ಕಾಶ್ಮೀರಿ ಯುವಕರ ಮೇಲೆ ಹಲ್ಲೆ

ಬುಧವಾರ, ಮಾರ್ಚ್ 27, 2019
22 °C
ಲಖನೌದಲ್ಲಿ ಘಟನೆ: ನಾಲ್ವರ ಬಂಧನ

ಕಾಶ್ಮೀರಿ ಯುವಕರ ಮೇಲೆ ಹಲ್ಲೆ

Published:
Updated:
Prajavani

ಲಖನೌ: ನಗರದ ಡಾಲಿಗಂಜ್‌ ಸೇತುವೆ ಬಳಿ ಒಣಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಕಾಶ್ಮೀರಿ ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.

ಕುಲ್ಗಾಮ್‌ನ ಅಬ್ದುಲ್‌ ಹಾಗೂ ಅಫ್ಜಲ್‌ ಎಂಬುವವರ ಮೇಲೆ ಕೇಸರಿ ಬಣ್ಣದ ಬಟ್ಟೆ ಧರಿಸಿದ್ದ ನಾಲ್ವರು ಹಲ್ಲೆ ನಡೆಸಿರುವುದನ್ನು ಚಿತ್ರೀಕರಿಸಲಾಗಿದ್ದು, ಈ ವಿಡಿಯೊ ವೈರಲ್‌ ಆಗಿದೆ. ವಿಡಿಯೊ ದೃಶ್ಯಗಳ ಆಧಾರದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

’ಯುವಕರು ಕಾಶ್ಮೀರದಲ್ಲಿ ಕಲ್ಲೆಸೆಯುತ್ತಾರೆ ಎಂದು ಹೇಳುತ್ತಿದ್ದ ನಾಲ್ವರು ಅವರನ್ನು ಬುಧವಾರ ಹೊಡೆದಿದ್ದಾರೆ. ನಾಗರಿಕರೊಬ್ಬರು ಈ ಘಟನೆಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಅದರ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ‘ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ಗುರುವಾರ ತಿಳಿಸಿದ್ದಾರೆ.

ಬಜರಂಗ್‌ ಸೋನ್ಕರ್‌ ಪ್ರಮುಖ ಆರೋಪಿಯಾಗಿದ್ದು, ವಿಶ್ವ ಹಿಂದೂ ದಳದ ಅಧ್ಯಕ್ಷ ಎಂದು ಹೇಳಲಾಗುತ್ತಿದೆ. ಈತನ ವಿರುದ್ಧ ಕೊಲೆ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಯಡಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಿಮಾಂಶು ಗರ್ಗ್‌, ಅನಿರುದ್ಧ್ ಹಾಗೂ ಅಮರ್‌ ಕುಮಾರ್‌ ಇತರ ಆರೋಪಿಗಳಾಗಿದ್ದಾರೆ.

’ಪೊಲೀಸರು ವಿಳಂಬ ಮಾಡದೇ ಕ್ರಮ ಕೈಗೊಂಡಿದ್ದು, ಇದರ ಬಗ್ಗೆ ನಮಗೆ ತೃಪ್ತಿ ಇದೆ‘ ಎಂದು ಹಲ್ಲೆಗೆ ಒಳಗಾಗಿರುವ ಅಬ್ದುಲ್‌ ಹಾಗೂ ಅಫ್ಜಲ್‌ ಹೇಳಿದ್ದಾರೆ.

‘ನಿಮ್ಮ ಮಾತಿಗೆ ತೂಕ ಇದೆ ಎಂದು ತೋರಿಸಿ’

ಲಖನೌದಲ್ಲಿ ಇಬ್ಬರು ಕಾಶ್ಮೀರಿ ಯುವಕರ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ನ್ಯಾಷನಲ್‌ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಉಮರ್‌ ಅಬ್ದುಲ್ಲಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ತಿಂಗಳು ರಾಜಸ್ಥಾನದ ಟೊಂಕ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ’ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗಳ ವಿರುದ್ಧ ಅಲ್ಲ‘ ಎಂದಿದ್ದರು. ಈ ಮಾತುಗಳನ್ನು ಉಲ್ಲೇಖಿಸಿದ ಉಮರ್‌, ’ಪ್ರಧಾನಿ ಹೇಳಿಕೆ ನಿಜ ಅರ್ಥದಲ್ಲಿ ಜಾರಿಗೆ ಬರಬೇಕು. ಇದು ಮತ್ತೊಂದು ಸುಳ್ಳು ಎನಿಸಬಾರದು‘ ಎಂದು ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !