ಶುಕ್ರವಾರ, ನವೆಂಬರ್ 15, 2019
22 °C
ಆರು ತಿಂಗಳ ಕಾಲ ಆರ್ಥಿಕ ಅಕ್ರಮಗಳ ಪರಿಶೋಧನೆ ನಡೆಸಿದ ತಂಡ

ವಿಶೇಷ ಲೆಕ್ಕಪರಿಶೋಧಕರ ಅಂಕೆಗೂ ನಿಲುಕಲಿಲ್ಲ ನಷ್ಟ

Published:
Updated:

ಬೆಂಗಳೂರು: ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳಿಂದ ಬಿಬಿಎಂಪಿಗೆ ಒಟ್ಟು ಎಷ್ಟು ಆರ್ಥಿಕ ನಷ್ಟ ಉಂಟಾಗಿದೆ?

ಈ ಕುರಿತು ತನಿಖೆ ನಡೆಸುವ ಸಲುವಾಗಿಯೇ ಬಿಬಿಎಂಪಿಯ ಮುಖ್ಯ ಲೆಕ್ಕಪರಿಶೋಧಕರಾಗಿದ್ದ ಕೆ.ಬೀನಾ ನೇತೃತ್ವದ ತಂಡವನ್ನು ಸರ್ಕಾರ ರಚಿಸಿತ್ತು. ಈ ಮೂರು ವಿಭಾಗಗಳ ಅಕ್ರಮಗಳ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಸಮಿತಿ ನೀಡಿದ್ದ ವರದಿಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧ್ಯಯನ ಮಾಡಿದ್ದ ತಂಡ, ಅದರ ಆಧಾರದಲ್ಲಿ ವರದಿಯನ್ನು ಸಿದ್ಧಪಡಿಸಿದೆ.

ಕರ್ತವ್ಯಲೋಪ, ಅಧಿಕಾರ ದುರ್ಬಳಕೆ ಪ್ರಕರಣಗಳ ಸ್ವರೂಪ ಎಂತಹದ್ದು, ಇದಕ್ಕೆ ಹೊಣೆಗಾರರು ಯಾರು ಎಂಬುದನ್ನು ಗುರುತಿಸುವುದು, ತಪ್ಪಿತಸ್ಥರ ಮೇಲೆ ಏನು ಶಿಸ್ತುಕ್ರಮ (ಬಾಕಿ ವಸೂಲಿ, ಕ್ರಿಮಿನಲ್‌ ಮೊಕದ್ದಮೆ ಇತ್ಯಾದಿ) ಜರುಗಿಸಬೇಕು ಎಂದು ನಿರ್ದಿಷ್ಟಪಡಿಸುವುದು, ಸರ್ಕಾರಕ್ಕೆ ಇದರಿಂದ ಒಟ್ಟು ಎಷ್ಟು ನಷ್ಟ ಉಂಟಾಗಿದೆ ಎಂದು ಪತ್ತೆ ಹಚ್ಚುವ ಸವಾಲನ್ನು ಈ ತಂಡಕ್ಕೆ ವಹಿಸಲಾಗಿತ್ತು.

ಬೇರೆ ಬೇರೆ ಇಲಾಖೆಗಳಲ್ಲಿ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಕೆಲಸ ಕಾರ್ಯದಲ್ಲಿ ತೊಡಗಿದ್ದ 13 ಅಧಿಕಾರಿಗಳು ಈ ತಂಡದಲ್ಲಿದ್ದರು. 2019ರ ಫೆ.14ರಿಂದ ಲೆಕ್ಕಪರಿಶೀಲನಾ ಕಾರ್ಯ ಆರಂಭಿಸಿದ್ದ ಈ ತಂಡವು 2019ರ ಆ.13ರಂದು ಪೂರ್ಣಗೊಳಿಸಿತು. ತಂಡವು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆರು ತಿಂಗಳು ಪರಿಶೀಲನೆ ಬಳಿಕವೂ, ಮೂರು ವಿಭಾಗಗಳಲ್ಲಿ ನಡೆದ ಅಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ನಷ್ಟ ಉಂಟಾಗಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಈ ತಂಡಕ್ಕೆ ಸಾಧ್ಯವಾಗಲೇ ಇಲ್ಲ.

‘ಕಡತಗಳಲ್ಲಿ ಬಿಲ್‌ ಅಂಗೀಕರಿಸಿರುವ ಬಗ್ಗೆ ದಾಖಲೆಗಳಿವೆ. ಆದರೆ, ಬಿಲ್‌ ಪಾವತಿಸಿದ ಬಗ್ಗೆ ನಿಖರವಾದ ದಾಖಲೆಗಳು ಲಭ್ಯ ಇಲ್ಲ. ಈ ವಿಚಾರದಲ್ಲಿ ನಿಖರತೆ ಇಲ್ಲದ ಕಾರಣ ಗುತ್ತಿಗೆದಾರರಿಗೆ ಎಷ್ಟು ಮೊತ್ತ ಪಾವತಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಇದನ್ನು ಖಾತರಿಪಡಿಸಿಕೊಳ್ಳುವುದೂ ಕಷ್ಟ ಸಾಧ್ಯ’ ಎಂದು ಈ ತಂಡವು ಅಭಿಪ್ರಾಯಪಟ್ಟಿದೆ.

‘ಮೂರು ವಿಭಾಗಗಳಲ್ಲಿ ಭದ್ರತ ಠೇವಣಿ ಮತ್ತು ಇಎಂಡಿ, ಮರುಪಾವತಿಯ ಬಿಲ್‌ಗಳು ಲಭ್ಯ ಇವೆ. ಈ ಮೊತ್ತಗಳು ಜಮೆ ಆಗಿರುವುದಕ್ಕೆ ಸಂಬಂಧಿಸಿದಂತೆ ಮೂಲ ದಾಖಲೆಗಳು ಲಭ್ಯ ಇಲ್ಲ. ಇವುಗಳನ್ನು ಜಮೆ ಮಾಡಿಸಿಕೊಳ್ಳದೆಯೇ ಬಿಲ್‌ ಪಾವತಿ ಮಾಡಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ದಾಖಲೆಗಳ ಕೊರತೆ ಇದೆ’ ಎಂದು ತಂಡವು ಹೇಳಿದೆ.

ನ್ಯಾ.ನಾಗಮೋಹನದಾಸ್‌ ನೇತೃತ್ವದ ತನಿಖಾ ಸಮಿತಿಯು ವರದಿಯಲ್ಲಿ ಗುರುತಿಸಿರುವಂತೆ ಸುಮಾರು 32 ವಿಧದ ಅಕ್ರಮಗಳು ಈ ಮೂರು ವಿಭಾಗಗಳಲ್ಲಿ ನಡೆದಿರುವುದನ್ನು ಲೆಕ್ಕಪರಿಶೋಧಕರ ತಂಡವೂ ದೃಢಪಡಿಸಿದೆ.

ಕಾಮಗಾರಿ ಹಂಚಿಕೆ ಮತ್ತು ನಿರ್ವಹಣೆಯಲ್ಲಿ ಕಾರ್ಯವಿಧಾನ ಲೋಪವೆಸಗಿರುವ ಅಧಿಕಾರಿಗಳ ಅಥವಾ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವ ಬಗ್ಗೆ ಆಡಳಿತಾತ್ಮಕ ಪ್ರಾಧಿಕಾರದಿಂದ ನಿಖರ ಮಾಹಿತಿ ಪಡೆದು ಕ್ರಮ ವಹಿಸಬಹುದು ಎಂದು ವರದಿಯಲ್ಲಿ ಸಲಹೆ ನೀಡಿದೆ.

ಲೆಕ್ಕಪರಿಶೋಧಕರ ತಂಡಕ್ಕೂ ಸಹಕಾರ ನೀಡದ ಬಿಬಿಎಂಪಿ
ನ್ಯಾ.ನಾಗಮೋಹನದಾಸ್‌ ನೇತೃತ್ವದ ಸಮಿತಿಗೆ ಅಸಹಕಾರ ನೀಡಿದಂತೆಯೇ ಲೆಕ್ಕಪರಿಶೋಧಕರ ತಂಡಕ್ಕೂ ಪಾಲಿಕೆಯಿಂದ ನಿರೀಕ್ಷಿತ ಸಹಕಾರ ಸಿಕ್ಕಿಲ್ಲ. ಮೂರು ವಿಭಾಗಗಳಲ್ಲಿ 2008ರಿಂದ 2012ರ ನಡುವೆ ಕಾರ್ಯನಿರ್ವಹಿಸಿದ್ದ ಎಂಜಿನಿಯರ್‌ಗಳ ವಿವರವನ್ನು ಒದಗಿಸುವಂತೆ ತಂಡವು ಬಿಬಿಎಂಪಿಯನ್ನು ಕೋರಿತ್ತು. ಆದರೆ, ಬಿಬಿಎಂಪಿ ಈ ಕುರಿತ ಯಾವುದೇ ಮಾಹಿತಿಯನ್ನು ಒದಗಿಸಲಿಲ್ಲ ಎಂದು ತಂಡವು ವರದಿಯಲ್ಲಿ ಹೇಳಿದೆ.

***
‘ಬ್ರಹ್ಮಾಂಡ ಭ್ರಷ್ಟಾಚಾರ’ ಸರಣಿಗೆ ಓದುಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲಿ ಆಯ್ದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ. 

***

‘ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’
ಅಭಿವೃದ್ಧಿಯ ಹೆಸರಿನಲ್ಲಿ ಕಳಪೆ ಕಾಮಗಾರಿ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಸಮಿತಿಯ ಶಿಫಾರಸಿನಂತೆ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಕಠಿಣ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಲಿದೆ. 
-ಬಿ.ಎಸ್. ಮಮತಾ, ಬ್ಯಾಟರಾಯನಪುರ

*
‘ಹೆಸರು ಬಹಿರಂಗವಾಗಲಿ’
ಪಾಲಿಕೆ ಅಕ್ರಮಗಳ ಬಗ್ಗೆ ನಾಗಮೋಹನದಾಸ್ ನೇತೃತ್ವದ ಸಮಿತಿ ನೀಡಿದ ವರದಿ ಅನುಸಾರ ಸೂಕ್ತ ತನಿಖೆ ನಡೆಯಲಿ. ತಪ್ಪಿತಸ್ಥರ ಹೆಸರನ್ನು ಬಿಹಿರಂಗಪಡಿಸುವ ಮೂಲಕ ಭ್ರಷ್ಟರ ನಿಜವಾದ ಮುಖವನ್ನು ಅನಾವರಣ ಮಾಡಬೇಕು. 
-ಚಿಕ್ಕಭೈರಪ್ಪ, ಇಂದಿರಾನಗರ

*
‘ಹಣದ ಲೂಟಿ ತಪ್ಪಲಿ’
ಅಕ್ರಮ ಕಾಮಗಾರಿಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು. ಈ ಮೂಲಕ ಸಾರ್ವಜನಿಕರ ದುಡ್ಡು ಲೂಟಿ ಆಗುವುದನ್ನು ತಡೆಯಬೇಕು. ಅಧಿಕಾರಿಗಳ ಗಿಂಬಳಕ್ಕೆ ಕಡಿವಾಣ ಹಾಕಿ, ಅವರಿಂದಲೇ ದಂಡ ಕಟ್ಟಿಸಬೇಕು. 
-ದೀಪಕ್ ಶಿರಾಲಿ, ಆರ್.ಟಿ. ನಗರ

*
‘ಭ್ರಷ್ಟರಿಗೆ ತಕ್ಕ ಶಿಕ್ಷೆ ನೀಡಿ’
ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಪಾರದರ್ಶಕ ವರದಿ ತಯಾರಿಸಿ, ಜನರ ಮುಂದಿಡಬೇಕು. ಆಗ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ. ಅಧಿಕಾರಿಗಳಿಗೆ ಸಹ ಭಯ ಶುರುವಾಗಲಿದೆ.
-ನಾಗರಾಜ್ ಗರಗ್, ಕೆಂಗೇರಿ

*
‘ತನಿಖೆಗೆ ಆದೇಶಿಸಿ’
ಪ್ರತಿ ವಿಷಯದಲ್ಲಿಯೂ ಬಿಬಿಎಂಪಿ ಕೋರ್ಟ್‌ ಚಾಟಿ ಬೀಸಿದ ಮೇಲೆಯೇ ಎಚ್ಚೆತ್ತುಕೊಳ್ಳುತ್ತಿದೆ. ಈ ಬಾರಿಯಾದರೂ ಪ್ರಕರಣ ಕೋರ್ಟ್‌ ಮೆಟ್ಟಿಲೇರುವ ಮುನ್ನವೇ ತನಿಖೆಗೆ ಆದೇಶಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಲಿ. ಎಲ್ಲದಕ್ಕೂ ಕೋರ್ಟ್
ಮೊರೆ ಹೋಗಬೇಕಾದರೆ ಪಾಲಿಕೆ ಮತ್ತು ಸರ್ಕಾರ ಯಾಕೆ?
-ಮುಕುಂದ್, ಬೈಯಪ್ಪನಹಳ್ಳಿ

**
ನೀವೂ ಪ್ರತಿಕ್ರಿಯಿಸಿ
ಬಿಬಿಎಂಪಿಯ ಮೂರು ವಿಭಾಗಗಳಲ್ಲಿ 2008ರಿಂದ 2012ರನಡುವೆ ನಡೆದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಅಕ್ರಮಗಳು ನಡೆದಿರುವುದು ತನಿಖೆಯಿಂದ ಸಾಬೀತಾಗಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು.

ನಿಮ್ಮ ಅನಿಸಿಕೆಗಳನ್ನು (ಭಾವಚಿತ್ರ ಹಾಗೂ ವಿಳಾಸ ಸಮೇತ) ವಾಟ್ಸ್‌ ಆ್ಯಪ್‌ ಮಾಡಿ ವಾಟ್ಸ್‌ಆ್ಯಪ್‌ ಸಂಖ್ಯೆ: 9513322930

ಪ್ರತಿಕ್ರಿಯಿಸಿ (+)