೋನ್‌ ಸೆನ್ಸೋಜಿ ಮಂದಿರ ಪ್ರವೇಶಿಸುತ್ತಲೇ ‘ಥಂಡರ್ ಗೇಟ್’ ಎಂಬ ಬೃಹತ್ ದ್ವಾರ ನಮ್ಮನ್ನು ಸ್ವಾಗತಿಸಿತು. ಗೇಟ್‌ನಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಕಾಗದದ ದೊಡ್ಡ ಗೂಡುದೀಪಗಳನ್ನು ತೂಗು ಹಾಕಿದ್ದರು. ಇದು ಗುಡುಗು ಮತ್ತು ಮಿಂಚಿನ ಸಂಕೇತವಂತೆ. ಪ್ರವೇಶದ್ವಾರದಲ್ಲಿ ‘ಗುಡುಗು ದೇವತೆ’ ಮತ್ತು ‘ಗಾಳಿ ದೇವತೆ’ ಮೂರ್ತಿಗಳಿವೆ. ನಂತರ ಸಿಗುವುದೇ ಎರಡು ಅಂತಸ್ತಿನ ಒಳ ಆವರಣದ ಹೆಬ್ಬಾಗಿಲು. ಅಲ್ಲಿಯೂ ಕೆಂಪು ಮತ್ತು ಕಪ್ಪು ಬಣ್ಣದ ಕಾಗದದ ಗೂಡುದೀಪಗಳನ್ನು ತೂಗು ಹಾಕಿದ್ದಾರೆ.‌ ಹೆಬ್ಬಾಗಿಲಿನ ಅಕ್ಕಪಕ್ಕದಲ್ಲಿ ನೀಯೊ-ಬುದ್ಧ ರಕ್ಷಕನ ಪ್ರತಿಮೆಯಿದೆ.

ಒಳ ಆವರಣದಲ್ಲಿರುವ ಹೆಬ್ಬಾಗಿಲನ್ನು ದಾಟುತ್ತಿದ್ದಂತೆ ಎದುರಾಗುವುದು ವಿಶಾಲವಾದ ಅಂಗಳ, ಐದು ಅಂತಸ್ತಿನ ಪಗೋಡ. ಕನ್ನೋನ್‌ ಮಂದಿರ, ‘ಅಸಕುಸಾ ಮಂದಿರ’ ಶಿಂತೊ ಧರ್ಮದವರ ಪುಣ್ಯಕ್ಷೇತ್ರ. ಎಲ್ಲಾ ಬೌದ್ಧ ದೇವಾಲಯಗಳಲ್ಲಿ ಇರುವಂತೆ ಇಲ್ಲಿಯೂ ಹೊರ ಆವರಣದಲ್ಲಿ ದೊಡ್ಡ ಊದು ಬತ್ತಿಯ ಸ್ಟಾಂಡ್ ಇದೆ. ಊದುಬತ್ತಿಯ ಹೊಗೆ ರೋಗ ನಿವಾರಕ ಎನ್ನುವುದು ಜನರ ನಂಬಿಕೆ. ನೀವೂ 100 ‘ಯೆನ್‌’ ಕೊಟ್ಟು ಊದು ಬತ್ತಿ ಕೊಂಡು ಉರಿಸಬಹುದು. ‘ಯೆನ್‌’ ಎನ್ನುವುದು ಜಪಾನ್‌ನ ಕರೆನ್ಸಿ.

ಅಂಗಳದಲ್ಲಿ ದೊಡ್ಡ ‘ನೀರಿನ ಗೂಡು’ ಇದೆ. ಅದರಲ್ಲಿ ಸದಾ ನೀರು ಸುರಿಸುತ್ತಿರುವ ಲೋಹದ ‘ಡ್ರಾಗನ್’ ಇದೆ. ಈ ನೀರು ಜನರ ಮನಸ್ಸಿನ ಮತ್ತು ದೇಹದ ಕಲ್ಮಷ ತೊಳೆಯುತ್ತದೆ ಎಂಬ ನಂಬಿಕೆ. 

ಕನ್ನೋನ ಮಂದಿರದ ಪೂರ್ವ ಭಾಗಕ್ಕೆ ಅಸಕುಸಾ ಪುಣ್ಯಕ್ಷೇತ್ರವಿದೆ. ಅಸಕುಸಾ ಪುಣ್ಯಕ್ಷೇತ್ರಕ್ಕೆ ‘ಟೋರಿ’ ಹೆಬ್ಬಾಗಿಲಿದೆ. ಹೆಬ್ಬಾಗಿಲಿಗೆ ಬಿಳಿ ಬಣ್ಣದ ಕಾಗದದ ಗೂಡುದೀಪಗಳಿವೆ.

1649ರಲ್ಲಿ ಸೆನ್ಸೋಜಿ ಮಂದಿರ ಸ್ಥಾಪನೆಯಾಯಿತು. ಹಿನುಕೋಮ ಅಣ್ಣ ತಮ್ಮಂದಿರು ಮತ್ತು ಅವರಿಗೆ ಸಹಾಯ ಮಾಡಿದ ಶ್ರೀಮಂತ ಜಮೀನುದಾರ ಹಾಜೀನೊ ನಕತೊಮೊನ ಗೌರವಾರ್ಥವಾಗಿ ಕಟ್ಟಿಸಿದ್ದು, ಆ ಮೂವರನ್ನೂ ದೇವತೆಗಳಂತೆ ಇಲ್ಲಿ ಪೂಜಿಸುತ್ತಿದ್ದಾರೆ. ಆಶ್ಚರ್ಯವೆಂದರೆ ಈ ಪುಣ್ಯಕ್ಷೇತ್ರವು ಎರಡನೇಯ ವಿಶ್ವ ಯುದ್ಧದ ಬಾಂಬ್ ದಾಳಿಗೆ ಒಳಗಾಗದೆ ಪವಾಡ ಸದೃಶ್ಯವಾಗಿ ಉಳಿದಿದೆಯಂತೆ.

ಪಕ್ಕದಲ್ಲಿರುವ ಐದಂತಸ್ತಿನ ಪಗೋಡದ ಒಳಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಮಂದಿರದ ಸುತ್ತಮುತ್ತ ಚೆರ‍್ರಿ ಗಿಡಗಳಿವೆ. ಮಾರ್ಚ್ ಕೊನೆಯ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಈ ಚೆರ‍್ರಿ ಮರಗಳಲ್ಲಿ ಗುಲಾಬಿ ಬಣ್ಣದ ಹೂವುಗಳನ್ನು ಕಾಣಬಹುದು.

ಬೌದ್ಧ ವಾಸ್ತು ಶಿಲ್ಪದ ಮಾದರಿ

ಈ ಮಂದಿರ ಜಪಾನ್ ಬೌದ್ಧ ವಾಸ್ತುಶಿಲ್ಪದ ಮಾದರಿಯಲ್ಲಿದೆ. ಜಪಾನಿಗೆ ಬೌದ್ಧ ಧರ್ಮವು ಕೊರಿಯಾದಿಂದ ಬಂದಿತಂತೆ. ಮಂದಿರಗಳ ವಾಸ್ತುಶಿಲ್ಪವು ಮೊದ ಮೊದಲಿಗೆ ಕೊರಿಯವನ್ನು ಅನುಕರಿಸುತ್ತಿದ್ದು, ಪುನಃ ಚೀನಾವನ್ನೂ ಅನುಕರಿಸಿ, ಜಪಾನ್ ತನ್ನದೇ ಅಭಿರುಚಿಗೆ ಮತ್ತು ಹವಮಾನಕ್ಕೆ ಅನುಗುಣವಾಗಿ ಬದಲಾವಣೆಯನ್ನು ಮಾಡಿಕೊಂಡಿತು. ಮಂದಿರಗಳಲ್ಲಿ ಆದಷ್ಟು ಮರವನ್ನೇ ಉಪಯೋಗಿಸುತ್ತಿದ್ದು, ಅಡಿಪಾಯ ಮಾತ್ರ ಕಲ್ಲಿನದಾಗಿರುತ್ತದೆ. ಟೊಕಿಯೊದ ಅತೀ ದೊಡ್ಡ ಹಬ್ಬವಾದ ‘ಸಂಜ ಮತ್ಸುರಿ’ ಯನ್ನು ವಸಂತ ಕಾಲ ಮುಗಿಯುತ್ತಿದ್ದಂತೆ ಅಂದರೆ ಮೇ ತಿಂಗಳ ಕೊನೆಯಲ್ಲಿ 3-4 ದಿನಗಳವರೆಗೆ ನಡೆಯುತ್ತದೆ. ಅದು ಸೆನ್ಸೋಜಿ ಮಂದಿರದ ಅಂಗಳದಲ್ಲಿ ನಡೆಯುವುದು.

ಅಸಕುಸಾ ಸೆನ್ಸೋಜಿ ಮಂದಿರಕ್ಕೆ ಭೇಟಿ ನೀಡಿದರೆ ಅದೃಷ್ಟ, ಸಂತೋಷ, ಸಂಬಂಧಗಳು ಉತ್ತಮವಾಗುತ್ತದೆ. ಆಸೆ ಪಟ್ಟಿದ್ದೆಲ್ಲಾ ಕೈಗೆ ಸಿಗುತ್ತದೆಂಬ ನಂಬಿಕೆ ಜಪಾನಿಯರಿಗೆ.

ಈ ಮಂದಿರವು ಟೋಕಿಯೊದ ಅತೀ ಎತ್ತರ ಕಟ್ಟಡವಾದ ‘ಟೊಕಿಯೊ ಟ್ರೀ’ ಯಿಂದ ಕೇವಲ 15 ನಿಮಿಷದ ನಡಿಗೆಯ ಪ್ರಯಾಣ. ಮಂದಿರದ ಆವರಣದಲ್ಲಿ ‘ಕಿಮೋನ’ (ಜಪಾನಿ ವೇಷ) ತೊಟ್ಟ ಜಪಾನೀಯರನ್ನು (ಮಹಿಳೆಯರು ಮತ್ತು ಪುರುಷರು) ನೋಡಬಹುದು. ಹತ್ತಿರದ ಅಂಗಡಿಗಳಲ್ಲಿ ಕಿಮೋನ ಬಾಡಿಗೆಗೂ ಸಿಗುತ್ತದೆ. ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಾದರೆ ಚೆರ‍್ರಿ ಮರದ ಹತ್ತಿರ ನಿಂತು ಸೆಲ್ಫಿ ತೆಗೆದುಕೊಳ್ಳುವ ಗುಂಪು, ಗುಂಪು ಜಪಾನಿ ಹೆಣ್ಣು ಮಕ್ಕಳನ್ನು ನೋಡಬಹುದು.

ಜಪಾನ್‌ನಲ್ಲಿ ಎಷ್ಟು ಓಡಾಡಿದರೂ ನಮ್ಮೂರಿನಲ್ಲಿರುವಂತೆ ದಾರಿ ಬದಿಯ ಚಿಕ್ಕ ಪುಟ್ಟ ಗೂಡಂಗಡಿಗಳಿಲ್ಲ. ಆದರೆ ಅಸಕುಸಾ ಮಂದಿರದ ಎದುರು ದಾರಿಯ ಎರಡೂ ಬದಿಯಲ್ಲೂ ಚಿಕ್ಕ ಚಿಕ್ಕ ಅಂಗಡಿಗಳಿವೆ ಇದೇ ‘ನಾಕಮಿಸ್-ಡೋರಿ’. ಈ ಅಂಗಡಿಗಳಲ್ಲಿ ಸ್ಮಾರಕ ವಸ್ತು
ಗಳಿಂದ ಹಿಡಿದು ತಿಂಡಿ ತಿನಿಸು, ಬಟ್ಟೆ, ಆಟಿಕೆ ಎಲ್ಲವೂ ಸಿಗುತ್ತದೆ.

ಸಿಹಿ ತಿನಿಸೇ ಇರಲಿ, ಐಸ್ ಕ್ರೀಮ್‌ ಇರಲಿ, ಆದರೆ ಇಲ್ಲಿನ ಜನರಿಗೆ ಮಾತ್ರ ಹಸಿರು ಚಹಾ ಹೆಚ್ಚು ಪ್ರಿಯ ಇಲ್ಲಿಯ ಜನರಿಗೆ. ಅಕ್ಕಿಯಿಂದ ತಯಾರಿಸಿದ ಹಪ್ಪಳ, ಸಂಡಿಗೆಯಂತಹ ವಸ್ತುಗಳೂ ಸಿಗುತ್ತವೆ. ಜಪಾನಿನ ಸೊಗಡನ್ನು ಅರಿಯಬೇಕೆಂದರೆ ಇಂತಹ ಜಾಗದಲ್ಲಿ ಓಡಾಡಿ ಬೇಕಾದ್ದನ್ನು ನೋಡಿ, ತಿಂದು ಆನಂದಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.