ಕಲ್ಲಿದ್ದಲು ಗಣಿಗಾರಿಕೆಗೆ ಮಕ್ಕಳ ವಿರೋಧ: ಅದಾನಿ ವಿರುದ್ಧ ಪ್ರತಿಭಟನೆ

7
ಆಸ್ಟ್ರೇಲಿಯಾದಾದ್ಯಂತ ಪ್ರತಿಭಟನೆ

ಕಲ್ಲಿದ್ದಲು ಗಣಿಗಾರಿಕೆಗೆ ಮಕ್ಕಳ ವಿರೋಧ: ಅದಾನಿ ವಿರುದ್ಧ ಪ್ರತಿಭಟನೆ

Published:
Updated:

ಸಿಡ್ನಿ: ಭಾರತದ ಅದಾನಿ ಕಂಪನಿ ಆಸ್ಟ್ರೇಲಿಯಾದಲ್ಲಿ ಆರಂಭಿಸಲು ಹೊರಟಿರುವ ವಿವಾದಿತ ಕಲ್ಲಿದ್ದಲು ಗಣಿಗಾರಿಕೆಯನ್ನು ಕೈಬಿಡುವಂತೆ ದೇಶದಾದ್ಯಂತ ಶನಿವಾರ ಪ್ರತಿಭಟನೆ ನಡೆಯಿತು. ಶಾಲಾ ಮಕ್ಕಳೇ ಈ ಧರಣಿಯ ಮುಂದಾಳತ್ವ ವಹಿಸಿದ್ದು ವಿಶೇಷ. 

ಹವಾಮಾನ ವೈಪರೀತ್ಯದ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಸ್ಕಾಟ್ ಮೊರಿಸನ್ ಅವರನ್ನು ಒತ್ತಾಯಿಸಲು ಕಳೆದ ತಿಂಗಳೂ ಮಕ್ಕಳು ಬೀದಿಗಿಳಿದ್ದರು. 

ದೇಶದ ಹಲವು ನಗರಗಳಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ, ಬೆಂಬಲ ನೀಡುವಂತೆ ಸಾರ್ವಜನಿಕರಿಗೆ ಮಕ್ಕಳು ಆಹ್ವಾನ ನೀಡಿದ್ದರು. 

‘ಉತ್ತಮ ಭವಿಷ್ಯಕ್ಕಾಗಿ ನಾವು ಹೋರಾಡಬೇಕು, ಹೋರಾಡುತ್ತಲೇ ಇರಬೇಕು. ಕೇವಲ ನಮಗಾಗಿ ಮಾತ್ರವಲ್ಲ. ನಮ್ಮ ಮಕ್ಕಳು, ಅವರ ಮಕ್ಕಳು ಹಾಗೂ ಮುಂದಿನ ತಲೆಮಾರಿನ ಭವಿಷ್ಯಕ್ಕಾಗಿ ಇದು ಅನಿವಾರ್ಯ’ ಎಂದು 14 ವರ್ಷದ ಬಾಲಕಿ ಜೀನ್ ಹಿಂಚ್‌ಕ್ಲಿಫ್ ತಿಳಿಸಿದರು.

ಕ್ವೀನ್ಸ್‌ಲ್ಯಾಂಡ್‌ ರಾಜ್ಯದಲ್ಲಿರುವ ವಿವಾದಿತ ಕಾರ್ಮೈಕಲ್ ಗಣಿಯ ಕಾರ್ಯಾರಂಭ ಮಾಡುವುದಾಗಿ ಕಳೆದ ತಿಂಗಳು ಅದಾನಿ ಕಂಪನಿ ಘೋಷಿಸಿತ್ತು. ಕೆಲ ವಾರಗಳಲ್ಲೇ ಕಾಮಗಾರಿ ಆರಂಭವಾಗಲಿದೆ. 

ಯೋಜನೆ ಆರಂಭಿಸದಂತೆ ಸರ್ಕಾರ ಹಾಗೂ ವಿರೋಧಪಕ್ಷಗಳು ತಡೆ ನೀಡಬೇಕು ಎಂದು ಪ್ರತಿಭಟನಾಕಾರರು ಬೇಡಿಕೆ ಇಟ್ಟರು. ‘ಆಸ್ಟ್ರೇಲಿಯಾದ ರಾಜಕೀಯ ನಾಯಕರು ತಕ್ಷಣ ಕ್ರಮ ಕೈಗೊಳ್ಳಬೇಕಿದೆ’ ಎಂದು 12 ವರ್ಷದ ಸ್ಯಾಮಿ ಲೈಟ್‌ಫೂಟ್ ಆಗ್ರಹಿಸಿದ್ದಾರೆ. 

‘ಶಾಲಾಮಕ್ಕಳೇ ದೇಶದ ಮುಂದಿನ ತಲೆಮಾರು. ಮಕ್ಕಳು ಮುಂದಿನ ನಾಯಕರು ಕೂಡಾ. ಹೀಗಾಗಿ ಮಕ್ಕಳು ದೊಡ್ಡ ದನಿಯಲ್ಲಿ ದೇಶದ ನಡೆಯನ್ನು ಪ್ರಶ್ನಿಸಬೇಕು’ ಎಂದು ಸ್ಯಾಮಿ ಹೇಳಿದರು.

ಹವಾಮಾನ ವಿಜ್ಞಾನದಲ್ಲಿ ‘ಫೇಲ್’!

ಮಕ್ಕಳ ಪ್ರತಿಭಟನೆಯು ಸೃಜನಾತ್ಮಕವೂ ಆಗಿತ್ತು. ಪ್ರಧಾನಿ ಸ್ಕಾಟ್ ಮೊರಿಸನ್ ಅವರನ್ನು ಹೋಲುವ ಬೃಹತ್ ಗೊಂಬೆಯನ್ನು ನಿರ್ಮಿಸಿ, ಅದರ ಎದುರು  ಮಕ್ಕಳು ಸೆಲ್ಫಿ ತೆಗೆದುಕೊಂಡರು. ಶಾಲೆಯ ಅಂಕಪಟ್ಟಿ ಹೋಲುವ ಕಾರ್ಡ್ ಧರಿಸಿ, ‘ಹವಾಮಾನ ವಿಜ್ಞಾನ’ ವಿಷಯದಲ್ಲಿ ‘ಫೇಲ್’ ಎಂದು ಬರೆಯುವ ಮೂಲಕ ಪ್ರಧಾನಿ ನಡೆಯನ್ನು ಖಂಡಿಸಲಾಯಿತು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !