ಸೋಮವಾರ, ಏಪ್ರಿಲ್ 6, 2020
19 °C

ಮಾಲಿನ್ಯಕ್ಕೆ ತಡೆ ಹಾಕುವ ಬಿಎಸ್‌ 6

ಜಯಸಿಂಹ ಆರ್‌. Updated:

ಅಕ್ಷರ ಗಾತ್ರ : | |

Prajavani

ಏಪ್ರಿಲ್ 1ರಿಂದ ದೇಶದಲ್ಲಿ ಭಾರತ್‌ ಸ್ಟೇಜ್‌6 ಪರಿಮಾಣ ಜಾರಿಗೆ ಬರಲಿದೆ. ಅಂದರೆ ಅಂದಿನಿಂದ ದೇಶದಲ್ಲಿ ಮಾರಾಟವಾಗುವ ಮತ್ತು ನೋಂದಣಿ ಆಗಲಿರುವ ವಾಹನಗಳೆಲ್ಲವೂ ಬಿಎಸ್‌6 ಪರಿಮಾಣದ ವಾಯುಮಾಲಿನ್ಯ ನಿಯಂತ್ರಣ ನಿಯಮಗಳಿಗೆ ಬದ್ಧವಾಗಿರಬೇಕಾಗುತ್ತದೆ. ಅಲ್ಲದೆ, ಅದೇ ದಿನದಿಂದ ದೇಶದ ಎಲ್ಲೆಡೆ ಬಿಎಸ್‌6 ಗುಣಮಟ್ಟದ ಇಂಧನ ಲಭ್ಯವಿರಲಿದೆ. ಒಟ್ಟಾರೆ ವಾಹನಗಳಿಂದಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಎಸ್6 ಜಾರಿಗೆ ಬರುತ್ತಿದೆ.

ಸದ್ಯ ದೇಶದಲ್ಲಿ ಬಿಎಸ್‌4 ವಾಹನಗಳು ಮಾರಾಟವಾಗುತ್ತಿವೆ. ಈ ವಾಹನಗಳಿಗೂ ಬಿಎಸ್‌6 ಪರಿಮಾಣದ ವಾಹನಗಳಿಗೂ ಭಾರಿ ವ್ಯತ್ಯಾಸವಿದೆ. ಬಿಎಸ್‌4 ಪೆಟ್ರೋಲ್‌ ಮತ್ತು ಬಿಎಸ್6 ಪೆಟ್ರೋಲ್‌ ವಾಹನಗಳಲ್ಲಿ ವ್ಯಾಪಕ ಬದಲಾವಣೆ ಏನಿಲ್ಲ. ಈ ವಾಹನಗಳ ಎಂಜಿನ್‌ನಲ್ಲಿ ಅಂತಹ ಪರಿಷ್ಕರಣೆ ಏನೂ ಇರುವುದಿಲ್ಲ. ಆದರೆ, ಎಕ್ಸಾಸ್ಟ್‌ ಸಿಸ್ಟಂನಲ್ಲಿ ಆಧುನಿಕ ತಂತ್ರಜ್ಞಾನದ ಕ್ಯಾಟಲಿಕ್ ಕನ್ವರ್ಟರ್‌ ಇರಲಿದೆ. ಇದು ಪೆಟ್ರೋಲ್ ವಾಹನ ಉಗುಳುವ ಹೊಗೆಯಲ್ಲಿನ ಸಾರಜನಕದ ಆಕ್ಸೈಡ್ ಪ್ರಮಾಣವನ್ನು ಶೇ 25ರಷ್ಟು ಕಡಿಮೆ ಮಾಡಲಿದೆ. ವ್ಯಾಪಕ ಬದಲಾವಣೆ ಇರದ ಕಾರಣ ಬಿಎಸ್‌6 ಪೆಟ್ರೋಲ್ ವಾಹನಗಳ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಇರುವುದಿಲ್ಲ.

ಆದರೆ, ಬಿಎಸ್‌4 ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಬಿಎಸ್‌6 ಡೀಸೆಲ್ ವಾಹನಗಳ ಎಂಜಿನ್ ಮತ್ತು ಎಕ್ಸಾಸ್ಟ್‌ ಸಿಸ್ಟಂನಲ್ಲಿ ಭಾರಿ ಬದಲಾವಣೆ ಆಗಲಿದೆ. ಹೀಗಾಗಿ ಬಿಎಸ್‌6 ಡೀಸೆಲ್ ವಾಹನಗಳ ಬೆಲೆಯಲ್ಲೂ ಭಾರಿ ಪ್ರಮಾಣದ ಏರಿಕೆ ಆಗಲಿದೆ.

ಬಿಎಸ್‌4 ಡೀಸೆಲ್‌ನ 10 ಲಕ್ಷ ಕಣಗಳಲ್ಲಿ ಗಂಧಕದ 50 ಕಣಗಳು ಇರುತ್ತವೆ. ಆದರೆ, ಬಿಎಸ್‌6 ಡೀಸೆಲ್‌ನ 10 ಲಕ್ಷ ಕಣಗಳಲ್ಲಿ ಗಂಧಕದ ಕೇವಲ 10 ಕಣಗಳು ಇರುತ್ತವೆ. ಈ ಡೀಸೆಲ್‌ ಅನ್ನು ಬಿಎಸ್‌6 ಡೀಸೆಲ್ ಎಂಜಿನ್ ಇರುವ ವಾಹನಗಳಲ್ಲಿ ಬಳಸಿದಾಗ, ಅವು ಉಗುಳುವ ಸಾರಜನಕದ ಆಕ್ಸೈಡ್‌ನಲ್ಲಿ ಶೇ 75ರಷ್ಟು ಕಡಿಮೆ ಆಗಲಿದೆ. ಇದು ಬಿಎಸ್‌6 ಪೆಟ್ರೋಲ್‌ ವಾಹನಗಳು ಮಾಡುವ ವಾಯುಮಾಲಿನ್ಯಕ್ಕೆ ಸರಿಸಮನಾದ ವಾಯು ಮಾಲಿನ್ಯವಾಗಿರುತ್ತದೆ.

ಬಿಎಸ್‌6 ಡೀಸೆಲ್ ವಾಹನಗಳಲ್ಲಿ ಇದನ್ನು ಸಾಧಿಸಲು ಹಲವು ತಂತ್ರಜ್ಞಾನಗಳನ್ನು ಸಂಯೋಜಿಸಲಾಗಿದೆ. ಡೀಸೆಲ್‌ ಎಂಜಿನ್ ಉಗುಳುವ ಹೊಗೆಯು ಮೊದಲು ಡಿಪಿಎಫ್ ಅನ್ನು ಹಾದು ಹೋಗಲಿದೆ. ಹೊಗೆಯಲ್ಲಿರುವ ಡೀಸೆಲ್‌ನ ಕಣಗಳನ್ನು ಡಿಪಿಎಫ್ ಹಿಡಿದಿಟ್ಟುಕೊಳ್ಳಲಿದೆ. ಸಾರಜನಕದ ಆಕ್ಸೈಡ್ ಅನ್ನು ಬಿಡಲಿದೆ. ಎಸ್‌ಸಿಆರ್‌ ಎಂಬ ಮತ್ತೊಂದು ವ್ಯವಸ್ಥೆ, ಸಾರಜನಕದ ಆಕ್ಸೈಡ್‌ ಅನ್ನು ವಿಭಜಿಸಿ ಸಾರಜನಕ ಮತ್ತು ನೀರನ್ನು ಉತ್ಪಾದಿಸಲಿದೆ. ಡೀಸೆಲ್ ವಾಹನಗಳಿಂದ ವಾತಾವರಣಕ್ಕೆ ನೀರೂ ಬಿಡುಗಡೆಯಾಗಲಿದೆ.

ಆದರೆ, ಇದರ ಜತೆಯಲ್ಲೇ ಡೀಸೆಲ್‌ ವಾಹನಗಳ ನಿರ್ವಹಣೆಯ ವೆಚ್ಚವೂ ಅಧಿಕವಾಗಲಿದೆ. ಹೀಗಾಗಿ ಹಲವು ಕಂಪನಿಗಳು ಸಣ್ಣ ಡೀಸೆಲ್‌ ಕಾರುಗಳ ತಯಾರಿಕೆಯನ್ನು ನಿಲ್ಲಿಸಲಾಗುವುದು ಎಂದು ಘೋಷಿಸಿವೆ. ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್‌ ಟಿಯಾಗೊ ಮತ್ತು ಕಾಂಪ್ಯಾಕ್ಟ್ ಸೆಡಾನ್ ಟಿಗಾರ್‌ನ ಡೀಸೆಲ್‌ ಅವತರಣಿಕೆಗಳನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಮಾರುತಿ ಸುಜುಕಿ ತನ್ನ ಎಲ್ಲಾ ಮಾದರಿಯ ಕಾರುಗಳ ಡೀಸೆಲ್ ಅವತರಣಿಕೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಮಾರುತಿ ಸುಜುಕಿ ನೂತನ ಡೀಸೆಲ್ ಎಂಜಿನ್‌ ಅಭಿವೃದ್ಧಿಪಡಿಸುತ್ತಿದೆಯಾದರೂ, ಅದು ಮಾರುಕಟ್ಟೆಗೆ ಬರುತ್ತದೆಯೇ ಇಲ್ಲವೇ ಎಂಬುದು ಇನ್ನೂ ಅನಿಶ್ಚಿತ. ಹೋಂಡಾ ಕಂಪನಿಯ ಕೆಲವು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಇರುವುದಿಲ್ಲ ಎಂಬ ಸುದ್ದಿ ಇದೆ, ಆದರೆ, ಅದಿನ್ನೂ ದೃಢವಾಗಿಲ್ಲ. ಹುಂಡೈ ಸಣ್ಣ ಡೀಸೆಲ್ ಕಾರುಗಳ ತಯಾರಿಕೆಯನ್ನು ಮುಂದುವರಿಸುತ್ತದೆಯೇ ಇಲ್ಲವೇ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಸಣ್ಣ ಕಾರುಗಳ ಡೀಸೆಲ್ ಎಂಜಿನ್ ಮತ್ತು ಎಕ್ಸಾಸ್ಟ್ ಸಿಸ್ಟಂ ಅನ್ನು ಬಿಎಸ್‌6ಗೆ ಅಪ್‌ಡೇಟ್‌ ಮಾಡಲೂ ₹ 1 ರಿಂದ ₹ 1.5 ಲಕ್ಷ ಹೆಚ್ಚುವರಿ ಹೊರೆಯಾಗುತ್ತದೆ. ಸಣ್ಣ ಡೀಸೆಲ್‌ ಕಾರುಗಳ ಬೆಲೆ ಏರಿಕೆ ಆಗುವುದರಿಂದ ಅವುಗಳ ಮಾರಾಟ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಅವುಗಳ ತಯಾರಿಕೆಯನ್ನೇ ನಿಲ್ಲಿಸಲು ಕಂಪನಿಗಳು ನಿರ್ಧರಿಸಿವೆ. ಆದರೆ, ದೊಡ್ಡ ಕಾರುಗಳು, ಎಸ್‌ಯುವಿಗಳು, ಟ್ರಕ್‌ ಮತ್ತು ಬಸ್‌ಗಳಲ್ಲಿ ಡೀಸೆಲ್‌ ಎಂಜಿನ್ ಅಗತ್ಯ. ಈ ವರ್ಗದ ವಾಹನಗಳನ್ನು ಕೊಳ್ಳುವವರು ಬಿಎಸ್‌6 ಡೀಸೆಲ್‌ ಎಂಜಿನ್‌ಗಾಗಿ ಹೆಚ್ಚು ಹಣ ವ್ಯಯಿಸುವುದು ಅಗತ್ಯವಾಗಿದೆ.

ಡಿಪಿಎಫ್‌, ಎಸ್‌ಸಿಆರ್‌ ನಿರ್ವಹಣೆ

ಡೀಸೆಲ್‌ ಕಣಗಳು ಉಳಿಯುವುದರಿಂದ ಡಿಪಿಎಫ್‌ನಲ್ಲಿನ ಫಿಲ್ಟರ್‌ ಬ್ಲಾಕ್‌ ಆಗುತ್ತದೆ. ಇದನ್ನು ತೆಗೆಯಲು ಕಾರು / ಎಸ್‌ಯುವಿ / ಟ್ರಕ್‌ / ಬಸ್‌ ಸ್ವಯಂಚಾಲಿತವಾಗಿ ಡಿಪಿಎಫ್ ರಿಜನರೇಟಿವ್ ಮೋಡ್‌ಗೆ ಹೋಗುತ್ತದೆ. ಈ ಮೋಡ್‌ ಮುಗಿದ ನಂತರ ಡಿಪಿಎಫ್ ಸುಸ್ಥಿತಿಗೆ ಮರಳುತ್ತದೆ

l ಡಿಪಿಎಫ್‌ ರಿಜನರೇಟಿವ್ ಮೋಡ್‌ಗೆ ಹೋದಾಗ, ವಾಹನವನ್ನು ಸಾಧಾರಣ ವೇಗದಲ್ಲಿ (ಪ್ರತಿ ಗಂಟೆಗೆ 60–80 ಕಿ.ಮೀ. ವೇಗ) ಚಲಾಯಿಸಬೇಕಾಗುತ್ತದೆ. 35–50 ನಿಮಿಷದವರೆಗೆ ಇಂತಹ ಚಾಲನೆ ಅನಿವಾರ್ಯ

l ಇಂತಹ ಚಾಲನೆ ವೇಳೆ ವಾಹನವನ್ನು 3 ಅಥವಾ 4ನೇ ಗಿಯರ್‌ನಲ್ಲಿಯೇ ಚಲಾಯಿಸಬೇಕು. ಆಗ ಎಂಜಿನ್‌ನ ವೇಗ ಜಾಸ್ತಿ ಇದ್ದು, ಡಿ‍ಪಿಎಫ್‌ಗೆ ಬಿಸಿಗಾಳಿ ರವಾನೆಯಾಗಲಿದೆ

l ಬಿಸಿಗಾಳಿ ಬರುವುದರಿಂದ ಡಿಪಿಎಫ್‌ನಲ್ಲಿ ಸಂಗ್ರಹವಾಗಿರುವ ಡೀಸೆಲ್ ಕಣಗಳು ಸುಟ್ಟುಹೋಗುತ್ತವೆ. ಆಗ ಡಿಪಿಎಫ್‌ ಫಿಲ್ಟರ್‌ ಸುಸ್ಥಿತಿಗೆ ಮರಳುತ್ತದೆ

l ನಗರದ ಪರಿಮಿತಿಯಲ್ಲಿ ರಿಜನರೇಟಿವ್ ಮೋಡ್‌ನಲ್ಲಿ ಚಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ವಾಹನವನ್ನು ಆಗ್ಗಾಗೆ ಹೆದ್ದಾರಿ ಚಾಲನೆಗೆ ಒಯ್ಯಬೇಕಾಗುತ್ತದೆ

l ಡಿಪಿಎಫ್ ಸುಸ್ಥಿತಿಯಲ್ಲಿ ಇಲ್ಲದಿದ್ದರೆ, ವಾಹನದ ಎಂಜಿನ್ ಚಾಲೂ ಆಗುವುದಿಲ್ಲ. ಹಾಳಾದರೆ, ಡಿಪಿಎಫ್ ಅನ್ನು ಬದಲಿಸುವುದು ಭಾರಿ ಖರ್ಚಿನ ಬಾಬತ್ತು

l ಡಿಪಿಎಫ್‌ ರಿಜನರೇಟಿವ್ ಮೋಡ್‌ನಲ್ಲಿ ಎಂಜಿನ್‌ ಹೆಚ್ಚುವರಿ ಇಂಧನ ಪೂರೈಕೆ ಆಗುತ್ತದೆ. ಇದರಿಂದ ವಾಹನದ ಇಂಧನ ಕ್ಷಮತೆ ಕಡಿಮೆ ಆಗುತ್ತದೆ

l ಎಸಿಆರ್‌ಗೆ ಯೂರಿಯಾ ದ್ರಾವಣ (ಆ್ಯಡ್‌ಬ್ಲೂ) ಪೂರೈಸುವ ಟ್ಯಾಂಕ್‌ ಅನ್ನು ಆಗಿಂದ್ದಾಗೆ ಭರ್ತಿ ಮಾಡುತ್ತಿರಬೇಕು. ಮಿನಿ ಎಸ್‌ಯುವಿಗಳಲ್ಲಿ 10–15 ಲೀಟರ್‌ ಸಾಮರ್ಥ್ಯದ ಇಂತಹ ಟ್ಯಾಂಕ್ ಇರುತ್ತದೆ. ಒಂದು ಲೀಟರ್‌ ಆ್ಯಡ್‌ಬ್ಲೂ ದ್ರಾವಣದ ಬೆಲೆ ₹ 1,300ರ ಆಸುಪಾಸಿನಲ್ಲಿದೆ. ಹೀಗಾಗಿ ಇದು ಖರ್ಚಿನ ಬಾಬತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು